Tuesday, 26 May 2015

dhammapada/lokavagga/13.2/suddhodhana

ಎದ್ದೇಳು, ಅಜಾಗರುಕನಾಗಬೇಡ
ಎದ್ದೇಳಿ, ಅಜಾಗರೂಕನಾಗಬೇಡಿ, ಸುಚಾರಿತ್ರ್ಯದಿಂದ, ಧಮ್ಮದಿಂದ ಜೀವಿಸಿ, ಧಮ್ಮಾಚಾರಿಯು ಈ ಲೋಕದಲ್ಲೂ ಪರಲೋಕದಲ್ಲೂ ಸುಖಿಯಾಗಿ
ಜೀವಿಸುವನು.     (168)
ಸುಚಾರಿತ್ರ್ಯದಿಂದ, ಧಮ್ಮದಿಂದ ಜೀವಿಸಿ, ಹೊರತು ದುಶ್ಚಾರಿತ್ರ್ಯವಾಗಿ ಜೀವಿಸಬೇಡಿ. ಧಮ್ಮಾಚಾರಿಯು ಈ ಲೋಕದಲ್ಲೂ, ಪರಲೋಕದಲ್ಲೂ ಸುಖಿಯಾಗಿ ಜೀವಿಸುವನು.   (169)
ಗಾಥ ಪ್ರಸಂಗ 13:2
ತಂದೆ ಶುದ್ಧೋಧನರ ಚರಿತೆ


                ಭಗವಾನರು ಜ್ಞಾನೋದಯದ ನಂತರ ಪ್ರಥಮ ಬಾರಿಗೆ ತಮ್ಮ ನಾಡಿಗೆ ಹಿಂತಿರುಗುತ್ತಿದ್ದರು. ಅವರು ತಮ್ಮ ರಾಜಧಾನಿಯಾದ ಕಪಿಲ ನಗರಕ್ಕೆ ಆಗಮಿಸಿದರು. ಅವರ ಬಂಧು-ಬಾಂಧವರೆಲ್ಲ, ರಾಜ್ಯದ ಜನರು ಎಲ್ಲರೂ ಸುಸ್ವಾಗತ ಕೋರಿದರು. ಆದರೂ ಅವರ ಕುಲಬಾಂಧವರಾದ ಅನೇಕರಲ್ಲಿ ನಾನೇ ಶ್ರೇಷ್ಠ ಎಂಬ ಅಹಂಭಾವ ಹೋಗಿರಲಿಲ್ಲ. ಅದು ಹೋಗುವವರೆಗೂ ಅವರಿಗೆ ಧಮ್ಮಬೋಧನೆ ಮಾಡಿದರೆ ವ್ಯರ್ಥ ಎಂದು ಅರಿತಿದ್ದ ಭಗವಾನರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ರತ್ನಗಳಿಂದಲೇ ಸೇತುವೆ ನಿಮರ್ಿಸಿದರು. ನಂತರ ಅದರ ಮೇಲೆ ಭಗವಾನರು ನಡೆದಾಡಿದರು. ಆಗ ಅವರ ಬಾಂಧವರೆಲ್ಲ ಶದ್ಧೆಯಿಂದ ಪುಳಕಿತರಾದರು. ಆಗ ಭಗವಾನರು ಧಮ್ಮ ಬೋಧನೆ ಮಾಡಿದರು. ತಂದೆ ಶುದ್ಧೋಧನರು ಸೇರಿದಂತೆ ಎಲ್ಲರೂ ಭಕ್ತಿಭಾವದಿಂದ ವಂದಿಸಿದರು. ಆ ಬೋಧನೆಯ ವೇಳೆ ಎಲ್ಲಾ ಬಾಂಧವರ ಮೇಲೂ ಹೂ ಮಳೆಯು ಸುರಿಯಲ್ಪಟ್ಟಿತ್ತು. ಆಗ ಭಿಕ್ಷುಗಳು ಈ ಹೂಮಳೆಯ ಕುರಿತು ಚಚರ್ಿಸುವಾಗ ಭಗವಾನರು ಹೀಗೆ ಹೇಳಿದರು. ಓ ಭಿಕ್ಷುಗಳೇ, ನನ್ನ ಕುಲದವರ ಮೆಲೆ ಹೂಮಳೆ ಬೀಳುತ್ತಿರುವುದು ಇದೇ ಮೊದಲಲ್ಲ. ಹಿಂದೆ ನಾನು ವೆಸ್ಸಂತರನಾಗಿ ಜನ್ಮ ತಾಳಿದ್ದಾಗ ಆಗಲೂ ನನ್ನೆಲ್ಲಾ ಕುಲದವರ ಮೇಲೂ ಹೂಮಳೆಯು ಬಿದ್ದಿತ್ತು ಎಂದು ತಮ್ಮ ಹಿಂದಿನ ಜನ್ಮ ವೃತ್ತಾಂತವನ್ನು (ವೆಸ್ಸಂತರ ಜಾತಕ) ತಿಳಿಸಿದರು.
                ನಂತರ ಎಲ್ಲರೂ ಅವರವರ ಮನೆಗೆ ಹೊರಟರು. ಯಾರೊಬ್ಬರೂ ಸಹಾ ಭಗವಾನರಿಗೆ ಊಟಕ್ಕೆ ಆಹ್ವಾನಿಸಲಿಲ್ಲ. ಪ್ರಜೆಗಳು ರಾಜನು ಆಹ್ವಾನಿಸಬಹುದೆಂದು, ರಾಜ ಶುದ್ಧೋಧನರು ತಮ್ಮ ಮಗ ನನ್ನ ಅರಮನೆಯಲ್ಲದೆ ಎಲ್ಲಿಗೆ ಹೋಗುವನು? ಎಂದು ಯೋಚಿಸಿ, ಅವರು ತಮ್ಮ ಅರಮನೆಗೆ ಹಿಂತಿರುಗಿದರು. ಬುದ್ಧರು ಮತ್ತು ಭಿಕ್ಷುಗಳಿಗೋಸ್ಕರ ಎಲ್ಲಾಬಗೆಯ ಆಹಾರನ್ನು ಸಿದ್ಧಪಡಿಸಿದರು. ಹಾಗೆಯೇ ಆಸನಗಳನ್ನು ಸಿದ್ಧಪಡಿಸಿದರು.
                ಮಾರನೆಯ ದಿನದಂದು ಭಗವಾನರು ನಗರದಲ್ಲಿ ಅಹಾರಕ್ಕಾಗಿ ನಡೆಯುವುದು ಕಂಡು ಗುಪ್ತಚರರು ರಾಜ ಶುದ್ಧೋಧನರಿಗೆ ತಿಳಿಸಿದರು. ಇದನ್ನು ತಿಳಿದ ರಾಜರು ವಿಚಲಿತರಾಗಿ ಭಗವನರು ಇದ್ದೆಡೆ ಬಂದು, ಗೌರವಯುತವಾಗಿ ವಂದಿಸಿದರು. ನಂತರ ಹೀಗೆ ಹೇಳಿದರು: ಮಗು! ಏತಕ್ಕಾಗಿ ನನ್ನ ತೇಜೋವಧೆ ಮಾಡುತ್ತಿರುವೆ? ನೀವು ಹೀಗೆ ಭಿಕ್ಷಾಟನೆಗೆ ಹೊರಟಿರುವುದು ಕಂಡು ನಾಚಿಕೆಯಿಂದ ಕುಸಿದಿದ್ದೇನೆ. ಇದೇ ನಗರದಲ್ಲಿ ನೀವು ಚಿನ್ನದ ರಾಜ ರಥದಲ್ಲಿ ಸಂಚರಿಸಿದ ನೀವು ಹೀಗೆ ಆಹಾರಕ್ಕಾಗಿ ಪಾತ್ರೆ ಹಿಡಿದು ಮನೆಯಿಂದ ಮನೆಗೆ ತಿರುಗಾಡುವುದು ಸಮಂಜಸವೇ ಹೇಳಿ? ಏತಕ್ಕಾಗಿ ನನ್ನ ತೇಜೋವಧೆ ಮಾಡುತ್ತಿರುವಿರಿ?
                ಮಹಾರಾಜರೇ, ನಾನು ನಿಮ್ಮ ತೇಜೋವಧೆ ಮಾಡುತ್ತಿಲ್ಲ. ನನ್ನ ವಂಶಾಚರಣೆಯನ್ನು ಮುಂದುವರೆಸುತ್ತಿದ್ದೇನೆ ಅಷ್ಟೇ.
                ಆದರೆ ಮಗು, ಜೀವನದಲ್ಲಿ ಆಹಾರಕ್ಕಾಗಿ ಮನೆ ಮನೆ ಸುತ್ತಾಡುವಿಕೆಯು ನಮ್ಮ ವಂಶ ಆಚಾರವೇ?
                ಇಲ್ಲ ಮಹಾರಾಜ! ಇದು ನಿಮ್ಮ ವಂಶದ ಸಂಪ್ರದಾಯವಲ್ಲ, ಇದು ಬುದ್ಧವಂಶದ ಸಂಪ್ರದಾಯವಾಗಿದೆ. ಸಾವಿರಾರು ಬುದ್ಧರು ಹೀಗೆಯೇ ಅಹಾರ ಪಡೆದಿದ್ದಾರೆ ಮತ್ತು ಜೀವಿಸಿದ್ದಾರೆ. ನಾನು ಅವರಂತೆ ಸತ್ಸಂಪ್ರದಾಯವನ್ನು ಮುಂದುವರೆಸುತ್ತಿದ್ದೇನೆ ಎಂದು ಹೇಳಿದ ಭಗವಾನರು ಬೀದಿಯಲ್ಲೇ ಈ ಮೇಲಿನ ಮೊದಲ ಗಾಥೆ ನುಡಿದರು. ಇದನ್ನು ಆಲಿಸಿದ ಶುದ್ಧೋಧನ ರಾಜನಿಗೆ ಆ ಕ್ಷಣವೇ ಸೋತಪತ್ತಿ ಫಲ ಸಿಕ್ಕಿತು. ನಂತರ ಮಹಾರಾಜರು ಭಗವಾನರ ಪಿಂಡಪಾತ್ರೆಯನ್ನು ತೆಗೆದುಕೊಂಡು ಅವರಿಗೆ ಮತ್ತು ಭಿಕ್ಷುಸಂಘಕ್ಕೆ ಆಹಾರಕ್ಕೆ ಆಹ್ವಾನಿಸಿ ಆಹಾರ ಬಡಿಸಿದರು. ಆಹಾರ ಸೇವನೆಯ ಅಂತ್ಯದಲ್ಲಿ ಭಗವಾನರು ಈ ಮೇಲಿನ ಎರಡನೆಯ ಗಾಥೆಯನ್ನು ನುಡಿದಾಗ ಶುದ್ಧೋಧನ ಸಕದಾಗಾಮಿ ಫಲ ಪಡೆದರು ಹಾಗು ಪ್ರಜಾಪತಿ ಗೋತಮ ಮಾತೆಯು ಸೋತಾಪತ್ತಿ ಫಲ ಪಡೆದರು.

                ನಂತರ ಮುಂದೊಂದು ಸಂದರ್ಭದಲ್ಲಿ ಮಹಾರಾಜರು ಹಿಂದಿನ ಘಟನೆ ತಿಳಿಸಿದರು. ಆಗ ಬೋಧಿಸತ್ವರು ತಮ್ಮ ಸತ್ಯಾನ್ವೇಷಣೆಯ ಸಾಧನೆಯಲ್ಲಿ ಮೃತರಾದರು ಎಂದು ಸುದ್ದಿ ಹಬ್ಬಿದಾಗ ಶುದ್ಧೋಧನರು ಅದನ್ನು ನಂಬಲಿಲ್ಲ. ಆ ವಿಷಯ ತಿಳಿಸಿದಾಗ, ಭಗವಾನರು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲೂ ನೀವು ನಂಬಲಿಲ್ಲ ಎಂದು ಧಮ್ಮಪಾಲ ಜಾತಕ ತಿಳಿಸಿದರು. ಆ ಜಾತಕದಲ್ಲಿ ಮೂಳೆಗಳ ರಾಶಿಯನ್ನು ತೋರಿಸಿ, ಇದು ನಿನ್ನ ಮಗನದೆ ಎಂದು ಹೇಳಿದರೂ ಅವರು ನಂಬಿರಲಿಲ್ಲ. ಹೀಗೆ ಪ್ರವಚನದ ಅಂತ್ಯದಲ್ಲಿ ಅವರು ಆಗ ಅನಾಗಾಮಿ ಫಲ ಪಡೆದರು. ಮುಂದೆ ಕೆಲ ತಿಂಗಳುಗಳ ನಂತರ ಅವರು ಹಾಸಿಗೆ ಹಿಡಿದಿದ್ದರು, ಆಗ ಭಗವಾನರಿಂದ ಧಮ್ಮವಾಲಿಸಿ ಅರಹಂತರಾದರು. ಆಗ ಭಗವಾನರಿಗೆ 40 ವರ್ಷವಾಗಿತ್ತು. ಹಾಗು ಶುದ್ಧೋಧನರು ಏಳು ದಿನಗಳ ಕಾಲ ವಿಮುಕ್ತಿಯನ್ನು ಅನುಭವಿಸುತ್ತ ನಂತರ ಪರಿನಿಬ್ಬಾಣ ಪಡೆದರು.

No comments:

Post a Comment