Monday, 7 September 2015

dhammapada/tanhavagga/24.12/indukaankura

ರಾಗ, ದ್ವೇಷ, ಮೋಹವು ಮಾನವತೆಗೆ ಕೇಡು

"ಕಳೆಗಳು ಹೊಲಕ್ಕೆ ಕೆಡುಕು,
ರಾಗವು ಮಾನವತೆಗೆ ಕೇಡು,
ಆದ್ದರಿಂದ ವಿತರಾಗರಿಗೆ (ರಾಗಮುಕ್ತರಿಗೆ) ನೀಡಿದ್ದು
ಮಹತ್ಫಲ ತರುತ್ತದೆ." (356)

"ಕಳೆಗಳು ಹೊಲಕ್ಕೆ ಕೆಡುಕು
ದ್ವೇಷವು ಮಾನವತೆಗೆ ಕೇಡು
ಆದ್ದರಿಂದ ದ್ವೇಷರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ." (357)

"ಕಳೆಗಳು ಹೊಲಕ್ಕೆ ಕೆಡಕು
ಮೋಹವು ಮಾನವತೆಗೆ ಕೇಡು,
ಆದ್ದರಿಂದ ಮೋಹರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ." (358)

"ಕಳೆಗಳು ಹೊಲಕ್ಕೆ ಕೆಡಕು
ಇಚ್ಛೆಯು ಮಾನವತೆಗೆ ಕೇಡು,
ಆದ್ದರಿಂದ ಇಚ್ಛಾರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ." (359)


ಗಾಥ ಪ್ರಸಂಗ 24:12
ದಾನಕ್ಕೆ ಫಲವತ್ತಾದ ಭೂಮಿ
            ಒಮ್ಮೆ ಬುದ್ಧ ಭಗವಾನರು ತಾವತಿಂಸ ದೇವಲೋಕದಲ್ಲಿ ದೇವ ಸಂತುಸಿತಾಗೆ ಅಭಿಧಮ್ಮ ಬೋಧನೆ ನೀಡಲು ಹೋಗಿದ್ದರು. ಈ ದೇವ ಸಂತುಸಿತಾ ಬೇರಾರು ಅಲ್ಲ. ಬೋಧಿಸತ್ವರಿಗೆ ಜನ್ಮ ನೀಡಿದಂತಹ, ತಾಯಿ ಸಾಕ್ಷಾತ್ ಮಹಾ ಮಯಾದೇವಿಯೇ ಈಗ ಪುರುಷ ದೇವ ಆಗಿದ್ದರು.
            ಆ ಸಮಯದಲ್ಲಿ ಇಂದುಕ ಎಂಬ ದೇವನಿದ್ದನು. ಆತನು ತನ್ನ ಹಿಂದಿನ ಜನ್ಮದಲ್ಲಿ ಪೂಜ್ಯ ಅನಿರುದ್ಧರವರಿಗೆ ಅತ್ಯಲ್ಪ ಪ್ರಮಾಣದ ಆಹಾರವನ್ನು ದಾನ ಮಾಡಿದ್ದನು. ಆ ಒಂದು ತುತ್ತಿನ ಪ್ರಮಾಣದ ಆಹಾರ ದಾನಫಲವು ಅತ್ಯಂತ ವಿಶಿಷ್ಟವಾಗಿತ್ತು. ಅದರ ಫಲವಾಗಿಯೇ ಆತನು ತಾವತಿಂಸ ದೇವತೆಗಳ ಮಧ್ಯದಲ್ಲಿ ಅಪಾರವಾದ ವೈಭೋಗ ಹೊಂದಿದನು.
            ಆ ತಾವತಿಂಸ ಲೋಕದಲ್ಲಿಯೇ ಇನ್ನೋರ್ವ ದೇವನಿದ್ದನು. ಆತನ ಹೆಸರು ಅಂಕುರ, ಆತನು ತನ್ನ ಹಿಂದಿನ ಜನ್ಮದಲ್ಲಿ ಅಪಾರವಾಗಿ ದಾನಗಳನ್ನು ಮಾಡಿದ್ದನು. ಅಸಂಖ್ಯಾತ ಜನರಿಗೆ, ಉನ್ನತ ಮಟ್ಟದ ದಾನಗಳನ್ನು ಮಾಡಿಯೂ ಸಹಾ ಆತನು ಇಂದುಕ ದೇವನಿಗಿಂತ ಅತಿ ಕಡಿಮೆ ಮಟ್ಟದ ವೈಭೋಗದಲ್ಲಿದ್ದನು. ಹೀಗಾಗಿ ಆತನಿಗೆ ಈ ವಿಷಯದಲ್ಲಿ ಆಶ್ಚರ್ಯ, ಗೊಂದಲ, ಚಿಂತೆಗಳು ಉಂಟಾಗಿ ಕೊನೆಗೆ ಆತನು ತಡೆಯಲಾರದೆ ಭಗವಾನರಲ್ಲಿ ಈ ವಿಷಯಗಳಿಗೆ ಕಾರಣವೇನೆಂದು ಕೇಳಿಯೇ ಬಿಟ್ಟನು.
            ಆಗ ಭಗವಾನರು ಹೀಗೆ ಉತ್ತರಿಸಿದರು: "ಓ ಅಂಕುರ, ದಾನ ಮಾಡುವಾಗ, ಪ್ರಜ್ಞಾರಾಗಿ ದಾನ ಮಾಡುವುದು ಒಳ್ಳೆಯದು. ನೀನು ಮಾಡುವ ದಾನವು ಪುಣ್ಯ ಬೀಜಗಳಂತೆ, ಅದಕ್ಕೆ ಫಲವತ್ತಾದ ಭೂಮಿಯೆಂದರೆ ಲೋಭರಹಿತರು, ದ್ವೇಷರಹಿತರು ಮತ್ತು ಮೋಹರಹಿತರೇ ಆಗಿರುತ್ತಾರೆ. ಆದ್ದರಿಂದಾಗಿ ಲೋಭ, ದ್ವೇಷ ಮತ್ತು ಮೋಹಗಳಿಂದ ಕೂಡಿರುವ ಜನರಿಗೆ ದಾನ ಮಾಡಿದರೆ ಅದು ಬರಡು ಭೂಮಿಯಂತೆ ಅಲ್ಲಿ ಕಳೆ ಬೆಳೆಯಬಹುದೇ ವಿನಃ ಬೆಳೆಯನ್ನಲ್ಲ. ಆದ್ದರಿಂದ ದಾನ ನೀಡುವಾಗ ವಿವೇಚನೆ ಉಳ್ಳವನಾಗು, ಪ್ರಜ್ಞಾನಾಗು, ಉಪಾಯ ಕೌಶಲ್ಯವುಳ್ಳವನಾಗು. ಹಿಂದಿನ ಜನ್ಮದಲ್ಲಿ ನಿನಗೆ ಇಂತಹ ವಿವೇಚನೆ ಇಲ್ಲದಿರುವುದರಿಂದಾಗಿ, ಅಂತಹ ವ್ಯಕ್ತಿಗಳೂ ಸಹಾ ದೊರೆಯದೆ ಇರುವುದರಿಂದಾಗಿ ನಿನಗೆ ಅತ್ಯಲ್ಪ ಲಾಭವುಂಟಾಯಿತು." ಹೀಗೆ ಹೇಳಿ ನಂತರ ಈ ಗಾಥೆಗಳನ್ನು ನುಡಿದರು.






No comments:

Post a Comment