Wednesday, 5 August 2015

dhammapada/maggavagga/20.10/mahadhana

ಮುರ್ಖನಿಗೆ ಮುಂಬರುವ ಮರಣ ಮರೆಯಾಗಿರುತ್ತದೆ
"ಇಲ್ಲಿ ವರ್ಷಕಾಲ (ಮಳೆಗಾಲ) ದಲ್ಲಿ ವಾಸಿಸುತ್ತೇನೆ,
ಇಲ್ಲಿ ಹೇಮಂತ ಋತುವಿನಲ್ಲಿ, ಇಲ್ಲಿ ಗ್ರೀಷ್ಮ ಋತುವಿನಲ್ಲಿ
ವಾಸಿಸುವೆ ಎಂದು ಮೂರ್ಖನು ಚಿಂತಿಸುತ್ತಾನೆ.
ಆದರೆ ತನಗೆ ಮುಂಬರುವ ಅಪಾಯದಲ್ಲಿ ಅರಿಯಲಾರದೆ ಹೋಗುತ್ತಾನೆ."         (286)

ಗಾಥ ಪ್ರಸಂಗ 20:10
ಮಹಾಧನನ ಮುಂದಿನ ಭವಿಷ್ಯ

            ವಾರಾಣಾಸಿಯ ವರ್ತಕನೊಬ್ಬನು ಶ್ರಾವಸ್ತಿಯ ಹಬ್ಬದ ದಿನಕ್ಕಾಗಿ ವಸ್ತ್ರ ಇನ್ನಿತರ ಅಪಾರ ಸಾಮಗ್ರಿಗಳೊಂದಿಗೆ ಶ್ರಾವಸ್ತಿಗೆ ಹತ್ತಿರ ಬಂದನು. ಶ್ರಾವಸ್ತಿಗೆ ಸಮೀಪವಾಗಿ ನದಿಯ ಪ್ರವಾಹವು ಹರಿಯುತ್ತಿತ್ತು. ಹೀಗಾಗಿ ಆತನು ನದಿಯನ್ನು ದಾಟಲು ಆಗಲಿಲ್ಲ. ಆತನು ನದಿ ದಾಟುವುದಕ್ಕಾಗಿ ಏಳು ದಿನ ಕಾದರೂ ಸಹಾ ನದಿಯ ರಭಸ ತಗ್ಗಲಿಲ್ಲ. ಆ ಸಮಯದಲ್ಲಿ ಈಗಾಗಲೇ ಹಬ್ಬಕ್ಕೆ ನಿಧಾನವಾಗಿತ್ತು. ಹೀಗಾಗಿ ನದಿ ದಾಟುವ ಅಗತ್ಯವೂ ಈಗ ಇಲ್ಲವಾಯಿತು. ಆತನು ಅತಿದೂರದಿಂದ ಬಂದಿದ್ದರಿಂದಾಗಿ ಹಾಗೆಯೇ ಸರಕಿನ ಸಮೇತ ಹೋಗಲು ಆತನಿಗೆ ಮನಸ್ಸಿಲ್ಲವಾಯಿತು. ಹೀಗಾಗಿ ಆತನು ಅಲ್ಲಿಯೇ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯನ್ನು ಕಳೆಯಲು ಚಿಂತನೆ ಮಾಡಿದನು.
            ಅದೇ ಸಮಯದಲ್ಲಿ ಭಗವಾನರು ಆಹಾರಕ್ಕಾಗಿ ಹೋಗುತ್ತಿದ್ದರು. ಭಗವಾನರು ವ್ಯಾಪಾರಿಯ ಚಿತ್ತವನ್ನು ಓದಿ ಮುಗುಳ್ನಗೆ ಬೀರಿದರು. ಭಗವಾನರು ಸುಮ್ಮನೆ ನಗೆಬೀರುವುದಿಲ್ಲ, ಅದಕ್ಕೆ ಯೋಗ್ಯ ಕಾರಣ ಇರಲೇಬೇಕೆಂದುಕೊಂಡು ಪೂಜ್ಯ ಆನಂದರು ಭಗವಾನರಲ್ಲಿ ಕಾರಣವನ್ನು ಕೇಳಿದರು. ಆಗ ಭಗವಾನರು ಹೀಗೆ ನುಡಿದರು: "ಆನಂದ, ಆ ವರ್ತಕನನ್ನು ಕಾಣುತ್ತಿರುವೆಯಷ್ಟೆ? ಆತನು ತನ್ನ ಸರಕಿನ ಸಮೇತ ಇಡೀ ವರ್ಷ ಇಲ್ಲಿಯೇ ಕಳೆಯಬೇಕೆಂದು ನಿರ್ಧರಿಸಿದ್ದಾನೆ. ಆದರೆ ಆತನು ಏಳು ದಿನಕ್ಕಿಂತ ಒಂದು ದಿನವೂ ಹೆಚ್ಚಿಗೆ ಬದುಕಲಾರನು. ಇದು ಆತನಿಗೆ ತಿಳಿಯದು. ಯಾವ ಕುಶಲ ಕಾರ್ಯವನ್ನು ಮಾಡಬೇಕಾಗಿದೆಯೋ ಅದನ್ನು ಇಂದೇ ಮಾಡಬೇಕು. ಯಾರಿಗೆ ಗೊತ್ತು, ನಾಳೆಯೇ ಒಬ್ಬನು ಸಾಯಬಹುದು? ಮರಣಕ್ಕೆ ನಿದರ್ಿಷ್ಟ ಕಾಲವಿಲ್ಲ, ಯಾರು ಹಗಲು-ರಾತ್ರಿ ಸದಾ ಸ್ಮೃತಿವಂತರೋ, ಜಾಗರೂಕರೋ, ಪ್ರಯತ್ನಶಾಲಿಗಳೋ, ಯಾರು ಚಿತ್ತ ಕ್ಲೇಷಗಳಿಂದ ಅಬಾಧಿತರೋ ಅಂತಹವರು ಜೀವಿಸುವ ಒಂದುದಿನದಲ್ಲಿಯೇ ಇಡೀ ಜೀವನದಷ್ಟೇ ಸಾರ್ಥಕವಾದ ಬಾಳ್ವೆಯನ್ನು ನಡೆಸುತ್ತಾರೆ ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

            ನಂತರ ಭಗವಾನರು ಮಹಾಧನನನ್ನು ಕರೆತರಲು ಆನಂದರನ್ನು ಕಳುಹಿಸುತ್ತಾರೆ. ಆಗ ಆನಂದರು ಮಹಾಧನನಿಗೆ ಮುಂದಿರುವ ಮರಣವನ್ನು ತಿಳಿಸುತ್ತಾರೆ. ಕಾಲವು ಅತಿ ವೇಗವಾಗಿ ಹರಿಯುತ್ತಿರುವುದನ್ನು ತಿಳಿಸುತ್ತಾರೆ. ನಿರ್ಲಕ್ಷಕ್ಕೆ ಒಳಗಾಗದೆ ಸದಾ ಜಾಗರೂಕನಾಗಲು, ಕುಶಲ ಕಾರ್ಯಗಳಲ್ಲೇ ತಲ್ಲೀನನಾಗಲು ತಿಳಿಸುತ್ತಾರೆ. ತನ್ನ ಸಾವು ಇಷ್ಟು ಹತ್ತಿರವಿದೆ ಎಂದು ತಿಳಿದ ಮಹಾಧನನು ಭೀತನಾದನು. ನಂತರ ಎಚ್ಚೆತ್ತುಕೊಂಡನು. ಜೀವನದ ಕ್ಷಣಿಕತೆ ಅರಿತ ಆತನು ಇನ್ನು ಇರುವಷ್ಟು ಕಾಲವೂ ಪುಣ್ಯದಿಂದಲೇ ಜೀವಿಸುವ ನಿಧರ್ಾರ ಕೈಗೊಂಡನು. ಹೀಗಾಗಿ ಆತನು ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ಏಳು ದಿನಗಳ ಕಾಲವು ಆಹಾರಕ್ಕೆ, ದಾನಕ್ಕೆ ಆಹ್ವಾನಿಸಿದನು. ಏಳನೆಯ ದಿನದಂದು ಭಗವಾನರು ಆತನಿಗೆ ದಾನ ಅನಮೋದನೆ ಮಾಡಿ, ನಂತರ ನೀಡಿದ ಸುತ್ತ ಪ್ರವಚನದಿಂದಾಗಿ ಆತನು ಸೋತಪತ್ತಿ ಫಲವನ್ನು ಪಡೆದನು. ನಂತರ ಭಗವಾನರೊಂದಿಗೆ ಸ್ವಲ್ಪದೂರ ನಡೆದು ಬೀಳ್ಕೊಟ್ಟು ಹಿಂತಿರುಗಿದನು. ತಕ್ಷಣ ಆತನಿಗೆ ತಡೆಯಲಾರದ ತಲೆನೋವು ಉಂಟಾಗಿ ಹಾಗೆಯೇ ಮೃತ್ಯುವಶನಾದನು. ತಕ್ಷಣ ಆತನು ತುಸಿತ ದೇವಲೋಕದಲ್ಲಿ ಪುನರ್ಜನ್ಮಿಸಿದನು.

No comments:

Post a Comment