Monday, 7 September 2015

dhammapada/tanhavagga/24.2/infiniterebirths

ಪ್ರವಾಹದಂತೆ ತೃಷ್ಣೆಯು ಹರಿಯುತ್ತಿರುತ್ತದೆ
"ಹೇಗೆ ವೃಕ್ಷವನ್ನು ಕತ್ತರಿಸಿದರೂ ಸಹಾ
ಅದರ ಮೂಲವು ಸುರಕ್ಷಿತವಾಗಿ, ದೃಢವಾಗಿದ್ದರೆ
ಅದರ ರೆಂಬೆಗಳಿಂದ ಪುನಃ ಚಿಗುರುವಂತೆ
ತೃಷ್ಣಾವು ಆಂತರ್ಯದಲ್ಲಿ ಸುಪ್ತವಾದ ಹಂತದಲ್ಲಿ ನಾಶವಾಗದಿದ್ದರೆ
ದುಃಖವು ಪುನಃ ಪುನಃ ಬೆಳೆಯುತ್ತಿರುತ್ತದೆ."    (338)

"ಯಾರಲ್ಲಿ 36 ರೀತಿ ಪ್ರವಾಹಗಳು
ಬಲಯುತವಾಗಿ ಹರಿದಾಡುತ್ತಿವೆಯೋ, ರಾಗಯುತ
ಸಂಕಲ್ಪಗಳಿಂದಾಗಿ ಪುಟಿದಂತಹ, ಸುಂದರವಾಗಿ
ಕಾಣುವಂತಹ ನೆರೆಯಲ್ಲಿ, ಕೆಟ್ಟದೃಷ್ಟಿಕೋನ
ಹೊಂದಿರುವವನು ಕೊಚ್ಚಿಹೋಗುತ್ತಾನೆ."      (339)

"ಸರ್ವತ್ರವಾಗಿ ಈ ಪ್ರವಾಹದ ಸುಳಿಗಳು
ಹರಿದಾಡುತ್ತಿವೆ. ಹೀಗಾಗಿಯೇ
ಲತೆಗಳು (ತೃಷ್ಣೆಯು) ಸಹಾ ಉದಯಿಸಿ
ದೃಢವಾಗಿ ನೆಲೆಸುತ್ತವೆ,
ಉದಯಿಸುತ್ತಿರುವ ಈ ಲತೆಗಳನ್ನು ಕಂಡೊಡನೆ
ಅವುಗಳ ಮೂಲಗಳನ್ನು ಪ್ರಜ್ಞೆಯಿಂದ ಕತ್ತರಿಸಿಹಾಕಿ.        (340)

"ಹರಿಯುವ ಪ್ರವಾಹದಂತೆ ಜೀವಿಗಳಲ್ಲಿ ತೃಷ್ಣೆಯು
ಉದಯಿಸುವುದು, ಸುಖಗಳೆಡೆ ಹಾಗು
ಇಂದ್ರಿಯಗಳನ್ನು ತೃಪ್ತಿಗೊಳಿಸುವಲ್ಲಿ ಇವು ಹರಿಯುವುದು
ಯಾವ ನರರು ಈ ಸುಖಗಳೆಡೆ ಬಾಗಿರುವವರು
ಖಂಡಿತವಾಗಿ ಅವರು ಜನ್ಮ ಮುಪ್ಪುಗಳಿಗೆ
ನಿರಂತರ ಬಲಿಯಾಗುವರು."       (341)

"ತೃಷ್ಣೆಯಿಂದ ಆಕ್ರಮಿತರಾದ ಪ್ರಜೆಗಳು,
ಬಂಧಿತ ಮೊಲವು ಭಯದಿಂದ ಒದ್ದಾಡುವಂತೆ,
ಸಂಯೋಜನಗಳಿಂದ ಬಂಧಿತರಾದವರು,
ದುಃಖದಿಂದ ಆವೃತರಾಗಿ ಪುನಃ ಪುನಃ ಚಿರಕಾಲ ನರಳುವರು."        (342)

"ತೃಷ್ಣೆಯಿಂದ ಆಕ್ರಮಿತರಾದ ಪ್ರಜೆಗಳು
ಬಂಧಿತ ಮೊಲದಂತೆ ಭಯದಿಂದ ಒದ್ದಾಡುವರು
ಆದ್ದರಿಂದಾಗಿ ವಿರಾಗದ ಆಕಾಂಕ್ಷೆಯನ್ನೇ ಹೊಂದಿರುವಂತಹ
ಭಿಕ್ಷುವು ತೃಷ್ಣೆಯನ್ನು ಅಡಗಿಸಬೇಕು."            (343)

ಗಾಥ ಪ್ರಸಂಗ 24:2
ಲೋಕಕ್ಕೆ ಅಂಟಿದರೆ ಲೆಕ್ಕವಿಲ್ಲದಷ್ಟು ಜನ್ಮಗಳು







            ಒಮ್ಮೆ ಭಗವಾನರು ರಾಜಗೃಹಕ್ಕೆ ಆಹಾರಕ್ಕಾಗಿ ಹೋಗುತ್ತಿದ್ದರು. ಆಗ ಅವರು ದಾರಿಯಲ್ಲಿದ್ದ ಹಂದಿಯನ್ನು ಕಂಡು ಮುಗುಳ್ನಕ್ಕರು. ಅದನ್ನು ವೀಕ್ಷಿಸಿದಂತಹ ಪೂಜ್ಯ ಆನಂದರು ಭಗವಾನರಿಗೆ ಹೀಗೆ ಪ್ರಶ್ನಿಸಿದರು: "ಭಗವಾನ್, ತಮ್ಮ ಮುಗುಳ್ನಗೆಗೆ ಕಾರಣವೇನು?"
            "ಆನಂದ, ಈ ಹಂದಿಯನ್ನು ಕಾಣುತ್ತಿರುವೆಯಲ್ಲವೇ?"
            "ಹೌದು ಭಂತೆ, ಅದನ್ನು ಕಾಣುತ್ತಿದ್ದೇನೆ."
            "ಆನಂದ, ಈ ಹಂದಿಯು ಕಕುಸಂಧ ಭಗವಾನ್ ಬುದ್ಧರ ಕಾಲದಲ್ಲಿ ಧಮ್ಮ ಸಭಾಂಗಣದ ಸಮೀಪದಲ್ಲಿ ಕೋಳಿಯಾಗಿ ಹುಟ್ಟಿತ್ತು. ಒಮ್ಮೆ ಆ ಕೋಳಿಯು ಭಿಕ್ಷುವೊಬ್ಬನು ಧ್ಯಾನಸೂತ್ರವೊಂದನ್ನು ಕಂಠಪಾಠ ಮಾಡುತ್ತಿರುವಾಗ, ಅರ್ಥವಾಗದಿದ್ದರೂ ಸಹಾ ಕೇವಲ ಆ ಪವಿತ್ರ ಪದಗಳ ಶಬ್ದಗಳ ಕಡೆ ಗಮನವಿಟ್ಟು ಏಕಾಗ್ರತೆಯಿಂದ ಆಲಿಸುತ್ತಿತ್ತು. ಅದು ಸಾಯುವಾಗಲು ಆ ಶಬ್ದಗಳ ಸ್ಮರಣೆ ಮಾಡಿದ್ದರಿಂದಾಗಿ ಆ ಕೋಳಿಯು ಸತ್ತು ರಾಜಕುಮಾರಿ ಉಬ್ಬರಿಯಾಗಿ ಜನ್ಮಸಿದಳು."
            ಒಂದು ದಿನ ಉಬ್ಬರಿ ರಾಜಕುಮಾರಿಯು ಶೌಚಕ್ಕೆ ಹೋಗಿರುವಾಗ ಅಲ್ಲಿದ್ದ ಅಪಾರ ಹುಳುಗಳ ರಾಶಿಯನ್ನು ಕಂಡಳು. ನಿರಂತರ ಅವುಗಳನ್ನು ಕಂಡಿದ್ದರಿಂದಾಗಿ ಆಕೆಗೆ ಆ ಅಶುಭ ಧ್ಯಾನದಿಂದಲೇ ಪ್ರಥಮಧ್ಯಾನ ಲಭಿಸಿತು. ಹಲವಾರು ವರ್ಷ ಜೀವಿಸಿ ಆಕೆಯು ಸತ್ತು ನಂತರ ಬ್ರಹ್ಮಲೋಕದಲ್ಲಿ ಜನಿಸಿದಳು. ಅಲ್ಲಿ ದೀರ್ಘಕಾಲವಿದ್ದು, ನಂತರ ಅಲ್ಲಿಂದ ನಿರ್ಗಮಿಸಿ, ಈಗ ಪೂರ್ವಜನ್ಮದ ಕರ್ಮಫಲದ ಅನುಸಾರವಾಗಿ, ಹೀಗೆ ಹಂದಿಯಾಗಿ ಹುಟ್ಟಿದ್ದಾಳೆ. ಕರ್ಮಗಳ ಪರಿಣಾಮಗಳನ್ನು ಗಮನಿಸುತ್ತಾ ನಾನು ಮುಗುಳ್ನಗೆ ಬೀರಿದೆನು" ಎಂದು ಭಗವಾನರು ನುಡಿದರು.
            ಇದನ್ನೆಲ್ಲಾ ಆಲಿಸಿದ ಭಿಕ್ಷುಗಳು ಉದ್ವಿಗ್ನರಾದರು. ಸಂಸಾರದ ಭೀಕರತೆ ಅರಿತರು, ಮೂರು ಲೋಕಗಳು ಕ್ಷಣಿಕವೆಂದು ಅರಿತರು. ಅವರ ವಿರಾಗದ ಭಾವವೇಶ ಗಮನಿಸಿ ಭಗವಾನರು ತೃಷ್ಣೆಗಳ ಅಪಾಯ ತಿಳಿಸುತ್ತಾ, ತಾವು ಬೀದಿಯ ಮಧ್ಯದಲ್ಲಿ ನಿಂತಿದ್ದರೂ ಸಹಾ ಜ್ಞಾನೋದಯಕ್ಕೆ ಸಕಾಲವಾದ್ದರಿಂದಾಗಿ ಅಲ್ಲಿಯೇ ಈ ಮೇಲಿನ ಗಾಥೆಗಳನ್ನು ನುಡಿದರು.

*  *  *
            ನಂತರ ಈ ಹೆಣ್ಣು ಹಂದಿಯು ಕೆಲ ವರ್ಷಗಳ ನಂತರ ಸತ್ತು, ಸುವರ್ಣಭೂಮಿಯ (ಬರ್ಮ) ರಾಜಮನೆತನದಲ್ಲಿ ಹುಟ್ಟಿತ್ತು. ಅಲ್ಲಿ ಜೀವಿಸಿ, ಅಲ್ಲಿಯೂ ಸತ್ತು ಬನಾರಸ್ನಲ್ಲಿ ಹುಟ್ಟುದಳು. ಅಲ್ಲಿಯೂ ಜೀವಿಸಿ ಮರಣಿಸಿದ ನಂತರ ಸುಪ್ಪಾರಕ ಬಂದರಿನಲ್ಲಿ ಕುದುರೆಗಳ ವ್ಯಾಪಾರಿಯ ಗೃಹದಲ್ಲಿ ಜನಿಸಿದಳು. ನಂತರದ ಜನ್ಮದಲ್ಲಿ ಕಾವಿದ ಬಂದರಿನಲ್ಲಿ ನಾವಿಕನಿಗೆ ಮಗಳಾಗಿ ಜನಿಸಿದಳು. ಅಲ್ಲಿಯೂ ಸತ್ತನಂತರ ಶ್ರೀಲಂಕಾದ ಅನುರಾಧಪುರದಲ್ಲಿ ಜನಿಸಿದಳು. ಅನುರಾಧಪುರದಲ್ಲಿ ಅತ್ಯಂತ ಮೇಲ್ವರ್ಗದ ಕುಟುಂಬದಲ್ಲಿ ಜನಿಸಿದಳು. ಅಲ್ಲಿಯೂ ಜೀವಿಸಿ ಮರಣಿಸಿದ ನಂತರ ಆಕೆಯು ಶ್ರೀಲಂಕಾದ ದಕ್ಷಿಣದ ರಾಜ್ಯದಲ್ಲಿರುವ ಭೂಕ್ಕಂತ ಹಳ್ಳಿಯಲ್ಲಿ ಸುಮನ ಎಂಬ ಗೃಹಸ್ಥನಿಗೆ ಮಗಳಾಗಿ ಹುಟ್ಟಿದಳು. ಆಕೆಗೂ 'ಸುಮನಾ' ಎಂದು ಹೆಸರಿಸಲಾಯಿತು.
            ಯಾವಾಗ ಈ ಹಳ್ಳಿಯು ಅವರ ನಿವಾಸಿಗಳಿಂದ ಪಲಾಯನ ಮಾಡಿತೋ, ಆಗ ಆಕೆಯ ತಂದೆಯು ದೀಘವಾಪಿ ರಾಜ್ಯಕ್ಕೆ (ಶ್ರೀಲಂಕ) ಹೋದನು. ಅಲ್ಲಿ ಮಹಾಮುನಿ ಎಂಬ ಹಳ್ಳಿಯಲ್ಲಿ ವಾಸವಾದನು. ಅಲ್ಲಿಗೆ ರಾಜ ದುಟ್ಟಗಾಮನೀಯ ಮಂತ್ರಿಯಾದ ಲಕುಂಟಕ ಅತಿಂಬರನು ಸಂದೇಶ ನೀಡಲು ಬಂದಿದ್ದನು. ಆತನು ಸುಮನಾಳಿಗೆ ಭೇಟಿ ಮಾಡಿ, ನಂತರ ವೈಭವದಿಂದ ವಿವಾಹವಾಗಿ ಆಕೆಯನ್ನು ತನ್ನೊಂದಿಗೆ ಮಹಾಪುಣ್ಣನೆಂಬ ಹಳ್ಳಿಗೆ ಕರೆದೊಯ್ದನು.
            ಒಂದುದಿನ ಶ್ರೀಲಂಕದ ಪೂಜ್ಯ ಆನಂದರು ಆ ಮಾರ್ಗದಲ್ಲಿ ಹೋಗುತ್ತಿದ್ದರು. ಅವರು ಅಲ್ಲಿಯ ಕೋಟಿಪಬ್ಬತದ ಮಹಾ ವಿಹಾರದಲ್ಲಿ ನೆಲೆಸಿದ್ದರು. ಅವರು ಆಹಾರವನ್ನು ಹುಡುಕಿಕೊಂಡು ಸುಮನಾಳ ಮನೆಯ ಬಾಗಿಲಿನಲ್ಲಿ ನಿಂತರು. ಆಕೆಯನ್ನು ಅವರು ನೋಡಿದರು, ಆಕೆಯ ವಿಷಯವಾಗಿ ಅವರು ಇತರ ಭಿಕ್ಷುಗಳಿಗೆ ಹೀಗೆ ಹೇಳಿದರು: "ನೋಡಿ ಪೂಜ್ಯರೇ, ಬುದ್ಧರ ಕಾಲದಲ್ಲಿ ಹಂದಿಯಾಗಿದ್ದಂತಹ ಆಕೆ ಈಗ ಈ ದೇಶದ ಪ್ರಧಾನಿಯಾದ ಲಕುಂಟಕ ಅತಿಂಬರನ ಪತ್ನಿಯಾಗಿದ್ದಾಳೆ."

        
    ಈ ಮಾತನ್ನು ಆಕೆಯು ಕೇಳಿಸಿಕೊಂಡಳು. ತಕ್ಷಣ ಆಕೆಗೂ ತನ್ನ ಹಿಂದಿನ ಜನ್ಮಗಳ ನೆನಪು ವಿಸ್ತಾರವಾಗಿಯೇ ಬಂದಿತು. ಆಕೆಗೆ ಹಿಂದಿನ ಜನ್ಮ ಅರಿಯುವ ಶಕ್ತಿಯು ಬಂದಿತು. ತಕ್ಷಣ ಆಕೆಗೆ ಜೀವನದ ಮೇಲೆ ವಿರಕ್ತಿ ಉಂಟಾಗಿ ಧಮ್ಮಪಾಲನೆಯಲ್ಲಿ ಅತೀವ ಆಸಕ್ತಿ ಉಂಟಾಯಿತು. ಆಕೆಯು ಪತಿಯಲ್ಲಿ ಭಿಕ್ಷುಣಿಯಾಗುವ ಅಪ್ಪಣೆ ಕೇಳಿದಳು. ನಂತರ ಆಕೆಗೆ ವಿಜೃಂಭಣೆಯಿಂದ ಪಂಚಬಾಲಕ ಭಿಕ್ಷುಣಿ ಸಂಘದಲ್ಲಿ ಭಿಕ್ಷುಣಿಯಾದಳು. ಒಮ್ಮೆ ಆಕೆಯು ತಿಸ್ಸ ಮಹಾ ವಿಹಾರದಲ್ಲಿ ಮಹಾಸತಿಪಟ್ಠಾನ ಸುತ್ತಾಂತವನ್ನು ಆಲಿಸುತ್ತಿರುವಾಗ ಸೋತಪತ್ತಿ ಫಲ ಪ್ರಾಪ್ತಿಮಾಡಿದಳು. ನಂತರ ಆಕೆ ಕೆಲ ಕಾರಣಗಳಿಂದಾಗಿ ತನ್ನ ಹಳ್ಳಿಯಾದ ಭೂಕ್ಕಂತದಲ್ಲಿ ವಾಸಮಾಡಿದಳು. ಅಲ್ಲಿ ಆಕೆಯು "ಅಸೀವಿಸೊಪಮ ಸುತ್ತ'ವನ್ನು ಆಲಿಸುತ್ತಿರುವಾಗ ಅರಹಂತೆಯಾದಳು. ಆಕೆಯ ತನ್ನ ಪರಿನಿಬ್ಬಾಣದ ಹಿಂದಿನ ದಿನದಂದು ಭಿಕ್ಷುಣಿಯರಿಂದ ಪ್ರಶ್ನಿಸಲ್ಪಟ್ಟಾಗ ತನ್ನ ಇಡೀ ವೃತ್ತಾಂತವನ್ನು ಹೇಳಿದಳು. ಆಗ ಆ ಧಮ್ಮಸಭೆಯಲ್ಲಿ ಧಮ್ಮಪದದ ಪಠಣಕರಾಗಿ ಪೂಜ್ಯರಾದ ಮಹಾತಿಸ್ಸರು ಸಹಾ ಉಪಸ್ಥಿತರಾಗಿದ್ದರು
.

No comments:

Post a Comment