Wednesday, 12 August 2015

dhammapada/pakinnakavagga/21.1/ratanasuttastory

        21.ಪಕಿಣ್ಣಕ ವಗ್ಗ (ಮಿಶ್ರ ವರ್ಗ)

                   ವಿಪುಲತೆಗಾಗಿ ಅಲ್ಪಸುಖ ತ್ಯಜಿಸು

"ಅಲ್ಪಮಾತ್ರ ಸುಖವನ್ನು ಪರಿತ್ಯಜಿಸಿದಾಗ
ವಿಪುಲವಾದ ಸುಖವು ಸಿಗುವುದಾದರೆ,
ಧೀಮಂತನು ವಿಪುಲವಾದ ಸುಖದೆಡೆ ಗಮನಕೊಟ್ಟು
ಅಲ್ಪಮಾತ್ರ ಸುಖವನ್ನು ತ್ಯಾಗಮಾಡಲಿ."      (290)


ಗಾಥ ಪ್ರಸಂಗ 21:1
ರತನಸುತ್ತದ ಮಹೋನ್ನತೆಯ ವಿವರ

            ಒಮ್ಮೆ ವೈಶಾಲಿಯಲ್ಲಿ ಕ್ಷಾಮ ಭೀಕರವಾಗಿ ಆಕ್ರಮಿಸಿತು. ಈ ಬರಗಾಲದಿಂದಾಗಿ ಎಲ್ಲೆಡೆಯು ಬೇಸಾಯವು ಇನ್ನಿಲ್ಲದಂತೆ ಕೈಕೊಟ್ಟಿತು. ಹಲವಾರು ಜನರು ಆಹಾರವಿಲ್ಲದೆ ಸಾಯುವಂತಾಯಿತು. ಸಾವಿನ ಜೊತೆಗೆ ಸಾಂಕ್ರಾಮಿಕ ರೋಗಗಳು ಸಹಾ ಹರಟಿಕೊಂಡವು. ಎಲ್ಲೆಡೆ ಹೆಣಗಳ ವಾಸನೆಯು ಹಬ್ಬಿತು. ಈ ವಾಸನೆಯಿಂದಾಗಿ ಅಮನುಷ್ಯರಾದ ನರಭಕ್ಷಕ ಯಕ್ಷ ಪಿಶಾಚಿಗಳ ಆಗಮನವಾಯಿತು. ಹೀಗಾಗಿ ವೈಶಾಲಿ ನಗರ ನಿವಾಸಿಗಳು ಬರ, ರೋಗ ಮತ್ತು ಯಕ್ಷಗಳ ಕಾಟವನ್ನು ಏಕಕಾಲದಲ್ಲಿ ಅನುಭವಿಸುವಂತಾಯಿತು. ಹೀಗಾಗಿ ಅವರೆಲ್ಲ ರಕ್ಷಣೆಯನ್ನು ಹುಡುಕಿದರು. ಪರಮಯೋಗ್ಯ ಶರಣನ್ನು ಹೊಂದಲು ಬಯಸಿದರು. ಮೊದಮೊದಲು ಬೇರೆ ಶರಣರನ್ನು ಹೊಕ್ಕರಾದರೂ, ಕೊನೆಗೆ ಇದಕ್ಕೆ ಸೂಕ್ತರಾದವರು ಬುದ್ಧರೊಬ್ಬರೇ ಎಂದು ನಿರ್ಧರಿಸಿ, ಭಗವಾನರನ್ನು ಆಹ್ವಾನಿಸಲು ನಿರ್ಧರಿಸಿದರು. ನಂತರ ಲಿಚ್ಚವಿಗಳ ರಾಜಕುಮಾರ ಮಹಾಲಿ ಮತ್ತು ಬ್ರಾಹ್ಮಣರಲ್ಲಿ ಪ್ರಧಾನರಾಗಿದ್ದಂತಹ ರಾಜ ಬಿಂಬಿಸಾರನಲ್ಲಿ ಭಗವಾನರನ್ನು ಕಳುಹಿಸಿಕೊಡಲು ಕೋರಿಕೊಂಡರು. ಅದೇ ಸಮಯದಲ್ಲಿ ಭಗವಾನರಿಗೂ ವೈಶಾಲಿ ನಗರಕ್ಕೆ ಬೇಟಿ ನೀಡಿ ಅವರನ್ನು ಕಾಪಾಡಬೇಕೆಂದು ನಿರ್ಧರಿಸಿದರು. ಹಾಗೆಯೇ ರಾಜ ಬಿಂಬಿಸಾರನು ಭಗವಾನರಿಗೆ ವೈಶಾಲಿ ನಗರಕ್ಕೆ ಹೋಗಬೇಕೆಂದು ಕೋರಿಕೊಂಡನು. ಅಷ್ಟೇ ಅಲ್ಲ, ಆತನು ಭಗವಾನರಿಗೆ ಮಾರ್ಗ ಮಧ್ಯದಲ್ಲಿ ತಂಗಲು ಪ್ರತಿ ಯೋಜನದಲ್ಲೂ ವ್ಯವಸ್ಥೆಯೆಲ್ಲ ಮಾಡಿದನು. ಆಹಾರ ಪಾನಿಯ ಇನ್ನಿತರ ವ್ಯವಸ್ಥೆ ಮಾಡಿದನು. ಹಾಗು ದಾರಿಯಲ್ಲಿ ಗಂಗಾನದಿಯ ಹಾಗು ರಾಜಗೃಹದ ನಡುವೆ ರಸ್ತೆಯನ್ನು ಅತಿ ಸುವ್ಯವಸ್ಥಿತವನ್ನಾಗಿಸಿದನು. ಭಗವಾನರು ನಿರ್ಧರಿಸಿದಂತೆ 500 ಭಿಕ್ಷುಗಳು ಸಹಿತ ನಡೆದರು. ಆಗ ರಾಜ ಬಿಂಬಿಸಾರನು ಸಹಾ ಭಗವಾನರ ಜೊತೆಗೆ ಕೂಡಿಕೊಂಡನು. 5ನೇ ದಿನದಂದು ಗಂಗಾನದಿಯ ದಡದಲ್ಲಿ ನಿಂತು ಲಿಚ್ಚವಿಗಳಿಗೆ ಸಂದೇಶವನ್ನು ಬಿಂಬಿಸಾರನು ಕಳುಹಿಸಿದನು. ಆ ಕಡೆ ದಡದಲ್ಲಿ ಲಿಚ್ಚವಿಗಳು ಸಹಾ ನದಿ ದಡದಿಂದ ತಮ್ಮ ವೈಶಾಲಿ ನಗರದವರೆಗೂ ರಸ್ತೆಯನ್ನು ಸುವ್ಯವಸ್ಥಿತಗೊಳಿಸಿದ್ದರು. ಗಡಿಯಲ್ಲಿ ಲಿಚ್ಚವಿ ರಾಜಕುಮಾರರು ಅಹ್ವಾನಿಸಲು ಬಂದಿದ್ದರು. ಆಗ ಭಗವಾನರು ಮತ್ತು ಭಿಕ್ಷುಗಳು ವೈಶಾಲಿನ ನಗರದ ಕಡೆಗೆ ಹೊರಟರು. ಆದರೆ ರಾಜ ಬಿಂಬಿಸಾರನು ಗಡಿಯಲ್ಲೇ ಉಳಿದನು. ಭಗವಾನರು ನದಿಯ ಆ ಬದಿಗೆ ಪಾದ ಇಡುತ್ತಿದ್ದಂತೆಯೇ ಪ್ರಬಲವಾದ ಮಳೆಯು ಆರಂಭವಾಯಿತು. ಅ ಮಳೆಯು ಪ್ರವಾಹದಂತೆ  ಬಿದ್ದು ಹರಿಯಿತು. ಹೀಗೆ ವೈಶಾಲಿಯೆಲ್ಲಾ ಸ್ವಚ್ಛವಾಯಿತು. ಸ್ವಚ್ಛವಾದಂತೆ ವಾಸನೆ ಇಲ್ಲದಂತಾಯಿತು, ರೋಗಗಳು ಕ್ಷೀಣವಾದವು. ಭಗವಾನರಿಗೆ ವೈಶಾಲಿಯಲ್ಲಿ ನಗರದ ಮಧ್ಯೆ ವಿಶ್ರಾಂತಿಗೃಹ ನೀಡಲಾಯಿತು. ಅದೇ ಸಮಯದಲ್ಲಿ ದೇವತೆಗಳ ಒಡೆಯ ಸಕ್ಕ ತನ್ನ ದೇವಗಣದೊಂದಿಗೆ ಅಲ್ಲಿ ಭಗವಾನರನ್ನು ಭೇಟಿ ಮಾಡಿದನು. ದೇವಗಣವು ವೈಶಾಲಿಯಲ್ಲಿ ಪ್ರತ್ಯಕ್ಷವಾದ ತಕ್ಷಣ ವೈಶಾಲಿಯಲ್ಲಿ ನೆಲೆಸಿದ್ದಂತಹ ನರಭಕ್ಷಕ ಯಕ್ಷ ಪಿಶಾಚಿಗಳೆಲ್ಲಾ ಅಲ್ಲಿಂದ ಪರಾರಿಯಾದವು.
            ಅಂದು ಸಂಜೆ ಭಗವಾನರು ರತನಸುತ್ತವನ್ನು ಪ್ರವಚಿಸಿದರು. ನಂತರ ಪೂಜ್ಯ ಆನಂದರಿಗೆ ಅದನ್ನು ನಗರದ ತಿವಿಧ ಗೋಡೆಗಳ ಮಧ್ಯೆ ಲಿಚ್ಚವಿ ಕುಮಾರರೊಂದಿಗೆ ಪಠಿಸಲು ನುಡಿದರು. ಪೂಜ್ಯ ಆನಂದರು ಹಾಗೇ ಮಾಡಿದರು. ಆಗ ರತನಸುತ್ತದ ಪರಿತ್ತವನ್ನು ಪಠಿಸುತ್ತಿದ್ದಂತೆಯೇ ರೋಗದಲ್ಲಿದ್ದವರೆಲ್ಲಾ ಗುಣಮುಖವಾಗತೊಡಗಿದರು. ಅವರೆಲ್ಲ ಕ್ಷಣಗಳಲ್ಲೇ ಆರೋಗ್ಯಭರಿತರಾದರು. ನಂತರ ಅವರೆಲ್ಲ ಭಗವಾನರನ್ನು ಭೇಟಿ ಮಾಡಿದರು. ಭಗವಾನರು ರತನಸುತ್ತವನ್ನೇ ಏಳು ದಿನಗಳು ಬೋಧಿಸಿದರು. ಏಳನೆಯ ದಿನದ ಅಂತ್ಯಕ್ಕೆ ಇಡೀ ವೈಶಾಲಿಯು ಸಹಜ ಸ್ಥಿತಿಗೆ ಮರಳಿತು. ಆಗ ಲಿಚ್ಚವಿ ರಾಜಕುಮಾರರು ಮತ್ತು ಲಿಚ್ಚವಿ ನಿವಾಸಿಗಳು ಸಾಂತ್ವನ ಪಡೆದರು. ಅವರೆಲ್ಲರಿಗೂ ಅತೀವ ಆನಂದ ಉಂಟಾಯಿತು. ಅವರೆಲ್ಲರೂ ಭಗವಾನರಿಗೆ ಕೃತಜ್ಞತೆ ಸಲ್ಲಿಸಿದರು. ಭಗವಾನರ ದರ್ಶನ ಪಡೆಯಲಾರಂಭಿಸಿದರು. ಭಗವಾನರಿಗೆ ಭಾರಿ ದಾನ, ಸತ್ಕಾರ, ಪೂಜೆ ಸಲ್ಲಿಸತೊಡಗಿದರು. ಅವರೆಲ್ಲ ಸೇರಿ ಗಂಗಾನದಿಯ ದಡದಲ್ಲಿಯೇ ಭಗವಾನರನ್ನು ಬೀಳ್ಕೊಡಲು ಬಂದಿದ್ದರು.
            ನದಿಯ ಈ ದಡದಲ್ಲಿ ರಾಜ ಬಿಂಬಿಸಾರನು ಭಗವಾನರಿಗೆ ಕಾಯುತ್ತಿದ್ದನು. ಆತನಷ್ಟೇ ಅಲ್ಲ, ದೇವದೇವತೆಗಳು, ಬ್ರಹ್ಮರು, ನಾಗರಾಜರು ತಮ್ಮ ಗಣಗಳೊಂದಿಗೆ ಬಂದಿದ್ದರು. ಅವರೆಲ್ಲರೂ ಭಗವಾನರಿಗೆ ವಂದಿಸಿ ತಮ್ಮ ದಾನ ಉಡುಗೊರೆಗಳನ್ನು ನೀಡತೊಡಗಿದರು. ದೇವ ಬ್ರಹ್ಮರುಗಳೆಲ್ಲಾ ಶ್ರೇಷ್ಠ ಛತ್ರಿಗಳೊಂದಿಗೆ, ಪುಷ್ಪಗಳೊಂದಿಗೆ ಇತ್ಯಾದಿ ವಿಧಗಳಿಂದ ಗೌರವ ಅಪರ್ಿಸಿದರು. ಆಗ ನಾಗಗಳು ಸಹಾ ಆಪಾರ ಚಿನ್ನ, ಬೆಳ್ಳಿ, ಮಾಣಿಕ್ಯಗಳು ತುಂಬಿದ ದೋಣಿಗಳಿಂದ ಬಂದು ಭಗವಾನರಿಗೆ ನಾಗಲೋಕಕ್ಕೆ ಆಹ್ವಾನಿಸಿದರು. ಅವರು 500 ವಿಧದ ಕಮಲ ಪುಷ್ಪಗಳಿಂದ ನೀರನ್ನು ಸಿಂಪಡಿಸಿ ಆರಾಧಿಸಿದರು.

            ಇದು ಭಗವಾನರ ಜೀವನದಲ್ಲಿ ಮೂರನೆಯ ವಿಶೇಷ ಸಂದರ್ಭವಾಗಿದ್ದು, ಆ ಸಂದರ್ಭದಲ್ಲಿ ಮಾನವರು ಮಾತ್ರವಲ್ಲದೆ, ದೇವತೆಗಳು ಇದ್ದರೂ ಸಹ ಭಗವಾನರಲ್ಲಿಗೆ ಬಂದು ಪೂಜಿಸುತ್ತಾರೆ. ಮೊದಲ ಸಂದರ್ಭ ಯಾವುದೆಂದರೆ ಭಗವಾನರು 'ಯಮಕಪರಿಯಾಯ' ಅತೀಂದ್ರಿಯ ಸಾಮಥ್ರ್ಯ ತೋರಿದಾಗ, ಅವರ ದೇಹದಿಂದ ಬೆಳಕಿನ ವಿವಿಧ ಪ್ರಭೆಗಳು ಮೇಲ್ಮುಖವಾಗಿ ಪ್ರಖರವಾಗಿ ಬೀರುತ್ತಿದ್ದರೆ ಕೆಳಮುಖವಾಗಿ ನೀರಿನ ತುಂತುರನ್ನು ಪ್ರೋಕ್ಷಿಸಿದರು. ಎರಡನೆಯ ಸಂದರ್ಭ ಯಾವುದೆಂದರೆ ಅವರು ತಾವತಿಂಸ ದೇವಲೋಕದಿಂದ ಅಭಿಧಮ್ಮವು ಉಪದೇಶಿಸಿ ಹಿಂತಿರುಗಿ ಬಂದಾಗ. ಮತ್ತು ಇದು ಮೂರನೆಯ ವಿಶೇಷ ಸಂದರ್ಭವಾಗಿತ್ತು. 

No comments:

Post a Comment