ಧೀರರು ಲೋಕಕ್ಕೆ ಅತೀತರಾಗುವರು
ಹಂಸಗಳು ಸೂರ್ಯನ
ಪಥದಲ್ಲಿ ಸಾಗುವುವು, ಇದ್ಧಿಶಕ್ತಿವುಳ್ಳವರು
ಆಕಾಶಗಾಮಿಗಳಾಗಿ ವಿಹರಿಸುವರು. ಆದರೆ ಧೀರರು ಮಾರನ ಮತ್ತು ಆತನ ಸೈನ್ಯವನ್ನು ಸೋಲಿಸಿ ಲೋಕಕ್ಕೆ
ಅತೀತರಾಗುವರು. (175)
ಗಾಥ ಪ್ರಸಂಗ 13:8
ಮೂವತ್ತು ಭಿಕ್ಷುಗಳ ಆಕಾಶಯಾತ್ರೆ
ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದಾಗ ದೂರದ
ರಾಜ್ಯದ ಮೂವತ್ತು ಭಿಕ್ಷುಗಳು ಭಗವಾನರನ್ನು ಭೇಟಿಮಾಡಲು ಬಂದರು. ಅವರನ್ನು ಭೇಟಿ ಮಾಡಲು ಪೂಜ್ಯ
ಆನಂದರವರು ಅವಕಾಶ ಮಾಡಿಕೊಟ್ಟರು. ನಂತರ ವಿಹಾರದ ಪ್ರವೇಶದ ದ್ವಾರದ ಬಳಿಯಲ್ಲಿ, ಅವರ ಹಿಂತಿರುಗುವಿಕೆಯನ್ನು ನಿರೀಕ್ಷಿಸುತ್ತ
ಕಾಯುತ್ತಿದ್ದರು.
ಆ ಮೂವತ್ತು ಭಿಕ್ಷುಗಳು ಭಗವಾನರಿಗೆ ವಂದಿಸಿ ಕುಶಲ
ವಿಚಾರಿಸಿ ಕುಳಿತರು. ನಂತರ ಭಗವಾನರು ಅವರಿಗೆ ಧಮ್ಮಬೋಧನೆ ಮಾಡಿದರು. ಪರಿಣಾಮವಶಾತ್ ಅವರೆಲ್ಲಾ
ಅರಹಂತರಾದರು. ನಂತರ ತಮ್ಮ ಇದ್ದಿಶಕ್ತಿ ಬಳಸಿಕೊಂಡು ಅವರೆಲ್ಲಾ ಗಾಳಿಯಲ್ಲಿ ತೇಲಾಡುತ್ತಾ,
ಹಾರಾಡುತ್ತಾ ನಿರ್ಗಮಿಸಿದರು.
ಬಹಳ ಹೊತ್ತಾದರೂ ಆ ಭಿಕ್ಷುಗಳು ಬಾರದೆ ಹೋದಾಗ ಪೂಜ್ಯ
ಆನಂದರವರು ಭಗವಾನರಲ್ಲಿಗೆ ಬಂದು ಭಗವಾನ್, ಆ ಮೂವತ್ತು ಭಿಕ್ಷುಗಳೆಲ್ಲಿ? ಎಂದು ಕೇಳಿದರು.
ಅವರೆಲ್ಲ ಹೋದರು.
ಭಗವಾನ್ ಅವರು ಯಾವ ಮಾರ್ಗವಾಗಿ ಹೋದರು. ನಾನಂತು ಬಾಗಿಲ
ಬಳಿಯಲ್ಲೇ ಇದ್ದೆನಲ್ಲ.
ಆನಂದ ಅವರು ಗಾಳಿಯಲ್ಲಿ ತೇಲಿ, ನಂತರ ಆಕಾಶ ಮಾರ್ಗವಾಗಿ ಹಾರಿ ಹೊರಟುಹೋದರು.
ಭಗವಾನ್, ಅವರು ಇಷ್ಟು ಕ್ಷಿಪ್ರವಾಗಿ ಅರಹಂತರಾದರೇ?
ಹೌದು ಆನಂದ, ಅವರು ಧಮ್ಮನ್ನು ಆಲಿಸಿದ ನಂತರ ಇದ್ದಿಶಕ್ತಿಗಳ ಸಹಿತ ಅರಹತ್ವವನ್ನು
ಪ್ರಾಪ್ತಿಮಾಡಿದರು.
ಅದೇ ಕ್ಷಣದಲ್ಲಿ ಹಂಸಗಳ ಗುಂಪೊಂದು ಆಕಾಶದಲ್ಲಿ
ಹಾರುತ್ತಿದ್ದವು. ಆಗ ಭಗವಾನರು ಆನಂದರಿಗೆ ಹೀಗೆ ಹೇಳಿದರು: ಆನಂದ, ಯಾರಲ್ಲಿ ನಾಲ್ಕು ಇದ್ದಿಪಾದಗಳಾದ ಇಚ್ಛಾಶಕ್ತಿ, ಪ್ರಯತ್ನಶೀಲತೆ, ಸಮಾಧಿ ಮತ್ತು ಮಿಮಾಂಸೆ ಗರಿಷ್ಠ ಪ್ರಮಾಣದಲ್ಲಿ ವೃದ್ಧಿಯಾಗಿವೆಯೋ
ಅವರು ಈ ಹಂಸಗಳ ರೀತಿಯಲ್ಲೇ ಗಾಳಿಯಲ್ಲಿ ಹಾರಬಹುದು ಎಂದು ನುಡಿದು ಈ ಮೇಲಿನ ಗಾಥೆಯನ್ನು
ನುಡಿದರು.
No comments:
Post a Comment