ಹೀನ ಧಮ್ಮ ಸೇವಿಸಬೇಡ
ಹೀನ ಧಮ್ಮವನ್ನು
(ಪಾಪ) ಸೇವಿಸಬೇಡ, ಎಚ್ಚರಹೀನನಾಗಿ
ಜೀವಿಸಬೇಡ, ಮಿಥ್ಯಾದೃಷ್ಟಿಯನ್ನು
ಅನುಸರಿಸಬೇಡ, ಲೌಕಿಕವರ್ಧನೆಯಲ್ಲಿ
ಬದುಕಬೇಡ. (167)
ಗಾಥ ಪ್ರಸಂಗ 13:1
ಯುವತಿಯೊಂದಿಗೆ ಯುವ ಭಿಕ್ಷುವಿನ ಜಗಳ
ಒಮ್ಮೆ ಯುವ ಭಿಕ್ಷುವೊಬ್ಬನು, ಹಿರಿಯ ಭಿಕ್ಷುವೊಂದಿಗೆ ಮಹಾ ದಾನಿ ವಿಶಾಖಳ ಮನೆಗೆ
ಹೊರಟನು. ಆಹಾರ ಸ್ವೀಕಾರದ ನಂತರ ಹಿರಿಯ ಭಿಕ್ಷುವು ಅಲ್ಲಿಂದ ಹೊರಟನು. ಆ ಯುವ ಭಿಕ್ಷು ಆಹಾರ
ಸ್ವೀಕರಿಸದ ಕಾರಣ ಅಲ್ಲೇ ಇದ್ದನು. ಅಲ್ಲಿ ಮಹಾದಾನಿ ವಿಶಾಖಳ ಮೊಮ್ಮಗಳು ಯುವ ಭಿಕ್ಷುವಿಗಾಗಿ
ನೀರನ್ನು ಶೋಧಿಸುತ್ತಿದ್ದಳು. ಆ ಸಮಯದಲ್ಲಿ ಆಕೆಯ ದೊಡ್ಡ ಪಾತ್ರೆಯಲ್ಲಿ ತನ್ನ ಪ್ರತಿಬಿಂಬ
ನೋಡಿಕೊಂಡು ನಕ್ಕಳು. ಆಗ ಆ ಯುವ ಭಿಕ್ಷುವು ಸಹ ನಕ್ಕುಬಿಟ್ಟನು. ಆಗ ಆಕೆಗೆ ಕೋಪವುಂಟಾಗಿ ಏ,
ನೀನು ಬೋಳುತಲೆ, ನನ್ನ ನೋಡಿ ಏಕೆ ನಕ್ಕೆ? ಎಂದುಬಿಟ್ಟಳು. ಇದರಿಂದ ಕೋಪಗೊಂಡ ಆ ಯುವ ಭಿಕ್ಷು ಸಹಾ ನೀನೇ ಬೋಳುತಲೆ,
ನಿನ್ನ ತಂದೆ-ತಾಯಿ ಸಹಾ ಬೋಳುತಲೆಯೇ ಎಂದುಬಿಟ್ಟನು.
ಹೀಗೆ ಅವರ ಜಗಳ ಮುಂದುವರೆಯಿತು, ಆ ಯುವತಿ ತನ್ನ
ಅಜ್ಜಿಯಾದ ವಿಶಾಖೆಯ ಬಳಿಯೇ ಹೋಗಿ ದೂರು ನೀಡಿದಳು. ಆಗ ವಿಶಾಖೆಯು ಹೊರಬಂದು ಆ ಭಿಕ್ಷುವಿಗೆ ಹೀಗೆ
ಹೇಳಿದಳು: ಭಂತೆ, ದಯವಿಟ್ಟು
ಕೋಪಗೊಳ್ಳಬೇಡಿ, ನನ್ನ ಮೊಮ್ಮಗಳ
ಮೇಲೆ ಕೋಪ ಬಿಟ್ಟುಬಿಡಿ. ಆದರೆ ಭಿಕ್ಷುವೆಂದ ಮೇಲೆ ತಲೆ ಬೋಳಾಗಿರುವುದೇ ಅಲ್ಲವೆ, ತಲೆ ಮಾತ್ರವಲ್ಲ, ಉಗುರುಗಳು ಸಹಾ ಕತ್ತರಿಸಲ್ಪಟ್ಟಿರುತ್ತದೆ ಮತ್ತು ಚೀವರ
ಧರಿಸಿರುತ್ತಾರೆ. ಭಿಕ್ಷಾಪಾತ್ರೆಯಿಂದ ಕೂಡಿರುತ್ತಾರೆ. ಹೀಗಾಗಿ ಆಕೆ ಬೋಳುತಲೆ ಎಂದರೂ
ತಪ್ಪೇನಿಲ್ಲ ತಾನೇ? ಎಂದಳು.
ಆಗ ಆ ಯುವ ಭಿಕ್ಷುವು ಇದು ನಿಜವೇ! ಆದರೆ ಏತಕ್ಕಾಗಿ
ಆಕೆ ನನ್ನನ್ನು ಆ ವಿಷಯದಲ್ಲಿ ಬಯ್ಯಬೇಕು? ಎಂದು ಆತನು ಪುನಃ ಜಗಳ ತೆಗೆದನು. ವಿಶಾಖೆಯಾಗಲಿ ಅಥವಾ ಆತನ ಹಿರಿಯ ಭಿಕ್ಷುವಾಗಲಿ ಇದನ್ನು ತಣ್ಣಗೆ
ಮಾಡಲಾಗಲಿಲ್ಲ.
ತಕ್ಷಣ ಅಲ್ಲಿಗೆ ಬುದ್ಧ ಭಗವಾನರೇ ಬಂದುಬಿಟ್ಟರು.
ತಕ್ಷಣ ಅವರಿಗೆ ಪರಿಸ್ಥಿತಿಯೆಲ್ಲಾ ಅರ್ಥವಾಗಿ ಹೋಗಿತ್ತು. ಅಷ್ಟೇ ಅಲ್ಲ, ಆ ಯುವ ಭಿಕ್ಷುವಿನ ಜ್ಞಾನೋದಯದ ಕಾಲ
ಹತ್ತಿರವಾಗಿರುವುದು ಅವರಿಗೆ ಗೊತ್ತಾಯಿತು. ಆಗ ಭಗವಾನರು ಆತನನ್ನು ಪಳಗಿಸುವುದಕ್ಕೋಸ್ಕರ ಹೀಗೆ
ಸಂಭಾಷಣೆ ಆರಂಭಿಸಿದರು.
ವಿಶಾಖ, ಯಾವ ಕಾರಣಕ್ಕಾಗಿ ನಿನ್ನ ಮೊಮ್ಮಗಳು ನನ್ನ ಮಗನನ್ನು ಬೋಳುತಲೆ ಎಂದು ಕರೆದದ್ದು? ಕೇವಲ ಆತನ ತಲೆ ಬೋಳಿಸಿರುವುದಕ್ಕಾಗಿಯೇ? ಅಷ್ಟಕ್ಕೂ ನನ್ನ ಸಂಘ ಸೇರಲು ಆತನು ತಲೆಬೋಳಿಸಿರಬೇಕು
ಅಲ್ಲವೇ?
ಈ ಬಗೆಯ ನುಡಿಗಳನ್ನು ಕೇಳುತ್ತಲೇ ಆತನು ಮಂಡಿಯೂರಿ
ಭಗವಾನರಿಗೆ ವಂದಿಸಿ ಹೀಗೆ ಹೇಳಿದನು: ಭಗವಾನ್, ನೀವೊಬ್ಬರೇ ನನ್ನನ್ನು ಅರ್ಥಮಾಡಿ ಕೊಂಡಿರುವುದು ಹೊರತು ನನ್ನ ಗುರುಗಳು ಅಲ್ಲ, ಈ ಮಹಾದಾನಿಯಾದ ವಿಶಾಖೆಯೂ ಅಲ್ಲ.
ಭಗವಾನರಿಗೆ ಆಗ ಆತನು ಜ್ಞಾನ ಗ್ರಹಿಸುವ ಅವಸ್ಥೆಗೆ
ಸಿದ್ಧನಾಗಿದ್ದಾನೆ ಎಂದು ತಿಳಿಯಿತು. ಆಗ ಹೀಗೆ ಹೇಳಿದರು: ಇಂದ್ರೀಯ ಆಸೆಗಾಗಿ ನಗುವುದು ಸರಿಯಲ್ಲ,
ಹಾಗೆಯೇ ಹೀನವಾದ ಯೋಚನೆಗಳನ್ನು ಹೊಂದಿರುವುದು
ಸಮಂಜಸವಲ್ಲ ಎಂದು ನುಡಿದು ಮೇಲಿನ ಗಾಥೆ ನುಡಿದರು. ಆ ಪ್ರವಚನದ ಅಂತ್ಯದಲ್ಲಿ ಆ ಯುವ ಭಿಕ್ಷುವಿಗೆ
ಸೋತಾಪತ್ತಿ ಜ್ಞಾನ ಲಭಿಸಿತು, ಆತ ಎಲ್ಲರೊಡನೆ
ಕ್ಷಮೆಯಾಚಿಸಿದನು.
No comments:
Post a Comment