Friday, 4 September 2015

dhammapada/nagavagga/23.6/paaveyyaka

ಆನೆಯಂತೆ ಕ್ಲೇಷಗಳ ಕೆಸರಿನಿಂದ ಹೊರಬರುವಂತಾಗು
"ಎಚ್ಚರಿಕೆಯಲ್ಲಿ ಆನಂದಿತನಾಗು,
ಚಿತ್ತವನ್ನು ಚೆನ್ನಾಗಿ ರಕ್ಷಿಸುವಂತಾಗು,
ಹೇಗೆ ಕೆಸರಿನಲ್ಲಿ ಸಿಲುಕಿರುವ ಆನೆಯು
ಹೋರಾಡಿ ಹೊರಬರುವಂತೆ, ನಿನ್ನನ್ನು
ದುರ್ಗಮವಾದ ಪಾಪಹಾದಿಯಿಂದ ಹೊರ ಎಳೆದುಕೋ." (327)

ಗಾಥ ಪ್ರಸಂಗ 23:6
ಪಾವೆಯ್ಯಕ ಆನೆಯು ಕೆಸರಿನಿಂದ ಹೊರಬಂದುದು

            ಪಾವೆಯ್ಯಕ ಆನೆಯು ಯೌವ್ವನದಲ್ಲಿ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಮುದಿಯಾದಂತೆ ದುರ್ಬಲವಾಯಿತು, ಸೊರಗಿತು. ಒಂದುದಿನ ಆ ಮುದಿ ಆನೆಯು ಕೊಳವೊಂದರಲ್ಲಿ ಇಳಿಯಿತು. ಅದು ಆ ಕೊಳದ ಕೆಸರಿನಲ್ಲಿ ಅತಿ ಕೆಟ್ಟದಾಗಿ ಸಿಲುಕಿಕೊಂಡಿತು. ಅದು ಪ್ರಯತ್ನಪಟ್ಟರೂ ಹೊರಬರಲಾಗಲಿಲ್ಲ. ಈ ವಿಷಯವನ್ನು ಕೋಸಲರಾಜ ಪಸೇನದಿಗೆ ಹೇಳಲಾಯಿತು. ಆಗ ರಾಜನು ಕುಶಲನಾದ ಮಾವುತನಿಗೆ ಆ ಆನೆಯು ಹೊರಬರಲು ಸಹಾಯ ಮಾಡಲು ಕಳುಹಿಸಿದನು. ಆಗ ಆ ಮಾವುತನು ಆ ಸ್ಥಳಕ್ಕೆ ಹೋದನು. ಅಲ್ಲಿ ಆತನು ತನ್ನೊಂದಿಗೆ ವಾದ್ಯಗಾರರನ್ನು ಕರೆದೊಯ್ದನು. ಅಲ್ಲಿ ಅವರಿಗೆ ಯುದ್ಧಭೂಮಿಯಲ್ಲಿ ಪ್ರೇರೇಪಿಸುವ ವಾದ್ಯಗಳನ್ನು ಬಾರಿಸುವಂತೆ ಹೇಳಿದನು. ಆ ರೀತಿಯ ಯುದ್ಧ ವಾದ್ಯಗಳ ಶಬ್ದ ಕೇಳಿದೊಡನೆ ಆ ಆನೆಗೆ ತಾನು ರಣಭೂಮಿಯಲ್ಲಿ ಇರುವಂತೆ ಭಾಸವಾಗಿ, ತನ್ನ ಮುದಿತನ ಮರೆಯಿತು. ಅದರ ಉತ್ಸಾಹಕ್ಕೆ ಹಾಗು ಇಚ್ಛಾಶಕ್ತಿಗೆ ಮಿತಿಯೇ ಇಲ್ಲದಂತಾಯಿತು. ಆಗ ಆ ಆನೆಯು ತನ್ನ ಸಮಗ್ರ ಬಲ ಪ್ರಯೋಗಿಸಿ ಆ ಕೆಸರಿನಿಂದ ಹೊರಬಂದುಬಿಟ್ಟಿತು.

            ಈ ವಿಷಯವನ್ನು ಭಿಕ್ಷುಗಳು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ಹೇಗೆ ಕೆಸರಿನಿಂದ ಆನೆಯು ಹೊರಬಂದಿತೋ, ಹಾಗೆಯೇ ನೀವು ಸಹಾ ಕಶ್ಮಲಗಳ ಕೆಸರಿನಿಂದ ನಿಮ್ಮನ್ನು ಎಳೆದು ಹೊರತನ್ನಿ" ಎಂದು ಹೇಳಿ ನಂತರ ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment