Friday, 8 May 2015

dhammapada/jaravagga/11.2/sirima

ಸೌಂದರ್ಯದ ನಿಜಸ್ವರೂಪ - ಕುರೂಪತೆ
ಚಿತ್ತಾಕರ್ಷವಾದ ಈ ಸುಂದರ ಶರೀರವನ್ನು ನೋಡಿ, ನೋಡಿ ಈ ಹುಣ್ಣುಗಳ ರಾಶಿ, ಅಸಹ್ಯತೆಯ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ್ದು, ಸ್ಥಿರಬಲ್ಲದ ಈ ದೇಹವನ್ನು ಗಮನಿಸಿ.        (147)
ಗಾಥ ಪ್ರಸಂಗ 11:2
ಸಿರಿಮಾಳ ಶವದ ಹರಾಜು

                ರಾಜಗೃಹದಲ್ಲಿ ಸಿರಿಮಾ ಎಂಬ ನರ್ತಕಿಯಿದ್ದಳು. ಆಕೆ ತನ್ನ ಸೌಂದರ್ಯದಿಂದ ಬಹು ಖ್ಯಾತಿ ಪಡೆದಿದ್ದಳು. ಎಲ್ಲೆಡೆ ಆಕೆಯ ಚೆಲುವಿನ ಸುದ್ದಿ ಹಬ್ಬಿತ್ತು. ಆಕೆಯೂ ಸಹ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದಳು. ಈಕೆಯ ಖ್ಯಾತಿಯ ಬಗ್ಗೆ ಕೇಳಿ ಒಬ್ಬ ಯುವಕ ಭಿಕ್ಷು ಮೋಹಗೊಂಡನು. ಆತನು ಆಕೆಯನ್ನು ಕಾಣಲು ಹೋದನು. ಆಗ ಆಕೆ ರೋಗದಿಂದ ಕೂಡಿದ್ದು. ಆದರೂ ಸಹ ಭಿಕ್ಷುಗಳಿಗೆ ವಂದಿಸಿ ಆಹಾರ ನೀಡಿ ಹೊರಟಳು. ಯುವಕ ಭಿಕ್ಷುವು ಹೀಗೆ ಯೋಚಿಸಿದನು ರೋಗದಿಂದ ಇರುವಾಗಲೇ ಹೀಗಿರಬೇಕಾದರೆ ಚೆನ್ನಾಗಿರುವಾಗ ಇನ್ನೆಷ್ಟು ಸುಂದರಳಾಗಿ ಇದ್ದಿರಬಹುದು ಎಂದು ಯೋಚಿಸಿ ಮತ್ತಷ್ಟು ರಾಗಾಸಕ್ತನಾದನು.
                ಆ ರಾತ್ರಿಯೇ ಆಕೆಯು ಸತ್ತುಹೋದಳು. ಈ ವಿಷಯವನ್ನು ರಾಜ ಬಿಂಬಸಾರನು ಭಗವಾನರಲ್ಲಿಗೆ ಬಂದು ತಿಳಿಸಿದನು. ಭಗವಾನರು ಸತ್ಯದರ್ಶನ ಮಾಡಿಸುವುದಕ್ಕಾಗಿ, ಬಿಂಬಸಾರನಿಗೆ 3 ದಿನಗಳ ಕಾಲ ಆಕೆಯ ಶವವನ್ನು ಸಂಸ್ಕಾರ ಮಾಡದಿರುವಂತೆ ಬುದ್ಧಿವಾದ ನೀಡಿದರು. 4ನೆಯ ದಿನ ಆಕೆಯ ಶರೀರವು ಬಣ್ಣಗೆಟ್ಟು ಊದಿ, ಹುಳುಗಳು ಹೊರಬರಲಾರಂಭಿಸಿತು. ಆಗ ರಾಜನು ಸಿರಿಮಾವನ್ನು 1000 ರೂ.ಗೆ ಮಾರಾಟ ಘೋಷಿಸಿ ಯಾರು ಬೇಕಾದರೂ ಪಡೆಯಬಹುದೆಂದು ಡಂಗೂರ ಸಾರಿದನು. ಆದರೆ ಯಾರೂ ಬರಲಿಲ್ಲ. ಕೊನೆಗೆ ಪುಕ್ಕಟೆಯಾಗಿ ಆಕೆ ಶವ ಸಿಗುವುದೆಂದು ಡಂಗೂರ ಸಾರಿದನು. ಯಾರಿಗೂ ಸಹ ಆಕೆಯ ಶರೀರ ಬೇಕಾಗಿರಲಿಲ್ಲ. ಎಲ್ಲರೂ ಆಕೆ ಬದುಕಿದ್ದಾಗ ಎಷ್ಟು ಆಸೆಪಡುತ್ತಿದ್ದರೋ ಸತ್ತಾಗ ಅಷ್ಟೇ ಅಸಹ್ಯಪಡುತ್ತಿದ್ದರು.
                ಯುವಕ ಭಿಕ್ಷುವಿಗೆ ಸಿರಿಮಾ ಸತ್ತಳೆಂದು ಇನ್ನೂ ತಿಳಿದಿರಲಿಲ್ಲ. ಬುದ್ಧರು ಮತ್ತು ಭಿಕ್ಷುಗಳು ಸಿರಿಮಾಳನ್ನು ಕಾಣಲು ಹೋಗುತ್ತಿದ್ದಾರೆಂದು ಆತನು ಸಂತೋಷದಿಂದ ಅವರೊಂದಿಗೆ ಹೋದನು.
                ಆಗ ಭಗವಾನರು ಆಕೆಯ ಶವವನ್ನು ತೋರಿಸಿ ಭಿಕ್ಷುಗಳೊಂದಿಗೆ ಹೀಗೆ ಹೇಳಿದರು: ಭಿಕ್ಷುಗಳೇ ನೋಡಿ, ಆಕೆ ಜೀವಂತವಾಗಿದ್ದಾಗ ಆಕೆಯನ್ನು ಪಡೆಯಲು ಸಹಸ್ರ ಸಹಸ್ರ ರೂಪಾಯಿಗಳನ್ನು ಸುರಿಯಲು ಸಿದ್ಧರಾದವರು ಈಗ ಪುಕ್ಕಟೆಯಾಗಿ ಪಡೆಯಲು ಸಿದ್ಧವಿಲ್ಲ. ಏಕೆಂದರೆ ಶರೀರವು ಅನಿತ್ಯವಾದುದು. ಕೊಳೆಯುವಂತಹದು. ಅಶುಭವು, ಮರಣದಲ್ಲಿ ಅಂತ್ಯವಾಗುವಂತಹುದು.
                ಈ ಸುಂದರವಾದ ಶರೀರವನ್ನು ಗಮನಿಸಿ, ಹುಣ್ಣುಗಳ ರಾಶಿ, ಅಸಹ್ಯತೆ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ, ಸ್ಥಿರವಲ್ಲದ ದೇಹವಿದು.
                ಇದನ್ನು ಕೇಳಿದಾಗ, ನೋಡಿದಾಗ ಆ ಯುವಕ ಭಿಕ್ಷುವು ಆಸಕ್ತಿಗಳನ್ನು ತೊರೆದು ಸ್ಥಿರಚಿತ್ತನಾದನು

No comments:

Post a Comment