ಹಿತಕಾರ್ಯ ಮಾಡುವುದು ಅತಿಕಷ್ಟಕರ
ಅಸಾಧುವು
(ಕೆಟ್ಟದ್ದು) ಮತ್ತು ಅಹಿತವಾದುದನ್ನು ಮಾಡಿಕೊಳ್ಳುವುದು ಸುಲಭ. ಆದರೆ ಸಾಧುವು (ಒಳ್ಳೆಯದು)
ಮತ್ತು ಹಿತವಾದುದನ್ನು ಮಾಡಿಕೊಳ್ಳುವುದು ಪರಮ ದುಷ್ಕರವಾದುದು. (163)
ಗಾಥ ಪ್ರಸಂಗ 12:7
ಸಂಘ ಭೇದದ ಪ್ರಕರಣ
ಒಮ್ಮೆ ಭಗವಾನರು ವೇಲುವನದಲ್ಲಿ ಬೋಧಿಸುತ್ತಿದ್ದರು. ಆಗ
ಅಲ್ಲಿಗೆ ದೇವದತ್ತನು ಬಂದನು. ಭಗವಾನರಿಗೆ ಸಲಹೆವೊಂದನ್ನು ನೀಡಿದನು. ಅದೇನೆಂದರೆ ಭಗವಾನರು
ವೃದ್ಧರಾಗುತ್ತಿರುವುದರಿಂದಾಗಿ ಸಂಘದ ಆಳ್ವಿಕೆಯನ್ನು ದೇವದತ್ತನಿಗೆ ಒಪ್ಪಿಸುವುದು ಎಂದು. ಆದರೆ
ಭಗವಾನರು ಇದಕ್ಕೆ ಒಪ್ಪಲಿಲ್ಲ. (ಸಂಘದ ಹೊಣೆಗಾರಿಕೆ ಅತ್ಯುನ್ನತ ಮಟ್ಟದ್ದಾಗಿರುವುದರಿಂದಾಗಿ,
ಅದರ ಹೊಣೆಯನ್ನು ಸಾರಿಪುತ್ತ ಮತ್ತು ಮೊಗ್ಗಲ್ಲಾನರಿಗೆ
ವಹಿಸಲು ಸಾಧ್ಯವಿರಲಿಲ್ಲ, ಇನ್ನು
ದೇವದತ್ತನಿಗೆ ವಹಿಸಲು ಸಾಧ್ಯವೇ?) ಇದರಿಂದಾಗಿ
ದೇವದತ್ತನು ಅಪಮಾನವಾದಂತೆ ಭಾಸವಾಗಿ, ಬುದ್ಧರನ್ನು
ದ್ವೇಷಿಸಲು ಆರಂಭಿಸಿದನು. ಹೀಗಾಗಿ ಆತನು ಭಗವಾನರನ್ನು ಕೊಲ್ಲಲು ಮೂರುಬಾರಿ ಪ್ರಯತ್ನಿಸಿ
ವಿಫಲನಾದನು. ಆಗ ಮತ್ತೊಂದು ಅಪಾಯಕಾರಿ ಉಪಾಯ ಹುಡುಕಿದನು. ಆ ಉಪಾಯದಿಂದ ಆತನು ಭಗವಾನರಲ್ಲಿಗೆ
ಬಂದು ತಾನು ಐದು ವಿನಯ ನಿಯಮಗಳನ್ನು ಕಂಡುಹಿಡಿದಿರುವುದಾಗಿ ಅದು ಸಂಯಮಕ್ಕೆ
ಅನುಕೂಲವಿರುವುದರಿಂದಾಗಿ ಅದರ ಜಾರಿಗೆ ಅನುಮತಿ ಕೇಳಿದನು. ಅದೇನೆಂದರೆ: 1) ಕಾಡಿನಲ್ಲಿಯೇ ಭಿಕ್ಷುಗಳ ವಾಸ
2) ಭಿಕ್ಷಾಟನೆಯಿಂದಲೇ
ಆಹಾರ 3) ಕಸದ ಬಟ್ಟೆಯಿಂದಲೇ ವಸ್ತ್ರ 4)
ಮರದ ಬುಡದಲ್ಲಿಯೇ ವಾಸ ಮತ್ತು 5) ಮಾಂಸ ಮತ್ತು ಮತ್ಸದ ತಿರಸ್ಕಾರ.
ಆದರೆ ಭಗವಾನರಿಗೆ ದೂರದೃಷ್ಟಿಯಿರುವುದರಿಂದಾಗಿ ಆ
ನಿಯಮಗಳು ಸಾಮಾಜಿಕ ಹಿತಕ್ಕೆ ಅಡ್ಡಿಯಷ್ಟೇ ಅಲ್ಲದೆ ಭಿಕ್ಷುಗಳಿಗೆ ವಿನಾಕಾರಣ
ದೇಹದಂಡಿಸಿದಂತಾಗುತ್ತದೆ ಎಂದರಿತ ಭಗವಾನರು ಅವನ್ನು ತಿರಸ್ಕರಿಸಿದರು.
ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ದೇವದತ್ತನು ತನ್ನ ಈ
ನಿಯಮಗಳು ಇರುವ ನಿಯಮಗಳಿಗಿಂತ ಉತ್ತಮ ಎಂದು ದಡ್ಡ ಭಿಕ್ಷುಗಳಿಗೆ ನಂಬಿಸಿ ತನ್ನ ಹಿಂಬಾಲಕರನ್ನಾಗಿ
ಮಾಡಿಕೊಂಡನು.
ಆಗ ಭಗವಾನರು ಆತನಿಗೆ ದೇವದತ್ತ ನೀನು ಸಂಘಭೇದ
ಮಾಡುತ್ತಿರುವೆಯಾ?
ಹೌದು.
ಓಹ್, ಇದು ಮಹಾಪಾಪ. ಪಂಚಮಹಾಪಾತಕಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಅವೀಚಿ ನರಕದಲ್ಲಿ
ಹುಟ್ಟಬೇಕಾಗುತ್ತದೆ, ಇವೆಲ್ಲಾ
ಬಿಟ್ಟುಬಿಡು.
ಅಂಥದೇನೂ ಆಗೋಲ್ಲ ಎಂದು ನಿರ್ಲಕ್ಷ ವಹಿಸಿದನು. ಅಷ್ಟೇ
ಅಲ್ಲದೆ ಆತನದೆ ಮಾರ್ಗದಲ್ಲಿ ಉಪೋಸಥ ಸಭೆ ಮತ್ತು ಆಚರಣೆ ಆರಂಭಿಸಿದನು.
ಈ ವಿಷಯವನ್ನು ಪರಮಪೂಜ್ಯ ಆನಂದರವರು ಭಗವಾನರಿಗೆ
ತಿಳಿಸಿದಾಗ ಭಗವಾನರು ಈ ಮೇಲಿನ ಗಾಥೆ ನುಡಿದರು. ಒಳ್ಳೆಯವರಿಗೆ ಹಿತ ಮತ್ತು ಸಾಧುಕಾರ್ಯ ಸುಲಭ,
ಆದರೆ ಕೆಟ್ಟವರಿಗೆ ಅದು ಪರಮ ದುಷ್ಕರ. ಅದೇ
ಕೆಟ್ಟವರಿಗೆ ಅಹಿತ ಮಾಡಿಕೊಳ್ಳುವಂತಹ ಪಾಪಕಾರ್ಯ ಸುಲಭ. ಆದರೆ ಒಳ್ಳೆಯವರಿಗೆ ಅದು ಅಸಾಧ್ಯ
ಎಂದರು.
ನಂತರ ಉಪೋಸಥ ದಿನದಂದು 500 ವಜ್ಜಿಗಳ ಭಿಕ್ಷು ಗುಂಪು ದೇವದತ್ತನ ಮಾತಿಗೆ ಮರುಳಾಗಿ ಆತನ ಸಂಘ
ಸೇರಿತು. ಆದರೆ ಭಗವಾನರ ಅನುಕಂಪ ಮತ್ತು ಸಾರಿಪುತ್ತ ಮತ್ತು ಮೊಗ್ಗಲ್ಲಾನರ ಹಿತವಚನದಿಂದಾಗಿ ಮರಳಿ
ಭಗವಾನರ ಸಂಘಕ್ಕೆ ಹಿಂತಿರುಗಿದರು.
No comments:
Post a Comment