Monday, 18 May 2015

dhammapada/attavagga/12.3/paadhanikatissa

ತಾನು ನಿಯಂತ್ರಿತನಾದರೆ, ಪರರು ನಿಯಂತ್ರಿರಾಗುತ್ತಾರೆ
ಯಾವುದನ್ನು ಅನ್ಯರಿಗೆ ಬೋಧಿಸುವನೋ, ಸ್ವತಃ ಅದನ್ನು ತಾನೇ ಪಾಲಿಸಿರಬೇಕು. ತಾನು ಪೂರ್ಣವಾಗಿ ನಿಯಂತ್ರಿತನಾದರೆ, ಪರರನ್ನು ನಿಯಂತ್ರಿಸುತ್ತಾನೆ, ತನ್ನನ್ನು ದಮಿಸುವುದು ಕ್ಲಿಷ್ಟಕರವಾಗಿದೆ. (159)
ಗಾಥ ಪ್ರಸಂಗ 12:3
ಪಾಧನಿಕ ತಿಸ್ಸನ ಪಾಲನೆಯಿಲ್ಲದ ಬೋಧನೆ

                ಪಾಧನಿಕ ತಿಸ್ಸನು ಭಗವಾನರಿಂದ ಧ್ಯಾನದ ವಸ್ತು ಸ್ವೀಕರಿಸಿ ಅಪಾರ ಭಿಕ್ಷುಗಣದೊಂದಿಗೆ ಕಾಡಿಗೆ ಹೊರಟನು. ಅಲ್ಲಿ ಎಲ್ಲಾ ಭಿಕ್ಷುಗಳೂ ಧ್ಯಾನದಲ್ಲಿ ಸದಾ ಸ್ಮೃತರಾಗಲು ಹಾಗು ಪ್ರಯತ್ನಶೀಲರಾಗಲು ಪುಟ್ಟ ಪ್ರವಚನವನ್ನೇ ನೀಡಿದನು. ಅವರೆಲ್ಲಾ ಧ್ಯಾನದಲ್ಲಿ ತೊಡಗಿರುವಾಗ ಈತನು ಮಲಗಿ ನಿದ್ರಿಸಿದನು. ಆ ಯುವ ಭಿಕ್ಷುಗಳು ತಾವು ಆಲಿಸಿದಂತೆ ಆಚರಣೆ ಮಾಡಿದರು. ಅವರೆಲ್ಲಾ ರಾತ್ರಿಯ ಪ್ರಥಮ ಯಾಮವೆಲ್ಲಾ ಧ್ಯಾನಿಸಿ ನಂತರ ಮಲಗಲು ಹೊರಟರು. ಆಗ ಎದ್ದ ಪಾಧನಿಕ ಭಿಕ್ಷುವು ಮತ್ತೆ ಅವರಿಗೆ ದ್ವಿತಿಯ ಯಾಮದಲ್ಲೂ ಹಾಗೆಯೇ ತೃತೀಯ ಯಾಮದಲ್ಲೂ ಧ್ಯಾನಿಗಳಾಗಲು ಬೋಧಿಸಿ ತಾನು ಮಾತ್ರ ನಿದ್ರೆಗೆ ಹೋಗುತ್ತಿದ್ದನು.
                ಹೀಗೆ ಪಾಧನಿಕ ಭಿಕ್ಷುವು ಬೋಧಿಸುತ್ತಿರಬೇಕಾದರೆ ಆ ಯುವ ಭಿಕ್ಷುಗಳಿಗೆ ಅದರಂತೆ ಆಚರಿಸಿ ನಿದ್ದೆಗೆಟ್ಟು ಚಿತ್ತಶಾಂತಿಯೇ ಇಲ್ಲದಂತಾಯಿತು. ಅವರು ಸಾಧಾರಣ ಸುತ್ತಗಳ ಪಠಣದಲ್ಲೂ ಏಕಾಗ್ರತೆ ನೀಡದೆ ಹೋದರು. ಒಂದುದಿನ ಅವರೆಲ್ಲರೂ ತಮ್ಮ ಗುರುವು ತಾನು ಬೋಧಿಸಿದಂತೆಯೇ ನಡೆಯುತ್ತಿರುವನೋ ಎಂಬ ಸಂಶಯವುಂಟಾಗಿ, ಪರೀಕ್ಷಿಸಲು ಮುಂದಾದರು. ನಂತರ ಅವರಿಗೆ ತಿಳಿದದ್ದು ಏನೆಂದರೆ ಗುರುವೇ ಅತಿಹೆಚ್ಚಿನ ಸಮಯ ನಿದ್ದೆಯಲ್ಲಿ ಕಾಲ ಕಳೆಯುವನೆಂದು. ಆಗ ಅವರು ಹೀಗೆ ಖಂಡಿಸಿದರು: ನಾವು ನಾಶವಾದೆವು, ನಮ್ಮ ಗುರುವಿಗೆ ಹೇಗೆ ಬೋಧಿಸಬೇಕೆಂದು ತಿಳಿದಿದೆ, ಆದರೆ ಏನನ್ನು ಮಾಡದೆ ಸಾಧಿಸದೆ, ಸಮಯ ವ್ಯರ್ಥ ಮಾಡುತ್ತಾ ಕಾಲ ಕಳೆಯುತ್ತಿದ್ದಾನೆ. ಈ ರೀತಿಯಾಗಿ ಆ ಭಿಕ್ಷುಗಳು ಸಾಕಷ್ಟು ವಿಶ್ರಾಂತಿಯಿಲ್ಲದೆ, ಶಾಂತಿಯಿಲ್ಲದೆ, ಅತಿಶ್ರಮದಿಂದಾಗಿ ಧ್ಯಾನದಲ್ಲಿ ಉನ್ನತಿ ಕಾಣದೆ ಹೋದರು.
                ನಂತರ ಅವರು ಭಗವಾನರಲ್ಲಿ ಮರು ಭೇಟಿಯಾದಾಗ, ಭಗವಾನರು ಅವರಲ್ಲಿ ಹೀಗೆ ಪ್ರಶ್ನಿಸಿದರು: ಭಿಕ್ಷುಗಳೇ, ನೀವು ಸ್ಮೃತಿವಂತರಾಗಿರುವಿರಾ? ನಿಷ್ಠೆಯಿಂದ ಧ್ಯಾನಾಭ್ಯಾಸ ಸಾಗುತ್ತಿದೆಯಲ್ಲವೆ? ಆಗ ಭಿಕ್ಷುಗಳು ಎಲ್ಲಾ ವಿವರವನ್ನು ನೀಡಿದರು.

                ಆಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ಮಾನವನೊಬ್ಬನು ಪರರಿಗೆ ಬೋಧಿಸುವ ಮುನ್ನ ತನ್ನನ್ನು ದಮಿಸಿರಬೇಕು. ಹೀಗೆ ಆತನು ದಮಿತನಾಗಿ, ಪರರಿಗೆ ಬೋಧಿಸಿದರೆ, ಅದರಿಂದ ಸ್ಫೂತರ್ಿ ಪಡೆದ ಇತರರು ತಮ್ಮನ್ನು ದಮಿಸಿಕೊಳ್ಳುವರು ಎಂದು ನುಡಿದು ಈ ಮೇಲಿನ ಗಾಥೆ ನುಡಿದರು.

No comments:

Post a Comment