ಗಡಿ
ನಗರದಂತೆ ನಿಮ್ಮನ್ನು ರಕ್ಷಿಸಿಕೊಳ್ಳಿ
"ಹೇಗೆ
ಗಡಿಯಲ್ಲಿರುವ ನಗರವನ್ನು
ಒಳಕ್ಕೂ ಹಾಗು ಹೊರಕ್ಕೂ
ರಕ್ಷಿಸುವರೋ
ಹಾಗೆಯೇ ನಿಮ್ಮನ್ನು
ನೀವು ರಕ್ಷಿಸಿಕೊಳ್ಳಿ,
ಈ ಕ್ಷಣ
ಕಳೆದುಹೋಗದಿರಲಿ,
ಏಕೆಂದರೆ ಅಮೂಲ್ಯ
ಕ್ಷಣಗಳ ಅವಕಾಶ
ಕಳೆದುಕೊಂಡಿರುವವರು
ನಿರಯದಲ್ಲಿ ಜನಿಸಬೇಕಾಗುತ್ತದೆ." (315)
ಗಾಥ ಪ್ರಸಂಗ 22:7
ಗಡಿನಗರದ ಭಿಕ್ಷುಗಳು
ಭಿಕ್ಷುಗಳ ಗುಂಪೊಂದು ಗಡಿಯಲ್ಲಿರುವ
ನಗರದಲ್ಲಿ ವರ್ಷವಾಸ ಕಳೆದರು. ವಷರ್ಾವಾಸದ ಮೊದಲ ತಿಂಗಳು ಅವರಿಗೆ ಚೆನ್ನಾಗಿ ಆದರದಿಂದ, ಉತ್ತಮೋತ್ತಮ ಪರಿಕರಗಳಿಂದ ಉಪಾಸಕರು ನೋಡಿಕೊಂಡರು. ಆದರೆ
ಎರಡನೆಯ ತಿಂಗಳು ಆ ನಗರದಲ್ಲಿ ಡಕಾಯಿತರು ಲೂಟಿ ಹೊಡೆದರು ಮತ್ತು ಕೆಲವರನ್ನು ಒತ್ತೆಯಾಳಾಗಿ
ಕರೆದೊಯ್ದರು. ಹೀಗಾಗಿ ಆ ನಗರದ ಜನರು ನಗರವನ್ನು ಪುನರ್ ಸ್ಥಾಪಿಸಲು ನಿಂತರು. ಅವರು ಕೋಟೆಗಳನ್ನು
ಬಲಪಡಿಸುತ್ತಾ ಬಲಿಷ್ಠಗೊಳಿಸಿದರು. ಹೀಗಾಗಿ ಅವರು ಭಿಕ್ಷುಗಳನ್ನು ಸರಿಯಾಗಿ ನೋಡಿಕೊಳ್ಳದೆ
ಹೋದರು. ಭಿಕ್ಷುಗಳಂತು ಅತಿ ಕಷ್ಟದಿಂದ ತಮ್ಮ ವರ್ಷವಾಸ ಕಳೆದರು. ವರ್ಷವಾಸ ಮುಗಿದ ನಂತರ
ಭಿಕ್ಷುಗಳು ಭಗವಾನರನ್ನು ಭೇಟಿ ಮಾಡಲು ಜೇತವನ ವಿಹಾರಕ್ಕೆ ಹೊರಟರು. ಭಗವಾನರಲ್ಲಿ ತಮಗಾದ
ಕಷ್ಟಗಳನ್ನು ಹೇಳಿಕೊಂಡರು. ಆಗ ಭಗವಾನರು ಅವರಿಗೆ ಹೀಗೆ ನುಡಿದರು: "ಭಿಕ್ಷುಗಳೇ, ಇದನ್ನೇ ಅಥವಾ ಬೇರೆಯ ಕಷ್ಟಗಳನ್ನೇ ಸದಾ ಚಿಂತಿಸುತ್ತಾ
ಇರಬೇಡಿ. ಕಷ್ಟಗಳಿಲ್ಲದ, ನಿಶ್ಚಿಂತತೆಯ ಹಾಗು
ಪ್ರಯತ್ನರಹಿತ ಜೀವನ ಸದಾ ಸಿಗುವುದಿಲ್ಲ. ಜೀವನದಲ್ಲಿ ಅಪ್ರಿಯಗಳ ಆಗಮನ ಸಹಜ. ಅದಕ್ಕೆ ನೀವು
ಸಿದ್ಧರಾಗಬೇಕು, ಹೇಗೆ ಗಡಿ ನಗರದವರು
ತಮ್ಮ ನಗರವನ್ನು ರಕ್ಷಿಸುತ್ತಿರುವರೋ ಹಾಗೆಯೇ ಓ ಭಿಕ್ಷುಗಳೇ, ನೀವು ಸಹಾ ನಿಮ್ಮ ಮನಸ್ಸನ್ನು ರಕ್ಷಿಸಿರಿ ಹಾಗೂ ದೇಹದ ಮೇಲೆ
ಜಾಗರೂಕರಾಗಿರಿ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment