Monday, 7 September 2015

dhammapada/tanhavagga/24.3/studentofmahakassapa

ಸ್ವತಂತ್ರನಾಗುತ್ತಿದ್ದರೂ ಮರಳಿ ಬಂಧನದತ್ತ
ಬರುತ್ತಿರುವುದು ಮೂರ್ಖತನ
"ಯಾರು ವನವಿಲ್ಲದವನಾಗಿ (ಆಸೆರಹಿತನಾಗಿ),
ವನದೆಡೆಗೆ (ಭಿಕ್ಷು ಜೀವನಕ್ಕೆ) ಹೋಗಿದ್ದನೋ
ಅಂತಹವ ಈಗ ವನಮುಕ್ತನಾಗಿಯೂ ವನದೆಡೆಗೆ
ಧಾವಿಸುತ್ತಿದ್ದಾನೆ (ಸ್ವತಂತ್ರನಾಗಿಯು ಭೋಗದೆಡೆಗೆ ಧಾವಿಸುತ್ತಿದ್ದಾನೆ).
ಮುಕ್ತನಾಗಿದ್ದರೂ ಸಹಾ ಬಂಧನದೆಡೆಗೆ
ಧಾವಿಸುತ್ತಿರುವ ಈತನನ್ನು ನೋಡಿ."            (344)

ಗಾಥ ಪ್ರಸಂಗ 24:3
ಧ್ಯಾನಸಿದ್ಧ ಭಿಕ್ಷುವು ಕಳ್ಳನಾಗಿ ಹೋಗಿದ್ದನು.

            ಪರಮಪೂಜ್ಯ ಕಸ್ಸಪರವರಿಗೆ ಅಪಾರ ಶಿಷ್ಯರಿದ್ದರು. ಅವರಲ್ಲಿ ಈ ಭಿಕ್ಷುವು ಸಹಾ ಒಬ್ಬನಾಗಿದ್ದನು. ಆತನು ತನ್ನ ದೃಢಪರಾಕ್ರಮದಿಂದಾಗಿ ಚತುರ್ಥ ಸಮಾಧಿಯನ್ನು ಸಿದ್ಧಿಗೊಳಿಸಿದ್ದನು. ಆದರೆ ಒಂದುದಿನ ಆತನು ತನ್ನ ಚಿಕ್ಕಪ್ಪನ ಮನೆಗೆ ಔತಣಕ್ಕಾಗಿ ಹೋಗಿರುವಾಗ ಸ್ತ್ರೀಯೊಬ್ಬಳನ್ನು ಕಂಡು ವಿಚಲಿತನಾದನು. ಆತನು ವೈರಾಗ್ಯ ವೃದ್ಧಿಗೆ ಶ್ರಮಗೊಳಿಸದ ಕಾರಣ ಹಾಗು ಲೋಕೋತ್ತರ ಮಾರ್ಗ ಮತ್ತು ಫಲಗಳಿಸದ ಕಾರಣ, ಧ್ಯಾನ ಸಿದ್ಧನಾದರೂ ಸಹಾ ಸ್ತ್ರೀ ಬಯಕೆಯಿಂದಾಗಿ ಆತನು ಭಿಕ್ಷುತನವನ್ನು ತ್ಯಜಿಸಿದನು, ಪುನಃ ಗೃಹಸ್ಥನಾದನು. ಆದರೂ ಸಹಾ ಪ್ರಾಪಂಚಿಕ ಜೀವನದಲ್ಲಿ ಆತನು ಪರಿಶ್ರಮಹೀನನಾಗಿ ಯಶಸ್ವಿಯಾಗಲಿಲ್ಲ. ಹೀಗಾಗಿ ಆತನ ಚಿಕ್ಕಪ್ಪನು ಆತನನ್ನು ಮನೆಯಿಂದ ಹೊರದೂಡಿದನು. ಆಗ ಆತನಿಗೆ ಕೆಲವು ಚೋರರ ಪರಿಚಯವಾಯಿತು, ಅವರೊಂದಿಗೆ ಸ್ನೇಹವು ಮುಂದುವರೆಯಿತು. ಪರಿಣಾಮವಾಗಿ ಆತನು ಕಳ್ಳನಾಗಿ ಹೋದನು. ಆದರೆ ಒಂದುದಿನ ಕಳ್ಳರೆಲ್ಲರೂ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು. ಆಗ ಅವರನ್ನು ಗಲ್ಲಿಗೇರಿಸುವ (ವಧಿಸುವ) ಆಜ್ಞೆ ಜಾರಿಯಾಯಿತು.
            ಹೀಗಾಗಿ ಅವರನ್ನೆಲ್ಲಾ ಸ್ಮಶಾನಕ್ಕೆ ಕರೆದೊಯ್ಯಲಾರಂಭಿಸಿದರು. ಆಗ ಮಹಾಕಸ್ಸಪರು ತನ್ನ ಶಿಷ್ಯನನ್ನು ಗುರುತಿಸಿ ಆತನಿಗೆ ಹೀಗೆ ಆದೇಶ ನೀಡಿದರು: "ಓ ಶಿಷ್ಯನೇ, ಧ್ಯಾನ ವಿಷಯದಲ್ಲಿ ಚಿತ್ತವನ್ನು ಕೇಂದ್ರೀಕರಿಸು, ದೃಢವಾಗಿ ಪುನಃ ಆ ನಾಲ್ಕನೆಯ ಸಮಾಧಿಗೆ ಮರಳುವಂತಾಗು". ತಕ್ಷಣ ಆ ಶಿಷ್ಯನು ಆ ಗುರುಬೋಧನೆಯನ್ನು ಪಾಲಿಸಲು ಆರಂಭಿಸಿದನು. ಈ ಹಿಂದೆಯೇ ಅದನ್ನು ಪ್ರಾಪ್ತಿಗಳಿಸಿದ್ದರಿಂದಾಗಿ ಆತನಿಗೆ ಅಂತಹ ಕಷ್ಟವೇನೂ ಆಗಲಿಲ್ಲ. ಆತನು ಚತುರ್ಥ ಸಮಾಧಿಯಲ್ಲೇ ಪ್ರತಿಷ್ಠಾಪಿಸಲ್ಪಟ್ಟನು. ಆ ಸ್ಮಶಾನದಲ್ಲಿ ಗಲ್ಲುಹಾಕುವವರು ಆತನನ್ನು ಕೊಲ್ಲಲು ಸಿದ್ಧತೆ ನಡೆಸತೊಡಗಿದರು. ಆದರೆ ಈ ಯುವಕನು ಪೂರ್ಣವಾಗಿ ಸಮಚಿತ್ತತೆಯಲ್ಲಿ ನೆಲೆಗೊಂಡಿದ್ದರಿಂದಾಗಿ ಆತನಲ್ಲಿ ಯಾವುದೇ ಆತಂಕವಾಗಲಿ, ಭೀತಿಯಾಗಲಿ ಲವಲೇಶವೂ ಕಾಣಲಿಲ್ಲ. ಇದರಿಂದಾಗಿ ಅವಾಕ್ಕಾದ, ಆ ಭಟರು ಈತನ ಚಿತ್ರಪ್ರಶಾಂತತೆಗೆ ಮರುಳಾಗಿ ಕೊಲ್ಲಲ್ಲು ಆಗದೆ ರಾಜನಿಗೆ ಆತನ ಪ್ರಶಾಂತತೆಯ ವಿಶಿಷ್ಟತೆ ತಿಳಿಸಿದರು. ನಂತರ ಬುದ್ಧರಿಗೂ ತಿಳಿಸಿದರು. ತಕ್ಷಣ ರಾಜನು ಭಟರಿಗೆ ಆತನನ್ನು ಸ್ವತಂತ್ರಗೊಳಿಸುವಂತೆ ಆಜ್ಞಾಪಿಸಿದನು.
            ತಕ್ಷಣ ಭಗವಾನರು ಸಹಾ ತಮ್ಮ ಪ್ರತಿಬಿಂಬವನ್ನು ಆತನ ಮುಂದೆ ಪ್ರತ್ಯಕ್ಷಗೊಳಿಸಿ ಈ ಮೇಲಿನ ಗಾಥೆಯನ್ನು ನುಡಿದರು. ನಂತರ ಆತನಿಗೆ ಹೀಗೆ ನುಡಿದರು: "ನಿನ್ನ ಚಿತ್ತವನ್ನು ಚಿತ್ತಕ್ಲೇಶಗಳಿಂದ ಶುದ್ಧೀಕರಿಸು, ಆಸೆಗಳನ್ನು ನಿಮರ್ೂಲಗೊಳಿಸು ಹಾಗೂ ಸ್ವತಂತ್ರನಾಗು."

            ತಕ್ಷಣ ಆ ಕಳ್ಳನು ಪಂಚಖಂಧಗಳ ಅನಿತ್ಯತೆ, ದುಃಖ ಅನಾತ್ತವನ್ನು (ಅನಾತ್ಮ) ಗ್ರಹಿಸಲಾರಂಭಿಸಿದನು. ಕೆಲಕಾಲದಲ್ಲೇ ಸೋತಪತ್ತಿ ಫಲ ಪಡೆದನು. ನಂತರ ಪುನಃ ಆತನು ಭಿಕ್ಷುವಾದನು. ಕೆಲದಿನಗಳಲ್ಲೇ ಆತನು ಅರಹಂತನಾದನು.

No comments:

Post a Comment