Friday 19 June 2015

dhammapada/sukhavagga/15.6/pasenadifood

ಆರೋಗ್ಯ ಪರಮ ಲಾಭ
"ಆರೋಗ್ಯವು ಲಾಭಗಳಲ್ಲೇ ಶ್ರೇಷ್ಠವಾದುದು,
ಸಂತೃಪ್ತಿಯೇ ಪರಮ ಐಶ್ವರ್ಯವಾಗಿದೆ (ಧನ)
ವಿಶ್ವಾಸಿಯೇ (ನಂಬಿಕೆಗೆ ಅರ್ಹನೇ) ಪರಮಬಂಧು,
ಮತ್ತು ನಿಬ್ಬಾಣವೇ ಪರಮಸುಖವಾಗಿದೆ."      (204)
ಗಾಥ ಪ್ರಸಂಗ 15:6
ಮಿತಹಾರವೇ ಆರೋಗ್ಯಕ್ಕೆ ದಾರಿ

            ಕೋಶಲದ ಮಹಾರಾಜ ಪಸೇನದಿಗೆ ಅತಿ ಆಹಾರ ತಿನ್ನುವ ಚಾಳಿಯಿತ್ತು. ಆತನು ರುಚಿಕರವಾದ, ಸಮೃದ್ಧವಾದ ಆಹಾರ ಸೇವಿಸುತ್ತಿದ್ದನು. ಆದರೆ ಅವನೆಲ್ಲಾ ನಾಲಿಗೆಯ ತೃಪ್ತಿಗಾಗಿ ಅತಿಹಾರ ಸೇವಿಸಿ ನಂತರ ಬಹಳ ಕಷ್ಟಪಡುತ್ತಿದ್ದನು.
            ಒಂದುದಿನ ಆತನು ಮುಂಜಾನೆಯ ಆಹಾರ ಸೇವಿಸಿ, ಅದನ್ನು ಅರಗಿಸಿಕೊಳ್ಳಲಾರದೆ, ಭಗವಾನರನ್ನು ಕಾಣಲು ಹೊರಟನು. ಆದರೆ ಅಲ್ಲಿಯೂ ಅತಿಹಾರದ ದಣಿವಿನಿಂದ ಬಳಲಿದನು. ಅಲ್ಲಿ ಕಾಲು ಚಾಚಿಕೊಂಡು ಮಲಗುವ ಮನಸ್ಸಾದರೂ, ಭಗವಾನರ ಮೇಲಿನ ಗೌರವದಿಂದಾಗಿ ಹಾಗೆ ಮಾಡಲು ಧೈರ್ಯವಾಗಲಿಲ್ಲ. ಹೀಗಾಗಿ ಒಂದೆಡೆ ಕುಳಿತನು. ಆಗ ಭಗವಾನರು ಆತನಿಗೆ "ಓ ಮಹಾರಾಜ, ಸಾಕಷ್ಟು ವಿಶ್ರಾಂತಿಯ ಬಳಿಕ ಬೇಟಿಯಾಗುವಂತಾಗು."
            "ಓ ಹಾಗಲ್ಲ ಭಗವಾನ್, ನಾನು ಸದಾ ಆಹಾರ ಸೇವನೆಯ ನಂತರ ಅಪಾರ ನೋವನ್ನು ಅನುಭವಿಸುವೆನು."
            "ಮಹಾರಾಜ, ಅತಿಆಹಾರ ಎಂದಿಗೂ ಅಂತಹ ನೋವನ್ನೇ ತರುವುದು" ಎಂದು ಹೇಳಿ ಈ ಗಾಥೆಯನ್ನು ನುಡಿದರು.
            "ಯಾವ ಮನುಷ್ಯ ಸೋಮಾರಿತನಕ್ಕೆ ಎಡೆಮಾಡಿಕೊಡುತ್ತಾನೋ,
            ಅತಿಯಾಗಿ ತಿನ್ನುವನೋ, ತನ್ನ ಕಾಲವೆಲ್ಲಾ ನಿದ್ದೆಯಲ್ಲಿ
            ವ್ಯಯಮಾಡುತ್ತಾನೋ, ಹಾಸಿಗೆಯಲ್ಲಿ ಹೊರಳಾಡುತ್ತಿರುವ
            ಅಂತಹ ಮೂರ್ಖನು ಅನಂತವಾಗಿ ಜನ್ಮವೆತ್ತುತ್ತಲೇ ಇರುತ್ತಾನೆ."
            ಹೀಗೆ ನುಡಿದನಂತರ ಭಗವಾನರು ಹೀಗೆ ಹೇಳಿದರು: "ಮಹಾರಾಜ, ನೀವು ಖಡ್ಡಾಯವಾಗಿ ಆಹಾರದ ಮಿತಿಯನ್ನಿಡಬೇಕು, ಆಗಲೇ ನೀವು ಸುಖಿಯಾಗಿರುವಿರಿ" ಎಂದು ನುಡಿದು ಮತ್ತೊಂದು ಗಾಥೆಯನ್ನು ನುಡಿದರು:
            "ಮಾನವನೊಬ್ಬನು ಸದಾ ಸ್ಮೃತಿವಂತನಾಗಿದ್ದರೆ,
            ಆಹಾರದಲ್ಲಿ ಮಿತಿ ಪಾಲಿಸಿದ್ದರೆ,
            ಆತನ ದುಃಖಗಳು ಅತಿ ಅಲ್ಪವಾಗಿರುತ್ತವೆ,
            ಆತನು ಮುಪ್ಪನ್ನು ನಿಧಾನವಾಗಿ ಪಡೆಯುತ್ತಾನೆ,
            ತನ್ನ ಜೀವನವನ್ನು ರಕ್ಷಿಸಿಕೊಳ್ಳುತ್ತಾನೆ."
            ರಾಜನಿಗೆ ಒಮ್ಮೆಯೇ ಈ ಗಾಥೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರವಾಯಿತು. ಹಾಗಾಗಿ ಭಗವಾನರು ರಾಜನ ಸೋದರಳಿಯನಾದ ಯುವರಾಜ ಸುದಸ್ಸನನಿಗೆ ಹತ್ತಿರ ಕರೆದು ಆತನಿಗೆ ಈ ಗಾಥೆಯನ್ನು ನೆನಪಿಡುವಂತೆ ಹೇಳಿದರು. ಆಗ ಆತನು ಭಗವಾನರಲ್ಲಿ ಹೀಗೆ ಕೇಳಿದನು: "ಪೂಜ್ಯರೇ, ನಾನಿದನ್ನು ನೆನಪಿಟ್ಟುಕೊಂಡು ಏನು ಮಾಡಲಿ?" ಆಗ ಭಗವಾನರು ಹೀಗೆ ಹೇಳಿದರು: "ರಾಜನು ಆಹಾರ ಸೇವಿಸುವಾಗ ಆತನ ಕೊನೆಯ ತುತ್ತುಗಳನ್ನು ಸೇವಿಸುವಾಗ ಈ ಗಾಥೆಯನ್ನು ನುಡಿ. ಆತನು ಉಳಿದ ಆಹಾರವನ್ನು ಬಿಟ್ಟುಬಿಡುವನು ಹಾಗು ಮುಂದಿನಬಾರಿ ರಾಜನು ಸೇವಿಸಿದ್ದ ಮಿತ ಆಹಾರಕ್ಕಿಂತ ಕಡಿಮೆ ಬಡಿಸುವಂತೆ ಆಜ್ಞಾಪಿಸು."
            "ಹಾಗೇ ಆಗಲಿ ಭಂತೆ."
            ಹೀಗಾಗಿ ಮುಂಜಾನೆ ಮತ್ತು ಸಂಜೆ ಎರಡು ವೇಳೆಯಲ್ಲೂ ರಾಜನು ಆಹಾರ ಸೇವಿಸುತ್ತಿದ್ದಾಗ, ಕೊನೆಯ ತುತ್ತುಗಳು ಇದ್ದಾಗಲೇ, ಸುದಸ್ಸನನ ಗಾಥೆ ಕೇಳಿ ಆಹಾರವನ್ನು ಬಿಟ್ಟುಬಿಡುತ್ತಿದ್ದನು. ಹಾಗು ಪ್ರತಿಬಾರಿ ಸುದಸ್ಸನಿಗೆ ಸಾವಿರ ಕಹಾಪಣಗಳನ್ನು ನೀಡುತ್ತಿದ್ದನು. ಹೀಗಾಗಿ ರಾಜನ ಚಿಕ್ಕ ಗಾತ್ರದ ಮಡಿಕೆಯಷ್ಟೇ ಅನ್ನವನ್ನು ಸೇವಿಸುತ್ತಿದ್ದನು. ಆ ಮಿತಿಗಿಂತ ಹೆಚ್ಚಿಗೆ ಎಂದಿಗೂ ದಾಟುತ್ತಿರಲಿಲ್ಲ. ಹೀಗಾಗಿ ಆತನು ಸದಾ ಉತ್ಸಾಹಿ ಮತ್ತು ಆಕರ್ಷಕ ದೇಹವನ್ನು ಪಡೆದನು.

            ಮುಂದೊಂದು ದಿನ ಮಹಾರಾಜ ಪಸೇನದಿಯು ಬುದ್ಧ ಭಗವಾನರಿಗೆ ವಂದಿಸಿ ಹೀಗೆ ಹೇಳಿದನು: "ಭಗವಾನ್ ನಾನೀಗ ಸುಖಿಯಾಗಿರುವೆನು. ಈಗ ನಾನು ಕಾಡುಮೃಗಗಳನ್ನು ಮತ್ತು ಕುದುರೆಯನ್ನು ಬೆನ್ನತ್ತಿ ಹಿಡಿಯುವಷ್ಟು ಸಾಮಥ್ರ್ಯವುಳ್ಳವನಾಗಿದ್ದೇನೆ. ಅಷ್ಟೊಂದು ಚುರುಕುತನ ಮತ್ತು ಶಕ್ತಿ ನನ್ನಲ್ಲಿ ಮರುಕಳಿಸಿದೆ. ಈ ಹಿಂದೆ ನಾನು ನನ್ನ ಸೋದರಳಿಯನ್ನೊಂದಿಗೆ ಕಲಹವಾಡುತ್ತಿದ್ದೆನು. ಆದರೆ ಈಗ ನನ್ನ ಮಗಳಾದ ವಜಿರಾಗೆ (ವಜ್ರ) ನೀಡಿ ವಿವಾಹ ಮಾಡಬೇಕೆಂದಿದ್ದೇನೆ. ನಾನು ಆಕೆಗೆ ಈ ಹಳ್ಳಿಯನ್ನೇ ದಾನವಾಗಿ ನೀಡಿದ್ದೇನೆ. ಅಲ್ಲಿರುವ ಕೊಳದಲ್ಲಿ ಆಕೆ ಸ್ನಾನವೂ ಮಾಡಬಹುದು. ಹೀಗಾಗಿ ನಾನು ಸುಖಿಯಾಗಿರುವೆ. ಈ ಹಿಂದೆ ರಾಜ ಮನೆಯ ಅತ್ಯಮೂಲ್ಯ ವಜ್ರವೊಂದು ಕಳುವಾಗಿತ್ತು. ಅದು ಸಿಕ್ಕಿ ಮತ್ತೆ ನನ್ನ ಕೈಗೆ ಬಂದಿದೆ. ಅದರಿಂದಾಗಿಯು ನಾನು ಸುಖಿಯಾಗಿರುವೆ. ಅಷ್ಟೇ ಅಲ್ಲ, ಭಗವಾನ್ ತಮ್ಮ ಸಂಘದ ಒಲವು ನನ್ನ ಮೇಲಿರಲಿ ಎಂದು ತಮ್ಮ ಶಾಕ್ಯ ಕುಲದ ಕನ್ಯೆಯನ್ನು ನಮ್ಮ ಕುಟುಂಬಕ್ಕೆ ತಂದಿರುವೆ. ಈ ಕಾರಣಗಳಿಂದ ನಾನು ಸುಖಿಯಾಗಿರುವೆ, ಭಂತೆ, ನಾನು ಆನಂದದಿಂದಿರುವೆ" ಎಂದನು. ಆಗ ಭಗವಾನರು ಈ ಮೇಲಿನ ಗಾಥೆ ನುಡಿದರು.

No comments:

Post a Comment