Wednesday, 12 August 2015

dhammapada/pakinnakavagga/21.5/powerofbuddhanusati

ಬುದ್ಧಾನುಸತಿ ಮಾಡುವವ ಸದಾ ರಕ್ಷಿತ
 
"ಯಾರು ನಿತ್ಯವೂ ದಿನ-ರಾತ್ರಿ
ಬುದ್ದಾನುಸತಿಯಲ್ಲಿ (ಬುದ್ಧರ ಮೇಲೆ ಧ್ಯಾನ)
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರು ಆಗಿರುತ್ತಾರೆ."     (296)

"ಯಾರು ನಿತ್ಯವೂ ದಿನ-ರಾತ್ರಿ
ಧಮ್ಮಾಗತಾಸತಿಯಲ್ಲಿ (ಧಮ್ಮದ ಅನುಸ್ಮರಣೆ)
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (297)

"ಯಾರು ನಿತ್ಯವೂ ದಿನ-ರಾತ್ರಿ
ಸಂಘಾನುಸತಿ (ಸಂಘದ ಶ್ರೇಷ್ಣ ಗುಣಗಳ ಮೇಲೆ ಧ್ಯಾನ)ಯಲ್ಲಿ
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (298)

"ಯಾರು ನಿತ್ಯವೂ ದಿನ-ರಾತ್ರಿ
ಕಾಯಗತಾಸತಿ (ದೇಹದ ಕಲ್ಮಶಗಳ ಮೇಲೆ ಧ್ಯಾನ) ಯಲ್ಲಿ
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (299)

"ಯಾರು ನಿತ್ಯವೂ ದಿನ-ರಾತ್ರಿ
ಅಹಿಂಸೆಯಲ್ಲಿ ರತರಾಗಿರುವರೋ
ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (300)


"ಯಾರು ನಿತ್ಯವೂ ದಿನ-ರಾತ್ರಿ
ಚಿತ್ತಾಭಿವೃದ್ಧಿಯಲ್ಲಿ (ಧ್ಯಾನದಲ್ಲಿ) ರತರಾಗಿರುವರೋ
ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ."    (301)

ಗಾಥ ಪ್ರಸಂಗ 21:5
ಬಾಲಕ ಮತ್ತು ರಕ್ಷಣೆ ನೀಡುವ ಧ್ಯಾನಗಳು

            ಒಮ್ಮೆ ಮರ ಕತ್ತರಿಸುವವನು ತನ್ನ ಮಗನೊಂದಿಗೆ ರಾಜಗೃಹದ ಕಾಡಿನೊಳಕ್ಕೆ ಹೋದನು. ಅಲ್ಲಿ ಒಣ ಮರಗಳನ್ನು ಸಂಗ್ರಹಿಸಿಕೊಂಡು ಸಂಜೆಯ ವೇಳೆಗೆ ಮನೆಗೆ ಹಿಂತಿರುಗುತ್ತಿದ್ದನು. ಸಂಜೆಯ ವೇಳೆ ಅವರು ಸ್ಮಶಾನದ ಹತ್ತಿರ ಊಟ ಮಾಡುವುದಕ್ಕೋಸ್ಕರವಾಗಿ ಬಂಡಿಯನ್ನು ನಿಲ್ಲಿಸಿದರು. ಆಗ ಅವರು ಎತ್ತುಗಳು ಮೇಯಲೆಂದು ನೊಗವನ್ನು ಬಿಚ್ಚಿದರು. ಆದರೆ ಆ ಎತ್ತುಗಳು ಮೇಯುತ್ತಲೇ ಅವರ ಗೋಚರಕ್ಕೆ ಬರದಷ್ಟು ದೂರ ಹೋಗಿಬಿಟ್ಟವು. ಸ್ವಲ್ಪ ಸಮಯದ ನಂತರ ಅವರಿಗೆ ಎತ್ತುಗಳು ಪರಾರಿಯಾಗಿರುವುದು ತಿಳಿದುಬಂದಿತು. ಆಗ ಮರ ಕತ್ತರಿಸುವವ ಅವುಗಳನ್ನು ಹುಡುಕಲು ಹೊರಟನು ಹಾಗು ಬಾಲಕನನ್ನು ಕಟ್ಟಿಗೆ ಮತ್ತು ಬಂಡಿ ಕಾಯಲು ನಿಲ್ಲಿಸಿ ಹೋದನು. ತಂದೆಯು ಎತ್ತುಗಳನ್ನು ಹುಡುಕುತ್ತ ನಗರಕ್ಕೂ ಹೋಗಿಬಿಟ್ಟನು. ಆದರೆ ಹಿಂತಿರುಗಿ ಬರುವಷ್ಟರಲ್ಲಿ ನಗರ ದ್ವಾರವು ಮುಚ್ಚಿತ್ತು. ಹೀಗಾಗಿ ಆ ಬಾಲಕನು ಇಡೀ ರಾತ್ರಿ ಸ್ಮಶಾನದ ಸಮೀಪವೇ ರಾತ್ರಿ ಒಂಟಿಯಾಗಿ ಕಳೆಯಬೇಕಾಯಿತು.
            ಆ ಮರ ಕಟುಕನ ಮಗನು ಬಾಲಕನಾಗಿದ್ದರೂ ಪ್ರಾಜ್ಞನಾಗಿದ್ದನು. ಆತನಿಗೆ ಬುದ್ಧರ ಮಹೋನ್ನತ ಗುಣಗಳ ಮೇಲೆ ಸ್ಮರಣೆ ಮಾಡುವ ಉತ್ತಮ ಹವ್ಯಾಸವಿತ್ತು. ಆ ರಾತ್ರಿಯಲ್ಲಿ ಸ್ಮಶಾನದಲ್ಲಿ ವಾಸಿಸುತ್ತಿದ್ದಂತಹ ಎರಡು ಪ್ರೇತಗಳು ಆತನಿಗೆ ಹೆದರಿಸಿ ತೊಂದರೆ ನೀಡಲು ಬಂದವು. ಅವುಗಳಲ್ಲಿ ಒಂದು ಪ್ರೇತವು ಆ ಬಾಲಕನ ಕಾಲನ್ನು ಎಳೆಯಿತು. ತಕ್ಷಣ ಆ ಬಾಲಕನು ಭಗವಾನರ ರೂಪವನ್ನು ಧ್ಯಾನಿಸುತ್ತಾ "ನಮೋ ಬುದ್ಧಸ್ಸಾ" ಎಂದನು. ಆ ಶಬ್ದ ಕೇಳುತ್ತಲೇ ಆ ಪ್ರೇತಗಳಿಗೆ ಹೆದರಿಕೆಯುಂಟಾಯಿತು. ಆ ಬಾಲಕನತ್ತ ನೋಡಿದಾಗ ಆತನಲ್ಲಿ 'ಬುದ್ಧ ಧ್ಯಾನ' ಮಾಡುವಾಗಿನ ತೇಜಸ್ಸು ಅವರಿಗೆ ಕಂಡು ಆ 'ಪ್ರೇತಗಳು ಆತನಿಗೆ ಸೇವೆ ಮಾಡಲು ನಿರ್ಧರಿಸಿದವು. ಹೀಗಾಗಿ ಒಂದು ಪ್ರೇತವು ಆತನಿಗೆ ರಕ್ಷಣೆಗಾಗಿ ನಿಂತು ಎಲ್ಲಾ ರಕ್ಷಣಾ ಜವಾಬ್ದಾರಿಯನ್ನು
ಸ್ವೀಕರಿಸಿತು. ಮತ್ತೊಂದು ಪ್ರೇತವು ರಾಜ ಬಿಂಬಿಸಾರನ ಆಹಾರದ ತಟ್ಟೆಯನ್ನೇ ಅಪಹರಿಸಿ ತಂದು ಬಾಲಕನಿಗೆ ತಿನ್ನಲು ನೀಡಿತು. ಹೀಗೆ ಆ ಪ್ರೇತಗಳು ಸ್ವಂತ ಮಗನಂತೆ ಆ ಬಾಲಕನನ್ನು ನೋಡಿಕೊಂಡವು. ಹಾಗೆಯೇ ಆ ಪ್ರೇತವು ರಾಜನಿಗೆ ಮಾತ್ರ ಕಾಣಿಸುವಂತೆ ಸಂದೇಶವನ್ನು ಬರೆದುಬಿಟ್ಟಿತ್ತು. ಮಾರನೆಯ ದಿನ ರಾಜನ ಜನರು ರಾಜಯೋಗ್ಯ ತಟ್ಟೆಯು ಕಾಣೆಯಾಗಿರುವುದನ್ನು ಪತ್ತೆಹಚ್ಚಿದರು ಮತ್ತು ಅವರು ತುಂಬಾ ಹೆದರಿ ತಲೆಕೆಡಿಸಿಕೊಂಡರು. ಆದರೆ ರಾಜನಿಗೆ ಪ್ರೇತಗಳ ಸಂದೇಶ ಸಿಕ್ಕಿತು. ಹಾಗು ಭಟರಿಗೆ ಇಂತಹ ಕಡೆ ಹುಡುಕಿ ಎಂದು ಕಳುಹಿಸಿದನು. ಆಗ ರಾಜಭಟರಿಗೆ ಮರ ಕಟುಕನ ಬಳಿ ಬಂಡಿಯಲ್ಲಿ ತಟ್ಟೆಯು ಸಿಕ್ಕಿತು. ಆಗ ಆವರಿಗೆ ಬಾಲಕನು ಬಂಡಿಯ ಕೆಳಗೆ ಮಲಗಿರುವುದು ಕಾಣಿಸಿತು. ಬಾಲಕನನ್ನು ವಿಚಾರಿಸಿದಾಗ ತನ್ನ ಪೋಷಕರು ಆಹಾರ ತಿನ್ನಿಸಲು ಬಂದಿದ್ದರು ಎಂದನು. ಆ ಬಾಲಕನಿಗೆ ಅಷ್ಟೇ ಗೊತ್ತಿತ್ತು. ಆಗ ರಾಜನು ಆ ಬಾಲಕನ ತಂದೆಗೆ ಕರೆಸಿ ವಿಚಾರಿಸಿದನು. ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ಆಗ ಬಾಲಕನಿಗೆ ಮತ್ತೊಮ್ಮೆ ಪೂರ್ಣವಾಗಿ ವಿಚಾರಿಸಿದಾಗ ಪ್ರೇತ ಕಾಲನ್ನು ಎಳೆದಿದ್ದು, ತಾನು 'ನಮೋ ಬುದ್ಧಸ್ಸ' ಎಂದು ಹೇಳಿದ್ದು ಎಲ್ಲವನ್ನು ತಿಳಿಸಿದನು.
            ಇದರಿಂದಾಗಿ ರಾಜನಿಗೆ ಆಶ್ಚರ್ಯವಾಗಿ ಭಗವಾನರಿಗೆ ಭೇಟಿ ಮಾಡಿ ಪೂರ್ಣ ವಿವರ ಪಡೆದನು. ನಂತರ ಭಗವಾನರಿಗೆ ಹೀಗೆ ಪ್ರಶ್ಸಿಸಿದನು. "ಭಗವಾನ್, ಕೇವಲ ಬುದ್ಧನುಸತಿಯು ಮಾತ್ರವೇ ಅಪಾಯದಿಂದ ರಕ್ಷಣೆ ನೀಡಬಲ್ಲದೇ ಅಥವಾ ಬೇರೆ ಅನುಸ್ಮೃತಿಗಳಾದ ಧಮ್ಮಾನುಸತಿಯು ಅಷ್ಟೇ ಬಲಯುತವಾದುದೇ ಅಥವಾ ಇಲ್ಲವೇ?"

            ಆಗ ಭಗವಾನರು ಈ ಮೇಲಿನ ಗಾಥೆಗಳನ್ನು ತಿಳಿಸಿದರು. ಈ ಗಾಥೆಗಳ ಅಂತ್ಯದಲ್ಲಿ ಆ ಬಾಲಕ ಮತ್ತು ಆತನ ತಂದೆಯು ಸೋತಪನ್ನರಾದರು. ನಂತರ ಅವರು ಸಂಘವನ್ನು ಸೇರಿ ಅರಹಂತರೂ ಆದರು.

No comments:

Post a Comment