ಕೆಲವರು ಮಾತ್ರ ಸ್ಪಷ್ಟವಾಗಿ ಸತ್ಯ ಗ್ರಹಿಸಬಲ್ಲರು
ಈ ಲೋಕವು
ಅಂಧಮಯವಾಗಿದೆ, ಕೆಲವರು ಮಾತ್ರ
ಸ್ಪಷ್ಟವಾಗಿ ಆಂತರ್ಯವನ್ನು ನೋಡಬಲ್ಲವರಾಗಿದ್ದಾರೆ. ಹೇಗೆ ಕೆಲವು ಪಕ್ಷಿಗಳು ಮಾತ್ರವೇ ಜಾಲದಿಂದ
ಪಾರಾಗುವುದೋ ಹಾಗೆಯೇ ಕೆಲವರು ಮಾತ್ರವೇ ಸ್ವರ್ಗಕ್ಕೆ ಹೋಗುವರು. (174)
ಗಾಥ ಪ್ರಸಂಗ 13:7
ನೇಕಾರ ಹುಡುಗಿಯ ಪ್ರಜ್ಞಾಶೀಲತೆ
ಒಂದುದಿನ ಭಗವಾನರು ಆಳವಿ ಗ್ರಾಮಕ್ಕೆ ಹೋದರು. ಅಲ್ಲಿ
ಭಗವಾನರು ಜೀವನದ ಅನಿತ್ಯತೆಯ ಬಗ್ಗೆ ಬೋಧನೆ ಮಾಡಿದರು. ಮಾರಣಾನುಸ್ಸತಿ ಧ್ಯಾನವನ್ನು ಮಾಡಿರಿ,
ಹೀಗೆ ಜಾಗ್ರತೆಯಿಂದ ಚಿಂತನೆ ಮಾಡಿ, ಜೀವನ ಅನಿಶ್ಚಿತ, ಮರಣ ನಿಶ್ಚಿತ. ಖಂಡಿತವಾಗಿ ಒಂದಲ್ಲ ಒಂದುದಿನ ನಾನು ಮರಣವನ್ನು
ಎದುರುಗೊಳ್ಳುವೆನು.
ಭಗವಾನರು ಆಲಿಸುವವರನ್ನು ಸದಾ ಸ್ಮೃತಿವಂತರಾಗಲು ಮತ್ತು
ಜೀವನದ ಯಥಾರೂಪವನ್ನು ಕಾಣಲು ಸತ್ಯಗ್ರಹಿಸಲು ಪ್ರೋತ್ಸಾಹಿಸುತ್ತಿದ್ದರು. ಅವರು ಹೀಗೆ
ಹೇಳುತ್ತಿದ್ದರು ಹೇಗೆ ಒಬ್ಬನು ಶಸ್ತ್ರಾಸ್ತ್ರಗಳನ್ನು ಹಿಡಿದು ಶತೃವಿಗೆ ಎದುರುಗೊಳ್ಳಲು
ಸಿದ್ಧನಾಗುವನೋ, ಅಥವಾ ದಂಡ
ಶಸ್ತ್ರಗಳಿಂದ ಹಾವು ಅಥವಾ ಜಂತುಗಳನ್ನು ಎದುರುಗೊಳ್ಳಲು ಮುಂದಾಗುವನೋ ಹಾಗೆಯೇ ಒಬ್ಬನು ಸದಾ
ಸ್ಮೃತಿವಂತನಾಗಿ ಮರಣವನ್ನು ಧೈರ್ಯದಿಂದ ಎದುರಿಸಬೇಕು. ಆಗ ಮಾತ್ರ ಆತನು ಸುಗತಿಗಾಗಿ ಈ
ಜಗತ್ತನ್ನು ತೃಪ್ತಿಯಿಂದ ಬಿಡುತ್ತಾನೆ. ಬಹಳಷ್ಟು ಜನರು ಈ ಸುತ್ತವನ್ನು ಅಥವಾ ಸುತ್ತದ ಸಾರವನ್ನು
ಗ್ರಹಿಸಲಿಲ್ಲ. ಆದರೆ ಹದಿನಾರರ ನೇಕಾರರ ಹುಡುಗಿ ಮಾತ್ರ ಬುದ್ಧರ ಈ ಸುತ್ತವನ್ನು ಸ್ಪಷ್ಟವಾಗಿ
ಅಥರ್ೈಸಿಕೊಂಡಳು. ಈ ಸುತ್ತದ ನಂತರ ಭಗವಾನರು ಜೇತವನಕ್ಕೆ ಹಿಂತಿರುಗಿದರು.
ಕೆಲದಿನಗಳ ನಂತರ ಭಗವಾನರು ಒಂದುದಿನ ಮುಂಜಾನೆ
ಮಹಾಕರುಣಾ ಸಮಾಪತ್ತಿಯಲ್ಲಿ ಸಹಾಯ ಮಾಡಲು ಜಗತ್ತನ್ನು ಸಮೀಕ್ಷಿಸಿದರು. ಆಗ ಅವರಿಗೆ ನೇಕಾರರ
ಹುಡುಗಿಯು ಗೋಚರಿಸಿದಳು. ಆಕೆಗೆ ಜ್ಞಾನೋದಯ ಪಡೆಯಲು, ಸೋತಪತ್ತಿ ಫಲ ಪಡೆಯಲು ಪಕ್ವಕಾಲ ಕೂಡಿಬಂದಿತ್ತು. ಹೀಗಾಗಿ ಭಗವಾನರು
ಮತ್ತೊಮ್ಮೆ ಅಳವಿ ಗ್ರಾಮಕ್ಕೆ ಬಂದರು. ಆ ಹುಡುಗಿಗೂ ಭಗವಾನರು 500 ಶಿಷ್ಯರ ಸಮೇತ ಅಳವಿ ಗ್ರಾಮಕ್ಕೆ ಬರುತ್ತಿರುವುದು ತಿಳಿಯಿತು. ಆಕೆಗೆ
ಆನಂದವಾಯಿತು, ಭಗವಾನರ ಧಮ್ಮಬೋಧನೆ
ಆಲಿಸಲು ಸದಾವಕಾಶ ದೊರೆಯಿತಲ್ಲ ಎಂದು ಹಿಗ್ಗಿದಳು. ಆದರೆ ಅವಳ ತಂದೆಯು ಆಕೆಗೆ ದಾರಗಳ ಉರುಳೆ
ಸುತ್ತುವಂತೆ ಆಜ್ಞಾಪಿಸಿದನು. ಏಕೆಂದರೆ ಅದು ಅತ್ಯಗತ್ಯವಾಗಿ ಆತನಿಗೆ ಬೇಕಾಗಿತ್ತು. ಹೀಗಾಗಿ
ಆಕೆಯು ನಿಷ್ಠಾವಂತಳಾಗಿ ಮೊದಲು ದಾರಗಳನ್ನು ನೂಲಿ ತಂದೆಯ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದಳು.
ಮಾರ್ಗ ಮಧ್ಯದಲ್ಲಿ ಭಗವಾನರ ಪ್ರವಚನ ನಡೆಯುತ್ತಿರುವುದು ಆಕೆಗೆ ಕಂಡುಬಂದಿತು. ಜನರು ಅಪಾರವಾಗಿ
ತುಂಬಿದ್ದರು.
ಭಗವಾನರಿಗೆ ಆಕೆಯು ಧಮ್ಮಪಾಲಿಸಲು ಬರುವುದು
ತಿಳಿದಿದತ್ತು. ಅಷ್ಟೇ ಅಲ್ಲ, ಆಕೆಗೆ ಈಗ ಅದನ್ನು
ಆಲಿಸುವುದು ಅತಿ ಅಗತ್ಯವಾಗಿತ್ತು. ಆಕೆಯ ಕರ್ಮಫಲದಂತೆ ಆಕೆಯು ಜೀವಿಸುವುದು ಕೆಲವು ಗಂಟೆಗಳ
ಮಾತ್ರವಾಗಿತ್ತು. ಆದರೆ ಜನರ ಸಂಖ್ಯೆ ಅತ್ಯಧಿಕವಾಗಿತ್ತು. ಹೀಗಾಗಿ ಭಗವಾನರ ಸಂಕಲ್ಪದಿಂದಾಗಿ
ಮತ್ತು ಭಗವಾನರು ಆಕೆಯನ್ನು ನೋಡಿದರು. ಆಗ ಆಕೆಯಲ್ಲಿ ಶ್ರದ್ಧೆ ಹೆಚ್ಚಾಗಿ ತನಗೆ
ಅರಿವಿಲ್ಲದಂತೆಯೇ ನೂಲುಗಳ ಬುಟ್ಟಿಯನ್ನು ಬಿಟ್ಟು, ಭಗವಾನರ ಸಮೀಪ ಬಂದುಬಿಟ್ಟಳು. ಆಗ ಭಗವಾನರು ಆಕೆಗೆ ನಾಲ್ಕು
ಪ್ರಶ್ನೆಗಳನ್ನು ಕೇಳಿದರು. ಆಕೆಯು ಅವೆಲ್ಲದಕ್ಕೂ ಉತ್ತರಿಸಿದಳು.
ಭಗವಾನರು : ನೀನು
ಎಲ್ಲಿಂದ ಬಂದೆ ?
ಹುಡುಗಿ : ನನಗೆ
ಗೊತ್ತಿಲ್ಲ.
ಭಗವಾನರು : ನೀನು
ಎಲ್ಲಿಗೆ ಹೋಗುವೆ ?
ಹುಡುಗಿ : ನನಗೆ
ಗೊತ್ತಿಲ್ಲ.
ಭಗವಾನರು : ನಿನಗೆ
ಗೊತ್ತಿಲ್ಲವೇ ?
ಹುಡುಗಿ : ಹೌದು,
ನನಗೆ ಗೊತ್ತಿದೆ.
ಭಗವಾನರು : ನಿನಗೆ
ಗೊತ್ತಿದೆಯೇ ?
ಹುಡುಗಿ : ನನಗೆ
ಗೊತ್ತಿಲ್ಲ, ಭಗವಾನ್.
ಆಕೆಯ ಉತ್ತರ ಆಲಿಸಿದ ಸಭಿಕರಿಗೆ ನೇಕಾರರ ಹುಡುಗಿ
ಅಗೌರವಯುತವಾಗಿ ಉತ್ತರಿಸುತ್ತಿದ್ದಾಳೆ ಎಂದೆನಿಸಿತು. ಆಗ ಭಗವಾನರು ಅವರ ಅಜ್ಞಾನ ದೂರೀಕರಿಸಲು ಆ
ಹುಡುಗಿಗೆ ಆ ಪ್ರಶ್ನೆಗಳ ಉತ್ತರವನ್ನು ಅರ್ಥಪೂರ್ಣವಾಗಿ ವಿವರಿಸುವಂತೆ ಹೇಳಿದಾಗ ಆಕೆಯು ಹೀಗೆ
ವಿವರಿಸಿದಳು:
ಭಗವಾನ್, ನಾನು ಮನೆಯಿಂದಲೇ ಬಂದಿರುವೆ ಎಂಬುದು ನಿಮಗೆ ಗೊತ್ತೇ ಇದೆ.
ಆದ್ದರಿಂದಾಗಿ ನಿಮ್ಮ ಪ್ರಶ್ನೆಯ ಅರ್ಥ ನಾನು ಯಾವ ಜನ್ಮದಿಂದ ಇಲ್ಲಿಗೆ ಬಂದಿರುವೆ ಎಂದಾಗಿದೆ,
ಆದ್ದರಿಂದಾಗಿ ನನಗೆ ಗೊತ್ತಿಲ್ಲವೆಂದು ಹೇಳಿದೆನು.
ಅದೇರೀತಿ ನಿಮ್ಮ ಎರಡನೆಯ ಪ್ರಶ್ನೆ ನಾನು ಮುಂದೆ ಎಲ್ಲಿ ಜನ್ಮತಾಳುವೆ ಎಂದಾಗಿದೆ. ಆದ್ದರಿಂದಾಗಿ
ನಾನು ಗೊತ್ತಿಲ್ಲವೆಂದೇ ಹೇಳಿದೆನು. ಹಾಗೆಯೇ ನಿಮ್ಮ ಮೂರನೆಯ ಪ್ರಶ್ನೆ ಒಂದುದಿನ ನಾನು
ಸಾಯಲಿದ್ದೇನೆ ಎಂಬುದು ತಿಳಿದಿಲ್ಲವೇ ಎಂದಾಗಿದೆ. ಅದಕ್ಕಾಗಿ ನಾನು ಗೊತ್ತಿದೆ ಎಂದು ಹೇಳಿದೆನು.
ಅದರಂತೆಯೇ ತಮ್ಮ ಕೊನೆಯ ಪ್ರಶ್ನೆ ನಾನು ಯಾವಾಗ ಮರಣಿಸುವೆ ಎಂದು ಗೊತ್ತಿದೆಯೇ? ಎಂದಾಗಿದೆ. ಅದಕ್ಕಾಗಿಯೇ ನನಗೆ ಗೊತ್ತಿಲ್ಲ ಎಂದು
ತಿಳಿಸಿದೆನು.
ಭಗವಾನರು ಆಕೆಯ ಪ್ರಜ್ಞಾಶೀಲತೆಯ ಬಗ್ಗೆ
ಪ್ರಶಂಸಿಸಿದರು. ಜನರು ಅಭಿಮಾನದಿಂದ ಆನಂದಿಸಿದರು. ನಂತರ ಸುತ್ತವನ್ನು ಆಲಿಸಿ ಆಕೆಯು ಸೋತಪತ್ತಿ
ಫಲವನ್ನು ಪಡೆದಳು.
ನಂತರ ಆಕೆಯು ನೂಲಿನ ಬುಟ್ಟಿಯನ್ನು ತೆಗೆದುಕೊಂಡು
ತಂದೆಯ ಬಳಿಗೆ ಬಂದಳು. ಆಕೆಯು ಅಲ್ಲಿಗೆ ಬಂದಾಗ ತಂದೆಯು ನೇಕಾರ ಮಾಡುವ ಸ್ಥಳದಲ್ಲೇ ನಿದ್ರೆ
ಹೋಗಿದ್ದನು. ಆತನು ಶಬ್ದ ಆಲಿಸಿ ತಕ್ಷಣ ಗಾಬರಿಯಿಂದ ಎದ್ದನು. ತಕ್ಷಣ ಆಕಸ್ಮಿಕವಾಗಿ ಲಾಳಿಯನ್ನು
ಎಳೆದುಬಿಟ್ಟಿದ್ದನು. ಆಗ ಶರವೇಗದಲ್ಲಿ ಆ ಲಾಳಿಯ ತುದಿಯು ಹುಡುಗಿಯ ಎದೆಗೆ ಚುಚ್ಚಿಕೊಂಡಿತು. ಆ
ಕ್ಷಣದಲ್ಲೇ ಸಾವನ್ನಪ್ಪಿದಳು. ನಂತರ ಹಾಗೆಯೇ ತುಸಿತಾ ಲೋಕದಲ್ಲಿ ದೇವತೆಯಾಗಿ
ಪುನರ್ಜನ್ಮತಾಳಿದಳು. ಆಕೆಯ ತಂದೆಯ ಶೋಕ ಹೇಳತೀರದು. ಅಪಾರ ದುಃಖದಿಂದ ಆಶ್ರು ಹರಿಸುತ್ತಾ,
ಜೀವನದ ಅನಿಶ್ಚಿತತೆ ಅರ್ಥಮಾಡಿಕೊಳ್ಳಲಾರದೆ, ಬುದ್ಧರ ಬಳಿಗೆ ಬಂದು ಮುಂದೆ ಭಿಕ್ಷುವಾದನು. ನಂತರ
ಆತನು ಅರಹಂತನಾದನು. ಹೀಗೆ ವಾತ್ಸಲ್ಯದಿಂದ ಶೋಕದ ಕಡೆಗೆ ನಂತರ ಜ್ಞಾನದ ಕಡೆಗೆ ಧಾವಿಸಿ ಅರಹಂತನಾದನು.
No comments:
Post a Comment