Friday, 4 September 2015

dhammapada/nagavagga/23.3/dhanapala

ತಾಯ್ತಂದೆಯರ ನೆನಪು
"ಧನಪಾಲನಾಮದ ಆನೆಯು ಮದವೇರಿ,
ನಿಯಂತ್ರಣ ತಪ್ಪಿತು, ನಂತರ ಕಷ್ಟಕರವಾಗಿ
ಹಿಡಿದಿಟ್ಟಾಗ ತುತ್ತು ಆಹಾರವೂ ಅದು ಸೇವಿಸಲಿಲ್ಲ,
ಅದು ಕೇವಲ ಅರಣ್ಯದಲ್ಲಿದ್ದ (ತನ್ನ ಪೋಷಕರನ್ನೇ) ಸ್ಮರಿಸುತ್ತಿತ್ತು."    (324)


ಗಾಥ ಪ್ರಸಂಗ 23:3
ಪೋಷಕ ದ್ರೋಹಿಗಳು ಮತ್ತು ಧನಪಾಲನೆಂಬ ಆದರ್ಶ ಪುತ್ರ

            ಶ್ರಾವಸ್ತಿಯ ಬ್ರಾಹ್ಮಣರ ಬಳಿ ಎಂಟು ಲಕ್ಷ ಹಣವಿತ್ತು. ಆತನಿಗೆ ನಾಲ್ವರು ಮಕ್ಕಳಿದ್ದರು. ಪ್ರತಿ ಮಗನ ಮದುವೆಯಂದು ಆತನು ಪ್ರತಿ ಮಗನಿಗೆ ಒಂದೊಂದು ಲಕ್ಷ ನೀಡಿದನು. ಹೀಗಾಗಿ ಆತನ ನಾಲ್ಕು ಲಕ್ಷ ಖಾಲಿಯಾಯಿತು. ಕಾಲನಂತರ ಆತನ ಪತ್ನಿಯು ತೀರಿಹೋದಳು. ಆಗ ಆತನ ಮಕ್ಕಳು ಆತನಿಗೆ ಚೆನ್ನಾಗಿ ನೋಡಿಕೊಂಡರು ಹಾಗು ಉಳಿದ ಹಣವನ್ನು ಆತನು ಅವರಿಗೆಯೇ ಹಂಚುವ ರೀತಿ ಪ್ರಭಾವ ಬೀರಿದರು. ಆತನು ಅವರಿಗೆ ಉಳಿದ ಹಣವನ್ನು ಮಕ್ಕಳಿಗೆ ಹಂಚಿ ಆತನು ಹಣವಿಲ್ಲದವನಾದನು.
            ನಂತರ ಆತನು ತನ್ನ ದೊಡ್ಡ ಮಗನ ಬಳಿಯಲ್ಲಿ ಉಳಿದುಕೊಂಡನು. ಕೆಲದಿನಗಳ ನಂತರ ಹಿರಿಯ ಸೊಸೆಯು ಈ ರೀತಿಯ ಚುಚ್ಚುನುಡಿ ಹೇಳಿದಳು: "ನೀವು ಹಿರಿ ಮಗನಿಗೆ ನೂರು ಅಥವಾ ಸಾವಿರವೋ ಹೆಚ್ಚಾಗಿ ಏನಾದರೂ ನೀಡಿದಿರಾ? ನಿಮಗೆ ಬೇರೆ ಮಕ್ಕಳ ಮನೆಗಳ ದಾರಿ ಗೊತ್ತಿಲ್ಲವೇ?" ಎಂದಳು.
            ಇದನ್ನು ಕೇಳಿದ ಕೂಡಲೇ ವೃದ್ಧ ಬ್ರಾಹ್ಮಣನು ಅತಿ ಕೋಪಗೊಂಡನು. ಕೂಡಲೇ ಆತನು ಹಿರಿಯ ಮಗನ ಮನೆಯನ್ನು ಬಿಟ್ಟು, ಎರಡನೆಯ ಮಗನ ಬಳಿ ವಾಸಿಸಿದನು. ಆದರೆ ಎಲ್ಲಾಕಡೆ ಅದೇರೀತಿಯ ಚುಚ್ಚುಮಾತುಗಳು ಸೊಸೆಯರಿಂದ ಬಂದವು. ಹೀಗಾಗಿ ಆ ವೃದ್ಧನು ಅನಾಥನಾದನು. ಕೈಯಲ್ಲಿ ಆಸರೆ ಗೋಲು ಮತ್ತು ಪಾತ್ರೆ ಹಿಡಿದುಕೊಂಡು ಆತನು ಭಗವಾನರಲ್ಲಿ ಬುದ್ಧಿವಾದ ಮತ್ತು ರಕ್ಷಣೆಗೆ ಬಂದನು.
            ವಿಹಾರದಲ್ಲಿ ಆ ಬ್ರಾಹ್ಮಣನು ಭಗವಾನರಿಗೆ ತನ್ನ ಮಕ್ಕಳು ನಡೆಸಿಕೊಂಡ ರೀತಿಯೆಲ್ಲಾ ತಿಳಿಸಿ, ಭಗವಾನರಿಂದ ಸಹಾಯ ಯಾಚಿಸಿದನು. ಆಗ ಭಗವಾನರು ಆತನಿಗೆ ಉಪಾಯವೊಂದನ್ನು ತಿಳಿಸಿದರು. ಅದರಂತೆಯೇ ಆತನು ಕೆಲವು ವಾಕ್ಯಗಳನ್ನು ಕೇಳಿ ನೆನಪಿನಲ್ಲಿಟ್ಟುಕೊಂಡನು. ಭಗವಾನರು ಆತನಿಗೆ ಆ ವಾಕ್ಯಗಳನ್ನು ಜನಜಂಗುಳಿಯಲ್ಲಿ ಹೇಳುವಂತೆ ನುಡಿದರು. ಆ ಗಾಥೆಗಳ ಸಾರಾಂಶ ಹೀಗಿತ್ತು: "ನನ್ನ ನಾಲ್ಕು ಮೂರ್ಖ ಮಕ್ಕಳು ನರಭಕ್ಷಕರಾಗಿದ್ದಾರೆ, ಅವರು ತಂದೆ ಅಪ್ಪಾ ಎಂದು ಬಾಯಲ್ಲೇ ಹೇಳುತ್ತಾರೆ, ಹೃದಯದಿಂದಲ್ಲ, ಅವರು ವಂಚಕರು. ಸಮಯಸಾಧಕರು, ಪತ್ನಿಯರ ಮಾತು ಕೇಳಿ ನನ್ನನ್ನು ಹೊರದಬ್ಬಿದರು. ಹೀಗಾಗಿ ನಾನು ಭಿಕ್ಷೆ ಬೇಡುತ್ತಿದ್ದೇನೆ. ನನಗೆ ನನ್ನ ಮಕ್ಕಳ ಸೇವೆಗಿಂತ ಹೆಚ್ಚಾಗಿ ಈ ಊರುಗೋಲೆ ಹೆಚ್ಚಿನ ಸೇವೆ ನೀಡಿದೆ". ಇದನ್ನು ಆ ವೃದ್ಧ ಬ್ರಾಹ್ಮಣನು ಜನಭರಿತ ಪ್ರದೇಶಗಳಲ್ಲಿ ನುಡಿಯತೊಡಗಿದರು. ಇದನ್ನು ಕೇಳಿದ ಆ ಜನರಿಗೆ ಕೋಪವುಂಟಾಗಿ ಆತನ ಮಕ್ಕಳನ್ನು ಬೈಯ್ದರು. ಹಾಗು ತಂದೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅವರನ್ನು ಕೊಲ್ಲುವುದಾಗಿ ಹೇಳಿದರು.
            ಈಗ ಆತನ ಮಕ್ಕಳಿಗೆ ಭಯವುಂಟಾಯಿತು ಹಾಗು ಪಶ್ಚಾತ್ತಾಪವುಂಟಾಯಿತು. ತಂದೆಯ ಬಳಿ ಕ್ಷಮಾಪಣೆ ಕೇಳಿದರು. ಅಂದಿನಿಂದಲೇ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರು. ತಂದೆಯನ್ನು ಪ್ರೀತಿಯಿಂದ, ಗೌರವದಿಂದ, ಸೌಕರ್ಯಯುತವಾಗಿ ನೋಡಿಕೊಳ್ಳುವುದಾಗಿ ತಿಳಿಸಿದರು. ನಂತರ ತಮ್ಮ ತಂದೆಯನ್ನು ಮನಗೆ ಕರೆದೊಯ್ದರು ಹಾಗು ಪತ್ನಿಯರಿಗೆ ಸಹಾ ಹೀಗೆ ಎಚ್ಚರಿಕೆ ನೀಡಿದರು: "ನಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಿ, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ". ಪ್ರತಿಯೊಬ್ಬ ಮಗನು ತಂದೆಗೆ ಬಟ್ಟೆ ನೀಡಿದನು. ಹಾಗು ಪ್ರತಿದಿನವೂ ಆಹಾರವನ್ನು ತಟ್ಟೆಯಲ್ಲಿ ಕಳುಹಿಸಿದನು. ಅಂದಿನಿಂದ ಬ್ರಾಹ್ಮಣನು ಆರೋಗ್ಯವಂತನಾದನು ಹಾಗು ಸ್ವಲ್ಪ ಸ್ಥೂಲಕಾಯನು ಆದನು. ಆತನಿಗೆ ಇದೆಲ್ಲಾ ಭಗವಾನರ ಉಪಾಯ ಕೌಶಲ್ಯದಿಂದ ಆಯಿತೆಂದು ತಿಳಿದಿತ್ತು. ಹಾಗು ಭಗವಾನರಿಗೆ ತನಗೆ ಬರುವ ನಾಲ್ಕು ತಟ್ಟೆಗಳ ಆಹಾರದಲ್ಲಿ  ಎರಡು ತಟ್ಟೆ ನೀಡಿದನು. ದಿನವೂ ಹೀಗೆಯೇ ಭಗವಾನರಿಗೂ ಆಹಾರ ಕಳುಹಿಸಿ ಎಂದು ಆತನು ಮಕ್ಕಳಿಗೆ ಆಜ್ಞಾಪಿಸಿದನು.
            ಒಂದುದಿನ ಆತನ ಹಿರಿಯ ಮಗನು ಭಗವಾನರಿಗೆ ತನ್ನ ಮನೆಗೆ ಔತಣಕ್ಕೆ ಆಹ್ವಾನಿಸಿದನು, ಭಗವಾನರು ಸಮ್ಮತಿಸಿದರು. ಆಹಾರ ಸೇವನೆಯ ನಂತರ ಭಗವಾನರು ತಂದೆ-ತಾಯಿಯರಿಗೆ ಮಾಡುವ ಪಾಲನೆಯಿಂದ ಸಿಗುವ ಪರಮ ಲಾಭಗಳನ್ನು ನುಡಿದರು. ಆಗ ಭಗವಾನರು ಅದಕ್ಕೆ ಸಂಬಂಧಿಸಿದಂತೆ ಒಂದು ಉದಾಹರಣೆಯನ್ನು ನೀಡಿದರು. ಅದೇ ಧನಪಲನೆಂಬ ಆನೆಯ ಜಾತಕ (ಹಿಂದಿನ ಕಥೆ). ಆಗ ಆ ಜಾತಕದಲ್ಲಿ ಧನಪಾಲ ಆನೆಯು ತನ್ನ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿತ್ತು. ಆದರೆ ಒಂದುದಿನ ಆ ಆನೆಗೆ ಹಿಡಿಯಲಾಯಿತು, ನಂತರ ಅದಕ್ಕೆ ಬೇಕಾದ ಸ್ವಾದಿಷ್ಟ ಆಹಾರ ನೀಡಿದರೂ ಅದು ಒಂದು ತುತ್ತು ಸಹಾ ತಿನ್ನದೆ ಕೇವಲ ತನ್ನ ತಂದೆ-ತಾಯಿಗಳನ್ನೇ ನೆನೆಯತೊಡಗಿತು. ಭಗವಾನರಿಂದ ಈ ಗಾಥೆಯು ನುಡಿಯಲ್ಪಟ್ಟಿತು.

            ಆ ಸುತ್ತದ ಅಂತ್ಯದಲ್ಲಿ ಆ ವೃದ್ಧ ಬ್ರಾಹ್ಮಣನು, ಆತನ ಮಕ್ಕಳು ಹಾಗು ಸೊಸೆಯರು ಈ ಎಲ್ಲರು ಸೋತಪತ್ತಿ ಫಲ ಪ್ರಾಪ್ತಿಮಾಡಿದರು. 

No comments:

Post a Comment