Friday, 18 September 2015

dhammapada/bhikkuvagga/25.12/sumanasamanera

ಯುವ ನಿಷ್ಠಾವಂತ ಬೌದ್ಧ ಭಿಕ್ಷು ಲೋಕಕ್ಕೆ ಪ್ರಕಾಶಿಸುವನು
"ಯಾವ ಭಿಕ್ಷುವು ಯುವಕನಾಗಿರುವಾಗಲೇ
ಬುದ್ಧ ಶಾಸನದಲ್ಲಿ ಶ್ರದ್ಧಾವಂತನಾಗಿ ಶ್ರಮಿಸುವನೋ
ಆತನು ಮೋಡ ಮುಕ್ತ ಚಂದಿರನಂತೆ
ಈ ಲೋಕವನ್ನು ಪ್ರಕಾಶಿಸುವನು."               (382)

ಗಾಥ ಪ್ರಸಂಗ 25:12
ಸುಮನ ಸಾಮಣೇರನ ಅತೀಂದ್ರಿಯ ಸಾಧನೆ

            ಸಾಮಣೇರ ಸುಮನನು ಪೂಜ್ಯ ಅನಿರುದ್ಧರವರ ಶಿಷ್ಯನಾಗಿದ್ದನು. ಆತನು ತನ್ನ ಹಿಂದಿನ ಜನ್ಮದ ಪುಣ್ಯದಿಂದಾಗಿ ಹಾಗು ಈಗಿನ ಜನ್ಮದ ದೃಢ ಪರಾಕ್ರಮದಿಂದಾಗಿ ಅತಿ ಕಿರಿಯ ವಯಸ್ಸಿನಲ್ಲೇ ಅತೀಂದ್ರಿಯ ಬಲಗಳ ಸಹಿತ ಅರಹಂತನಾದನು.
            ಒಮ್ಮೆ ಆತನ ಗುರು ಅನಿರುದ್ದರು ಕಾಯಿಲೆ ಬಿದ್ದಾಗ ಅವರಿಗೆ ನೀರಿನ ಅವಶ್ಯಕತೆ ಬಿದ್ದಿತು. ಆಗ ಸುತ್ತಲೆಲ್ಲವೂ ನೀರು ಸಿಗದ ಕಾರಣ ಆ ವಿಹಾರದಿಂದ ಎಷ್ಟೋ ದೂರವಿರುವ ಅನೋತ್ತತ್ತ ಸರೋವರದಿಂದಲೇ ತನ್ನ ಅತೀಂದ್ರಿಯ ಶಕ್ತಿಯಿಂದಾಗಿ ಗಾಳಿಯಲ್ಲಿಯೇ ಅಲ್ಲಿ ಹೋಗಿ ನೀರನ್ನು ತೆಗೆದುಕೊಂಡು ಬಂದರು. ನಂತರ ಗುರು ಮತ್ತು ಶಿಷ್ಯರು ಭಗವಾನರನ್ನು ದಶರ್ಿಸಲು ಪುಬ್ಬಾರಾಮ ವಿಹಾರಕ್ಕೆ ಬಂದರು.
            ಆ ವಿಹಾರದಲ್ಲಿ ಅತಿ ಕಿರಿಯ ವಯಸ್ಸಿನವನಾದ ಸುಮನ ಸಾಮಣೇರನನ್ನು ಕಂಡು ಅಲ್ಲಿಂದ್ದ ಕೆಲವು ಸಾಮಣೇರರು ಹಾಸ್ಯ, ಕುಚೋದ್ಯ ಮಾಡಲಾರಂಭಿಸಿದರು. ಆಗ ಭಗವಾನರಿಗೆ ಸುಮನನಲ್ಲಿರುವ ಅನುರೂಪವಾದ ಸದ್ಗುಣಗಳನ್ನು ಪ್ರತಿಭೆಯನ್ನು ಇವರಿಗೆ ಪರಿಚಯಿಸಬೇಕೆಂದು ಭಗವಾನರು ಸಾಮಣೇರರನ್ನು ಕರೆದು ಅನೋತತ್ವ ಸರೋವರದ ನೀರು ಬೇಕೆಂದು ಹೂಜಿಯನ್ನು ನೀಡಿದರು. ಆದರೆ ಆ ಕಾರ್ಯವು ಯಾರಿಗೂ ಸಾಧ್ಯವಾಗಲಿಲ್ಲ. ಕೊನೆಗೆ ಪೂಜ್ಯ ಆನಂದರವರ ಕೋರಿಕೆಯಂತೆ ಸುಮನರು ಕ್ಷಣಾರ್ಧದಲ್ಲೇ ತನ್ನ ಅತೀಂದ್ರಿಯ ಶಕ್ತಿ ಬಳಸಿ, ಅನೋತತ್ತ ಸರೋವರಕ್ಕೆ ಹೋಗಿ ಹಾಗೆಯೇ ನೀರಿನ ಸಮೇತ ಗಾಳಿಯಿಂದಲೇ ಕೆಳಗೆ ಇಳಿದರು. ಎಲ್ಲಾ ಭಿಕ್ಷುಗಳಿಗೂ ಆಶ್ಚರ್ಯವಾಯಿತು.

            ಅಂದು ಸಂಜೆ ಭಿಕ್ಷುಗಳು ಈ ವಿಷಯವನ್ನು ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಈ ಮೇಲಿನ ಗಾಥೆ ನುಡಿದು ಹೀಗೆಂದರು. "ಭಿಕ್ಷುಗಳೇ, ಯಾರು ಧಮ್ಮವನ್ನು ಅತಿನಿಷ್ಠೆಯಿಂದ ಅಭ್ಯಸಿಸುತ್ತಿರುತ್ತಾರೋ ಅವರು ವಯಸ್ಸಿನಲ್ಲಿ ಅತಿ ಕಿರಿಯರಾದರೂ ಅತೀಂದ್ರಿಯ ಬಲಗಳನ್ನು ಸಾಧಿಸಬಲ್ಲರು.

dhammapada/bhikkuvagga/25.11/vakkali

ಶ್ರದ್ಧಾವಂತನು ಶಾಂತತೆಯನ್ನು ಸಾಧಿಸುವನು
"ಬುದ್ಧರ ಶಾಸನದಲ್ಲಿ ಅಪಾರ ಶ್ರದ್ಧೆಯು
ಹಾಗು ಪರಮ ಪ್ರಸನ್ನತೆಯನ್ನು ಹೊಂದಿರುವ ಭಿಕ್ಷುವು
ಸಂಖಾರಗಳ ಉಪಶಮನದಿಂದ ಉಂಟಾಗುವ ಸುಖ ಮತ್ತು
ಪರಮ ಶಾಂತತೆ ಸ್ಥಿತಿಯನ್ನು ಪ್ರಾಪ್ತಿಮಾಡುವನು."        (381)

ಗಾಥ ಪ್ರಸಂಗ 25:11
ಪರಮ ಶ್ರದ್ಧಾವಂತ ಭಕ್ತ ವಕ್ಕಲಿ

            ವಕ್ಕಲಿಯು ಶ್ರಾವಸ್ಥಿಯ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದನು. ಆತನು ಯುವಕನಾಗಿದ್ದಾಗ ಒಮ್ಮೆ ಆತನು ಭಗವಾನರನ್ನು ಕಂಡನು. ಆತನು ಭಗವಾನರ 32 ಮಹಾಪುರುಷ ಲಕ್ಷಣಗಳಿರುವ ಮತ್ತು 108 ಸುಲಕ್ಷಣಭರಿತ, ಚಿನ್ನದ ಕಾಂತಿಯುತವಾದ ಪರಮ ತೇಜಸ್ಸುಭರಿತ ಅವರ ಶರೀರ ಹಾಗು ಮುಖವನ್ನು ನೋಡಿದ ಆತನು ಆನಂದಭರಿತನಾದನು. ಇಲ್ಲಿಯವರೆಗೆ ಅವರನ್ನೇ ಹುಡುಕುತ್ತಿದ್ದನೋ ಎಂದು ಭಾಸವಾಯಿತು. ಅವರನ್ನು ನೋಡಿದಷ್ಟೂ ಅತೃಪ್ತನಾದನು, "ಅವರನ್ನು ನಾನು ಸದಾ ನೋಡುತ್ತಲೇ ಇರಬೇಕು. ಆದ್ದರಿಂದ ನಾನು ಭಿಕ್ಷುವಾಗುವೆ" ಎಂದು ಆತನು ಲೌಕಿಕ ಜೀವನದಿಂದ ನಿವೃತ್ತನಾಗಿ ಭಿಕ್ಷುವಾದನು. ಆದರೆ ಭಿಕ್ಷುವಾಗಿಯೂ ಸಹಾ ಆತನು ಸದಾ ಬುದ್ಧ ಭಗವಾನರ ರೂಪ ಆಸ್ವಾದನೆಯಲ್ಲಿ ಕಾಲಕಳೆದನು ಹೊರತು, ಯಾವುದೇ ಸತ್ಯವನ್ನು ನೆನಪಿಡಲಿಲ್ಲ. ಹಾಗೆಯೇ ಧ್ಯಾನವನ್ನು ಮಾಡಲಿಲ್ಲ. ಸದಾಕಾಲ ಭಗವಾನರನ್ನು ದಶರ್ಿಸುವುದು, ಅವರಿಲ್ಲದ ವೇಳೆ ಅವರ ರೂಪವನ್ನೇ ಕಲ್ಪಿಸುವುದು ಹೀಗೆಯೇ ಮಾಡುತ್ತಿದ್ದನು. ಹೀಗೆ ಆತನು ಆತನ ಇಡೀ ಸಮಯವೆಲ್ಲಾ ಭಗವಾನರನ್ನು ದಿಟ್ಟಿಸುವುದೇ ಆಯಿತು. ಆದರೆ ಭಗವಾನರು ಆತನ ಅಪಕ್ವತೆ ಕಂಡು ಆಗಲೇ ಏನನ್ನೂ ನುಡಿಯದೇ ಮೌನವಾಗಿದ್ದರು. ಆದರೆ ಒಂದುದಿನ ಅವರಿಗೆ ಈತನಿಗೆ ಪಕ್ವತೆಗೆ ಬಂದಿರುವನೆಂದು ತಿಳಿಯಿತು. ಆಗ ಆತನಿಗೆ ಹೀಗೆ ಹೇಳಿದರು: "ವಕ್ಕಲಿ, ನನ್ನ ಶರೀರವೆಂದು ಕರೆಯಲ್ಪಡುವ ಈ ಕಲ್ಮಶರಾಶಿಯನ್ನು ದಿಟ್ಟಿಸುವುದರಿಂದಾಗಿ ಏನು ಲಾಭವಿದೆ? ವಕ್ಕಲಿ ಯಾರು ಬೋಧಿಯನ್ನು (ಧಮ್ಮವನ್ನು) ಅರಿಯುವರೋ, ಅವರು ನನ್ನನ್ನು ಅರಿಯುವರು." ಹೀಗೆ ಆತನಿಗೆ ತಿದ್ದಿದರು.
            ಆದರೂ ಸಹಾ ವಕ್ಕಲಿಗೆ ಅವರ ಹೊರತಾಗಿ ಕ್ಷಣವೂ ಆತನಿಂದ ಇರಲಾಗುತ್ತಿರಲಿಲ್ಲ. ಆಗ ಭಗವಾನರು ಆತನನ್ನು ತಿದ್ದಲು ಇನ್ನೊಂದು ಉಪಾಯ ಮಾಡಿದರು. "ಈತನಿಗೆ ಆಘಾತ ನೀಡದೆ ಅರಿವನ್ನು ನೀಡಲಾಗುವುದಿಲ್ಲ." ಅದೇ ಸಮಯದಲ್ಲಿ ವರ್ಷವಾಸವು ಆರಂಭವಾಯಿತು. ಆಗ ಭಗವಾನರು ರಾಜಗೃಹದಲ್ಲಿ ವರ್ಷವಾಸ ಕಳೆಯಲು ನಿರ್ಧರಿಸಿದರು. ಹಾಗೂ ಇದನ್ನೇ ಸದಾವಕಾಶವಾಗಿ ತೆಗೆದುಕೊಂಡು ಆತನಿಗೆ ತಿದ್ದಲು ನಿರ್ಧರಿಸಿದರು. ಅವರನ್ನು ಹಿಂಬಾಲಿಸಿ ಬರಲು ಸಿದ್ಧನಾಗಿದ್ದ ಆತನಿಗೆ ಭಗವಾನರು "ಹಿಂತಿರುಗು ವಕ್ಕಲಿ" ಎಂದು ಆಜ್ಞೆ ನೀಡಿದರು. ಆಗ ವಕ್ಕಲಿಗೆ ಮೂರು ತಿಂಗಳು ಕಳೆಯುವುದೇ ಪರಮ ಕಠಿಣವಾಯಿತು. ಆಗ ಆತನು ಈ ರೀತಿ ಯೋಚಿಸಿದನು: "ಓಹ್, ದಶಬಲಧಾರಿಗಳಾದ ಭಗವಾನರು ನನಗೆ ಈಗ ದರ್ಶನಭಾಗ್ಯ ನೀಡಿಲ್ಲವಲ್ಲ, ಅವರೊಂದಿಗೆ ನನಗೆ ಮಾತುಕತೆಯೇ ಇಲ್ಲವಲ್ಲ! ಓಹ್, ನಾನು ಜೀವಿಸಿ ಲಾಭವೇನು? ನಾನು ಈ ಗೃದ್ಧಕುಟ ಪರ್ವತದ ಮೇಲಿಂದ ಬಿದ್ದುಬಿಡುತ್ತೇನೆ" ಹೀಗಾಗಿ ಆತನು ಪರ್ವತದ ಮೇಲೆ ಹತ್ತಿದನು.
            ಆಗ ಭಗವಾನರಿಗೆ ಆತನು ತೀವ್ರ ಹತಾಶೆಗೆ ಗುರಿಯಾಗಿರುವುದು ತಿಳಿಯಿತು: "ನಾನು ಈತನಿಗೆ ಈಗ ಕಾಣಿಸದೆ ಹೋದರೆ ಮಾರ್ಗಫಲ ಪಡೆಯುವ ಮುನ್ನವೇ ಈತನು ಶರೀರವನ್ನು ನಾಶಗೊಳಿಸಿಕೊಳ್ಳುತ್ತಾನೆ'. ತಕ್ಷಣ ಭಗವಾನರು ಆತನ ಮುಂದೆ ಪ್ರತ್ಯಕ್ಷರಾದರು. ಭಗವಾನರನ್ನು ಕಂಡಕೂಡಲೇ ಆತನು ವಿಯೋಗ ದುಃಖ, ಹತಾಶೆ, ಶೋಕಗಳೆಲ್ಲಾ ಕ್ಷಣಮಾತ್ರದಲ್ಲಿ ಮಾಯವಾದವು. ಬರ ಭೂಮಿಗೆ ಪ್ರವಾಹವೂ ಮಳೆಯು ಏಕಕಾಲದಲ್ಲಿ ಲಭಿಸುವಂತೆ ಆತನಲ್ಲಿ ಅಪಾರ ಆನಂದ, ಪ್ರಸನ್ನತೆಗಳು ಉಕ್ಕಿಹರಿದವು.
            "ಓಹ್, ದಶಬಲಧಾರಿಗಳು ನನಗೆ ದರ್ಶನವಿತ್ತರು, ನಾನು ಅವರನ್ನು ನೋಡುತ್ತಿದ್ದೇನೆ. ಅವರು ಬಾ ಎಂದು ಕರೆಯುತ್ತಾರೆ. ನನ್ನೊಂದಿಗೆ ಮಾತನಾಡಿಸುತ್ತಿದ್ದಾರೆ" ಎಂದು ಯೋಚಿಸಿದನು.

            ಆಗ ಆತನು ಗೃದ್ಧಕೂಟ ಪರ್ವತದ ತುತ್ತತುದಿಗೇರಿದ್ದನು. ಭಗವಾನರು ಆತನಿಗೆ "ಬಾ ವಕ್ಕಲಿ" ಎಂದು ಕರೆದರು. ಭಗವಾನರು ಗಾಳಿಯಲ್ಲಿ ನಿಂತಿದ್ದರು. ವಕ್ಕಲಿ ಮುಂದೆ ನಡೆದರೆ, ಆತನು ಬೆಟ್ಟದ ಕಂದಕ, ಕಣಿವೆಗೆ ಬೀಳುವಂತೆ ಇತ್ತು. ಅಲ್ಲಿ ಯಾವ ಹಾದಿಯೂ ಇರಲಿಲ್ಲ. ಆದರೆ ವಕ್ಕಲಿಗೆ ಅದ್ಯಾವ ಪರಿವೆಯೂ ಇರಲಿಲ್ಲ. ಭಗವಾನರನ್ನು ದಶರ್ಿಸುತ್ತಾ ಆತನು ಮುಂದೆ ನಡೆದನು. ಅದ್ಭುತ, ಆಶ್ಚರ್ಯ. ಆತನು ಕೆಳಗೆ ಬೀಳಲಿಲ್ಲ. ಭೂಮಿಯ ಮೇಲೆ ನಡೆದಂತಾಯಿತು. ಆತನು ಭಗವಾನರತ್ತ ಬರುತ್ತಿದ್ದನು. ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು. ಆಗ ಆತನ ಆಕಾಶದಲ್ಲಿಯೇ ಆ ಗಾಥೆಯ ಅರ್ಥವನ್ನು ಆಳವಾಗಿ ಅರಿಯುತ್ತ ಮುಂದೆ ಸಾಗಿದನು. ಆಗ ಆತನಿಗೆ ಸಂಖಾರಗಳ ಉಪಶಮನದ ಮಹತ್ತತೆ ಅರಿತನು. ಆಗ ಆತನು ಆ ಅದ್ವಿತೀಯ ಶ್ರದ್ಧೆಯ ಆನಂದವನ್ನು ಮೀರಿ ಅರಹತ್ವವನ್ನು ಪ್ರಾಪ್ತಿಮಾಡಿದನು. ಜೊತೆಗೆ ಅಭಿಜ್ಞಾ ಬಲಗಳನ್ನು ಪಡೆದನು. ಆತನು ಭಗವಾನರನ್ನು ಪ್ರಶಂಸಿಸಿ ಗಾಳಿಯಲ್ಲಿಯೇ ನಿಧಾನವಾಗಿ ಇಳಿಯುತ್ತ, ಭಗವಾನರ ಸಮ್ಮುಖದಲ್ಲಿ ನಿಂತನು. ಇನ್ನೊಂದು ಸಂದರ್ಭದಲ್ಲಿ ಭಗವಾನರು ತಮ್ಮಲ್ಲಿ ಅತ್ಯಂತ ಶ್ರದ್ಧೆ ಹೊಂದಿದ ಭಿಕ್ಷುಗಳಲ್ಲಿ ಅಗ್ರಗಣ್ಯನು ವಕ್ಕಲಿಯೇ ಎಂದು ಸ್ಪಷ್ಟಪಡಿಸಿದರು.

dhammapada/bhikkuvagga/25.10/nangalakulabhikku

ತನಗೆ ತಾನೇ ರಕ್ಷಕ (ಶಿಲ್ಪಿ)
"ನಿನ್ನಿಂದಲೇ ನಿನ್ನನ್ನು ಖಂಡಿಸಿಕೋ,
ನಿನ್ನಿಂದಲೇ ನಿನ್ನನ್ನು ಪರೀಕ್ಷಿಸಿಕೋ,
ಹೀಗೆ ಸ್ವ-ರಕ್ಷಿತನಾಗಿ, ಸ್ಮೃತಿಯಿಂದ (ಜಾಗರೂಕತೆಯಿಂದ)
ಓ ಭಿಕ್ಷು ಸುಖವಾಗಿ ಜೀವಿಸು.       (379)

"ತನಗೆ ತಾನೇ ನಾಥ (ಒಡೆಯ/ಪ್ರಭು)
ತನಗೆ ತಾನೇ ಗತಿ (ಶರಣು / ರಕ್ಷಕ)
ಆದ್ದರಿಂದ ನಿನ್ನನ್ನು ಹೇಗೆ ವಾಣಿಜನು (ವ್ಯಾಪಾರಿ)
ಅಶ್ವವನ್ನು ನಿಯಂತ್ರಿಸುವನೋ ಹಾಗೇ
ನಿಯಂತ್ರಿಸಿಕೋ (ಸಂಯಮಿತನಾಗು)."        (380)

ಗಾಥ ಪ್ರಸಂಗ 25:10
ನಂಗಲಕುಲ ಭಿಕ್ಷುವಿನ ಸ್ವಯಂ ಶಿಕ್ಷಣ

            ಒಬ್ಬ ಬಡವನಿದ್ದನು. ಆತನು ಪರರಲ್ಲಿ ಕೆಲಸಮಾಡಿ ತನ್ನ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದನು. ಆತನು ನೇಗಿಲನ್ನು ಹೊರುತ್ತಾ ಸಿಂಹದ ಚಿಂದಿ ಬಟ್ಟೆಯಲ್ಲಿರುವುದನ್ನು ಕಂಡ ಭಿಕ್ಷುವೊಬ್ಬನು ಆತನಿಗೆ ಹೀಗೆ ಸಲಹೆ ನೀಡಿದನು: "ಈ ರೀತಿ ಜೀವನವನ್ನೇ ನಡೆಸುವಾಗ ಭಿಕ್ಷುವೇಕೆ ಆಗಬಾರದು."
            "ಭಂತೆ, ನನಗೆ ಭಿಕ್ಷುವನ್ನಾಗಿ ಯಾರುತಾನೇ ಮಾಡಿಯಾರು?"
            "ನಾನೇ ನಿನಗೆ ಭಿಕ್ಷುವನ್ನಾಗಿಸುವೆ, ಆದರೆ ನೀನು ಇಚ್ಛಿಸಿದರೆ ಮಾತ್ರ."
            "ಹಾಗಾದರೆ ಸರಿ ಭಂತೆ, ನಾನು ಒಪ್ಪಿರುವೆ."
            ಆಗ ಆ ಭಿಕ್ಷುವು ತಾನೇ ಕೈಯಾರೆ ಆತನಿಗೆ ಸ್ನಾನಮಾಡಿಸಿ, ಭಿಕ್ಷುವಸ್ತ್ರ ನೀಡಿ, ಜೇತವನಕ್ಕೆ ಕರೆದೊಯ್ದು ದೀಕ್ಷೆ ನೀಡಿಸಿದನು. ನಂತರ ಆತನ ಹಳೇ ವಸ್ತ್ರ ಹಾಗು ನೇಗಿಲನ್ನು ವಿಹಾರದ ಗಡಿಯ ಬಳಿಯಲ್ಲಿರುವ ವೃಕ್ಷಕ್ಕೆ ನೇತುಹಾಕಿದನು. ಅಲ್ಲಿಂದ ಆತನಿಗೆ ನಂಗಲಕುಲ ಥೇರನೆಂದು ಕರೆಯಲಾರಂಭಿಸಿದರು (ನೇಗಿಲ ಭಿಕ್ಷು.)

            ಕೆಲಕಾಲ ಹೀಗೆ ಜೀವಿಸಿದ ನಂತರ ಆತನಿಗೆ ಶ್ರೀಮಂತರ ಉಡುಗೊರೆಗಳನ್ನು ಕಂಡು ಪ್ರಾಪಂಚಿಕ ಜೀವನದತ್ತ ಒಲವು ಹೆಚ್ಚಾಗಿ, ಭಿಕ್ಷುಜೀವನದೊಂದಿಗೆ ಅಸಂತೃಪ್ತನಾಗುತ್ತಿದ್ದನು.
            ಆಗ ಆತನು ಪ್ರಾಪಂಚಿಕನಾಗಲು ವೃಕ್ಷದ ಬಳಿಗೆ ಬಂದು, ಆಗ ಪುನಃ ಈ ರೀತಿ ಪರೀಕ್ಷಿಸಿಕೊಳ್ಳುತ್ತಿದ್ದನು. ಸ್ವ-ಖಂಡನೆ ಮಾಡಿಕೊಳ್ಳುತ್ತಿದ್ದನು: "ಓಹ್ ನಾಚಿಕೆಗೇಡು, ಲಜ್ಜಾಹೀನನೇ, ನೀವು ಪುನಃ ಈ ಹಳೆಯ ಚಿಂದಿವಸ್ತ್ರಕ್ಕೆ ಆಸೆಬಿದ್ದೆಯಾ? ಪುನಃ ಆ ನೇಗಿಲಿನ ಕಷ್ಟದ ಬದುಕಿಗೆ, ಪ್ರಾಪಂಚಿಕತೆಯ ಪಾಪದ ಜೀವನಕ್ಕೆ ಹೋಗುತ್ತಿರುವೆಯಾ?" ಆಗ ಆತನು ಪುನಃ ಜಾಗ್ರತನಾಗಿ ಧಮ್ಮಜೀವನಕ್ಕೆ ಸ್ಥಿರನಾಗಿ ಹಿಂತಿರುಗುತ್ತಿದ್ದನು. ಇದೇರೀತಿ ಆತನು ಮನಸ್ಸು ಚಂಚಲವಾದಾಗೆಲ್ಲಾ ಆ ಮರದ ಬಳಿಗೆ ಬಂದು ನಂತರ ಸ್ವಯಂ ಖಂಡಿಸಿಕೊಳ್ಳುತ್ತಾ ಪುನಃ ಸ್ಥಿರಚಿತ್ತದವನಾಗಿ ಹಿಂತಿರುಗುತ್ತಿದ್ದನು. ಇದೇರೀತಿ ಹಲವಾರುಬಾರಿ ನಡೆಯಿತು.
            ಕೆಲವು ಭಿಕ್ಷುಗಳಿಗೆ ಆತನೇಕೆ ಆ ಮರದ ಬುಡದ ಬಳಿ ಆಗಾಗ್ಗೆ ಹೋಗುವನು ಎಂದು ಕುತೂಹಲ ತಡೆಯಲಾರದೆ ಆತನಿಗೆ ಹೀಗೆ ಕೇಳಿದರು: "ಸೋದರ, ನಂಗಲಕುಲ, ಅಲ್ಲಿಗೇಕೆ ಹೋಗಿದ್ದೆ".
            "ನನ್ನ ಗುರುಗಳನ್ನು ಕಾಣಲು ಹೋಗಿದ್ದೆನು" ಎಂದು ಉತ್ತರಿಸಿ ಸುಮ್ಮನಾಗುತ್ತಿದ್ದನು. ಕೊನೆಗೊಮ್ಮೆ ದೃಢಸಾಧನೆಯಿಂದ ಆತನು ಅರಹಂತನೇ ಆಗಿಬಿಟ್ಟನು. ಹೀಗಾಗಿ ಆತನು ಮರದ ಬಳಿ ಹೋಗುವುದನ್ನು ನಿಲ್ಲಿಸಿಬಿಟ್ಟನು. ಆತನು ಆ ಮರದ ಬಳಿಗೆ ಹೋಗದಿರುವುದನ್ನು ಗಮನಿಸಿ ಕೆಲ ಭಿಕ್ಷುಗಳು ಆತನಿಗೆ ಹೀಗೆ ಕೇಳಿದರು: "ಸೋದರ, ಈಗ ಆ ಮರದ ಬಳಿ ಹೋಗುತ್ತಿಲ್ಲವೇಕೆ? ಏತಕ್ಕಾಗಿ ನಿನ್ನ ಗುರುಗಳನ್ನು ನೋಡಲು ನಿಲ್ಲಿಸಿರುವೆ?"
            "ಸೋದರರೇ, ನಾನು ಪ್ರಾಪಂಚಿಕ ಆಮಿಷಗಳನ್ನು ಹೊಂದಿರುವಾಗ, ನಾನು ಹಾಗೇ ಬೇಟಿ ನೀಡುತ್ತಿದ್ದೆನು. ಆದರೆ ಈಗ ನನ್ನ ಹಾಗು ಪ್ರಪಂಚದ ನಡುವೆ ಯಾವ ಸಂಪರ್ಕವೇ ಇಲ್ಲವಾಗಿದೆ. ಆದ್ದರಿಂದಾಗಿ ನಾನು ಅಲ್ಲಿಗೂ, ಎಲ್ಲಿಗೂ ಹೋಗುತ್ತಿಲ್ಲ" ಎಂದನು.

            ಭಿಕ್ಷುಗಳಿಗೆ ಆತನ ಮಾತಿನಲ್ಲಿ ನಂಬಿಕೆ ಉಂಟಾಗದೆ ಈತನು ಸುಳ್ಳುಗಾರನೆಂದು ಭಾವಿಸಿ, ಆತನನ್ನು ಭಗವಾನರ ಬಳಿಗೆ ಕರೆತಂದರು. ನಂತರ ದೂರು ನೀಡಿದರು. ಆದರೆ ಭಗವಾನರಿಗೆ ಆತನ ಬಗ್ಗೆ ಎಲ್ಲವೂ ತಿಳಿದಿರುವುದರಿಂದಾಗಿ, ಹೀಗೆ ನುಡಿದರು: "ಭಿಕ್ಷುಗಳೇ, ಆತನು ನಿಜವನ್ನೇ ನುಡಿಯುತ್ತಿದ್ದಾನೆ. ಆತನು ಅರಹಂತನಾಗಿದ್ದಾನೆ" ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/bhikkuvagga/25.9/shantakaya

ಶಾಂತ ಸಮಾಹಿತನೇ ಭಿಕ್ಷು
"ಯಾರು ಕಾಯದ ಚಟುವಟಿಕೆಗಳಲ್ಲಿ ಶಾಂತನು
ಯಾರು ವಾಚದ ಚಟುವಟಿಕೆಗಳಲ್ಲಿ ಶಾಂತನು
ಯಾರು ಮನದ ಚಟುವಟಿಕೆಗಳಲ್ಲಿ ಶಾಂತನಾಗಿ
ಸುಸಮಾಹಿತನಾಗಿರುವನೋ, ಲೋಕದ ಆಮಿಷಗಳನ್ನು
ವಾಂತಿ ಮಾಡಿರುವನೋ (ತ್ಯಜಿಸಿರುವನೋ) ಅಂತಹ
ಭಿಕ್ಷುವಿಗೆ ಮಾತ್ರ ಉಪಶಾಂತನೆಂದು ಕರೆಯುವರು."   (378)
ಗಾಥ ಪ್ರಸಂಗ 25:9
ಸರ್ವದರಲ್ಲೂ ಶಾಂತತೆ ಸಾಧಿಸಿದ ಭಿಕ್ಷು ಶಾಂತಕಾಯ

            ಶಾಂತಕಾಯ ಎಂಬ ಹೆಸರಿನ ಭಿಕ್ಷುವು ಇದ್ದನು. ಆತನ ಹಿಂದಿನ ಜನ್ಮವು ಸಿಂಹದ್ದಾಗಿತ್ತು. ಹೀಗಾಗಿ ಆ ಜನ್ಮದ ಬಹಳಷ್ಟು ಗುಣಗಳು ಈ ಜನ್ಮದಲ್ಲೂ ಆತನಿಗೆ ಬಂದಿದ್ದವು. ಅವು ಯಾವುವೆಂದರೆ: ಆತನು ಅತಿಅಲ್ಪ ಚಲಿಸುತ್ತಿದ್ದನು. ಆತನ ಚಲನೆಗಳು ಸಿಂಹದಂತೆಯೇ ಶಾಂತವಾಗಿ ನಿಧಾನವಾಗಿರುತ್ತಿದ್ದವು. ಸ್ಥಿರವಾಗಿರುತ್ತಿದ್ದವು. ಆತನು ಸರ್ವತ್ರವಾಗಿ ಸದಾ ಶಾಂತನಾಗಿ ಸ್ಮೃತಿವಂತನಾಗಿರುತ್ತಿದ್ದನು. ಎಂದಿಗೂ ತನ್ನ ಬಾಹುಗಳಾಗಲಿ ಅಥವಾ ಕಾಲುಗಳಾಗಲಿ ಎಂದಿಗೂ ಚಾಚುತ್ತಿರಲಿಲ್ಲ, ಎಂದಿಗೂ ಆಕಳಿಸು ತ್ತಿರಲಿಲ್ಲ. ಸದಾ ಗಂಭೀರವಾಗಿರುತ್ತಿದ್ದನು. ಈ ಜನ್ಮದಲ್ಲೂ ಆತನು ಸಿಂಹಣಿಯ ಗರ್ಭದಿಂದ ಹುಟ್ಟಿರಬಹುದೇ ಎಂಬ ಭ್ರಮೆಯನ್ನು ಆತನನ್ನು ವೀಕ್ಷಿಸುವವರಿಗೆ ಉಂಟಾಗುತ್ತಿತ್ತು.
*  *  *
            ಸಿಂಹಿಣಿಯಲ್ಲಿ ಒಂದು ವಿಶೇಷವಿರುತ್ತದೆ. ಅದೇನೆಂದರೆ ಅದು ಒಮ್ಮೆ ಬೇಟೆಯಾಡಿ ಒಳ್ಳೆಯ ಚಿನ್ನದ ಅಥವಾ ರತ್ನದ ಗುಹೆಯಲ್ಲಿ ಹೋಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು. ಏಳು ದಿನವೂ ಸಹಾ ಅದು ಒಂದೇ ಭಂಗಿಯಲ್ಲಿರುತ್ತಿತ್ತು. ಅದು ಮಲಗಿದ ಸ್ಥಳದ ವಿನಹ ಎಲ್ಲಿಗೂ ಯಾವರೀತಿಯು ಧೂಳು ಸಹಾ ಚದುರುವುದಿಲ್ಲ. ಅದರ ಕಿವಿಯ ಬಳಿಯಾಗಲಿ, ಬಾಲದ ಬಳಿಯಾಗಲಿ, ಕಾಣಿಸಲಾರದು. ಹಾಗೊಂದುವೇಳೆ ಕಂಡಿದ್ದೇ ಆದರೆ ಅದನ್ನು ಆಲಸ್ಯವೆಂದು ಪರಿಗಣಿಸಿ ಪುನಃ ಏಳು ದಿನಗಳಕಾಲ ನಿಶ್ಚಲವಾಗಿ ಮಲಗುತ್ತಿತ್ತು. ನಂತರ ಎದ್ದು ದೇಹವನ್ನು ಚಾಚಿ ಮೂರುಬಾರಿ ಗಜರ್ಿಸಿ, ಬೇಟೆಗೆ ಹೋಗುತ್ತಿತ್ತು.
*  *  *
            ಅದರಂತೆಯೇ ಈ ಭಿಕ್ಷುವು ಸಹಾ ಅತ್ಯಲ್ಪ ಆಹಾರ ಸೇವಿಸಿ ಸದಾ ಧ್ಯಾನಾವಸ್ಥೆಯಲ್ಲಿರುತ್ತಿದ್ದನು. ಆತನ ಸರ್ವ ಭಂಗಿಗಳು ಸಮಾಹಿತವಾಗಿಯೇ ಸ್ಮೃತಿಯಿಂದಲೇ ಕೂಡಿರುತ್ತಿತ್ತು.
            ಈತನ ಈ ಬಗೆಯ ಗಾಂಭೀರ್ಯ ಕಂಡು ಭಿಕ್ಷುಗಳು ಸಹಾ ಆಕಷರ್ಿತರಾಗಿ ಭಗವಾನರಿಗೆ ಹೀಗೆ ವಿಷಯ ತಿಳಿಸಿದರು.
            "ಭಗವಾನ್, ನಾವು ಶಾಂತಕಾಯನಂತಹ ಭಿಕ್ಷುವನ್ನೇ ಕಂಡಿಲ್ಲ. ಆತನು ಪದ್ಮಾಸನದಲ್ಲಿ ಕುಳಿತಿರುವಾಗ ಆತನ ಇಡೀ ದೇಹ ನಿಶ್ಚಲವಾಗಿರುತ್ತದೆ. ಆತನು ಕೈಯನ್ನಾಗಲೀ ಅಥವಾ ಪಾದವನ್ನೇ ಆಗಲಿ ಚಲಿಸುವುದಿಲ್ಲ. ಆತನು ಆಕಳಿಸಿದ್ದೇ ನಾವು ನೋಡಿಲ್ಲ, ಅಥವಾ ಕೈಕಾಲುಗಳನ್ನು ಮುರಿಯುವುದಿಲ್ಲ (ಚಾಚುವುದಿಲ್ಲ)."
            ಆಗ ಭಗವಾನರು ಈ ಮೇಲಿನ ಗಾಥೆ ನುಡಿದು ಹೀಗೆ ಹೇಳಿದರು: "ಭಿಕ್ಷುಗಳೇ, ಶಾಂತಕಾಯನಂತೆ ನೀವೂ ಸಹಾ ಕಾಯದಲ್ಲಿ, ವಾಚಾದಲ್ಲಿ ಮತ್ತು ಮನಸ್ಸಿನಲ್ಲಿ ಸದಾ ಸ್ಮೃತಿವಂತರಾಗಿ ಸಮಾಹಿತರಾಗಿ ಶಾಂತರಾಗಿರಬೇಕು."


dhammapada/bhikkuvagga/25.8/jasmineflowermeditation

ಮಲ್ಲಿಗೆಯಂತೆ ರಾಗ ದ್ವೇಷವ ಉದುರಿಸು
"ಹೇಗೆ ಮಲ್ಲಿಗೆಯ ಬಳ್ಳಿಯು ತನ್ನ ಬಾಡಿದ
ಪುಷ್ಪಗಳನ್ನು ಉದುರಿಸಿಬಿಡುವುದೋ
ಹಾಗೆಯೇ ರಾಗ ಮತ್ತು ದ್ವೇಷಗಳನ್ನು
ತೊರೆದುಬಿಡು ಓ ಭಿಕ್ಷು."             (377)

ಗಾಥ ಪ್ರಸಂಗ 25:8
ಮಲ್ಲಿಗೆ ಹೂಗಳ ಧ್ಯಾನದಿಂದ ಅರಹತ್ವತೆ

            ಶ್ರಾವಸ್ತಿಯ ಭಿಕ್ಷುಗಳ ಗುಂಪೊಂದು ಭಗವಾನರಿಂದ ಧ್ಯಾನದ ವಿಷಯ ಸ್ವೀಕರಿಸಿ ಅಡವಿಗೆ ಹೋಗಿ ಧ್ಯಾನಿಸಲು ಹೋದರು. ಅವರು ಹೀಗೆ ಧ್ಯಾನಿಸುತ್ತಿರುವಾಗ ಧ್ಯಾನದ ಮಧ್ಯದಲ್ಲಿ ಅವರು ಒಂದು ಬಾಹ್ಯ ವಿಷಯವನ್ನು ಗಮನಿಸಿದ್ದರು. ಅದೇನೆಂದರೆ ಮಲ್ಲಿಗೆ ಹೂಗಳು ಮುಂಜಾನೆ ವಿಕಸಿತವಾದರೆ, ಸಂಜೆಯಾಗುತ್ತಿದ್ದಂತೆ ಬಳ್ಳಿಯಿಂದ ಉದುರಿ ಬೀಳುತ್ತಿದ್ದವು. ಈ ವಿಷಯವು ಅವರಲ್ಲಿ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿತ್ತು. ಅವರಲ್ಲಿ ಈ ಬಗೆಯ ಸ್ಫೂತರ್ಿದಾಯಕ ದೃಢ ನಿಧರ್ಾರವು ಹೊರಹೊಮ್ಮಿತು: "ಓ ಮಲ್ಲಿಗೆ ಹೂಗಳೆ, ನೀವು ನಿಮ್ಮ ಬಳ್ಳಿಯಿಂದ ನೆಲಕ್ಕೆ ಬೀಳುವ ಮುನ್ನವೇ ನಾವು ರಾಗ-ದ್ವೇಷ ಮತ್ತು ಮೋಹಗಳಿಂದ ಮುಕ್ತರಾಗುವೆವು. ಓ ಬಳ್ಳಿಗಳೇ, ಹೇಗೆ ನೀವು ಮಲ್ಲಿಗೆಗಳನ್ನು ಉದುರಿಸುವಿರೋ, ಹಾಗೂ ನಾವು ಸಹಾ ರಾಗ ಮತ್ತು ದ್ವೇಷಗಳನ್ನು ಬಿಟ್ಟುಬಿಡುವೆವು. ಅವನ್ನು ಉದುರಿಸಿಬಿಡುವೆವು." ಹೀಗೆ ಅವರು ಶಕ್ತಿವರ್ಧಕ ಪಾನಿಯ ಸೇವಿಸಿದವರಂತೆ ಅಗಾಧವಾಗಿ ಶ್ರಮಿಸಿ ಉತ್ಸಾಹದಾಯಕರಾಗಿ ಧ್ಯಾನಿಸುತ್ತಿದ್ದರು.

            ಅವರು ಪಕ್ವಸ್ಥಿತಿಯಲ್ಲಿರುವುದನ್ನು ಕಂಡು ಭಗವಾನರು ಗಂಧಕುಟಿಯಿಂದಲೇ ತಮ್ಮ ಪ್ರತಿಬಿಂಬವನ್ನು ಸೃಷ್ಟಿಸಿ, ಅವರ ಮುಂದೆ ಪ್ರತ್ಯಕ್ಷರಾಗಿ ಹೀಗೆ ನುಡಿದರು: "ಓ ಭಿಕ್ಷುಗಳೇ, ಹೇಗೆ ಹೂಗಳು ಬಳ್ಳಿಯಿಂದ ಮುಕ್ತವಾಗುವವೋ ಹಾಗೇ ನೀವು ಸಹಾ ಯಾವುದಕ್ಕೂ ಅಂಟದೆ ಸ್ವತಂತ್ರವಾಗಿ, ಜನನ ಮರಣಗಳ ಈ ಲೋಕದಿಂದ ಮುಕ್ತರಾಗಿರಿ" ಎಂದು ಮೇಲಿನ ಗಾಥೆಯನ್ನು ನುಡಿದರು. ಆ ಗಾಥೆಯಲ್ಲಿನ ಆಳ ಅರ್ಥ ಅರಿತ ಆ ಎಲ್ಲಾ ಭಿಕ್ಷುಗಳು ಅರಹಂತರಾದರು.

dhammapada/bhikkuvagga/25.7/upasika

ಧ್ಯಾನ ಮತ್ತು ಪ್ರಜ್ಞೆಯಿಂದಲೇ ನಿಬ್ಬಾಣ
"ಯಾವ ಭಿಕ್ಷುವು ಮೆತ್ತಾ ಧ್ಯಾನದಲ್ಲಿ ವಿಹರಿಸುವನೋ,
ಬುದ್ಧ ಶಾಸನದಲ್ಲಿ ಪ್ರಸನ್ನನಾಗಿರುವನೋ, ಅಂತಹವನು
ಸಂಖಾರಗಳ ಉಪಶಮನದ (ಸಂಖಾರಗಳ ಉದಯವನ್ನು ತಡೆದು)
ಸುಖ ಮತ್ತು ಶಾಂತಿ ಸ್ಥಿತಿಯನ್ನು (ನಿಬ್ಬಾಣ) ಪ್ರಾಪ್ತಿಮಾಡುವನು."     (368)

"ಓ ಭಿಕ್ಷುವೇ, ನಿನ್ನ ದೋಣಿಯನ್ನು (ಚಿತ್ತವನ್ನ) ಬರಿದಾಗಿಸು,
ಬರಿದಾಗಿರುವುದೇ ವೇಗವಾಗಿ ಚಲಿಸುವುದು,
ಕತ್ತರಿಸು ರಾಗವ ಮತ್ತು ದ್ವೇಷವ ಹಾಗಾದಾಗಲೇ
ನಿಬ್ಬಾಣಕ್ಕೆ ಹೋಗಬಹುದು."       (369)

"ಐದನ್ನು ಕತ್ತರಿಸು (ಸಂಯೋಜನಗಳು),
ಐದನ್ನು (ಉಳಿದ ಸಂಯೋಜನ) ತ್ಯಾಗ ಮಾಡು,
ಇದಲ್ಲದೆ ಐದನ್ನು ಪಂಚಬಲಗಳನ್ನು ವೃದ್ಧಿಗೊಳಿಸು,
ಯಾವ ಭಿಕ್ಷುವು ಐದು ಸಂಕೋಲೆಗಳಿಂದ
ಬಿಡುಗಡೆ ಹೊಂದಿರುವನೋ ಆತನನ್ನು
ಪ್ರವಾಹ ದಾಟಿದವನು ಎನ್ನುತ್ತಾರೆ."              (370)

"ಧ್ಯಾನಿಯಾಗು ಭಿಕ್ಷು, ಅಜಾಗರೂಕನಾಗಬೇಡ,
ನಿನ್ನ ಚಿತ್ತವು ಕಾಮಸುಖಗಳ ಹಿಂದೆ ಸುಳಿದಾಡದಿರಲಿ,
ಅಜಾಗರೂಕನಾಗಿ, ಕಾದು ಕೆಂಪಗಿರುವ ಕಬ್ಬಿಣದ ಗುಂಡು
ನುಂಗಬೇಡ, ಅದು ಸುಡುತ್ತಿರುವಾಗ 'ಇದು ದುಃಖ'
ಎಂದು ಪ್ರಲಾಪಿಸಬೇಡ."            (371)

"ಪ್ರಜ್ಞೆಯಿಲ್ಲದವನಿಗೆ ಧ್ಯಾನವಿಲ್ಲ,
ಧ್ಯಾನಿಯಲ್ಲದವನಿಗೆ ಪ್ರಜ್ಞಾವಿಲ್ಲ,
ಆದರೆ ಯಾರಲ್ಲಿ ಧ್ಯಾನ ಮತ್ತು ಪ್ರಜ್ಞೆಗಳೆರಡು ಇವೆಯೋ
ಆತನು ನಿಬ್ಬಾಣಕ್ಕೆ ಸನಿಹವಾಗಿದ್ದಾನೆ."         (372)

"ಯಾವ ಭಿಕ್ಷುವು (ಜನಶಬ್ದಗಳಿಲ್ಲದ) ಶೂನ್ಯಗಾರ (ಏಕಾಂತ)
ಸ್ಥಳದಲ್ಲಿ ನೆಲಸಿಹನೋ, ಯಾರು ಚಿತ್ತವನ್ನು
ಶಾಂತಗೊಳಿಸಿಹನೋ, ಸಮ್ಮಾ (ಯೋಗ್ಯ)
ಧಮ್ಮವನ್ನು ಸ್ಪಷ್ಟವಾಗಿ ಕಾಣುತ್ತಿರುವನೋ
ಅಂತಹವನು ಮನುಷ್ಯಾತೀತ ಆನಂದ ಅನುಭವಿಸುತ್ತಾನೆ."            (373)

"ಎಲ್ಲೆಲ್ಲಿ ಒಬ್ಬನು ಸಮ್ಯಕ್ ಸ್ಮೃತಿಯಿಂದ
ಖಂಧಗಳ (ದೇಹ ಮತ್ತು ಮನಸ್ಸುಗಳ) ಉದಯ ಮತ್ತು
ಅಳಿಯುವಿಕೆಯನ್ನು ಪ್ರತಿಬಿಂಬಿಸುತ್ತಿರುವನೋ
ಆಗ ಆತನು ಆನಂದ ಮತ್ತು ಸುಖವನ್ನು
ಅನುಭವಿಸುತ್ತಾನೆ, ಜ್ಞಾನಿಗಳಿಗೆ
ಪ್ರತಿಬಿಂಬಿಸುವಿಕೆಯು ಅಮರತ್ವವಾಗಿದೆ."     (374)

"ಪ್ರಾಜ್ಞನಾದ ಭಿಕ್ಷುವಿಗೆ ಇಲ್ಲಿ
ಉತ್ತಮವಾದ ಆರಂಭವಾಗಿದೆ, ಹೇಗೆಂದರೆ
ಇಂದ್ರಿಯ ಸಂಯಮ, ಸಂತೃಪ್ತಿ, ಪಾತಿಮೋಕ್ಖದಂತೆ
ಸಂಯಮಶೀಲತೆ, ಪರಿಶುದ್ಧ ಜೀವನ ಹೊಂದಿರುವ
ಕಲ್ಯಾಣ ಮಿತ್ರರೊಂದಿಗೆ ಸ್ನೇಹ ಇವೆಲ್ಲವೂ ಸಿಗುವುದು."  (375)

"ಪರಿಶುದ್ಧ ಜೀವನ ಹಾಗು ಯತ್ನಶೀಲತೆ ಹೊಂದಿದಂತಹ
ಆತನು ಕಲ್ಯಾಣಕಾರಕವಾದ ಮಿತ್ರರೊಂದಿಗೆ ಬೆರೆಯಲಿ
ಆತನು ಸೌಜನ್ಯದಿಂದಿರಲಿ, ತನ್ನನ್ನು ಸದಾ ತಿದ್ದುವವನಾಗಲಿ,
ಆಗ ಲಭಿಸುವ ಮಹತ್ ಆನಂದದಿಂದ ಈ
ದುಃಖ ಅಂತ್ಯ ಮಾಡಲಿ."             (376)
ಗಾಥ ಪ್ರಸಂಗ 25:7
ಉಪಾಸಿಕೆಯಿಂದ ಪರಿವರ್ತನೆಯಾದ ಕಳ್ಳರು

            ಒಂದಾನೊಂದು ಕಾಲದಲ್ಲಿ ಪೂಜ್ಯ ಮಹಾಕಚ್ಚಾನರು ಅವಂತಿ ರಾಜ್ಯದಲ್ಲಿ ಕುರಾರಘಾರ ನಗರ ಸಮೀಪ ಬೆಟ್ಟದ ಮೇಲೆ ವಾಸಿಸುತ್ತಿದ್ದರು. ಒಮ್ಮೆ ಉಪಾಸಕ ಸೋಣ ಕೂಟಿಕಣ್ಣನು ಪೂಜ್ಯರ ಬೋಧನೆ ಆಲಿಸಿ, ಭಿಕ್ಷುವಾಗುವ ಬಯಕೆಯನ್ನು ವ್ಯಕ್ತಪಡಿಸಿದರು. ಆದರೆ ಪೂಜ್ಯರು ಈ ರೀತಿ ಎಚ್ಚರಿಕೆ ನೀಡಿದರು. "ಸೋನ, ಒಪ್ಪತ್ತು ಊಟ, ಏಕಾಂಗಿಯಾಗಿ ವಾಸ, ಪರಿಶುದ್ಧ ಸಂಯಮಯುತ ಜೀವನ ನಿನಗೆ ಅತ್ಯಂತ ಕಷ್ಟಕರವಾಗಿರುತ್ತದೆ."
            ಆದರೆ ಸೋಣನು ಭಿಕ್ಷುವಾಗುವ ನಿಧರ್ಾರದಲ್ಲಿ ದೃಢವಾಗಿದ್ದನು. ಅವನು ಉಪಸಂಪದ ಪಡೆದು ಮೂರು ವರ್ಷ ಅದೇ ರಾಜ್ಯದಲ್ಲಿ ನೆಲೆಸಿ ನಂತರ ಭಿಕ್ಷುವಾದನು. ನಂತರ ಭಗವಾನರನ್ನು ಕಾಣುವ ಬಯಕೆಯಿಂದಾಗಿ ಗುರುವಿನ ಅಪ್ಪಣೆ ಪಡೆದು ಶ್ರಾವಸ್ತಿಯ ಜೇತವನಕ್ಕೆ ಬಂದನು. ಅಲ್ಲಿ ಭಗವಾನರೊಂದಿಗೆ ಕುಶಲ ಮಾತುಕತೆಯ ನಂತರ ಗಂಧಕುಟಿಯಲ್ಲಿ ಭಗವಾನರೊಂದಿಗೆ ಇರಲು ಅಪ್ಪಣೆ ಪಡೆದನು.

            ಸೋಣ ತೆರೆದ ಆಕಾಶದಲ್ಲಿ ಹೆಚ್ಚು ರಾತ್ರಿ ಕಳೆದನು. ನಂತರ ಗಂಧಕುಟಿಯಲ್ಲಿ ನಿದ್ರಿಸಿದನು. ನಂತರ ಮುಂಜಾನೆ ಭಗವಾನರಿಗೆ ಅಟ್ಠಕವಗ್ಗವನ್ನು ಪೂರ್ಣವಾಗಿ ಒಪ್ಪಿಸಿದನು.  ಭಗವಾನರು ಸಹಾ ಆತನ ಪಠಣಕ್ಕೆ ಸಾಧು ಭಿಕ್ಷು, ಸಾಧು! ಎಂದು ಹೊಗಳಿದರು. ಭಗವಾನರು ಸ್ತುತಿಸುವುದನ್ನು ಕಂಡು ದೇವತೆಗಳು, ಭೂಮ್ಮಿಕ ದೇವತೆಗಳು, ನಾಗರು, ಸುಪರ್ಣರು ಹಾಗೆಯೇ ಬ್ರಹ್ಮರು ಸಹಾ ಆತನನ್ನು ಸ್ತುತಿಸುತ್ತಿದ್ದರು.
            ಅದೇ ಸಮಯದಲ್ಲಿ ಸೋಣನ ತಾಯಿಯಾದ ಉಪಾಸಿಕೆಯ ಮನೆಯಲ್ಲೂ ಅಲ್ಲೇ ವಾಸವಾಗಿದ್ದಂತಹ ದೇವತೆಯೊಬ್ಬಳು ಸಹಾ ಸ್ತುತಿಸಿದಳು. ಆಗ ಉಪಾಸಿಕೆಯು "ಯಾರದು ಸ್ತುತಿಸುತ್ತಿರುವುದು?" ಎಂದು ಕೇಳಿದಳು. ಆಗ ದೇವತೆಯು "ನಾನು ನಿನ್ನ ಸೋದರಿ" ಎಂದಿತು. "ಯಾರು ನೀನು?" "ನಾನು ದೇವತೆ." "ಎಂದಿಗೂ ಸ್ತುತಿಸದ ನೀನು ಇಂದೇಕೆ ಸ್ತುತಿಸುತ್ತಿರುವೆ?" "ನಿನ್ನ ಮಗ ಸೋಣನಿಗೆ ಸ್ತುತಿಸುತ್ತಿರುವೆ." "ನನ್ನ ಮಗ ಅಂತಹ ಯಾವ ಕಾರ್ಯ ಸಾಧಿಸಿದ್ದಾನೆ?"

            "ಇಂದು ನಿನ್ನ ಮಗ ಭಗವಾನರ ಗಂಧಕುಟಿಯಲ್ಲಿ ಅಟ್ಟಕವರ್ಗವೆಂಬ ಧಮ್ಮವನ್ನು ಪಠಿಸಿದಾಗ ಭಗವಾನರು ಆತನನ್ನು ಸ್ತುತಿಸಿದರು. ಆಗ ದೇವತೆಗಳು, ಬ್ರಹ್ಮರೆಲ್ಲರೂ ಆತನಿಗೆ ಸ್ತುತಿಸಿದರು" ಎಂದಾಗ ಉಪಾಸಿಕೆ ಹೀಗೆ ಕೇಳಿದಳು: "ಏನು ನನ್ನ ಮಗ ಭಗವಾನರಿಗೆ ಧಮ್ಮೋಪದೇಶ ನೀಡಿದನೇ? ಅಥವಾ ಬುದ್ಧರು ನನ್ನ ಮಗನಿಗೆ ಧಮ್ಮೋಪದೇಶ ನೀಡಿದರೆ?" "ಇಲ್ಲ ನಿನ್ನ ಮಗನೇ ಭಗವಾನರಿಗೆ ಉಪದೇಶ ನೀಡಿದನು."
            ಈ ನುಡಿಗಳನ್ನು ಕೇಳುತ್ತಿದ್ದಂತೆಯೇ ಉಪಾಸಿಕೆಯಲ್ಲಿ ಐದು ಬಗೆಯ ಆನಂದಗಳು ಉಂಟಾಗಿ, ಆ ಆನಂದವು ಆಕೆಯ ಇಡೀ ಭೌತಿಕ ಹಾಗು ಮಾನಸಿಕ ಶರೀರದಾದ್ಯಂತ ಹರಡಿತು. ಆಗ ಆಕೆಯಲ್ಲಿ ಇಂತಹ ಯೋಚನೆಯುಂಟಾಯಿತು. "ನನ್ನ ಮಗ ಅಂತಹ ಸಮರ್ಥಶಾಲಿಯಾದನೆ? ಭಗವಾನರೊಂದಿಗೆ ಗಂಧಕುಟಿಯಲ್ಲಿ ಇರುವಂತಹ ಸೌಭಾಗ್ಯ ಪಡೆದನೇ? ಆತನು ಭಗವಾನರಿಗೆ ಧಮ್ಮ ಉಪದೇಶ ಮಾಡಬಲ್ಲವನಾದರೆ, ನನಗೂ ಸಹಾ ಬೋಧಿಸಬಲ್ಲ, ಆತನು ಊರಿಗೆ ಬಂದಾಗ, ಧಮ್ಮ ಬೋಧಿಸಲು ಸಕಲ ವ್ಯವಸ್ಥೆಯನ್ನು ಮಾಡಿಸುತ್ತೇನೆ, ಹಾಗು ಧಮ್ಮವನ್ನು ಆಲಿಸುವೆನು."

*  *  *
            ಇತ್ತ ಸೋಣನು ಭಗವಾನರಿಂದ ಸ್ತುತಿಸಿಕೊಂಡ ನಂತರ ಹೀಗೆ ಯೋಚಿಸಿದನು: 'ಈಗ ನನ್ನ ಗುರುವಿಗೆ ಸಂದೇಶ ನೀಡಲು ಸಕಾಲವಾಗಿದೆ' ಎಂದುಕೊಂಡು ಭಗವಾನರಿಂದ  ಐದು ವರಗಳನ್ನು ಪಡೆದನು; ವರಗಳು ಹೀಗಿದ್ದವು:
            ಗಡಿನಾಡಿನಲ್ಲಿರುವ ಐದು ಭಿಕ್ಷುಗಳಿಗೆ ಸಂಘಕ್ಕೆ ಸೇರಲು ಅನುಮತಿ. ಅವರಲ್ಲಿ ಒಬ್ಬನು ವಿನಯಪಠಣದಲ್ಲಿ ನಿಷ್ಣಾತನಾಗಿದ್ದನು. ನಂತರ ಸೋಣನು ಭಗವಾನರಿಂದ ಅಪ್ಪಣೆ ಪಡೆದು ತನ್ನ ಗುರುವಿನ ಬಳಿಗೆ ಹಿಂತಿರುಗಿದನು
.
            ಮರುದಿನ ತನ್ನ ಗುರುಗಳೊಂದಿಗೆ ಸೋಣನು ಆಹಾರಕ್ಕೆ ಹೊರಟನು. ಗುರು ಪೂಜ್ಯ ಕಚ್ಚಾನರು ಆತನನ್ನು ಆತನ ತಾಯಿಯ ಮನೆಗೆ ಕರೆದೊಯ್ದರು. ತಾಯಿಗೆ ತನ್ನ ಮಗನನ್ನು ಕಂಡು ಅತೀವ ಆನಂದವಾಯಿತು. ಆಕೆಯ ಆತನೊಂದಿಗೆ "ಭಗವಾನರಿಗೆ ಉಪದೇಶ ನೀಡಿದ ಧಮ್ಮದ ಸುದ್ದಿಯು ನಿಜವೇ" ಎಂದು ಪ್ರಶ್ನಿಸಿದಳು.
            "ಅಮ್ಮಾ ನಿಮಗೆ ಯಾರು ತಿಳಿಸಿದ್ದು?"
            "ನಮ್ಮ ಮನೆಯಲ್ಲಿರುವ ಸ್ತ್ರೀದೇವತೆ." ಆಗ ಆ ದೇವತೆಯು ಸಹಾ ತಾನೇ ತಿಳಿಸಿದ್ದು ಎಂದು ಒಪ್ಪಿದಳು.
            ನಂತರ ಉಪಾಸಿಕೆಯು ತನ್ನ ಮಗನೊಂದಿಗೆ ತಾನು ಸಹಾ ಆತನ ಉಪದೇಶ ಆಲಿಸಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದಳು. ನಂತರ ಅದಕ್ಕೆ ಸಿದ್ಧತೆ ನಡೆಸಿದಳು. ನಂತರ ದಾಸಿಯೊಬ್ಬಳಿಗೆ ಮನೆ ಕಾವಲಿಗೆ ಬಿಟ್ಟು ತಾನು ಧಮ್ಮವನ್ನು ಆಲಿಸಲು ಹೊರಟಳು.

            ನಗರದ ಮಧ್ಯೆ ದೊಡ್ಡ ಗುಡಾರ ನಿಮರ್ಿಸಿ, ಅಲಂಕೃತ ಆಸನ ಸಿದ್ಧಪಡಿಸಿದ್ದಳು. ಅದರ ಮೇಲೆ ಕುಳಿತು ಸೊಣನು ಧಮ್ಮಪ್ರವಚನ ಆರಂಭಿಸಿದನು.
*  *  *
            ಆ ಉಪಾಸಿಕೆಯ ಮನೆಯಲ್ಲಿ ಕೊಳ್ಳೆ ಹೊಡೆಯಲು 900 ಕಳ್ಳರು ಹಲವಾರು ವಾರಗಳಿಂದ ಹೊಂಚುಹಾಕುತ್ತಿದ್ದರು. ಆದರೆ ಆ ಮನೆಯು ಅತ್ಯಂತ ಸುಸಜ್ಜಿತವಾಗಿತ್ತು. ಕಳ್ಳಕಾರರು ಬಾರದಂತೆ ಹಲವಾರು ವಿಧಾನಗಳನ್ನು ಅಳವಡಿಸಲಾಗಿತ್ತು. ಆ ಮನೆಯು ಏಳು ಗೋಡೆಗಳಿಂದ ಆವೃತವಾಗಿತ್ತು. ಅದಕ್ಕೆ ಪ್ರಬಲವಾದ ಏಳು ಬಾಗಿಲುಗಳಿದ್ದವು. ಒಳಗೆ ಹಲವಾರು ಕ್ರೂರ ನಾಯಿಗಳು ಇದ್ದವು. ಅದರ ಛಾವಣಿಯು ಸಹಾ ನೀರು ತೊಟ್ಟಿಕ್ಕುವಂತೆ ಮಾಡಲಾಗಿತ್ತು. ಅಲ್ಲಲ್ಲಿ ಕಂದಕಗಳಿದ್ದು, ಅವುಗಳಲ್ಲಿ ಸೀಸವು ತುಂಬಿಸಲಾಗಿತ್ತು. ಹಗಲು ಹೊತ್ತಿನಲ್ಲಿ ಸೂರ್ಯನ ಬೆಳಕಿನಿಂದಾಗಿ ಅಂಟಾಗಿರುತ್ತಿತ್ತು ಹಾಗು ರಾತ್ರಿಯ ವೇಳೆ ಗಡುಸಾಗಿರುತ್ತಿತ್ತು. ಕಂದಕಕ್ಕೆ ಸಮೀಪವಾಗಿ ಕಾವಲುಗಾರರು ಇರುತ್ತಿದ್ದರು. ಹೀಗೆ ಹಲವಾರು ರೀತಿಯ ರಕ್ಷಣಾ ವ್ಯೂಹವನ್ನು ಆ ಉಪಾಸಿಕೆ ಮಾಡಿಸಿದ್ದಳು.

            ಈ ರೀತಿಯ ಮನೆಯ ರಕ್ಷಣೆ ಮತ್ತು ಉಪಾಸಿಕೆಯ ಇರುವಿಕೆಯಿಂದಾಗಿ ಕಳ್ಳರಿಗೆ ಒಳ ಪ್ರವೇಶಿಸಲಾಗಲಿಲ್ಲ. ಆದರೆ ಆ ನಿದರ್ಿಷ್ಟ ದಿನದಂದು ಆಕೆಯು ಮನೆಯಲ್ಲಿ ಇಲ್ಲದಿರುವಾಗ, ಅವರು ಕಂದಕವನ್ನು ಅಗೆದು ಕಬ್ಬಿಣದ ಗೂಟವನ್ನು ಮುರಿದು ಅವರು ಒಳಬರಲು ಯಶಸ್ವಿಯಾದರು. ಒಳಹೋದ ನಂತರ ನಾಯಕನನ್ನು ಉಪಾಸಿಕೆಯನ್ನು ಗಮನಿಸಲು ಕಳುಹಿಸಿದರು. ಆಗ ಹೀಗೂ ಹೇಳಿದರು: "ಆಕೆ ನಾವು ಮನೆ ಪ್ರವೇಶಿಸಿದ್ದು ಅರಿತಿದ್ದೇ ಆದರೆ ಆಗ ಹಿಂತಿರುಗೋಣ, ನಂತರ ಆಕೆಯನ್ನು ಕೊಂದುಬಿಡೋಣ" ಎಂದು ನಿಶ್ಚಯಿಸಿದರು
.
            ಆಗ ಕಳ್ಳರ ನಾಯಕನು ಉಪಾಸಿಕೆಯ ಹಿಂದೆಯೇ ಇದ್ದನು. ಇತ್ತ ಕಳ್ಳರು ಮನೆ ಪ್ರವೇಶಿಸಿದ ನಂತರ ಬೆಳಕನ್ನು ಹಚ್ಚಿದರು. ನಂತರ ತಾಮ್ರದ ನಾಣ್ಯಗಳಿದ್ದ ಕೋಣೆಯ ಬಾಗಿಲನ್ನು ತೆರೆದರು. ಆಗ ದಾಸಿಯು ಕಳ್ಳರನ್ನು ನೋಡಿಬಿಟ್ಟಳು. ತಕ್ಷಣ ಆಕೆಯು ಉಪಾಸಿಕೆಯು ಇರುವಲ್ಲಿಗೆ ಓಡಿಬಂದು ಹೀಗೆ ಹೇಳಿದಳು: "ಅಮ್ಮಾವರೇ, ಬಹಳಷ್ಟು ಕಳ್ಳರು ನಿಮ್ಮ ಮನೆಗೆ ನುಗ್ಗಿದ್ದಾರೆ, ಅಷ್ಟೇ ಅಲ್ಲ, ತಾಮ್ರದ ನಾಣ್ಯಗಳ ಕೋಣೆಗೂ ನುಗ್ಗಿದ್ದಾರೆ."
         
   ಆದರೆ ಉಪಾಸಿಕೆ ಉತ್ತರಿಸಿದ್ದು ಹೀಗೆ: "ಓಹ್, ಆ ಕಳ್ಳರು ನೋಡಿದಂತಹ ಎಲ್ಲಾ ತಾಮ್ರದ ನಾಣ್ಯಗಳನ್ನು ಬೇಕಾದರೆ ತೆಗೆದುಕೊಂಡು ಹೋಗಲಿ, ನಾನು ಧಮ್ಮವನ್ನು ಆಲಿಸುತ್ತಿದ್ದೇನೆ, ಇಲ್ಲಿ ಬಾಧಿಸಬೇಡ, ಮನೆಗೆ ಹೋಗು" ಎಂದಳು.
            ಇತ್ತ ಕಳ್ಳರು ತಾಮ್ರದ ನಾಣ್ಯಗಳನ್ನು ದೋಚಿ ನಂತರ ಬೆಳ್ಳಿಯ ನಾಣ್ಯಗಳನ್ನು ಇಟ್ಟಿದ್ದ ಕೋಣೆಯನ್ನು ಒಡೆದರು. ಆಗ ಆ ದಾಸಿಯು ಪುನಃ ಉಪಾಸಿಕೆಯ ಬಳಿ ಬಂದು ಈ ವಿಷಯವೆಲ್ಲಾ ತಿಳಿಸಿದಳು. ಆದರೆ ಉಪಾಸಿಕೆಯು ಹೀಗೆಯೇ ಹೇಳಿದಳು: "ಕಳ್ಳರು ತಮಗೆ ಬೇಕಾಗುವುದನ್ನು ತೆಗೆದುಕೊಂಡು ಹೋಗಲಿ, ನನಗೆ ತೊಂದರೆ ನೀಡಬೇಡ, ನನಗೆ ಧಮ್ಮವನ್ನು ಆಲಿಸಲು ಬಿಡು" ಎಂದುಬಿಟ್ಟಳು.
            ನಂತರ ಕಳ್ಳರು ಚಿನ್ನದ ನಾಣ್ಯಗಳಿದ್ದ ಕೋಣೆಯ ಬಾಗಿಲನ್ನು ಒಡೆದರು. ಆಗಲೂ ದಾಸಿಯು ಉಪಾಸಿಕೆಗೆ ಸುದ್ದಿ ತಿಳಿಸಿಯೂ ಸಹಾ ಹಿಂದಿನ ಉತ್ತರವನ್ನೇ ಪಡೆದಳು ಹಾಗು "ಮತ್ತೆ ಇಲ್ಲಿ ಬರಲೇಬೇಡ" ಎಂಬ ಕಠಿಣವಾದ ಆಜ್ಞೆಯನ್ನು ಪಡೆದಳು.
            ಇವರ ಸಂಭಾಷಣೆ ಕೇಳುತ್ತಿದ್ದಂತಹ ಕಳ್ಳರ ನಾಯಕನಿಗೆ ಪರಮ ಆಶ್ಚರ್ಯವಾಯಿತು. ಆಗ ಆತನಿಗೆ "ಐಶ್ವರ್ಯಕ್ಕಿಂತ ಅದೆಷ್ಟು ಪಟ್ಟು ಉತ್ತಮವಾದುದೇ ಧಮ್ಮವೆಂದು" ಅರ್ಥವಾಗಿ ಹೋಯಿತು. ಆಗ ಆತನು ಹೀಗೆ ಚಿಂತಿಸಿದನು: "ನಾವೇನಾದರೂ ಈ ಸ್ತ್ರೀಯ ಐಶ್ವರ್ಯವನ್ನು ಕದ್ದರೆ ಖಂಡಿತವಾಗಿ ಇಂದ್ರನ ವಜ್ರಾಯುಧದ ಸಿಡಿಲು ನಮ್ಮ ತಲೆಗೆ ಬಿದ್ದು ನಾವು ನಾಶವಾಗುವೆವು". ತಕ್ಷಣ ಆತನು ತನ್ನ ಕಳ್ಳರ ಬಳಿಗೆ ಅವರಿರುವೆಡೆಗೆ ಹೋದನು. ನಂತರ ಅವರಿಗೆ ಹೀಗೆ ಹೇಳಿದನು: "ತ್ವರಿತವಾಗಿ ಆ ಉಪಾಸಿಕೆಯ ಐಶ್ವರ್ಯವೆಲ್ಲ ಪುನಃ ಅಲ್ಲೇ ಇಟ್ಟುಬಿಡಿರಿ. ಅದಕ್ಕಿಂತ ಪರಮ ಐಶ್ವರ್ಯ ಧಮ್ಮವು ನನಗೆ ಸಿಕ್ಕಿದೆ." ಆತನ ಮಾತನ್ನು ಆಲಿಸಿದ ಕಳ್ಳರು ತಾವು ಕದ್ದ ಸ್ಥಳಗಳಲ್ಲೇ ಆ ಎಲ್ಲಾ ಐಶ್ವರ್ಯಗಳನ್ನು ಪುನಃ ಇಟ್ಟುಬಿಟ್ಟರು. ಅದಕ್ಕಾಗಿಯೇ ಬುದ್ಧರು ಹೀಗೆ ಹೇಳುವುದು. ಧಮ್ಮದ ಹಾದಿಯಲ್ಲಿ ನಡೆಯುವವರಿಗೆ ಧಮ್ಮವೇ ರಕ್ಷಿಸುವುದು.
            "ಧಮ್ಮದ ಹಾದಿಯಲ್ಲಿರುವವರು ಸುಖಿಗಳಾಗಿರುತ್ತಾರೆ,
            ಇದೇ ಸಮ್ಯಕ್ ಜೀವನದ ಪರಮ ಲಾಭವಾಗಿದೆ.
            ಯಾರು ಸತ್ಯನಾನುಸಾರವಾಗಿ ಜೀವಿಸುವರೋ
            ಅವರೆಂದಿಗೂ ದುಃಖದಲ್ಲಿ ಬೀಳಲಾರರು."
            ಇತ್ತ ಕಳ್ಳರು ಪುನಃ ಗುಡಾರದಲ್ಲಿ ಹೋಗಿ ಧಮ್ಮವನ್ನು ಆಲಿಸಿದರು. ಆಗ ಅವರಿಗೆ ತಮ್ಮ ಕಳ್ಳತನಕ್ಕೆ ಕಾರಣವು ತಮ್ಮ ದುರಾಸೆ, ಲೋಭವೇ ಕಾರಣ ಎಂದು ತಿಳಿದುಹೋಯಿತು. ಹಾಗೆಯೇ ಇದರ ಪರಿಣಾಮದಿಂದಾಗಿ ತಾವು ಪುನಃ ಬಡತನ, ದೌಭರ್ಾಗ್ಯ, ದುಃಖದ ಗತಿಗಳನ್ನು ಪಡೆಯಬೇಕಾಗುತ್ತದೆ ಎಂದೆಲ್ಲಾ ಅವರಿಗೆ ಅರಿವಾಯಿತು. ಪೂಜ್ಯ ಸೊಣರು ಧಮ್ಮೋಪದೇಶವನ್ನು ಮುಗಿಸಿದಾಗ ಅರುಣೋದಯವು ಆರಂಭವಾಯಿತು. ಅವರು ತಮ್ಮ ಧಮ್ಮ ಪೀಠದಿಂದ ಕೆಳಗೆ ಇಳಿದರು. ಆಗ ಕಳ್ಳರ ನಾಯಕ ಉಪಾಸಿಕೆಯ ಕಾಲಿಗೆ ಬಿದ್ದು ಹೀಗೆ ಹೇಳಿದನು: "ಆಮ್ಮಾವರೇ, ದಯವಿಟ್ಟು ಕ್ಷಮಿಸಿ."
            "ಸೋದರ ನನಗೇನೂ ಅರ್ಥವಾಗಲಿಲ್ಲ."
            "ನಾನು ನಿಮ್ಮ ಹಿಂದೆಯೇ ಇದ್ದು ತಾವು ಮನೆಗೆ ಹೋಗಲು ಸಿದ್ಧವಾಗಿದ್ದರೆ ತಮ್ಮನ್ನು ದಾರಿಯಲ್ಲಿ ಕೊಲ್ಲಲು ಸಿದ್ಧನಾಗಿದ್ದೆನು."
            "ಓಹ್, ಹಾಗಾ, ಹಾಗಾದರೆ ಕ್ಷಮಿಸುವೆನು."
            ಉಳಿದ ಕಳ್ಳರೂ ಸಹಾ ತಮ್ಮ ಕುಕೃತ್ಯ ತಿಳಿಸಿ ಅವರು ಕ್ಷಮೆಯಾಚಿಸಿದರು. ಆಕೆ ಕ್ಷಮಿಸಿದಳು, ನಂತರ ಉಪಾಸಿಕೆಯ ಬಳಿ ಹೀಗೆ ಯಾಚಿಸಿದರು: "ನಮ್ಮನ್ನು ಭಿಕ್ಷುಗಳಾಗುವಂತೆ ಅನುಮತಿ ನೀಡಿಸಿ." ಆಗ ಆಕೆಯು ತನ್ನ ಪುತ್ರನಿಗೆ ಎಲ್ಲಾ ವಿಷಯ ತಿಳಿಸಿ ಅವರನ್ನು ಸಂಘಕ್ಕೆ ಸೇರಿಸಿಕೋ ಎಂದು ಕೇಳಿಕೊಂಡಳು. ಆಗ ಪೂಜ್ಯ ಸೊಣರು ಸಹಾ ಇದಕ್ಕೆ ಒಪ್ಪಿದರು. ನಂತರ ಅವರೆಲ್ಲಾ ಕಾಷಾಯ ವಸ್ತ್ರಧಾರಿಗಳಾಗಿ ಶೀಲ ದೀಕ್ಷೆ ಸ್ವೀಕರಿಸಿ, ನಂತರ ಭಿಕ್ಷುಗಳಾದರು.
            ನಂತರ ಪ್ರತಿಯೊಬ್ಬರೂ ಧ್ಯಾನದ ವಿಷಯ ಸ್ವೀಕರಿಸಿ, ಸಮೀಪದಲ್ಲಿದ್ದ ಪರ್ವತವನ್ನು ಹತ್ತಿ, ಅಲ್ಲಿದ್ದಂತಹ ಮರಗಳ ಕೆಳಗೆ ಧ್ಯಾನಿಸಲು ಆರಂಭಿಸಿದರು.
            ಆಗ ಭಗವಾನರು ಅಲ್ಲಿಂದ 120 ಯೋಜನ ದೂರದಲ್ಲಿ ಇದ್ದ ಜೇತವನದಲ್ಲಿದ್ದರು. ಅಲ್ಲಿಂದ ಭಗವಾನರು ತಮ್ಮ ಬಿಂಬವನ್ನು ಅವರ ಮುಂದೆ ಪ್ರತ್ಯಕ್ಷಗೊಳಿಸಿ, ಈ ಗಾಥೆಗಳನ್ನು ಅವರಿಗೆ ತಿಳಿಸಿ ಪರಿಣಾಮಾತ್ಮಕ ಪರಿಣಾಮ ಉಂಟುಮಾಡಿದರು.