Friday 26 June 2015

dhammapada/piyavagga/16.1/affectionfamily

16. ಪಿಯ ವಗ್ಗ

ಯಾವುದು ತೊರೆಯಬೇಕಾಗಿದೆಯೋ ಅದಕ್ಕೆ ಅಂಟಬೇಡ
"ಯಾವುದನ್ನು ತಡೆಗಟ್ಟಬೇಕಾಗಿದೆಯೋ
ಅದರಲ್ಲಿ ತನ್ನನ್ನು ತೊಡಗಿಸಿಕೊಳ್ಳುವಿಕೆ ಹಾಗೂ
ಯಾವುದನ್ನು ಅನುಸರಿಸಬೇಕೋ ಅದರಲ್ಲಿ
ತೊಡಗಿಸಿಕೊಳ್ಳದಿರುವಿಕೆ ಹೀಗೆ ತನ್ನ ಹಿತದ
ಮಹತ್ ಅನ್ವೇಷಣೆಯನ್ನು ಬಿಟ್ಟಿರುವವನು
ಉನ್ನತಿಗಾಗಿ ಪರಿಶ್ರಮಿಸುತ್ತಿರುವವನನ್ನು ಕಂಡು ಅಸೂಯೆಪಡುತ್ತಾನೆ."           (209)

"ಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಹಾಗೆಯೇ ಅಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಪ್ರಿಯರ ದರ್ಶನವಾಗದಿರುವಿಕೆ
ಅಪ್ರಿಯರ ದರ್ಶನವಾಗುವಿಕೆ ಎರಡೂ ದುಃಖಕರ."          (210)

"ಆದ್ದರಿಂದ ಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಏಕೆಂದರೆ ಪ್ರಿಯರ (ಪ್ರಿಯವಾದುದರ) ಅಗಲಿಕೆ
ನೋವನ್ನು ತರುತ್ತದೆ. ಯಾರಿಗೆ ಯಾವುದು (ಯಾರು)
ಪ್ರಿಯ ಅಪ್ರಿಯವಲ್ಲವೋ ಆತನಿಗೆ ಯಾವ ಬಂಧನವೂ ಇಲ್ಲ."           (211)


ಗಾಥ ಪ್ರಸಂಗ 16:1
ಬಾಂಧವ್ಯವು ಪರಮಾಥರ್ಾಭಿವೃದ್ಧಿಗೆ ಅಡ್ಡಿಯಾಗುವುದು



            ಶ್ರಾವಸ್ಥಿಯ ಒಂದು ಕುಟುಂಬದ ದಂಪತಿಗೆ ಒಬ್ಬನು ಮಗನಿದ್ದನು. ಆತನನ್ನು ಅವರು ಅತಿ ಮುದ್ದಿನಿಂದ ಸಾಕಿದ್ದರು. ಆತನು ಅವರಿಗೆ ಪ್ರಾಣದಷ್ಟು ಪ್ರಿಯವಾಗಿದ್ದನು. ಒಂದುದಿನ ಅವರು ಭಿಕ್ಷುಗಳಿಗೆ ಆಹಾರಕ್ಕಾಗಿ ಮನೆಗೆ ಆಹ್ವಾನಿಸಿದರು. ಭೋಜನದ ನಂತರ ಭಿಕ್ಷುಗಳು ಧಮ್ಮಪ್ರವಚನ ಮಾಡಿದರು. ಆ ಮನೆಯ ದಂಪತಿಗಳ ಏಕೈಕ ಪುತ್ರನಿಗೆ ಭಿಕ್ಖುವಾಗಬೇಕೆಂಬ ಆಕಾಂಕ್ಷೆಯಾಯಿತು. ಆತನು ತನ್ನ ತಂದೆ ಮತ್ತು ತಾಯಿಯಲ್ಲಿಗೆ ಹೋಗಿ ತಾನು ಭಿಕ್ಷುವಾಗಲು ಅಪ್ಪಣೆ ಕೇಳಿದನು. ಆದರೆ ಅವರು ಹಾಗಾಗಲು ನಿರಾಕರಿಸಿದರು. ಆಗ ಆತನು ಈ ರೀತಿಯ ನಿಧರ್ಾರ ಕೈಗೊಂಡನು: "ನನ್ನ ತಾಯಿ ಮತ್ತು ತಂದೆಯರು ನನ್ನನ್ನು ಕಾವಲು ಕಾಯುತ್ತಲೇ ಇದ್ದಾರೆ, ಯಾವಾಗಲಾದರೂ ಇವರು ಜಾಗ್ರತೆ ತಪ್ಪುವರು, ಆ ಕ್ಷಣದಲ್ಲೇ ನಾನು ಪರಾರಿಯಾಗಿ ಭಿಕ್ಷುವಾಗುವೆನು."
            ಆದರೆ ಆ ಯುವಕನ ತಂದೆ-ತಾಯಿಯರು ಅಪಾರವಾಗಿ ಜಾಗ್ರತೆ ವಹಿಸಿಕೊಂಡಿದ್ದರು. ತಂದೆಯು ಮನೆಯಿಂದ ಹೊರಗಡೆ ಹೋಗಬೇಕಾಗಿ ಬಂದರೆ ಆತನು ತಾಯಿಯ ಕೈಗೆ ಮಗನನ್ನು ಒಪ್ಪಿಸಿ ಹೋಗುತ್ತಿದ್ದನು ಹಾಗೆಯೇ ಆತನ ತಾಯಿಯು ಎಲ್ಲಿಯಾದರೂ ಹೋಗಬೇಕೆಂದರೆ ಆ ಯುವಕನನ್ನು ತನ್ನ ಗಂಡನಿಗೆ ಒಪ್ಪಿಸಿ ಹೊರ ಹೋಗುತ್ತಿದ್ದಳು. ಹೀಗೆ ಅತನಿಗೆ ಅವರಿಂದ ತಪ್ಪಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ತಾಯಿಯು ಮನೆಯ ಬಾಗಿಲಿನಲ್ಲಿ ಕುಳಿತಿರುತ್ತಿದ್ದಳು. ಒಂದುದಿನ ಆ ಯುವಕನು ಪ್ರಕೃತಿಯ ಕರೆಗೆ ಓಗೊಡಬೇಕೆಂದು ಹೇಳಿ ತಾಯಿಯಿಂದ ತಪ್ಪಿಸಿಕೊಂಡನು. ಹಾಗು ಅಲ್ಲಿಂದ ನೇರವಾಗಿ ಭಿಕ್ಷುಗಳ ಬಳಿಗೆ ಬಂದು "ಓ ಪೂಜ್ಯರೇ, ನನ್ನನ್ನು ಸಂಘಕ್ಕೆ ಸ್ವೀಕರಿಸಿ" ಎಂದು ಕೇಳಿಕೊಂಡನು.
            ನಂತರ ಇಲ್ಲಿ ಆ ಯುವಕನ ತಂದೆಯು "ಮಗನೆಲ್ಲಿ?" ಎಂದು ಮಡದಿಗೆ ಕೇಳಿದನು. "ಇಲ್ಲೇ ಇರಬೇಕು ನೋಡಿ" ಎಂದಳು. ಆದರೆ ಹುಡುಕಾಡಿ ಪ್ರಯೋಜನ ವಾಗಲಿಲ್ಲ. ಆಗ ತಂದೆಗೆ ಹೀಗೆ ಅನಿಸಿತು: 'ಖಂಡಿತವಾಗಿ ಈತನು ವಿಹಾರಕ್ಕೆ ಹೋಗಿರು ತ್ತಾನೆ'. ಆತನ ಲೆಕ್ಕಾಚಾರ ಸರಿಯಾಗಿಯೇ ಇತ್ತು. "ಓ ಮಗನೇ, ನನಗೆ ಏಕೆ ನಾಶ ಮಾಡಿದೆ" ಎಂದು ಗೋಳಿಟ್ಟು ಅತ್ತನು. ನಂತರ ತಂದೆಯು ಹೀಗೆ ಚಿಂತನೆ ಮಾಡಿದನು.
            "ಓಹ್, ಈಗ ನನ್ನ ಮಗನು ಭಿಕ್ಷುವಾಗಿದ್ದಾನೆ, ನಾನು ಈಗ ಗೃಹಸ್ಥನಾಗಿ ಏಕೆ ಜೀವಿಸಬೇಕು?" ನಂತರ ಆತನು ಸಹಾ ಭಿಕ್ಷುವಾಗಿಬಿಟ್ಟನು.
            ಇತ್ತ ತಾಯಿಯು "ನನ್ನ ಮಗ ಮತ್ತು ಗಂಡ ಏಕೆ ಇನ್ನೂ ಬರಲಿಲ್ಲ. ಬಹುಶಃ ಅವರು ಭಿಕ್ಷುಗಳಾಗಿರಬಹುದೇ?" ಎಂದು ಆತಂಕಪಡುತ್ತಾ ಆಕೆ ವಿಹಾರಕ್ಕೆ ಬಂದಾಗ ಆಕೆಯ ತರ್ಕ ಸರಿಯಾಗಿಯೇ ಇತ್ತು. ಆಗ ಆಕೆಯೂ ಹೀಗೆ ಚಿಂತಿಸಿದಳು: "ನನ್ನ ಮಗ ಮತ್ತು ಗಂಡನು ಭಿಕ್ಷುವಾಗಿರುವಾಗ ನಾನು ಗೃಹಸ್ಥಳಾಗಿರುವುದರಲ್ಲಿ ಅರ್ಥವೂ ಇಲ್ಲ, ಲಾಭವೂ ಇಲ್ಲ" ಎಂದು ಆಕೆಯು ಭಿಕ್ಷುಣಿಯಾಗಿಬಿಟ್ಟಳು.
            ಆದರೆ ಅವರು ಹೀಗೆ ಸಂಘಕ್ಕೆ ಸೇರಿದರೂ ಸಹಾ ಅವರಿಂದ ಪ್ರತ್ಯೇಕವಾಗಿ ಜೀವಿಸಲು ಸಾಧ್ಯವಾಗಲಿಲ್ಲ. ವಿಹಾರವೇ ಆಗಲಿ ಅಥವಾ ಇನ್ನಿತರ ಸ್ಥಳವೇ ಆಗಲಿ ಅವರು ಒಟ್ಟಾಗಿಯೇ ಜೀವಿಸುತ್ತಿದ್ದರು. ಒಟ್ಟಾಗಿ ಸದಾ ಮಾತನಾಡುತ್ತಲೇ ಇದ್ದರು. ಹೀಗಾಗಿ ಈ ವಿಷಯವು ಬುದ್ಧ ಭಗವಾನರ ಬಳಿಗೆ ತಲುಪಿತು. ಆಗ ಭಗವಾನರು ಇದು ನಿಜವೇ ಎಂದು ವಿಚಾರಿಸಿದಾಗ ಅವರು ಸತ್ಯವೆಂದು ಒಪ್ಪಿದರು. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು: "ಏತಕ್ಕಾಗಿ ಹೀಗೆ ನೀವು ಮಾಡುತ್ತಿರುವಿರಿ, ಇಂದು ನಿಜವಾಗಿ ಭಿಕ್ಷುಗಳು ಮತ್ತು ಭಿಕ್ಷುಣಿಯರು ವತರ್ಿಸುವಂತಹ ವರ್ತನೆಯೇ ಅಲ್ಲ."
            "ಆದರೆ ಭಗವಾನ್, ನಮ್ಮಿಂದ ಪ್ರತ್ಯೇಕವಾಗಿ ಜೀವಿಸಲು ಸಾಧ್ಯವೇ ಆಗುತ್ತಿಲ್ಲ."

            "ನೀವು ಈ ಗೃಹಸ್ಥ ಜೀವನದಿಂದ ನಿವೃತ್ತಿ ಪಡೆದನಂತರ ಭಿಕ್ಷುವಾಗಿ ಇಂತಹ ವರ್ತನೆ ನಿಜಕ್ಕೂ ಖಂಡನೀಯ, ಅಸಮಂಜಸವಾಗಿದೆ. ಅಪ್ರಿಯರಾದವರನ್ನು ನೋಡುವುದು, ಹಾಗೆಯೇ ಪ್ರಿಯರಾದವರನ್ನು ನೋಡದಿರುವುದು ನಿಜಕ್ಕೂ ದುಃಖಕರವಾಗಿದೆ. ಆದ್ದರಿಂದಲೇ ನೀವು ದುಃಖಕ್ಕೆ ಒಳಗಾಗಬಾರದು ಎಂದು ನಿಶ್ಚಯಿಸಿರುವುದಾದರೆ ನೀವು ವ್ಯಕ್ತಿಗಳಲ್ಲಿ ಮತ್ತು ವಸ್ತುಗಳಲ್ಲಿ ಪ್ರಿಯಭಾವನೆ ತಾಳಬೇಡಿ, ಹಾಗೆಯೇ ಅಪ್ರಿಯಭಾವನೆಯನ್ನು ತಾಳಬೇಡಿ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment