ಅಂಕುಶದಿಂದ
ಆನೆಯನ್ನು ನಿಗ್ರಹಿಸುವಂತೆ ಚಿತ್ತವ ನಿಗ್ರಹಿಸು
"ಈ ಹಿಂದೆ ಈ
ಚಿತ್ತವು (ಮನಸ್ಸು)
ಇಷ್ಟಬಂದಲ್ಲಿಗೆ
ಚಲಿಸಿತು, ಎಲ್ಲೆಲ್ಲಿ ಇಷ್ಟವಾಯಿತೋ
ಅಲ್ಲೆಲ್ಲಾ
ಸುಖಪೂರ್ವಕವಾಗಿ ಚಲಿಸಿತು,
ಆದರೆ ಇಂದಿನಿಂದ
(ಈಗಿನಿಂದ) ನನ್ನ ಚಿತ್ತವನ್ನು
ಮಾವುತನು ಅಂಕುಶದಿಂದ
ಆನೆಯನ್ನು
ನಿಗ್ರಹಿಸುವಂತೆ ಪ್ರಾಜ್ಞಯುತವಾಗಿ ನಿಗ್ರಹಿಸುವೆನು." (326)
ಗಾಥ ಪ್ರಸಂಗ 23:5
ಸಾಮಣೇರ ಸಾನುವಿಗೆ
ತಾಯಿಯ ಪ್ರೇತಾವಾಹನೆ
ಶ್ರಾವಸ್ತಿಯಲ್ಲಿ ಸಾನುವೆಂಬ
ಸಾಮಣೇರನಿದ್ದನು. ಆತನು ಹಿರಿಯ ಭಿಕ್ಷುಗಳ ಪ್ರೇರಣೆಯಿಂದಾಗಿ ಗದ್ದುಗೆಯೇರಿ, ತಿಪಿಟಕದ ಸುತ್ತಗಳನ್ನು ಪಠಣೆ ಮಾಡಿದನು. ಅದನ್ನೆಲ್ಲಾ
ಮುಗಿಸಿ, ಗಂಭೀರವಾಗಿ ಹೀಗೆ
ನುಡಿಯುತ್ತಿದ್ದನು: "ಇಂದು ನಾನು ಮಾಡಿದ, ಈ ಪವಿತ್ರ ಸುತ್ತಗಳ ಪಠನದಿಂದಾಗಿ, ಯಾವ ಪುಣ್ಯವು ಲಭಿಸುವುದೋ, ಅದೆಲ್ಲದರ ಫಲವೂ ನನ್ನ ತಂದೆಗೆ ಮತ್ತು ತಾಯಿಗೆ ಸೇರಲಿ."
ಅದೇ ಸಮಯದಲ್ಲಿ ದೇವತೆಗಳು ಮತ್ತು ಸ್ತ್ರೀ
ಪ್ರೇತವೊಂದು ಈತನ ಪಠನವನ್ನು ಕೇಳುತ್ತಿದ್ದರು. ಆ ಸ್ತ್ರೀ ಪ್ರೇತವು ಹಿಂದಿನ ಜನ್ಮದಲ್ಲಿ ಈ
ಸಾಮಣೇರನ ತಾಯಿಯೇ ಆಗಿದ್ದಳು. ಆಕೆಗೆ ಆತನ ಪಠಣದಿಂದಾಗಿ ಆನಂದವಾಯಿತು. ಆಕೆ ಹೀಗೆ ಆನಂದದಿಂದ
ಹೇಳಿದಳು: "ನನ್ನ ಪ್ರೀತಿಯ ಕಂದ, ನಿನ್ನ ಪುಣ್ಯದ ದಾನದಿಂದಾಗಿ ನಾನು ಆನಂದಿತಳಾಗಿದ್ದೇನೆ, ನೀನು ಸುಕಾರ್ಯವನ್ನೇ ಮಾಡಿರುವೆ. ನನ್ನ ಮಗು, ಸಾಧು ಸಾಧು ಸಾಧು." ಈ ಸಾಮಣೇರ ಸಾನುವಿನಿಂದಾಗಿ
ಆಕೆಗೆ ಅಪಾರ ಗೌರವ ಸಿಕ್ಕಿತು. ಆಕೆಗೆ ಪ್ರೇತಗಳ ಸಭೆಗೆ ಮಾತ್ರವಲ್ಲದೆ, ದೇವತೆಗಳ ಸಭೆಗೂ ಅವಕಾಶ ಸಿಕ್ಕಿತು.
ಆದರೆ ಸಾಮಣೇರ ಸಾನುವು
ಪ್ರೌಢನಾಗುತ್ತಿದ್ದಂತೆ ಆತನಿಗೆ ಗೃಹಸ್ಥನಾಗುವ ಬಯಕೆಯು ಬಂದಿತು. ಹೀಗಾಗಿ ಆತನು ತನ್ನ ಈ ಜನ್ಮದ
ತಾಯಿಯ ಬಳಿಗೆ ಹೋಗಿ ಗೃಹಸ್ಥ ವಸ್ತ್ರಗಳನ್ನು ಕೇಳಿದನು. ಆದರೆ ಆತನ ತಾಯಿಗೆ ಮರಳಿ
ಪ್ರಾಪಂಚಿಕನಾಗುವುದು ಸರಿಕಾಣಲಿಲ್ಲ. ಆಕೆಯು ಆತನಿಗೆ ನಿರುತ್ಸಾಹಗೊಳಿಸಿದಳು. ಆದರೆ ಸಾಮಣೇರನಿಗೆ
ಲೌಕಿಕನಾಗುವ ಬಯಕೆ ಸ್ಥಿರವಾಗಿತ್ತು. ಹೀಗಾಗಿ ಆತನ ತಾಯಿಯು ಆತನು ಆಹಾರ ಮುಗಿಸಿದ ನಂತರ ನೀಡುವ
ಭರವಸೆ ನೀಡಿದಳು. ನಂತರ ಆಕೆಯ ಅಡುಗೆ ಮನೆಗೆ ಹೋಗಿ ಆಹಾರವನ್ನು ಬೇಯಿಸುತ್ತಿದ್ದಳು.
ಅದೇ ಸಮಯದಲ್ಲಿ ಸಾಮಣೇರನ ಹಿಂದಿನ ಜನ್ಮದ
ತಾಯಿಯಾದ ಸ್ತ್ರೀ ಪ್ರೇತವು ಹೀಗೆ ಯೋಚಿಸಿದಳು: "ನನ್ನ ಮಗ ಸಂಘವನ್ನು ತೊರೆದರೆ, ನಾನು ಅಪಮಾನದಿಂದ ತಲೆತಗ್ಗಿಸಬೇಕಾಗುತ್ತದೆ, ಈ ವಿಷಯವು ಪ್ರೇತಗಳಲ್ಲಿ ಮತ್ತು ದೇವತೆಗಳಲ್ಲಿ ಹಾಸ್ಯಾಸ್ಪದ
ಆಗಿಬಿಡುತ್ತದೆ. ಆದ್ದರಿಂದಾಗಿ ನಾನು ಈತನನ್ನು ಸಂಘವನ್ನು ತೊರೆಯದಿರುವಂತೆ ಕೊನೆಯ ಪ್ರಯತ್ನ
ಮಾಡುವೆನು" ಎಂದು ತನ್ನಲ್ಲೇ ಹೇಳಿಕೊಂಡು ತನ್ನೆಲ್ಲಾ ಶಕ್ತಿ, ಪ್ರಯತ್ನ ಒಗ್ಗೂಡಿಸಿಕೊಂಡು, ಆ ಸಾಮಣೇರನ ಶರೀರದಲ್ಲಿ ಸೇರಿದಳು, ಆವಾಹನೆ ಗೊಂಡಳು. ಹೀಗಾಗಿ ಆ ಸಾಮಣೇರನ ಶರೀರವನ್ನು ಅಧಿಪತ್ಯ
ನಡೆಸಿದಳು. ಸಾಮಣೇರನ ಶರೀರವು ನೆಲದಲ್ಲಿ ಹೊರಳಾಡಿತು. ಆತನ ಬಾಯಿಂದ ಜೊಲ್ಲು ಹರಿಯಿತು. ಆತನ ಈ
ಜನ್ಮದ ತಾಯಿಯು ಭಯಭೀತಳಾದಳು. ಅಕ್ಕಪಕ್ಕದ ಮನೆಯವರು ಬಂದರು, ಅವರೆಲ್ಲರಿಗೂ ಏನು ಮಾಡಬೇಕೆಂದು ತೋಚದಾಯಿತು. ಆಗ ಸ್ತ್ರೀ ಪ್ರೇತವು
ಸಾಮಣೇರನ ಬಾಯಿಯ ಮೂಲಕ ಹೀಗೆ ಹೇಳಿದಳು: "ಈ ಸಾಮಣೇರನು ಪವಿತ್ರವಾದ ಸಂಘವನ್ನು ತೊರೆದು,
ಲೌಕಿಕನಾಗಲು ಬಯಸುತ್ತಿದ್ದಾನೆ. ಆತನೇನಾದರೂ ಹೀಗೆ ಮಾಡಿದರೆ
ಆತನು ದುಃಖಗಳಿಂದ ಪಾರಾಗಲು ಸಾಧ್ಯವೇ ಇಲ್ಲ". ಇಷ್ಟು ನುಡಿದು ಆ ಪ್ರೇತವು ಆ ಬಾಲಕನ
ಶರೀರದಿಂದ ಹೊರಹೋಯಿತು.
ನಂತರ ಆ ಸಾಮಣೇರನಿಗೆ ಬಾಹ್ಯಪ್ರಜ್ಞೆ
ಬಂದಿತು. ಆತನು ಸುತ್ತಮುತ್ತಲು ಗಮನಿಸಿದನು. ಆತನ ಈ ಜನ್ಮದ ತಾಯಿಯು ರೋಧಿಸುತ್ತಿದ್ದಳು ಮತ್ತು
ನೆರೆಹೊರೆಯವರು ಸುತ್ತುವರೆದಿದ್ದರು. ಆ ಸಾಮಣೇರನು ತನಗೇನಾಯಿತು ಎಂದು ಪ್ರಶ್ನಿಸಿದನು. ಆಗ ಆತನ
ತಾಯಿಯು ಆತನಿಗೆ ಎಲ್ಲಾ ವಿಷಯ ತಿಳಿಸಿ ಹೀಗೆಂದಳು: "ಮಗು, ನೀನು ಗೃಹಸ್ಥನಗಿ ಹಿಂತಿರುಗುವುದು ನಿಜಕ್ಕೂ ಮೂರ್ಖತನದ ವಿಷಯವಾಗಿದೆ.
ಹಾಗೇನಾದರೂ ನೀನು ಗೃಹಸ್ಥನಾಗಿ ಜೀವಿಸಿದರೂ ಸಹಾ, ಜೀವಂತ ಶವದಂತಿರುವೆ". ಈ ಮಾತುಗಳನ್ನು ಕೇಳಿದಾಗ ಸಾಮಣೇರನಿಗೆ ತನ್ನ ತಪ್ಪು
ಅರಿವಾಯಿತು. ಆಗ ಆತನು ತನ್ನ ತಾಯಿಯ ಬಳಿ ಮೂರು ಚೀವರಗಳನ್ನು ತೆಗೆದುಕೊಂಡು, ಪುನಃ ವಿಹಾರಕ್ಕೆ ಹಿಂತಿರುಗಿದನು. ನಂತರ ಕೆಲಕಾಲದಲ್ಲೇ ಆತನ
ಸಂಯಮಶೀಲತೆಯಿಂದ ಭಿಕ್ಷುವೆಂದು ಸ್ವೀಕರಿಸಲ್ಪಟ್ಟನು.
ಸಾನು ತನ್ನ ಪರಮಾರ್ಥದ ಗುರಿಯನ್ನು ಮತ್ತು
ಮಾರ್ಗವನ್ನು ಸ್ಪಷ್ಟವಾಗಿ ಅರಿತುಕೊಳ್ಳಲೆಂದು ಭಗವಾನರು ಆತನಿಗೆ ಹೀಗೆ ಉಪದೇಶಿಸಿದರು.
"ಮಗು, ಯಾರು ತನ್ನ ಮನಸ್ಸನ್ನು
ನಿಗ್ರಹಿಸುವುದಿಲ್ಲವೋ, ಆತನ ಮನಸ್ಸು
ಅಲೆದಾಡುತ್ತಿರುತ್ತದೆ. ಹೀಗಾಗಿ ಆತನ ಮನಸ್ಸಿಗೆ ಸುಖ ಸಿಗಲಾರದು. ಆದ್ದರಿಂದ ಹೇಗೆ ಮಾವುತನು
ಅಂಕುಶದಿಂದ ಆನೆಯನ್ನು ನಿಗ್ರಹಿಸುವನೋ ಹಾಗೆಯೇ ನೀನು ಸಹಾ ನಿನ್ನ ಮನಸ್ಸನ್ನು ನಿಗ್ರಹಿಸು"
ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ಇದರ ಬಗ್ಗೆ ಗಂಭಿರವಾಗಿ ಸೂಕ್ತವಾಗಿ
ಚಿಂತಿಸಿದಂತಹ ಸಾನು ಕೂಡಲೇ ಅರಹತ್ವವನ್ನು ಪ್ರಾಪ್ತಿಮಾಡಿದನು. ಹಾಗು ಶ್ರೇಷ್ಠವಾಗಿ ಧಮ್ಮಪ್ರವಚನ
ನೀಡುವವರಲ್ಲಿ ಈತನು ಒಬ್ಬನಾದನು.
No comments:
Post a Comment