Tuesday, 26 May 2015

dhammapada/lokavagga/13.4/princeabhaya

ಅರಿತವರು ಅಂಟುವುದಿಲ್ಲ
ಬನ್ನಿ, ಈ ಲೋಕವನ್ನು ವೀಕ್ಷಿಸಿ, ಅಲಂಕೃತ ರಾಜರಥದಂತಿದೆ, ಇದರಲ್ಲಿ ಮೂರ್ಖರೇ ಆನಂದಿಸುವರು. ಆದರೆ ಅರಿತವರು ಅಂಟುವುದಿಲ್ಲ.         (171)
ಗಾಥ ಪ್ರಸಂಗ 13:4                     
ಬುದ್ಧರ ಸಾಂತ್ವನ

                ಬಿಂಬಿಸಾರನ ರಾಜ್ಯದ ಗಡಿಭಾಗದಲ್ಲಿ ದಂಗೆಯೆದ್ದಾಗ, ಅದನ್ನು ರಾಜಕುಮಾರ ಅಭಯನು ಅಡಗಿಸಿದನು. ಅದರಿಂದ ಪ್ರಸನ್ನನಾದ ರಾಜನು ರಾಜಕುಮಾರ ಅಭಯನಿಗೆ ನೃತ್ಯಗೀತೆಗಳನ್ನು ಬಲ್ಲಂತಹ ಸುಂದರ ಯುವತಿಯನ್ನು ದಾನವಾಗಿ ನೀಡಿದನು. ಅಷ್ಟೇ ಅಲ್ಲ, ಆತನಿಗೆ ಏಳು ದಿನಗಳ ಕಾಲ ರಾಜ್ಯಭಾರ ನಡೆಸಲು ಅನುಮತಿಯನ್ನೂ ನೀಡಿದನು. ಅದರಂತೆಯೇ ರಾಜಕುಮಾರನು ಏಳು ದಿನಗಳ ಕಾಲ ಭವ್ಯವಾದ ರಾಜಸುಖದಲ್ಲಿ ತಲ್ಲೀನನಾಗಿ ಅರಮನೆಯಿಂದ ಹೊರಗಡೆ ಬಂದಿರಲಿಲ್ಲ. ಎಂಟನೆಯ ದಿನದಂದು ಆತನು ಸ್ನಾನಕ್ಕಾಗಿ ನದಿಗೆ ಹೋಗಿ ಶುಚಿಯಾದನು. ನಂತರ ಆತನು ಸುಖಮಯ ಉದ್ಯಾನವನದಲ್ಲಿ ಕುಳಿತನು. ನಂತರ ಆ ಸ್ತ್ರೀಯ ಗೀತೆ ಮತ್ತು ನೃತ್ಯ ವೀಕ್ಷಿಸುತ್ತಿದ್ದನು. ಆಕೆಯು ನತರ್ಿಸುತ್ತಿರುವಾಗ ಏಕಾಏಕಿ ಆಕೆಯಲ್ಲಿ ಮಾರಣಾಂತಿಕ ನೋವು ಕಾಣಿಸಿಕೊಂಡು ಅಲ್ಲೇ ಕುಸಿದು ಮೃತ್ಯುವಶವಾದಳು.
                ಅದನ್ನು ವೀಕ್ಷಿಸಿದಂತಹ ಅಭಯನಿಗೆ ಅಪಾರ ದುಃಖವಾಯಿತು. ಆ ಸ್ತ್ರೀಯ ವಿಯೋಗದಿಂದ ಅಪಾರವಾಗಿ ದುಃಖಿಸುತ್ತಿದ್ದಂತಹ ಆತನಿಗೆ ಬುದ್ಧರ ನೆನಪಾಯಿತು. ನನ್ನ ದುಃಖವನ್ನು ಪೂರ್ಣವಾಗಿ ಶಮನ ಮಾಡಲು ಬುದ್ಧರೊಬ್ಬರಿಂದಲೇ ಸಾಧ್ಯ ಎಂದು ನಿರ್ಧರಿಸಿ, ಬುದ್ಧರತ್ತ ಧಾವಿಸಿದನು. ಭಗವಾನ್, ದಯವಿಟ್ಟು ನನ್ನ ದುಃಖ ಶಮನಗೊಳಿಸಿ ಎಂದನು. ಭಗವಾನರಿಗೆ ಆತನ ಪರಿಸ್ಥಿತಿ ಪೂರ್ಣವಾಗಿ ಅರ್ಥವಾಗಿತ್ತು. ಆಗ ಭಗವಾನರು ಆತನಿಗೆ ಹೀಗೆ ಸಾಂತ್ವನಗೊಳಿಸಿದರು.

                ರಾಜಕುಮಾರ ಅಭಯ, ಸಂಸಾರದಲ್ಲಿ ಎಣಿಕೆ ಮಾಡಲಾಗದಷ್ಟು ಬಾರಿ ಜನ್ಮ ತಾಳುತ್ತೇವೆ. ಇದರ ಆರಂಭ ನಿಲುಕೆಗೆ ಸಿಗದಷ್ಟಿರುತ್ತದೆ. ಇದೇರೀತಿಯಲ್ಲಿ ಈ ಸ್ತ್ರೀಯು ಅದೆಷ್ಟೋ ಬಾರಿ ಸತ್ತಿದ್ದಾಳೆ ಹಾಗು ಹಾಗೆಯೇ ನೀನು ಸಹಾ ಈಕೆಯ ಮೇಲೆ ಅದೆಷ್ಟೋ ಬಾರಿ ಕಣ್ಣೀರನ್ನು ಹರಿಸಿದ್ದೀಯೆ. ಅದನ್ನು ಅಳೆಯಲಾಗುವುದಿಲ್ಲ. ಆದ್ದರಿಂದ ರಾಜಕುಮಾರನೇ, ಶೋಕಿಸಬೇಡ, ಅಪಕ್ವ ಜನರೇ ಶೋಕ ಸಾಗರದಲ್ಲಿ ಮುಳುಗುವವರು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment