ಪುಣ್ಯದಿಂದ ಪಾಪ ಅಳಿಸಬಹುದು
ಯಾರು ತನ್ನ ಕುಶಲ
ಕರ್ಮಗಳಿಂದ, ಪಾಪ ಕಮ್ಮಗಳೆಲ್ಲಾ
ಮುಚ್ಚಿಬಿಡುವರೋ, ಅಂತಹವರು ಈ
ಲೋಕವನ್ನು ಮೋಡಮುಕ್ತ ಚಂದಿರನಂತೆ ಬೆಳಗುವರು. (173)
ಗಾಥ ಪ್ರಸಂಗ 13:6
ಅಂಗುಲಿಮಾಲನ ಚರಿತ್ರೆ
ಕೋಸಲರಾಜನಾದ ಪಸೇನದಿಯ ಸಭೆಯಲ್ಲಿದ್ದ ಬ್ರಾಹ್ಮಣನ ಮಗನೇ
ಅಂಗುಲಿಮಾಲ. ಆತನ ನಿಜವಾದ ಹೆಸರು ಅಹಿಂಸಕ,
ಅಂದರೆ ಹಿಂಸೆಯನ್ನೇ ಮಾಡದಿರುವವನು. ಬಾಲಕನಾಗಿರುವಾಗಲೇ ಆತನಿಗೆ ತಕ್ಷಶಿಲೆಗೆ
ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದರು. ಅಹಿಂಸಕನು ಅತ್ಯಂತ ಬುದ್ಧಿಶಾಲಿಯು,
ವಿಧೇಯನು ಆಗಿದ್ದನು. ಹೀಗಾಗಿ ಆತನು ಗುರುವಿಗೆ ಮತ್ತು
ಗುರುಪತ್ನಿಗೂ ಅಚ್ಚುಮೆಚ್ಚಿನವನಾಗಿದ್ದನು. ಈತನ ಪ್ರತಿಭೆಯಿಂದಾಗಿ ಮತ್ತು ಗುರುಗಳ ಮೆಚ್ಚುಗೆಗೆ
ಪಾತ್ರನಾದನು. ಈತನನ್ನು ಕಂಡಾಗ ಆತನ ಸಹಪಾಠಿಗಳಿಗೆ ಅಸೂಯೆ ಮೂಡಿತು. ಇದಕ್ಕೆ ಕಡಿವಾಣಹಾಕಲು ಅವರು
ಸಂಚೊಂದನ್ನು ರೂಪಿಸಿದರು. ಹೀಗಾಗಿ ಅವರು ಗುರುವಿನ ಬಳಿ ಹೋಗಿ ಅಹಿಂಸಕನು ಗುರುಪತ್ನಿಯೊಂದಿಗೆ
ಅನೈತಿಕ ಸಂಬಂಧ ಹೊಂದಿರುವುದಾಗಿ ಆರೋಪ ಹೊರಿಸಿದರು. ಆದರೆ ಗುರುವು ನಂಬಲಿಲ್ಲ. ಆದರೆ ಅವರು
ಅನೇಕಬಾರಿ ಸುಳ್ಳು ಆರೋಪ ಮಾಡುತ್ತಿದ್ದಾಗ ಆತನು ಅವರಿಬ್ಬರ ಪವಿತ್ರ ವಾತ್ಸಲ್ಯ ಬಾಂಧವ್ಯವನ್ನು
ತಪ್ಪಾಗಿಯೇ ಭಾವಿಸಿದನು. ಹೀಗಾಗಿ ಗುರುವು ಆತನ ಮೇಲೆ ಸೇಡು ತೀರಿಸಲು ಬಯಸಿದನು. ಆತನನ್ನು
ಕೊಂದರೆ ಅಥವಾ ಕೊಲ್ಲಿಸಿದರೆ ಪರಿಣಾಮ ತನಗೆ ಅಪಾಯವೆಂದು ಭಾವಿಸಿ,
ಆತನು ಮತ್ತೊಂದು ಕುಟಿಲೋಪಾಯವನ್ನು ರೂಪಿಸಿದನು. ಆ ಉಪಾಯವು ಆತನನ್ನು
ಕೊಲ್ಲಿಸುವುದಕ್ಕಿಂತ ಭೀಕರವಾಗಿತ್ತು. ಅದೇನೆಂದರೆ: ಆ ಗುರುವು ಅಹಿಂಸಕನಿಂದ ಗುರುದಕ್ಷಿಣೆಯ
ಬೇಡಿಕೆಯಿಟ್ಟನು. ನಂತರವೇ ಶಿಕ್ಷಣದ ಕಲಿಕೆ ಎಂದುಬಿಟ್ಟನು. ಆ ಗುರುದಕ್ಷಿಣೆ ಏನೆಂದರೆ ಸಾವಿರ
ಮಾನವರನ್ನು ಕೊಂದು ಅವರ ಬಲಗೈಯ ಹೆಬ್ಬೆರಳನ್ನು ತಂದು ಒಪ್ಪಿಸಬೇಕು.
ಗತ್ಯಂತರವಿಲ್ಲದೆ ಆ ಅಮಾಯಕನು ಗುರುವಿಗೆ ವಿಧೇಯನಾಗಲು
ಈ ದುಸ್ಸಾಹಸಕ್ಕೆ ಕೈಹಾಕಿದನು. ಆತನಿಗೆ ಪೂರ್ಣವಾಗಿ ಮನಸ್ಸಿಲ್ಲದಿದ್ದರೂ ಕರ್ತವ್ಯವೆಂಬಂತೆ ಈ
ಘೋರ ಹತ್ಯೆಗಳಿಗೆ ಸಿದ್ಧನಾದನು. ಹೀಗಾಗಿ ಆತನು ಮಾನವರಿಗೆ ಕೊಲ್ಲಲು ಆರಂಭಿಸಿದನು. ಮೊದಲು ಆತನು
ಕೊಂದು ಹೆಬ್ಬೆರಳನ್ನು ಕತ್ತರಿಸಿ ಮರಗಳಲ್ಲಿ ನೇತುಹಾಕುತ್ತಿದ್ದನು. ಆದರೆ ಅವನ್ನು ಪ್ರಾಣಿಗಳು
ಮತ್ತು ಹದ್ದುಗಳು ತಿಂದುಹಾಕುತ್ತಿದ್ದುದರಿಂದ ಆತನು ಹೆಬ್ಬೆರುಗಳನ್ನು ಪೋಣಿಸಿ ಹಾರವನ್ನಾಗಿಸಿ
ಕತ್ತಿನಲ್ಲಿ ಹಾಕಿಕೊಂಡನು. ಪ್ರತಿದಿನ ಎಣಿಸಿ,
ಮತ್ತೆ ಕೊಂದು ಆ ಹೆಬ್ಬೆರಳುಗಳ ಮಾಲೆಗೆ ಸೇರಿಸಿ ಹಾಕಿಕೊಳ್ಳುತ್ತಿದ್ದನು. ಅಂಗುಲಿ ಎಂದರೆ
ಹೆಬ್ಬೆರಳು,
ಅವನ್ನು ಮಾಲೆಯಂತೆ
ಧರಿಸಿರುತ್ತಿದ್ದರಿಂದಾಗಿ ಆತನಿಗೆ ಅಂಗುಲಿಮಾಲನೆಂದು ಕುಖ್ಯಾತಿ ಬಂತು. ಒಬ್ಬ ಮೂರ್ಖ
ಗುರುವಿನಿಂದ ಹೇಗೆ ಶಿಷ್ಯ ಮತ್ತು ಸಮಾಜ ಹಾಳಾಗುತ್ತದೆ ಎಂಬುದಕ್ಕೆ ಇದು ಉತ್ತಮ ನಿದರ್ಶನವಾಗಿದೆ.
ಆತನು ಜನರನ್ನು ಕೊಲ್ಲುತ್ತಿದ್ದಂತೆಯೇ ಆತನ ಬಗ್ಗೆ ಪ್ರಚಾರವು ಬಹುಬೇಗ ಹಬ್ಬಿತ್ತು. ಆತನ
ಕುಖ್ಯಾತಿ ರಾಜ್ಯದ ಒಳಗೆ ಮತ್ತು ಹೊರಗೆ ಎಲ್ಲೆಡೆ ಪ್ರಸರಿಸಿತು. ರಾಜನವರೆಗೂ ಆತನ ಕ್ರೌರ್ಯ
ಸುದ್ದಿ ತಲುಪಿ ಆತನನ್ನು ಹಿಡಿಯಲು ರಾಜನು ನಿರ್ಧರಿಸಿದನು. ಈ ಸುದ್ದಿಯು ರಾಜ್ಯದಲ್ಲಿ ಸಮಾಧಾನ
ಮೂಡಿಸಿದಾಗ ಅಹಿಂಸಕನ ತಾಯಿಗೆ ಕಳವಳ ಮೂಡಿಸಿತು. ಆಕೆಯು ತನ್ನ ಮಗನನ್ನು ಉಳಿಸಲು ಕಾಡಿಗೆ ಪ್ರಯಾಣ
ಬೆಳೆಸಿದಳು. ಆದರೆ ಆ ಸಮಯದಲ್ಲಿ ಅಂಗುಲಿಮಾಲನ ಬಳಿ 999
ಹೆಬ್ಬೆರಳುಗಳು ಸಂಗ್ರಹವಾಗಿತ್ತು. ಹೀಗಾಗಿ ಒಂದು ಬೆರಳು ಮಾತ್ರವೇ
ಆತನಿಗೆ ಬೇಕಾಗಿತ್ತು. ಹೀಗಾಗಿ ಆತನು ಇಲ್ಲಿ ಸಾಗುವ ಯಾರನ್ನಾದರೂ ಹತ್ಯೆ ಮಾಡುವ ಇಚ್ಛೆಯನ್ನು
ಮಾಡಿದನು.
* * *
ಭಗವಾನರು ಮುಂಜಾನೆ ಮಹಾ ಕರುಣಾ ಸಮಾಪತ್ತಿಯಲ್ಲಿ
ತೊಡಗಿರುವಾಗ ಯಾರಿಗೆ ಇಂದು ಸಹಾಯ ಮಾಡಲಿ ಎಂದು ಜೀವಿಗಳಲ್ಲಿ ಹುಡುಕಿದಾಗ ಅವರಿಗೆ
ಅಂಗುಲಿಮಾಲಾನಿಗೆ ಇಂದು ಸಹಾಯ ಮಾಡದಿದ್ದರೆ ಆತನು ಮಾತೃ ಹಂತಕನಾಗಿ ಮುಂದಿನ ಭವದಲ್ಲಿ ಅವೀಚಿ
ನರಕದಲ್ಲಿ ಹೋಗಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಅರಿತರು. ಹೀಗಾಗಿ ಭಗವಾನರು ಅಂಗುಲಿಮಾಲನ
ಉದ್ಧಾರಕ್ಕಾಗಿ ಕಾಡಿಗೆ ಅಂದು ಪ್ರವೇಶಿಸಿದರು. ಜನರ ಬುದ್ಧಿವಾದದ ನಂತರವೂ ಕಾಡನ್ನು
ಪ್ರವೇಶಿಸಿದರು.
* * *
ಅಂಗುಲಿ ಮಾಲನು
ಅನೇಕ ನಿದ್ರಾರಹಿತ ರಾತ್ರಿಗಳನ್ನು ಕಳೆದಿದ್ದನು. ಅತಿ ನಿತ್ರಾಣನಾಗಿದ್ದನು. ಆತನಿಗೆ ಈ ಬಗೆಯ
ಜೀವನ ಸಾಕಾಗಿತ್ತು. ಬಹುಬೇಗ ಆತನು ಸಹಸ್ರ ಹೆಬ್ಬೆರಳನ್ನು ಸಂಗ್ರಹಿಸಿಕೊಂಡು ಗುರುವಿಗೆ ನೀಡಿ ಈ
ಜೀವನದಿಂದ ಮುಕ್ತನಾಗಬೇಕೆಂದು ಆಕಾಂಕ್ಷಿಸಿದ್ದನು. ಆತನಿಗೆ ಕೇವಲ ಒಂದೇ ಒಂದು ಜೀವ ಬೇಕಿತ್ತು.
ಆಗ ಆತನಿಗೆ ಈ ನಿಧರ್ಾರ ಉಂಟಾಗಿತ್ತು. ಏನೆಂದರೆ ಮೊದಲು ಕಾಣಿಸುವ ಯಾವುದೇ ವ್ಯಕ್ತಿಯನ್ನು
ಸಂಹರಿಸುವುದು. ಆತನಿಗಾಗಿ ತಾಯಿಯು ಹುಡುಕುತ್ತಾ ಬರುತ್ತಿದ್ದಳು. ಹಾಗೊಂದು ವೇಳೆ ಆಕೆ ಮೊದಲು
ಗೋಚರಿಸಿದ್ದರೆ ಆಕೆಯನ್ನು ಸಂಹರಿಸಲು ಸಿದ್ಧನಾಗುತ್ತಿದ್ದನು. ಆಗ ಆತನಿಗೆ ಬುದ್ಧ ಭಗವಾನರು
ಗೋಚರಿಸಿದರು. ಆಗ ಆತನು ಅವರನ್ನು ಕೊಲ್ಲಲು ಖಡ್ಗವನ್ನು ಹಿಡಿದು ಓಡುತ್ತ ಬೆನ್ನಟ್ಟಿದನು.
ಆದರೆ ಅಲ್ಲಿ ಅದ್ಭುತವೊಂದು ನಡೆಯಿತು. ಅಂಗುಲಿಮಾಲನು
ಅದೆಷ್ಟೇ ವೇಗವಾಗಿ ಓಡಿದರೂ ಸಹಾ ಕೇವಲ ಸಹಜವಾಗಿ ನಡೆಯುತ್ತಿದ್ದ ಭಗವಾನರನ್ನು ಆತನು ಹಿಡಿಯಲಾರದೆ
ಹೋದನು. ಅಂಗುಲಿಮಾಲನಿಗೆ ಆಶ್ಚರ್ಯವಾಯಿತು. ಏಕೆಂದರೆ ಆತನು ಓಡುತ್ತಿರುವ ಆನೆ, ಕುದುರೆ, ಹರಿಣಗಳನ್ನು ಹಿಡಿದು ನಿಲ್ಲಿಸುತ್ತಿದ್ದನು. ಆದರೆ ಈಗೇಕೆ ಹಿಡಿಯಲು
ಸಾಧ್ಯವಾಗುತ್ತಿಲ್ಲ! ಆಗ ಆತನು ಓಡುವುದನ್ನು ನಿಲ್ಲಿಸಿ ಭಗವಾನರಿಗೆ ಹೀಗೆ ಕೂಗಿ ಹೇಳಿದನು:
ನಿಲ್ಲು, ನಿಲ್ಲು ಸಮಣ. ನಾನು ನಿಂತೇ
ಇದ್ದೇನೆ, ಅಂಗುಲಿಮಾಲ, ನೀನೇ ನಿಲ್ಲು ಎಂದರು ಭಗವಾನರು.
ನಡೆಯುತ್ತಿರುವ ನೀನು ನಿಂತಿರುವುದೇ ಹೇಗೆ? ನಿಂತಿರುವ ನಾನು ಎಲ್ಲಿ ನಡೆಯುತ್ತಿದ್ದೇನೆ?
ಆಗ ಭಗವಾನರು ಹೀಗೆ ಉತ್ತರಿಸಿದರು: ನಾನು ನಿಂತೇ
ಇದ್ದೇನೆ ಅಂಗುಲಿಮಾಲ. ಏಕೆಂದರೆ ನಾನು ಜೀವಹತ್ಯೆಗಳನ್ನು ನಿಲ್ಲಿಸಿದ್ದೇನೆ, ಸ್ವಲ್ಪವೂ ಹಿಂಸೆಯನ್ನು ಮಾಡುತ್ತಿಲ್ಲ. ನಿನ್ನನ್ನು
ನಾನು ಮೈತ್ರಿಯಿಂದ, ಸಹನೆಯಿಂದ,
ಕ್ಷಮೆಯಿಂದ, ಪ್ರಜ್ಞಾದಿಂದ ಸುಸ್ಥಾಪಿಸಿಕೊಂಡಿದ್ದೇನೆ. ಆದರೆ ನೀನು
ಜೀವಹತ್ಯೆಯಿಂದಾಗಲಿ ಅಥವಾ ಹಿಂಸಿಸುವುದರಿಂದಾಗಿ ನಿಂತಿಲ್ಲ. ಇನ್ನೂ ನಿನ್ನಲ್ಲಿ ಮೈತ್ರಿ,
ಸಹನೆ, ಸ್ಥಾಪಿತವಾಗಿಲ್ಲ. ಆದ್ದರಿಂದಾಗಿ ನೀನು ಇನ್ನೂ ನಿಂತಿಲ್ಲ.
ಅವರ ಮಾತುಗಳ
ಸತ್ಯತೆಯನ್ನು ಅಂಗುಲಿಮಾಲ ಗ್ರಹಿಸಿ ಚಿಂತಿಸಿ ಕ್ಷಿಪ್ರವಾಗಿ ಅವುಗಳ ಮೌಲ್ಯ ಅರಿತನು. ನಂತರ ಹೀಗೆ
ಚಿಂತಿಸಿದನು: ಖಂಡಿತ ವಾಗಿ ನುಡಿಗಳು ಪ್ರಜ್ಞಾವಂತರದ್ದೇ ಆಗಿದೆ. ಈ ಸಮಣರು ಅತ್ಯಂತ
ಮೇಧಾವಿಯಾಗಿದ್ದಾರೆ. ಅಷ್ಟೇ ಅಲ್ಲ, ಅತ್ಯಂತ
ಧೈರ್ಯಶಾಲಿಗಳು ಸಹಾ ಆಗಿದ್ದಾರೆ. ಖಂಡಿತವಾಗಿ ಇವರು ಭಿಕ್ಷುಗಳ ನಾಯಕರೇ ಇರಬಹುದು. ಖಂಡಿತವಾಗಿ
ಇವರು ಬುದ್ಧ ಭಗವಾನರೇ ಆಗಿರುತ್ತಾರೆ. ಓಹ್, ಇವರು ನನ್ನಲ್ಲಿ ಬೆಳಕನ್ನು ಉಂಟುಮಾಡಲು ಬಂದಿದ್ದಾರೆ.
ತಕ್ಷಣ ಆತನಲ್ಲಿ
ಅರಿವು ಮೂಡಿ ತನ್ನ ಶಸ್ತ್ರಗಳೆಲ್ಲಾ ಕಣಿವೆಗೆ ಎಸೆದುಬಿಟ್ಟನು. ಹಾಗು ಭಗವಾನರಲ್ಲಿ ಪಬ್ಬಜ್ಜ
ನೀಡುವಂತೆ ಕೇಳಿಕೊಂಡನು. ಬಾ ಭಿಕ್ಷು ಎಂದು ಭಗವಾನರು ಆತನನ್ನು ಆಗಲೇ ಸಂಘಕ್ಕೆ ಸೇರಿಸಿಕೊಂಡರು.
ಏಕೆಂದರೆ ಭಗವಾನರಿಗೆ ಆತನ ಮನಸ್ಸು ಪೂರ್ಣವಾಗಿ ಹಿಂಸೆಯಿಂದ ಕರುಣೆಯೆಡೆಗೆ ಧಮ್ಮದೆಡೆಗೆ
ವಾಲಿರುವುದು ಸ್ಪಷ್ಟವಾಗಿ ತಿಳಿದಿತ್ತು. ಆತನು ಮುಂದೆ ಎಂತಹ ಸ್ಥಿತಿಯಲ್ಲೂ ದಾರಿ ತಪ್ಪಲಾರ
ಎನ್ನುವುದು ತಿಳಿದಿತ್ತು.
* * *
ಅಂಗುಲಿಮಾಲನ
ತಾಯಿಯು ತನ್ನ ಮಗನನ್ನು ಹುಡುಕುತ್ತ ಕಾಡಿನಲ್ಲೆಲ್ಲಾ ಸುತ್ತಾಡಿದಳು, ಕಿರುಚಿದಳು, ಅಲೆದಾಡಿದಳು.
ಕೊನೆಗೂ ಆತನ ಸಿಗಲಿಲ್ಲ. ನಿರಾಸೆಯಿಂದ ಆಕೆಯು ಮನೆಗೆ ಹಿಂತಿರುಗಿದಳು.
* * *
ಇತ್ತ ರಾಜನು ಅಂಗುಲಿಮಾಲನನ್ನು ಹಿಡಿಯಲು ಸೈನ್ಯವನ್ನೇ
ಸಿದ್ಧಪಡಿಸಿಕೊಂಡು ಹೊರಟನು. ಏಕೆಂದರೆ ಅಂಗುಲಿಮಾಲನಿಗೆ 40 ಜನರು ಒಗ್ಗೂಡಿ ಬಂದರೂ ಅವರು ಸೋತಿರುವುದು ಈಗಾಗಲೇ ಗಮನಕ್ಕೆ
ಬಂದಿತ್ತು. ಆದರೆ ದಾರಿಯಲ್ಲಿ ಜೇತವನದ ವಿಹಾರ ಕಂಡಿದ್ದರಿಂದಾಗಿ ರಾಜನು ಅಲ್ಲಿ ರಥವನ್ನು
ನಿಲ್ಲಿಸಿ, ಭಗವಾನರಿದ್ದಲ್ಲಿಗೆ
ಬಂದು ವಂದಿಸಿ, ಒಂದೆಡೆ ಕುಳಿತನು.
ಆಗ ಭಗವಾನರು ರಾಜ ಪಸೇನದಿಗೆ ಏನು ವಿಷಯ ಮಹಾರಾಜ, ಬಿಂಬಿಸಾರನಾಗಲಿ, ಲಿಚ್ಛವಿಗಳಾಗಲಿ
ಅಥವಾ ಇನ್ಯಾರಾದರೂ ನಿನ್ನ ಮೇಲೆ ದಂಡೆತ್ತಿ ಬರುತ್ತಿದ್ದಾರೆಯೇ? ಎಂದು ಪ್ರಶ್ನಿಸಿದಾಗ ಆತನು ಅವೆಲ್ಲಾ ಕಾರಣ ನಿರಾಕರಿಸಿ ಅಂಗುಲಿಮಾಲಾನ
ಧ್ವಂಸಕ್ಕೆ ಬಂದಿರುವುದಾಗಿ ಹೇಳಿದನು. ಆಗ ಭಗವಾನರು ಆತನಿಗೆ ಹೀಗೆ ಕೇಳಿದರು: ಮಹಾರಾಜ, ಒಂದುವೇಳೆ ಅಂಗುಲಿಮಾಲಾನು ಪಬ್ಬಜಿತನಾಗಿ, ಶೀಲವಂತನಾಗಿದ್ದರೆ ನೀನು ಯಾವರೀತಿ ಉಪಚರಿಸುವೇ?
ಎಂದರು.
ಭಂತೆ, ಹಾಗೇನಾದರೂ ಆಗಿದ್ದರೆ ವಂದಿಸುತ್ತೇನೆ, ಪರಿಕರ ನೀಡಿ ಸಲಹುತ್ತೇನೆ, ಪೋಷಿಸುತ್ತೇನೆ.
ಆದರೆ ಅಂತಹ ದುಶ್ಶೀಲನು, ಕ್ರೂರಿಯು,
ಶೀಲಸಂಯಮ ದಯಾವಂತನು ಹೇಗೆತಾನೆ ಆಗುತ್ತಾನೆ?
ಆಗ ಭಗವಾನರು ಹತ್ತಿರದಲ್ಲಿ ಕುಳಿತಿದ್ದ
ಅಂಗುಲಿಮಾಲಾನನ್ನು ತೋರಿಸುತ್ತ ಮಹಾರಾಜ, ಈತನೇ ಅಂಗುಲಿಮಾಲಾ.
ರಾಜನು ಭೀತನಾದನು, ಆಶ್ಚರ್ಯಗೊಂಡನು. ನಂತರ ಭಗವಾನರಿಂದ ಸಾಂತ್ವನ ಪಡೆದು ಅಂಗುಲಿಮಾಲಾನ
ತಂದೆ-ತಾಯಿ ಗೋತ್ರವೆಲ್ಲಾ ವಿಚಾರಿಸಿದನು. ಆತನಿಗೆ ಪರಿಕರಗಳನ್ನು ನೀಡಲು ಹೋದನು. ನಂತರ
ಭಗವಾನರಿಗೆ ಅನುಮೋದನೆ ಮಾಡಿ ಹಿಂತಿರುಗಿದನು.
ನಂತರ ಅಂಗುಲಿಮಾಲನು ಧ್ಯಾನಾಭ್ಯಾಸದಲ್ಲಿ ತೊಡಗಿದನು.
ಮನಸ್ಸನ್ನು ಪಳಗಿಸಲು ಸರ್ವಶಕ್ತಿಯನ್ನು ಬಳಸಿದನು. ಆದರೂ ಆತನಿಗೆ ಚಿತ್ತಶಾಂತಿ ದೊರೆಯಲಿಲ್ಲ.
ಏಕೆಂದರೆ ಆತನಲ್ಲಿ ಪಶ್ಚಾತ್ತಾಪವು ಧ್ಯಾನ ಗಳಿಸಲು ಅಡ್ಡಿಯಾಗುತ್ತಿತ್ತು. ಆತನು ಮಾಡಿದ
ಜೀವಹತ್ಯೆಗಳು ಆತನಲ್ಲಿ ಚಿಂತೆ ಪಶ್ಚಾತ್ತಾಪವನ್ನುಂಟು ಮಾಡುತ್ತಿದ್ದವು. ಆ ಪಶ್ಚಾತ್ತಾಪ
ಕೊನೆಗೊಳ್ಳುವ ದಿನವು ಹತ್ತಿರಕ್ಕೆ ಬಂದಿತ್ತು. ಒಮ್ಮೆ ದಾರಿಯಲ್ಲಿ ಸ್ತ್ರೀಯೊಬ್ಬಳು ಪ್ರಸವ
ವೇದನೆ ಅನುಭವಿಸುತ್ತಿದ್ದಳು. ಮಗುವನ್ನು ಹೆರಲಾರದೆ ಅತ್ಯಂತ ನೋವು ಪಡುತ್ತಿದ್ದಳು. ಇದನ್ನು
ಕಂಡಂತಹ ಅಂಗುಲಿಮಾಲನು ಭಗವಾನರಿಗೆ ಈ ವಿಷಯ ತಿಳಿಸಿದನು. ಆಗ ಭಗವಾನರು ಸತ್ಯವಚನವೊಂದನ್ನು ನೀಡಿ
ಅದನ್ನು ಆ ಗಭರ್ಿಣಿಯ ಎದುರು ನುಡಿದು ಈ ಸತ್ಯಕ್ರಿಯೆ ಮಾಡುವಂತೆ ಹೇಳಿದರು.
ಅದರಂತೆಯೇ ಅಂಗುಲಿಮಾಲ ಭಯಪಡುತ್ತಲೇ ಹೀಗೆ ಸತ್ಯವಚನ
ನುಡಿದನು:
ಯತೋ ಹಂ ಭಗಿನಿ ಅರಿಯಾಯ
ಜಾತಿಯಾ ಜಾತೊ ನಾ ಅಭಿಜಿನಾಮಿ
ಸಚ್ಚಿಚ್ಚ ಪಾಣಂ ಜೀವಿತಾ ವೋರೋಪೆತಾ
ತೇನ ಸಚ್ಚೆನಾ ನೊತ್ಥಿ ಹೋತು
ಸೋತ್ಥ ಗಬ್ಭಸ್ಸಾತಿ
(ಸೋದರಿ ನಾನು ಆರ್ಯರ ಜಾತಿಯಲ್ಲಿ ಹುಟ್ಟಿದಾಗಿನಿಂದ
(ಸಂಘಕ್ಕೆ ಸೇರಿದಾಗಿನಿಂದ) ನಾನು ಇಚ್ಛಾಪೂರ್ವಕವಾಗಿ ಯಾವುದೇ ಜೀವಿಯನ್ನು ಹತ್ಯೆಮಾಡಿಲ್ಲ. ಈ
ಸತ್ಯವಚನದಿಂದಾಗಿ ನೀನು ಸ್ವಸ್ಥಳಾಗು (ಆರೋಗ್ಯ) ಮತ್ತು ಹಾಗೆಯೇ ನಿನಗೆ ಹುಟ್ಟುವ ಮಗು ಸಹಾ
ಸ್ವಸ್ಥವಾಗಿರಲಿ (ಆರೋಗ್ಯದಿಂದಿರಲಿ).
ತಕ್ಷಣ ಆ ಸ್ತ್ರೀಯು ಆ ಮಗುವಿಗೆ ಸುಖಪೂರ್ವಕ
ಪ್ರಸವದಿಂದಾಗಿ ಜನ್ಮ ನೀಡಿದಳು. (ಅಂದಿನಿಂದ ಇಂದಿನವರೆಗೂ ಶ್ರದ್ಧಾಳು ಜನರು ಈ ಅಂಗುಲಿಮಾಲ
ಪರಿತ್ತವನ್ನು ಗಭರ್ಿಣಿಯರಿಗೆ ಹೇಳಿ ಲಾಭ ಪಡೆಯುತ್ತಿದ್ದಾರೆ)
ಈ ಘಟನೆಯಿಂದಾಗಿ ಅಂಗುಲಿಮಾಲನಿಗೆ ತಾನು ಪೂರ್ಣ
ಅರಿವಿನಿಂದ, ಪೂರ್ಣ ಇಚ್ಛೆಯಿಂದ,
ಆನಂದದಿಂದ ಆ ಪಾಪಗಳೆಲ್ಲಾ ಮಾಡಿಲ್ಲ. ಅಜ್ಞಾನವಶಾತ್
ಹೀಗೆ ಮಾಡಿದ್ದೇ ಅಷ್ಟೇ ಎಂಬ ಭಾವದಿಂದಾಗಿ ಆತನು ಪಶ್ಚಾತ್ತಾಪ ಮೀರಿ ಸಮಾಧಿಗಳನ್ನು ಪಡೆದನು.
ನಂತರ ವಿಪಶ್ಶನ ಸಾಧಿಸಿ ಅರಹಂತನಾದನು.
ಆದರೆ ಆತನು ಭಿಕ್ಷೆಗಾಗಿ ಶ್ರಾವಸ್ತಿ ನಗರಕ್ಕೆ
ಹೋಗುವಾಗ, ಜನರು ಈತನೆ ನಮ್ಮ ಬಾಂಧವರ
ಕೊಂದ ಅಂಗುಲಿಮಾಲನೆಂದು ಗುರುತಿಸಿ, ಹೆಂಟೆಗಳಿಂದ,
ಕಲ್ಲುಗಳಿಂದ, ಶರೀರದಲ್ಲೆಲ್ಲಾ ರಕ್ತ ಬರುವಂತೆ ಹಿಂಸಿಸಿದರು. ಇಂತಹ ಗಾಯಯುತ
ಸ್ಥಿತಿಯಲ್ಲಿ ಭಗವಾನರನ್ನು ಆತನು ಭೇಟಿ ಮಾಡಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು.
ಸಹಿಸಿಕೋ, ಬ್ರಾಹ್ಮಣ ಸಹಿಸಿಕೋ,
ಈ ಜನ್ಮದ ಕರ್ಮಫಲವನ್ನು ಇಲ್ಲಿಯೇ ಈಗಲೇ
ಅನುಭವಿಸುತ್ತಿರುವೆ. ಆದರೆ ಮುಂದೆ ಸಿಗಬಹುದಾದ ಭೀಕರ ಕಮ್ಮಫಲದಿಂದ ನೀನು ತಪ್ಪಿಸಿಕೊಂಡಿರುವೆ.
ನೀನು ಅರಹಂತನಾಗಿರುವುದರಿಂದಾಗಿ, ಮುಂದೆ ಪರಿನಿಬ್ಬಾಣ
ಪಡೆಯುವುದರಿಂದಾಗಿ ಅವ್ಯಾವುವು ನಿನಗೆ ಸಿಗಲಾರವು. ಅವಕ್ಕೆಲ್ಲಾ ಹೋಲಿಸಿದರೆ ಇದು ಅತಿ ಅಲ್ಪ
ಸಹಿಸಿಕೋ.
ನಂತರ ಅಂಗುಲಿಮಾಲನು ಸಹಿಸಿಕೊಂಡನು. ಶರೀರವನ್ನು ಸಹಾ
ಶಾಂತಗೊಳಿಸಿ ಸಮಾಧಿ ಏರಿದನು. ನಂತರ ನಿರೋಧ ಸಮಾಪತ್ತಿ ಸುಖ ಅನುಭವಿಸಿದನು. ನಂತರ ಉದಾನ (ಆನಂದದ
ಉದ್ಗಾರ)ದಲ್ಲಿ ಹಲವು ಗಾಥೆ ನುಡಿದು, ನಂತರ ಪರಿನಿಬ್ಬಾಣ
ಪಡೆದನು.
ಈತನ ಬಗ್ಗೆ ಅರಿಯದ ಭಿಕ್ಷುಗಳು, ಭಗವಾನರಲ್ಲಿ ಅಂಗುಲಿಮಾಲನ ಜನ್ಮ ಎಲ್ಲಿ ಆಗಿದೆ ಎಂದು
ಪ್ರಶ್ನಿಸಿದರು. ಆಗ ಭಗವಾನರು ನನ್ನ ಪುತ್ರ ಅಂಗುಲಿಮಾಲ ಪರಿನಿಬ್ಬಾಣ ಸಾಧಿಸಿದ್ದಾನೆ ಎಂದರು.
ಇದನ್ನು ಕೇಳಿದ ಭಿಕ್ಷುಗಳು ಇಂತಹ ಪೂರ್ವ ಚರಿತ್ರೆ ಇದ್ದೂ ಸಹ ಪರಿನಿಬ್ಬಾಣ ಸಾಧ್ಯವೇ? ಎಂದು ಪ್ರಶ್ನಿಸಿದಾಗ ಭಗವಾನರು ಭಿಕ್ಷುಗಳೇ ಹಿಂದೆ
ಅಂಗುಲಿಮಾಲನಿಗೆ ಕಲ್ಯಾಣಮಿತ್ರರು ಇರಲಿಲ್ಲ, ನಂತರ ಆತನಿಗೆ ಸನ್ಮಿತ್ರರು ಸಿಕ್ಕಿ ಅವರ ಬುದ್ಧಿವಾದದಿಂದಾಗಿ ಸ್ಮೃತಿವಂತನಾಗಿ, ಧಮ್ಮಪಾಲನೆ ಮಾಡಿ, ಧ್ಯಾನದಲ್ಲಿ ಪರಿಶ್ರಮಪಟ್ಟು ಅರಹಂತನಾಗಿದ್ದಾನೆ ಎಂದು ಹೇಳಿ ಈ ಮೇಲಿನ
ಗಾಥೆ ಹೇಳಿದರು.