Friday, 18 September 2015

dhammapada/bhikkhuvagga/25.1/shravastibhikkhus

25. ಭಿಕ್ಖು ವಗ್ಗ (ಭಿಕ್ಷು ವರ್ಗ)
ಇಂದ್ರಿಯಗಳನ್ನು ರಕ್ಷಿಸುವವರು ದುಃಖದಿಂದ ಪಾರಾಗುತ್ತಾರೆ
"ಚಕ್ಷುವನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಕಿವಿಯನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಮೂಗನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ನಾಲಿಗೆಯನ್ನು ಸಂಯಮದಿಂದಿರಿಸುವುದು ಒಳ್ಳೆಯದು." (360)

"ಕಾಯವನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಮಾತಿನಲ್ಲಿ ಸಂಯಮದಿಂದಿರುವುದು ಒಳ್ಳೆಯದು,
ಮನಸ್ಸನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಎಲ್ಲದರ ಸಂಯಮ ಒಳ್ಳೆಯದು,
ಸರ್ವವನ್ನು ಸಂಯಮಗೊಳಿಸಿದಂತಹ ಭಿಕ್ಷು
ಸರ್ವ ದುಃಖಗಳಿಂದ ಪಾರಾಗುತ್ತಾನೆ."          (361)

ಗಾಥ ಪ್ರಸಂಗ 25:1
ಇಂದ್ರಿಯ ಸಂಯಮದ ಬಗ್ಗೆ ಶ್ರಾವಸ್ತಿಯ ಭಿಕ್ಷುಗಳ ಪ್ರಶ್ನೆ

            ಶ್ರಾವಸ್ತಿಯಲ್ಲಿ ಐದು ಭಿಕ್ಷುಗಳ ಗುಂಪೊಂದು, ಐದು ಇಂದ್ರಿಯಗಳಲ್ಲಿ ಕೇವಲ ಒಂದು ಇಂದ್ರಿಯವನ್ನು ಮಾತ್ರ ಸಂಯಮದಿಂದಿರಿಸಿದರು. ಉಳಿದ ಇಂದ್ರಿಯಗಳಿಗೆ ಮಹತ್ವ ನೀಡಲಿಲ್ಲ. ಒಂದುದಿನ ಅವರು ಈ ರೀತಿಯ ಚಚರ್ೆಗೆ ಇಳಿದರು: "ನಾನು ರಕ್ಷಿಸುತ್ತಿರುವ ಇಂದ್ರಿಯ ದ್ವಾರವೇ ಅತ್ಯಂತ ಕಷ್ಟಕರವಾದುದು." ಹೀಗೆ ಪ್ರತಿಯೊಬ್ಬರೂ 'ತಾವೇ ಕಷ್ಟಕರವಾಗಿರುವ ಇಂದ್ರಿಯ ದ್ವಾರ ರಕ್ಷಿಸುತ್ತಿದ್ದೇವೆ' ಎಂದು ಭ್ರಮೆಗೆ ಬಿದ್ದರು. ಆದರೆ ಕೊನೆಗೂ ಅವರಲ್ಲಿ ನಿರ್ಣಯ ಉಂಟಾಗದೆ ಇದನ್ನು ಬುದ್ಧ ಭಗವಾನರಲ್ಲಿಯೇ ಪರಿಹರಿಸಿಕೊಳ್ಳೋಣವೆಂದು, ಭಗವಾನರ ಬಳಿಗೆ ಬಂದು ಈ ಪ್ರಶ್ನೆಯನ್ನು ಅವರಿಗೆ ಕೇಳಿದರು: "ಭಗವಾನ್, ನಾವು ಪ್ರತಿಯೊಬ್ಬರೂ ಪ್ರತ್ಯೇಕವಾದ ಇಂದ್ರಿಯವನ್ನು ರಕ್ಷಿಸುತ್ತಿದ್ದೇವೆ. ಅದು ಮಾತ್ರವೇ ಅತಿಕಷ್ಟಕರವಾದುದು ಎಂದು ಭಾವಿಸುತ್ತಿದ್ದೇವೆ, ಈಗ ತಾವೇ ನಮ್ಮಲ್ಲಿ ಅತ್ಯಂತ ಕಷ್ಟಕರವಾಗಿರುವ ಇಂದ್ರಿಯವನ್ನು ಯಾರು ರಕ್ಷಿಸುತ್ತಿರುವರು ಎಂದು ತಿಳಿಸಬೇಕು."

            ಆಗ ಭಗವಾನರು ಆ ಹೇಳಿಕೆಯ ಉತ್ತರದಿಂದಾಗುವ ದುಷ್ಪರಿಣಾಮವನ್ನು ಅರಿತು, ಜಾಗರೂಕತೆಯಿಂದ ಯಾರೊಬ್ಬರಿಗೂ ಕೀಳು ಸ್ಥಾನಕ್ಕೆ ತರದೆ, ಅವರನ್ನು ಏಕೇಂದ್ರಿಯ ರಕ್ಷಣೆಗೆ ಮಾತ್ರ ಸೀಮಿತಗೊಳಿಸದೆ ಹೀಗೆ ಉತ್ತರಿಸಿದರು: "ಭಿಕ್ಷುಗಳೇ, ಪ್ರತಿಯೊಂದು ಇಂದ್ರಿಯವೂ ಸಹಾ ರಕ್ಷಿಸಲು, ಸಂಯಮಗೊಳಿಸಲು ಕಷ್ಟಕರವೇ ಆಗಿದೆ. ಈಗಷ್ಟೇ ನೀವು ಈ ರೀತಿ ಇಂದ್ರಿಯಗಳ ದಮನದಲ್ಲಿ ಸೋತಿಲ್ಲ. ನಿಮ್ಮ ಹಿಂದಿನ ಜನ್ಮಗಳಲ್ಲೂ ಸಹಾ ನೀವು ಇಂದ್ರಿಯ ಸಂಯಮದಲ್ಲಿ ಜಾರಿದ್ದರೀರಿ. ಆಗ ನೀವು ವಿವೇಕಿಗಳ ಸುಭಾಷಿತ ಪಾಲಿಸದೆ ನಾಶಕ್ಕೆ ಗುರಿಯಾಗಿದ್ದಿರಿ" ಎಂದರು ಮತ್ತು ಮೇಲಿನ ಗಾಥೆಗಳನ್ನು ನುಡಿದರು. ಆಗ ಭಿಕ್ಷುಗಳು ಭಗವಾನರಿಗೆ ಪೂರ್ವ ವೃತ್ತಾಂತ ತಿಳಿಸಲು ಕೋರಿಕೊಂಡರು. ಆಗ ಭಗವಾನರು ಹೀಗೆ ಆರಂಭಿಸಿದರು.
ಹಿಂದಿನ ತಕ್ಷಶಿಲ ಜಾತಕ : ಬಹಳ ಕಾಲದ ಹಿಂದೆ ಬ್ರಹ್ಮದತ್ತನು ವಾರಾಣಸಿಯಲ್ಲಿ ಆಳುತ್ತಿರುವಾಗಿ ಆ ರಾಜನ ಕಿರಿಯ ಮಗನಾಗಿ ಬೋಧಿಸತ್ವರು ಜನಿಸಿದರು. ಒಂದುದಿನ ಪಚ್ಚೇಕಬುದ್ಧರು ಅರಮನೆಯಲ್ಲಿ ಆಹಾರ ಸೇವಿಸುತ್ತಿರುವಾಗ ಅವರ ಸೇವೆಮಾಡಿ ಬೋಧಿಸತ್ವರು ತಾವು ಈ ದೇಶದ ರಾಜನಾಗುವೆನೇ? ಎಂದು ಅವರನ್ನು ಕೇಳಿದಾಗ ಅವರು ಹೀಗೆಂದರು: "ತಕ್ಷಶಿಲೆ ನಗರಕ್ಕೆ ಹೋದರೆ ಮಾತ್ರ ರಾಜನಾಗಬಹುದು, ಆದರೆ ಕಾಡಿನ ದಾರಿಯಲ್ಲಿ ಯಕ್ಷಿಣಿಯರಿದ್ದಾರೆ, ಅವರು ಇಂದ್ರಿಯ ಮದಗಳಿಗೆ ಆಕಷರ್ಿತರಾದವರನ್ನು ಸೆಳೆದು ನಂತರ ರಕ್ತ ಕುಡಿದು ಮಾಂಸ ತಿನ್ನುವರು. ಆದ್ದರಿಂದ ಇಂದ್ರಿಯ ಸಂಯಮದಿಂದಿರಬೇಕು."
            ಅದಕ್ಕೆ ಸಿದ್ಧರಾದ ಬೋಧಿಸತ್ವರು ತಕ್ಷಶಿಲೆಗೆ ಹೊರಟರು. ಅವರೊಂದಿಗೆ ಐವರು ಬಂದರು. ಅವರಿಗೆಲ್ಲಾ ಬೋಧಿಸತ್ವರು ಮುಂಚೆಯೇ ಎಚ್ಚರಿಕೆ ನೀಡಿ ಇಂದ್ರಿಯ ಸಂಯಮದಿಂದಿರುವಂತೆ ಆದೇಶ ನೀಡಿದರು. ಆದರೆ ದಾರಿಯಲ್ಲಿ ಒಬ್ಬಾತ ಯಕ್ಷಿಣಿಯ ರೂಪ ವೈಯ್ಯಾರಕ್ಕೆ, ಮತ್ತೊಬ್ಬ ಯಕ್ಷಿಣಿಯ ಗಾನ ಸಂಗೀತಕ್ಕೆ, ಮತ್ತೊಬ್ಬ ಯಕ್ಷಿಣಿಯ ಸುಗಂಧಕ್ಕೆ, ಮಗದೊಬ್ಬ ಯಕ್ಷಿಣಿಯ ಆಹಾರಕ್ಕೆ, ಕೊನೆಯವನು ಯಕ್ಷಿಣಿಯ ಸ್ಪರ್ಶಕ್ಕೆ ಹೀಗೆ ಅವರೆಲ್ಲಾ ಇಂದ್ರಿಯ ಸುಖಗಳಿಗೆ ಆಕಷರ್ಿತರಾಗಿ ಯಕ್ಷಿಣಿಯರಿಗೆ ವಶರಾಗಿ ಪ್ರಾಣ ಕಳೆದುಕೊಂಡರು. ಆದರೆ ಬೋಧಿಸತ್ವರು ಇಂದ್ರಿಯಗಳನ್ನು ಚಾಂಚಲ್ಯಗೊಳಿಸಲಿಲ್ಲ, ಅವರು ತಕ್ಷಶಿಲೆಗೆ ಹೋದರು. ಅಲ್ಲಿಯ ರಾಜನು ಸಹ ಯಕ್ಷಿಣಿಗೆ ಮರುಳಾಗಿ ಪ್ರಾಣ ಕಳೆದುಕೊಂಡಿದ್ದನು. ಹೀಗಾಗಿ ಬೋಧಿಸತ್ವರನ್ನೇ ಅಲ್ಲಿನ ಜನರು ರಾಜನನ್ನಾಗಿಸಿದರು.

No comments:

Post a Comment