Wednesday, 5 August 2015

dhammapada/maggavagga/20.12/patacaara

ಮೃತ್ಯು ಸಮಯದಲ್ಲಿ ಪರರ್ಯಾರು ರಕ್ಷಣೆ ಮಾಡಲಾರರು !
"ತನ್ನ ರಕ್ಷಣೆಗೆ (ನೆಲೆಗೆ) ಪುತ್ರರಾಗಲಿ,
ಪಿತನಾಗಲಿ ಅಥವಾ ಬಾಂಧವರೂ ಇಲ್ಲ
ಯಾವಾಗ ಹಂತಕನು ಆಕ್ರಮಿಸಿ ಹಿಡಿತ
ಬಿಗಿಗೊಳಿಸುವನೋ ಆಗ ರಕ್ಷಿಸಲೂ ಯಾವ ಬಂಧುವಿಗೂ ಸಾಧ್ಯವಿಲ್ಲ."             (288)

"ಈ ಸತ್ಯವನ್ನು ಸ್ಪಷ್ಟವಾಗಿ ಅರಿತುಕೊಂಡು
ಪಂಡಿತನು (ಜ್ಞಾನಿಯು) ಶೀಲ ಸಂಯಮಗಳಿಂದ
ಸಂಪನ್ನನಾಗಲಿ ಹಾಗು ನಿಬ್ಬಾಣಕ್ಕೆ ಕೊಂಡೊಯ್ಯುವ ಮಾರ್ಗವನ್ನು
ವೇಗವಾಗಿ, ಸ್ವಚ್ಛವಾಗಿ ಸ್ಪಷ್ಟಗೊಳಿಸಿಕೊಳ್ಳಲಿ."              (289)

ಗಾಥ ಪ್ರಸಂಗ 20:12
ಪಟಚಾರಳಿಗೆ ಸಾಂತ್ವನ
ಪಟಾಚಾರಳ ಶೋಕದಿಂದ ಬೋಧಿಯೆಡೆಗಿನ ಯಾನ
                ಪಟಾಚಾರಳು ಶ್ರಾವಸ್ತಿಯ ಶ್ರೀಮಂತನ ಸುಂದರ ಪುತ್ರಿಯಾಗಿದ್ದಳು. ಆಕೆ ಯುವತಿಯಾಗಿರುವಾಗ ಕುಟುಂಬದಲ್ಲಿ ಕೆಲಸಕ್ಕಿರುವ ಸೇವಕನಲ್ಲಿ ಪ್ರೇಮವಿರಿಸಿ ಆತನೊಂದಿಗೆ ಪರವೂರಿಗೆ ಹೋಗಿ ನೆಲೆಸಿದಳು. ಕಾಲನಂತರ ಆಕೆ ಬಸುರಿಯಾದಳು. ಆಕೆಯು ತನ್ನ ತಾಯಿ ಮನೆಯಲ್ಲಿಯೇ ಮಗುವನ್ನು ಹಡೆಯಲು ಆಸೆಪಟ್ಟಳು. ಆದರೆ ಗಂಡನು ನಿರಾಕರಿಸಿದ್ದರಿಂದಾಗಿ ಆಕೆಯ ಆತನಿಲ್ಲದ ವೇಳೆಯಲ್ಲಿ ತವರುಮನೆ ಹಾದಿ ಹಿಡಿದಳು. ಅದು ಕಾಡಿನ ರಸ್ತೆಯಾಗಿತ್ತು. ಗಂಡನಿಗೆ ವಿಷಯ ತಿಳಿದು, ಆತನು ಆಕೆಯನ್ನು ಹುಡುಕಿ ಆಕೆಯನ್ನು ಹಿಂತಿರುಗಿಸಲು ನಾನಾರೀತಿ ಹೇಳಿದರು. ಆಕೆ ಒಪ್ಪಲಿಲ್ಲ, ಆದರೆ ಪ್ರಸವ ವೇದನೆ ಆರಂಭವಾಗಿ ಆಕೆ ಪೊದೆಗಳ ಬಳಿಯೇ ಮಗುವಿಗೆ ಜನ್ಮವಿತ್ತು ಪತಿಯೊಂದಿಗೆ ಹಿಂತಿರುಗಿದಳು.
                ಕಾಲನಂತರ ಆಕೆ ಎರಡನೆಯಬಾರಿ ಗಭರ್ಿಣಿಯಾದಳು. ಈ ಬಾರಿಯು ಹಿಂದಿನಂತೆ, ಆಕೆಯ ಪತಿ ಒಪ್ಪದಿದ್ದಾಗ ಆಕೆ ಆತನು ಇಲ್ಲದಿದ್ದಾಗ ತವರುಮನೆ ಹಾದಿ ಹಿಡಿದಳು. ಆತನು ಹಿಂದಿನಂತೆ ಆಕೆಯನ್ನು ಹುಡುಕಿದನು. ಆಕೆಯನ್ನು ಮನವೊಲಿಸಿ ಕರೆತರಲು ಪ್ರಯತ್ನಿಸಿ ವಿಫಲನಾದನು. ಅದೇವೇಳೆಯಲ್ಲಿ ಆಕೆಗೆ ಪ್ರಸವ ವೇದನೆಯಾದಾಗ ಭೀಕರ ಮಳೆಯು ಸುರಿಯಿತು. ಆಕೆಯ ರಕ್ಷಣೆಗಾಗಿ ಆತನು ಭೂಮಿಯನ್ನು ಸ್ವಚ್ಛಗೊಳಿಸಿ, ಸಿದ್ಧಪಡಿಸುತ್ತಿದ್ದಾಗ ವಿಷಪೂರಿತ ಹಾವು ಕಚ್ಚಿ ಆತನು ಸ್ಥಳದಲ್ಲಿಯೇ ಮೃತನಾದನು.
                ಪಟಾಚಾರಳು ಆತನ ಹಿಂದಿರುಗುವಿಕೆಯನ್ನೇ ಕಾಯುತ್ತ, ನೋವಿನಿಂದ ನರಳುತ್ತ ಎರಡನೆಯ ಮಗನಿಗೆ ಜನ್ಮವಿತ್ತಳು. ಮರುದಿನ ಆಕೆಯು ತನ್ನ ಗಂಡನನ್ನು ಹುಡುಕಾಡಿದಾಗ ಆಕೆಗೆ ಸಿಕ್ಕಿದ್ದು ಆತನ ಶವ ಮಾತ್ರವೇ. ಶೋಕದಿಂದ ತುಂಬಿಹೋಗಿ ತನ್ನ ಗಂಡನ ಸಾವಿಗೆ ತಾನೇ ಕಾರಣಳಾದೆನು ಎಂಬಂತೆ ಶೋಕಪಟ್ಟಳು. ನಂತರ ನಿರಾಶಳಾಗಿ ಬಳಲಿಕೊಂಡೇ ಆಕೆಯು ತನ್ನ ತವರು ಮನೆಯತ್ತ ನಡೆದಳು.
                ಇಡೀ ರಾತ್ರಿ ಮಳೆ ಸುರಿದು ನದಿಯು ಉಕ್ಕಿ ಹರಿಯುತ್ತಿತ್ತು. ಹೀಗಾಗಿ ಆಕೆ ಎರಡು ಮಕ್ಕಳೊಂದಿಗೆ ಒಂದೇಬಾರಿ ದಾಟಲು ಸಾಧ್ಯವಿರಲಿಲ್ಲ. ಹೀಗಾಗಿ ಆಕೆಯು ಹಿರಿಯ ಮಗುವನ್ನು ನದಿಯ ದಡದಲ್ಲೇ ಬಿಟ್ಟು, ಆಗತಾನೇ ಜನಿಸಿದಂತಹ ಶಿಶುವನ್ನು ಎತ್ತಿಕೊಂಡು ಹೊಳೆಯನ್ನು ದಾಟಿದಳು. ನಂತರ ಆ ಮಗುವನ್ನು ಆಕೆಯು ಆ ಬದಿಯ ದಡದಲ್ಲಿಟ್ಟು, ಹಿರಿಯ ಮಗನತ್ತ ಬರುತ್ತಿದ್ದಳು. ಆಕೆ ಹೊಳೆಯ ಮಧ್ಯದಲ್ಲಿ ಬರುತ್ತಿದ್ದಂತೆ, ಗಿಡುಗವೊಂದು ಆ ಶಿಶುವನ್ನು ಮಾಂಸದ ಮುದ್ದೆ ಎಂದು ಭಾವಿಸಿ ಅದರತ್ತ ಧಾವಿಸಿತು. ಆಕೆಯ ಆ ಗಿಡುಗವನ್ನು ಹೆದರಿಸಲು ಕೂಗು ಹಾಕಿದಳು. ಆದರೆ ಅದು ವ್ಯರ್ಥವಾಗಿ, ಆ ಗಿಡುಗವು ಆ ಶಿಶುವನ್ನು ತೆಗೆದುಕೊಂಡು ಹೋಗಿಬಿಟ್ಟಿತು. ಆದರೆ ಅದೇ ವೇಳೆಯಲ್ಲಿ ಹಿರಿಯ ಮಗುವು ತಾಯಿಯ ಕೂಗಾಟ ಕೇಳಿಸಿಕೊಂಡು, ತಾಯಿಯು ತನ್ನನ್ನು ಕರೆಯುತ್ತಿರಬಹುದು ಎಂದು ಭಾವಿಸಿ ಹೊಳೆಗೆ ಪ್ರವೇಶಿಸಿತು. ಆದರೆ ಹೊಳೆಯ ಪ್ರವಾಹದಿಂದ ಅದು ಕೊಚ್ಚಿಕೊಂಡು ಹೋಯಿತು. ಹೀಗೆ ಪಟಾಚಾರಳು ತನ್ನ ಕಣ್ಣೆದುರಿಗೆ ತನ್ನ ಇಬ್ಬರು ಮಕ್ಕಳನ್ನು ಕಳೆದುಕೊಂಡಳು.
                ಆಕೆ ಶೋಕ ಪ್ರಲಾಪದಿಂದ ತುಂಬಿಹೋದಳು. ಹೀಗೆ ಜೋರಾಗಿ ಪ್ರಲಾಪಿಸಿದಳು: ನನ್ನ ಮಗುವನ್ನು ಗಿಡುಗವು ಎತ್ತಿಕೊಂಡು ಹೋಯಿತು, ನನ್ನ ಮಗನು ಪ್ರವಾಹದಲ್ಲಿ ಕೊಚ್ಚಿಹೋದನು. ನನ್ನ ಗಂಡ ಹಾವು ಕಚ್ಚಿ ಸತ್ತನು. ಹೀಗೆ ಆಕೆಯು ಕಣ್ಣೀರು ಹಾಕುತ್ತ ಶ್ರಾವಸ್ತಿ ತಲುಪಿ, ಅಲ್ಲಿದ್ದ ಪರಿಚಯಸ್ಥನಿಗೆ ತನ್ನ ತಂದೆ-ತಾಯಿಗಳ ಬಗ್ಗೆ ಕೇಳಿದಳು. ಅದಕ್ಕೆ ಆತನು ಹೇಳಿದುದೇನೆಂದರೆ ಹಿಂದಿನ ರಾತ್ರಿಯ ಭೀಕರ ಬಿರುಗಾಳಿಗೆ, ಆಕೆಯ ತಂದೆಯ ಮನೆಯು ಕುಸಿದು, ಮುರಿದುಬಿದ್ದ ಪರಿಣಾಮವಾಗಿ, ಆಕೆಯ ತಂದೆ-ತಾಯಿಗಳು ಮತ್ತು ಆಕೆಯ ಸೋದರನು ಸ್ಥಳದಲ್ಲೇ ಸತ್ತರೆಂದು ಮತ್ತು ಅವರ ದಹನ ಸಂಸ್ಕಾರವು ಆಗಿಹೋಯಿತೆಂದು ಹೇಳಿದನು. ಇದನ್ನು ಕೇಳಿದ ಮೇಲೆ, ಮೊದಲೇ ಶೋಕಗಳ ಆಘಾತದಿಂದ ಜರ್ಝರಿತಳಾಗಿದ್ದ ಆಕೆಯು ಶೋಕದ ರಭಸದಿಂದಾಗಿ ಹುಚ್ಚಿಯಾದಳು. ಆಕೆಗೆ ತನ್ನ ವಸ್ತ್ರಗಳ ಮೇಲೆ ಗಮನವೇ ಇರಲಿಲ್ಲ. ಸದಾ ಶೋಕದಿಂದ ಕೂಗುತ್ತಾ ನಡೆಯುತ್ತಿದ್ದಳು.
                ಒಂದುದಿನ ಬುದ್ಧ ಭಗವಾನರು ಜೇತವನದಲ್ಲಿ ಬೋಧಿಸುತ್ತಿರುವಾಗಿ ಅವರಿಗೆ ಪಟಾಚಾರಳು ದೂರದಲ್ಲಿ ನರಳುತ್ತ ತಿರುಗಾಡುತ್ತಿರುವುದು ಅರಿವಿಗೆ ಬಂತು. ಹೀಗಾಗಿ ಅವರು ಆಕೆಯ ಪರಿಷತ್ತಿನತ್ತ ಬರಲೆಂದು ಸಂಕಲ್ಪಿಸಿದರು. ಅವರ ಸಂಕಲ್ಪಶಕ್ತಿಯಿಂದಾಗಿ, ಅಯಸ್ಕಾಂತಕ್ಕೆ ವಶವಾಗುವ ಕಬ್ಬಿಣದಂತೆ, ಆಕೆಯು ಸಭೆಯತ್ತ ಬಂದಳು. ಆದರೆ ಆ ಗುಂಪು ಆಕೆಯನ್ನು ಬುದ್ಧರ ಬಳಿಗೆ ಬರದಂತೆ ತಡೆಯಲು ಮತ್ತು ಓಡಿಸಲು ಮುಂದಾದಾಗ, ಭಗವಾನರು: ಆಕೆಯನ್ನು ತಡೆಯದಿರಿ, ಆಕೆಯು ಹತ್ತಿರ ಬರಲಿ ಎಂದು ಆಜ್ಞಾಪಿಸಿದರು. ಪಟಾಚಾರಳು ಹತ್ತಿರ ಬಂದಾಗ ಭಗವಾನರು ಹೀಗೆ ಹೇಳಿದರು. ಪಟಾಚಾರ, ಶಾಂತಳಾಗು, ಎಚ್ಚರಹೊಂದು, ಮನಸ್ಸಿನ ನಿಯಂತ್ರಣವನ್ನು ಮಾಡುವಂತಾಗು, ಶಾಂತಳಾಗು. ಆಗ ಆಕೆಗೆ ತನ್ನ ಬಾಹ್ಯವಸ್ಥೆಯು ಅರಿವಿಗೆ ಬಂದಿತು. ಆಗ ಯಾರೋ ದಯಾಳು ವಸ್ತ್ರವನ್ನು ಎಸೆದನು. ಅದರಿಂದ ತನ್ನ ಮೈಯನ್ನು ಮುಚ್ಚಿಕೊಂಡಳು. ಆಕೆಯು ಆಗ ಭಗವಾನರಿಗೆ ತನ್ನ ಶೋಕಚರಿತ್ರೆಯನ್ನು ಹೇಳಿಕೊಂಡಳು.
                ಆಗ ಭಗವಾನರು ಆಕೆಗೆ ಸಮಾಧಾನ ಮಾಡಿಸಿದರು ಪಟಾಚಾರ, ಶೋಕಿಸಬೇಡ, ಭಯಪಡಬೇಡ, ನೀನು ಸರಿಯಾದ ಸ್ಥಳಕ್ಕೆ ಬಂದಿರುವೆ, ನಿನಗೆ ರಕ್ಷಿಸುವ ಮತ್ತು ನಿನ್ನ ನಿಜಕ್ಷೇಮದ ಮಾರ್ಗದರ್ಶನ ನೀಡಬಲ್ಲ ಅಂತಹದೆಡೆಗೆ ಬಂದಿರುವೆ. ಈಗ ಮಾತ್ರವಲ್ಲ, ಹಿಂದೆಯೂ ಇಡೀ ಸಂಸಾರದಲ್ಲಿ ನೀನು ಮಕ್ಕಳ, ಪತಿಯ, ತಂದೆ-ತಾಯಿಗಳ, ಸೋದರರ ವಿಯೋಗದಿಂದಾಗಿ ಹರಿಸಿರುವ ಕಣ್ಣೀರಿನ ಮೊತ್ತ ಅಪಾರವಾದುದು. ಅದು ಸಮುದ್ರವನ್ನು ಮೀರಿಸಬಹುದು ಎಂದು ಹೇಳಿ ಆಕೆಗೆ ಅನಮತಗ್ಗ ಸುತ್ತವನ್ನು ವಿವರಿಸಿದರು.
                ಅಜ್ಞಾನ ಮತ್ತು ತನ್ಹಾದಿಂದ ಕೂಡಿರುವ ಜೀವಿಗಳು ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಸುತ್ತಾಡುತ್ತಿರುತ್ತವೆ. ಮೊದಲ ಆದಿಯಾಗಲಿ, ಅಂತ್ಯವಾಗಲಿ ಕಾಣಲಾಗುವುದಿಲ್ಲ.
                ಒಬ್ಬನು ಭಾರತದ ಎಲ್ಲಾ ರೆಂಬೆಗಳನ್ನು ನಾಲ್ಕು ಅಂಗುಲದಷ್ಟು ಕತ್ತರಿಸುತ್ತಾ ಇದು ನನ್ನ ತಂದೆ, ತಾಯಿ ಎಂದು ವಿಂಗಡಿಸಿದರೂ ಸಹಾ ರೆಂಬೆಗಳು ಮುಗಿಯುವುದೇ ವಿನಃ ನಮ್ಮ ಹಿಂದಿನ ಜನ್ಮಗಳ ತಾಯಿ-ತಂದೆ ಬಂಧು-ಬಳಗಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.
                ಸಂಸಾರದಲ್ಲಿ ನಮ್ಮ ಬಂಧು-ಬಾಂಧವರ ವಿಯೋಗದಿಂದ ನಾವು ಹರಿಸಿದ ಕಣ್ಣೀರು, ನಾಲ್ಕು ಸಾಗರಕ್ಕಿಂತ ಹೆಚ್ಚಾಗಿರುತ್ತದೆ.
                ಸಂಸಾರದಲ್ಲಿ ನಾವು ಕುಡಿದ ತಾಯಿಯ ಹಾಲು, ನಾಲ್ಕು ಸಾಗರಕ್ಕಿಂತ ಹೆಚ್ಚಾಗಿರುತ್ತದೆ.
                ಒಬ್ಬ ಭಿಕ್ಷುವು 100 ಕಲ್ಪಗಳಷ್ಟು ಕಾಲವನ್ನು ಒಂದು ದಿನದಷ್ಟು ಕ್ಷಿಪ್ರವಾಗಿ ಸ್ಮರಿಸಿದರೂ ಆತನ ಆಯಸ್ಸು ಮುಗಿಯುವುದೇ ವಿನಃ ಆತನಿಗೆ ಆದಿಯ ಗೋಚರವಾಗದು.
                ಸಮುದ್ರದಲ್ಲಿ ಎಸೆದ ಕಡ್ಡಿಯು ಹೇಗೆ ಅನಿಶ್ಚಿತವೋ ಹಾಗೇ ಜೀವಿಗಳು ಸಂಸಾರದಲ್ಲಿ ಅಡ್ಡಾಡುತ್ತಿರುತ್ತಾರೆ.
                ಒಬ್ಬರು ಒಂದು ಕಲ್ಪದಷ್ಟು ಕಾಲ ಎತ್ತಿದ ಜನ್ಮಗಳ ಮೂಳೆಗಳನ್ನು ಸಂಗ್ರಹಿಸಿದರೆ ಅದು ವೇಪುಲ್ಲ ಪರ್ವತಕ್ಕಿಂತ ದೊಡ್ಡದಾಗಿರುತ್ತದೆ.
                ಆದ್ದರಿಂದ ಪ್ರಿಯ ವಿಯೋಗದ ದುಃಖ ತಪ್ಪಿಸಬೇಕಾದರೆ, ಜನ್ಮ ತಪ್ಪಿಸು, ಜನ್ಮದಿಂದ ಪಾರಾಗಬೇಕಾದರೆ, ಈ ತೀವ್ರ ಬಯಕೆಗಳನ್ನು ಮತ್ತು ಅಂಟುವಿಕೆಯನ್ನು ತ್ಯಜಿಸು ಯಾವುದಕ್ಕೂ ಅಂಟಬೇಡ, ಶಾಂತಳಾಗುವೆ ಎಂದರು. ಅದನ್ನು ಕೇಳಿದ ಮೇಲೆ ಆಕೆಯು ಶೋಕದಿಂದ ಮುಕ್ತಳಾದಳು ಮತ್ತು ಶಾಂತಳಾದಳು. ಆಗ ಬುದ್ಧರು ಹೀಗೆ ಹೇಳಿದರು: ಕಳೆದುಹೋದ ಕಾಲದ ಬಗ್ಗೆ ಚಿಂತೆ ಪಡಬೇಡ, ಬದಲಾಗಿ ಪರಿಶುದ್ಧ ಚಿತ್ತದೆಡೆಗೆ ಗಮನಹರಿಸು, ನಿಬ್ಬಾಣಕ್ಕಾಗಿ ಶ್ರಮಿಸು. ಇದನ್ನೆಲ್ಲಾ ಆಲಿಸಿದ ಮೇಲೆ ಪಟಾಚಾರಳು ಜೀವನದ ಕ್ಷಣಿಕತೆಯನ್ನು ಸ್ಪಷ್ಟವಾಗಿ ಅರಿತಳು. ಜೀವನ ಅನಿಶ್ಚಿತ; ಮರಣ ನಿಶ್ಚಿತ ಎಂಬ ಸತ್ಯವನ್ನು ಸ್ಪಷ್ಟವಾಗಿ ಅರಿತಳು. ಸಂಸಾರದಲ್ಲಿ ಉದಯಿಸುವಿಕೆ ಮತ್ತು ಅಳಿಯುವಿಕೆಯು ವ್ಯರ್ಥವಾದುದು ಎಂದು ಸ್ಪಷ್ಟವಾಗಿ ಅರಿತು ಲೋಕೋತ್ತರ ಮಾರ್ಗದಲ್ಲಿ ಸ್ಥಿರಳಾದಳು.
               



. ಭಗವಾನರು ಪಟಾಚಾರಗಳಿಗೆ ಶಾಂತಗೊಳಿಸಿ, ನಂತರ ಈ ಗಾಥೆಗಳಿಂದ ಆಕೆಗೆ ಜ್ಞಾನೋದಯ ಉಂಟುಮಾಡಿದರು.

            "ಓ ಪಟಾಚಾರ, ನಿನ್ನ ಮಕ್ಕಳು ಜೀವಂತವಾಗಿದ್ದರೂ ಸಹಾ ನೀನೇ ಈ ಲೋಕವನ್ನು  ಬಿಡುವಾಗ ಅವರು ನಿನ್ನ ಸಹಾಯಕ್ಕೆ ಬರಲಾರರು. ಆಗ ತಂದೆಯಾಗಲಿ ಅಥವಾ ಯಾವುದೇ ಬಂಧು ಬಾಂಧವರೂ ಸಹಾ ಸಹಾಯ ಮಾಡಲಾರರು. ಮರಣದಿಂದ ಯಾರು ಸಹಾ ಕಾಪಾಡಲಾರರು. ಆದ್ದರಿಂದ ಅವರು ಜೀವಂತವಾಗಿರಲಿ ಅಥವಾ ಇಲ್ಲದಿರಲಿ ಅಂತಹ ವ್ಯತ್ಯಾಸವೇನೂ ಇಲ್ಲ. ಒಂದುವೇಳೆ ಅವರೆಲ್ಲ ಜೀವಂತವಾಗಿದ್ದು, ನಿನ್ನನ್ನು ನೋಡಿಕೊಳ್ಳದಿದ್ದರೆ ಆಗ ಅವರೆಲ್ಲಾ ಇದ್ದು, ಇಲ್ಲದಂತಾಗುತ್ತಿದ್ದರು. ಈ ಸತ್ಯವನ್ನು ಸ್ಪಷ್ಟವಾಗಿ ಅರಿತುಕೊಂಡು ಶೀಲವಂತೆಯಾಗು. ನಿಬ್ಬಾಣದ ಹಾದಿಗೆ ಇರುವಂತಹ ಅಡ್ಡಿಗಳೆಲ್ಲಾ ಕಿತ್ತೆಸೆಯುತ್ತಾ ಸಾಗುವಂತಾಗು" ಎಂದು  ಮೇಲಿನ ಗಾಥೆಗಳನ್ನು ಹೇಳಿದರು.
ಮೃತ್ಯು ಸಮಯದಲ್ಲಿ ಪರರ್ಯಾರು ರಕ್ಷಣೆ ಮಾಡಲಾರರು !
"ತನ್ನ ರಕ್ಷಣೆಗೆ (ನೆಲೆಗೆ) ಪುತ್ರರಾಗಲಿ,
ಪಿತನಾಗಲಿ ಅಥವಾ ಬಾಂಧವರೂ ಇಲ್ಲ
ಯಾವಾಗ ಹಂತಕನು ಆಕ್ರಮಿಸಿ ಹಿಡಿತ
ಬಿಗಿಗೊಳಿಸುವನೋ ಆಗ ರಕ್ಷಿಸಲೂ ಯಾವ ಬಂಧುವಿಗೂ ಸಾಧ್ಯವಿಲ್ಲ."             (288)

"ಈ ಸತ್ಯವನ್ನು ಸ್ಪಷ್ಟವಾಗಿ ಅರಿತುಕೊಂಡು
ಪಂಡಿತನು (ಜ್ಞಾನಿಯು) ಶೀಲ ಸಂಯಮಗಳಿಂದ
ಸಂಪನ್ನನಾಗಲಿ ಹಾಗು ನಿಬ್ಬಾಣಕ್ಕೆ ಕೊಂಡೊಯ್ಯುವ ಮಾರ್ಗವನ್ನು
ವೇಗವಾಗಿಸ್ವಚ್ಛವಾಗಿ ಸ್ಪಷ್ಟಗೊಳಿಸಿಕೊಳ್ಳಲಿ."              (289)

ನಂತರ ಪಟಾಚಾರಳು ಭಿಕ್ಷುಣಿಯಾದಳು. ಮುಂದೊಂದುದಿನ ಆಕೆಯು ತನ್ನ ಪಾದವನ್ನು ನೀರಿನಿಂದ ಶುದ್ಧಗೊಳಿಸುತ್ತಿರುವಾಗಆಕೆಯು ಮಣ್ಣಿನ ಬಿಂದಿಗೆಯಿಂದ ನೀರು ಹಾಕುತ್ತಿದ್ದಂತೆಆ ನೀರು ಸ್ವಲ್ಪದೂರ ಹರಿದು ಮರೆಯಾಯಿತು. ಆಗ ಆಕೆಯು ಎರಡನೆಯಬಾರಿ ನೀರು ಹಾಕಿದಾಗ ಅದು ಇನ್ನೂ ಸ್ವಲ್ಪದೂರ ಹರಿದು ಮರೆಯಾಯಿತು. ನಂತರ ಆಕೆಯು ಮೂರನೆಯಬಾರಿ ನೀರು ಹಾಕಿದಾಗಅದು ಇನ್ನೂ ಸ್ವಲ್ಪ ಹೆಚ್ಚು ದೂರ ಹರಿದು ಮರೆಯಾಯಿತು. ಹೀಗೆ ಆಕೆಯು ನೀರು ಮೂರುಬಾರಿ ಮರೆಯಾಗಿರುವುದನ್ನು ಕಂಡು ಈ ರೀತಿ ಚಿಂತನೆ ಮಾಡಿದಳು: ಜೀವನವೂ ಸಹಾ ಹೀಗೆಯೇ ಆಗಿದೆ. ಜನ್ಮಿಸುತ್ತೇವೆಜೀವಿಸುತ್ತೇವೆ ಹಾಗು ಮರಣಿಸುತ್ತೇವೆ ಹೇಗೆ ನೀರು ಹರಿದು ಮರೆಯಾಗುವುದೋ ಹಾಗೆಯೇ ಜೀವಿತವು ಸಹಾ ಮರೆಯಾಗಿ ಮೃತ್ಯವಶವಾಗುವೆವು. ಆಕೆಯ ಚಿಂತನೆಯು ಬುದ್ಧರ ಅರಿವಿಗೆ ಬಂದುಆಕೆಯ ಮುಂದೆ ಪ್ರತ್ಯಕ್ಷರಾಗಿ ಹೀಗೆ ಹೇಳಿದರು: ಪಟಾಚಾರ ನೀನು ಯೋಗ್ಯವಾದ ಮಾರ್ಗದಲ್ಲಿಯೇ ಇದ್ದೀಯೇ. ಸಂಖಾರಗಳ ನಿಜದರ್ಶನ ಮಾಡುತ್ತಿರುವೆಯಾರು ಸಂಖಾರಗಳ ಅನಿತ್ಯತೆ ದುಃಖ ಮತ್ತು ಅನಾತ್ಮತೆಗಳನ್ನು ಅರಿಯುತ್ತಾರೋ ಅವರ ಒಂದು ದಿನವು ಅಜ್ಞಾನಿಗಳ ಇಡೀ ಜೀವನಕ್ಕಿಂತ ಉತ್ತಮವಾಗಿರುತ್ತದೆ ಮತ್ತು ಶ್ರೇಷ್ಠವಾಗಿರುತ್ತದೆ 


ಒಬ್ಬನು ಉದಯ ಮತ್ತು ಅಳಿವುಗಳನ್ನು ಅರಿಯದೆ ಶತವರ್ಷಗಳ ಕಾಲ ಜೀವಿಸಬಹುದು, ಆದರೆ ಅಂತಹ ಜೀವನಕ್ಕಿಂತ ಉದಯ ಮತ್ತು ಅಳಿವುಗಳನ್ನು ಕಂಡಂತಹ ಒಂದು ದಿನದ ಜೀವನ ಉತ್ತಮವಾದುದು.         (113)

ನಂತರ ಪಟಾಚಾರಳು ಅರಹಂತೆಯಾದಳು.

No comments:

Post a Comment