Wednesday, 5 August 2015

dhammapada/maggavagga/20.5/bhikkhutissa

ಸೋಮಾರಿಯು ಪ್ರಜ್ಞಾದ ಮಾರ್ಗ ಅರಿಯಲಾರನು
"ಪ್ರಯತ್ನಶಾಲಿಯಾಗಬೇಕಾದ ಕಾಲದಲ್ಲಿ ಪ್ರಯತ್ನಪಡದೆ,
ಯುವಕನಾಗಿಯು, ಬಲಶಾಲಿಯಾಗಿಯು, ಆಲಸಿಯಾದರೆ,
ಅಂತಹವನು ತನ್ನ ಸಂಕಲ್ಪಗಳಲ್ಲಿ ದುರ್ಬಲನಾದರೆ, ಸೋಮಾರಿಯಾದರೆ       
ಅಂತಹ ಆಲಸಿಯು ಪ್ರಜ್ಞಾದ ಮಾರ್ಗವನ್ನು ಅರಿಯಲಾರನು."          (280)

ಗಾಥ ಪ್ರಸಂಗ 20:5
ಭಿಕ್ಷು ತಿಸ್ಸನ ಸೋಮಾರಿತನ

            ಶ್ರಾವಸ್ತಿಯಲ್ಲಿ ಬಹು ಯುವಕರು ಸಂಘಕ್ಕೆ ಸೇರಿದರು. ಅವರೆಲ್ಲರೂ ಭಗವಾನರ ಬಳಿಯಲ್ಲಿ ಧ್ಯಾನ ವಿಷಯ ಸ್ವೀಕರಿಸಿದರು. ಅವರಲ್ಲಿ ತಿಸ್ಸನು ಒಬ್ಬನಾಗಿದ್ದನು. ತಿಸ್ಸನ ಹೊರತು ಅವರೆಲ್ಲರೂ ಕಾಡಿಗೆ ಧ್ಯಾನಿಸಲು ಹೊರಟರು. ಅವರೆಲ್ಲರೂ ಅಪಾರವಾಗಿ ಶ್ರಮಿಸಿ ಅತ್ಯಲ್ಪ ಕಾಲದಲ್ಲೇ ಅರಹಂತರೂ ಆದರು. ನಂತರ ಅವರೆಲ್ಲ ಭಗವಾನರಿಗೆ ವಂದನೆ ಅಪರ್ಿಸಲು ಜೇತವನಕ್ಕೆ ಹಿಂತಿರುಗಿದರು. ಅವರ ಹಿಂದೆ ತಿಸ್ಸ ಮಂಕಾಗಿ ಉಳಿದಿದ್ದನು.
            ಆಗ ತಿಸ್ಸನು ಗಮನಿಸಿದನು. ಭಗವಾನರೊಂದಿಗೆ ಈ ಯುವ ಭಿಕ್ಷುಗಳೆಲ್ಲಾ ಅಪಾರ ಬಾಂಧವ್ಯದಿಂದಿರುವುದನ್ನು ಗಮನಿಸಿ, ಆತನಿಗೆ ತುಸು ನೋವಾಯಿತು. ತನ್ನನ್ನು ನಿರ್ಲಕ್ಷಿಸಿರುವರೇ ಎಂದೆನಿಸಿತು. ತನ್ನ ಸಮಯವೆಲ್ಲಾ ವ್ಯರ್ಥವಾಯಿತಲ್ಲ ಎಂದು ಕೊರಗಿದನು. ನಂತರ ಪ್ರಯತ್ನಪಡಲು ನಿರ್ಧರಿಸಿದನು. ಹೀಗಾಗಿ ಆತನು ರಾತ್ರಿಯು ಶ್ರಮಿಸಲು ತೊಡಗಿದನು. ಹೀಗೆ ಒಂದು ರಾತ್ರಿ ಆತನು ನಡಿಗೆಯ ಧ್ಯಾನ ಮಾಡಲಾರಂಭಿಸಿದಾಗ, ಜಾರಿಬಿದ್ದನು. ಅದರಿಂದಾಗಿ ಆತನ ತೊಡೆಯ ಮೂಳೆಯು ಮುರಿಯಿತು. ಆತನ ಗೋಳಾಟ ಕೇಳಿ ಇತರ ಭಿಕ್ಷುಗಳು ಸಹಾಯ ಮಾಡಲು ಬಂದರು. ಈ ವಿಷಯವನ್ನು ಆಲಿಸಿದ ಭಗವಾನರು ಹೀಗೆ ಹೇಳಿದರು:

            "ಭಿಕ್ಷುಗಳೇ, ಯತ್ನಶೀಲನಾಗಬೇಕಾದ ಕಾಲದಲ್ಲಿ ಶ್ರಮಿಸದೆ, ತನ್ನ ಕಾಲ ವ್ಯರ್ಥ ಮಾಡಿಕೊಂಡು ಸೋಮಾರಿಯಾದರೆ ಅಂತಹವನು ಧ್ಯಾನಲಾಭಗಳಾಗಲಿ, ಅಥವಾ ಮಾರ್ಗಫಲಗಳಾಗಲಿ ಪಡೆಯಲಾರನು" ಎಂದು ನುಡಿದು ಈ ಮೇಲಿನ ಗಾಥೆಯನ್ನು ಹೇಳಿದರು.

No comments:

Post a Comment