Monday, 7 September 2015

dhammapada/tanhavagga/24.5/khematheri

ರಾಗಾಸಕ್ತರು ಜೇಡದಂತೆ ತಮ್ಮ ಬಲೆಯಲ್ಲಿ ತಾವೇ ಸಿಲುಕಿರುತ್ತಾರೆ
"ಯಾರು ರಾಗದಿಂದ ಉನ್ಮತ್ತರಾಗಿರುವರೋ
ಅವರು ಪ್ರವಾಹದಲ್ಲಿ ಬೀಳುವರು, ಹೇಗೆಂದರೆ
ಜೇಡ ತಾನೇ ಹೆಣೆದ ಬಲೆಯಲ್ಲಿ ಬಿದ್ದಂತೆ,
ಆದರೆ ಧೀಮಂತರು ಇದನ್ನು ಸಹಾ ಕತ್ತರಿಸಿ
ಸರ್ವ ದುಃಖಗಳನ್ನು ತ್ಯಜಿಸಿ, ದೃಢವಾಗಿ ಸಾಗುತ್ತಾರೆ."   (347)

ಗಾಥ ಪ್ರಸಂಗ 24:5
ಖೇಮಾ ಥೇರಿಯ ಚರಿತೆ

            ರಾಣಿ ಖೇಮಾಳು ರಾಜ ಬಿಂಬಸಾರನ ಪಟ್ಟದರಾಣಿಯಾಗಿದ್ದಳು. ಆಕೆಯು ಪರಮ ಸುಂದರಿಯಾಗಿದ್ದಳು. ಹಾಗೆಯೇ ಅತಿಗರ್ವದಿಂದಲೂ ಕೂಡಿದ್ದಳು, ರಾಜನಿಗೆ ಆಕೆಯು ಬುದ್ಧರಲ್ಲಿ ಶರಣು ಹೊಂದಲೆಂದು, ವೇಲುವನದ ವಿಹಾರಕ್ಕೆ ಹೋಗಲೆಂದು ಬಯಸುತ್ತಿದ್ದರು. ಆದರೆ ಭಗವಾನರು ಸೌಂದರ್ಯವನ್ನು ಧಿಕ್ಕರಿಸುತ್ತಾರೆಂದು, ಅಂತಹ ಅಶುಭದ ಮಾತನಾಡುವರೆಂದು ಆಕೆಯು ಬುದ್ಧರನ್ನು ನೋಡಲು ಸದಾ ತಡೆ ಹಾಕುತ್ತಿದ್ದಳು. ರಾಜನಿಗೆ ಆಕೆಯ ಈ ಮನೋಭಾವವನ್ನು ಅರ್ಥಮಾಡಿಕೊಂಡನು. ಆಕೆಗೆ ಇದ್ದ ರೂಪಗರ್ವ ಎಷ್ಟೆಂದು ಸಹಾ ತಿಳಿದಿದ್ದನು. ಹೀಗಾಗಿ ಆತನೊಂದು ಉಪಾಯವನ್ನು ಮಾಡಿದನು. ಅದೆಂದರೆ, ವೇಲುವನದ ಸೌಂದರ್ಯವನ್ನು ಬಣ್ಣಿಸುವಂತೆ ಅಂತಹ ಹಾಡನ್ನೇ ಹಾಡುವಂತೆ ತನ್ನ ಕವಿಗಳಿಗೆ ತಿಳಿಸಿದನು. ಅಂಥದೊಂದು ಹಾಡನ್ನು ಕೇಳಿದ ರಾಣಿಯು ವೇಲವನಕ್ಕೆ ಹೋಗಲು ನಿರ್ಧರಿಸುತ್ತಾಳೆ.
            ರಾಣಿ ಖೇಮಾಳು ವಿಹಾರಕ್ಕೆ ಬರುವಾಗ ಭಗವಾನರು ಧಮ್ಮವನ್ನು ಪ್ರವಚಿಸುತ್ತಿದ್ದರು. ಭಗವಾನರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಅತ್ಯಂತ ಸುಂದರವಾದ ಯುವತಿಯನ್ನು ಸೃಷ್ಟಿಸಿದರು. ಆ ಯುವತಿಯು ಭಗವಾನರಿಗೆ ಬೀಸಣಿಕೆಯಿಂದ ಗಾಳಿ ಬೀಸುತ್ತಿದ್ದಳು. ಯಾವಾಗ ರಾಣಿ ಖೇಮಾಳು ಧಮ್ಮ ಸಭಾಂಗಣಕ್ಕೆ ಬಂದಳೋ, ಆಕೆಯು ಆ ಸುಂದರವಾದ ಯುವತಿಯನ್ನು ಕಂಡಳು. ಆ ಯುವತಿಯ ಸೌಂದರ್ಯಕ್ಕೆ ತನ್ನ ಸೌಂದರ್ಯದಿಂದ ತುಲನೆ ಮಾಡುತ್ತಾಳೆ. ಆಗ ಖೇಮಾಗೆ ಆ ಯುವತಿಯ ಸುಂದರತೆಗೆ ಹೋಲಿಸಿದರೆ ತನ್ನ ಸೌಂದರ್ಯ ಎನೇನೂ ಇಲ್ಲ ಎಂಬ ಅರಿವಾಗುತ್ತದೆ. ಆಕೆಯ ರೆಪ್ಪೆ ಮುಚ್ಚದೆ ಆಕೆಯ ಸೌಂದರ್ಯವನ್ನು ವೀಕ್ಷಿಸಿದಳು. ಆಗ ಭಗವಾನರು ಮತ್ತೊಂದು ತಮ್ಮ ಇಚ್ಛಾಶಕ್ತಿಯಿಂದಾಗಿ, ಆ ಯುವತಿಯ ಸೌಂದರ್ಯವು ನಿಮಿಷಗಳಲ್ಲೇ ವಯಸ್ಸು ಹೆಚ್ಚಾಗುತ್ತಿರುವಂತೆ ಮಾಡುತ್ತಾರೆ. ಹೀಗಾಗಿ ಖೇಮಾಳು ನೋಡು ನೋಡುತ್ತಿರುವಂತೆಯೆ ಆ ಯುವತಿಯು ಮಧ್ಯ ವಯಸ್ಕೆಯಾದಳು. ನಂತರ ಹಾಗೆಯೇ ವೃದ್ಧಳಾದಳು, ಕೊನೆಗೆ ಹಣ್ಣು ಹಣ್ಣು ಮುದುಕಿಯಾದಳು. ನಂತರ ಹಾಗೆಯೇ ಶವವಾದಳು. ನಂತರ ಹಾಗೆಯೇ ಆ ಶವವು ಕೊಳೆಯಲು ಆರಂಭಿಸಿ ಅದರಿಂದಾಗಿ ಹುಳುಗಳು ಬರಲಾರಂಭಿಸಿದವು. ನಂತರ ಅಸ್ತಿಪಂಜರ ಉಳಿಯಿತು.
            ಇದನ್ನೆಲ್ಲಾ ವೀಕ್ಷಿಸುತ್ತಿದ್ದಂತಹ ರಾಣಿ ಖೇಮಾಳಿಗೆ ದೇಹದ ನಿಜವಾದ ವಾಸ್ತವಿಕತೆ ತಿಳಿಯಿತು. ಆಕೆ ದೇಹವು ಸುಂದರವಲ್ಲ, ಕುರೂಪ ಅಸಹ್ಯಕರ ಎಂಬ ಜ್ಞಾನೋದಯವಾಯಿತು. ದೇಹವು ಆರೋಗ್ಯದಿಂದಲೇ ಇರುವುದಿಲ್ಲ, ಅದು ರೋಗಕ್ಕೂ ಈಡಾಗುವುದು ಎಂಬ ಜ್ಞಾನೋದಯವು ಉಂಟಾಯಿತು. ದೇಹವು ಯೌವ್ವನದಿಂದಲೇ ಇರುವುದಿಲ್ಲ, ಅದಕ್ಕೆ ಮುಪ್ಪು ಬರುವುದು ಎಂಬ ಜ್ಞಾನೋದಯ ಉಂಟಾಯಿತು. ದೇಹವು ಚಿರವಲ್ಲ, ಅದಕ್ಕೆ ಸಾವು ಬರುವುದು, ಜೀವನವು ಕ್ಷಣಿಕ, ಇಲ್ಲಿ ಯಾವುದೂ ಶಾಶ್ವತವಲ್ಲ ಎಂದೆಲ್ಲಾ ಜ್ಞಾನೋದಯವಾಗುತ್ತಾ ಇತ್ತು. ಆಗ ಭಗವಾನರು ಆಕೆಯ ಚಿತ್ತಸ್ಥಿತಿ ವೀಕ್ಷಿಸಿ, ಹೀಗೆ ನುಡಿದರು: "ಓ ಖೇಮಾ, ಗಮನವಿಟ್ಟು ಕೊಳೆಯುತ್ತಿರುವ ಶರೀರವು ಹೇಗೆ ಅಸ್ತಿಪಂಜರದೊಂದಿಗೆ ಕಟ್ಟಲ್ಪಟ್ಟಿತ್ತು, ಹೇಗೆ ಅದು ರೋಗ ಮುಪ್ಪಿಗೆ ಸಾಗುತ್ತಿತ್ತು ಅವಲೋಕಿಸು. ಈ ಶರೀರವು ಮೂರ್ಖರಿಂದ ಹೇಗೆ ಅತಿಯಾಗಿ ಪ್ರಶಂಸಿತವಾಗುವುದು ಗಮನವಿಟ್ಟು ಅವಲೋಕಿಸು. ಈ ಯುವತಿಯ ಸೌಂದರ್ಯದ ಅರ್ಹಹೀನತೆ ನೋಡುವಂತಾಗು. ಎಲ್ಲರ ಶರೀರದ ಸ್ಥಿತಿಯು ಹೀಗೆಯೇ ಇರುವುದು, ಅರಿಯುವಂತಾಗು" ಎಂದರು.

            ಅದನ್ನೆಲ್ಲಾ ಆಳಿಸುತ್ತಿದ್ದಂತೆಯೇ ಆಕೆಯು ಸೋತಪತ್ತಿ ಫಲ ಪಡೆದಳು. ನಂತರದ ಬೋಧನೆಯಿಂದ ಆಕೆ ಅರಹಂತೆಯೇ ಆದಳು. ನಂತರ ಭಿಕ್ಷುಣಿಯಾಗಲು ಅಪ್ಪಣೆ ಯಾಚಿಸಿ ಸಂಘಕ್ಕೂ ಸೇರಿದಳು. ಅಷ್ಟೇ ಅಲ್ಲ, ಆಕೆಯು ಸ್ತ್ರೀಯರಲ್ಲಿ ಭಗವಾನರ ಅಗ್ರ ಶ್ರಾವಕಿಯಾದಳು.

No comments:

Post a Comment