Friday, 18 September 2015

dhammapada/bhikkuvagga/25.2/bhikkuwhokilledswan

ಸಂಯಮಿಯು ಮತ್ತು ಧ್ಯಾನಿಯೇ ಭಿಕ್ಷು
"ಹಸ್ತಗಳಿಂದ ಸಂಯಮದಿಂದಿರುವವನು,
ಪಾದಗಳಿಂದ ಸಂಯಮದಿಂದಿರುವವನು,
ಮಾತಿನಲ್ಲಿ ಸಂಯಮದಿಂದಿರುವವನು,
ಎಲ್ಲದರಲ್ಲೂ ಸಂಯಮದಿಂದಿರುವವನು,
ಧ್ಯಾನದಲ್ಲಿ ರತನಾಗಿರುವವನು, ಪ್ರಶಾಂತನು,
ಏಕಾಂಗಿಯು ಮತ್ತು ಸಂತೃಪ್ತನಾಗಿರುವವನನ್ನು ಭಿಕ್ಷು ಎನ್ನುವರು."   (362)
ಗಾಥ ಪ್ರಸಂಗ 25:2
ಹಂಸವನ್ನು ಹತ್ಯೆ ಮಾಡಿದ ಭಿಕ್ಷು

            ಶ್ರಾವಸ್ತಿಯ ಇಬ್ಬರು ಯುವಕರು ಲೌಕಿಕ ಜೀವನದಲ್ಲಿ ಮಿತ್ರರಾಗಿದ್ದರು, ನಂತರ ಅವರಿಬ್ಬರೂ ಭಿಕ್ಷುಗಳಾದರು. ಒಂದುದಿನ ಅವರು ಅಚಿರಾವತಿ ನದಿಯ ಬಳಿ ಸ್ನಾನ ಮಾಡುತ್ತಿದ್ದರು. ಆಗ ಆಕಾಶದಲ್ಲಿ ಎರಡು ಹಂಸಗಳು ಹಾರಾಡುತ್ತಿದ್ದವು. ಒಬ್ಬ ಭಿಕ್ಷು ಸಣ್ಣ ಕಲ್ಲನ್ನು ಎತ್ತಿಕೊಂಡು ಹೀಗೆ ಹೇಳಿದನು: "ನಾನು ಹಾರುತ್ತಿರುವ ಆ ಹಂಸದ ಕಣ್ಣಿಗೆ ಗುರಿಯಿಟ್ಟು ಹೊಡೆಯಬಲ್ಲೆ, ನನಗೆ ಅಂತಹ ಗುರಿಯಿಟ್ಟು ಹೊಡೆಯುವ ನೈಪುಣ್ಯವಿದೆ" ಎಂದನು.
            "ಇಲ್ಲ, ನೀನು ಹೊಡೆಯಲಾರೆ" ಎಂದನು ಮತ್ತೊಬ್ಬ ಭಿಕ್ಷು.
            "ನಿನಗೆ ಗೊತ್ತಿಲ್ಲ, ನಾನು ಆ ಹಂಸದ ಆ ಬದಿಯಲ್ಲಿರುವ ಕಣ್ಣಿಗೂ ಬೇಕಾದರೆ ಹೊಡೆಯಬಲ್ಲೆ." "ನಿನಗೆ ಸಾಧ್ಯವೇ ಇಲ್ಲ."
            ಆಗ ಆ ಭಿಕ್ಷುವು ಮೊದಲು ಆ ಕಲ್ಲನ್ನು ಎಸೆದು ಆ ಹಂಸದ ಗಮನ ಸೆಳೆದನು. ಆ ಹಂಸವು ತಿರುಗಿ ನೋಡಿದಾಗ ಅಷ್ಟರಲ್ಲಿ ಇನ್ನೊಂದು ಕಲ್ಲಿನಿಂದ ಅದರ ಆ ಬದಿಯ ಕಣ್ಣಿಗೆ ಕಲ್ಲನ್ನು ತೂರಿಸಿಯೇ ಬಿಟ್ಟಿದ್ದನು. ಆ ಪಕ್ಷಿಯ ಕಣ್ಣಿಗೆ ಬಲವಾದ ಪೆಟ್ಟುಬಿತ್ತು. ಅದರ ಕಣ್ಣು ಕಿತ್ತುಹೋಯಿತು. ಅದು ನೋವಿನಿಂದ ನಡುಗುತ್ತಾ ನೆಲದ ಮೇಲೆ ಬಿದ್ದಿತು, ಒದ್ದಾಡಿತು, ನಂತರ ಪ್ರಾಣಬಿಟ್ಟಿತು.
            ಆಗ ಭಿಕ್ಷುಗಳು ಪ್ರಾಣಿಹತ್ಯೆ ಸಂಬಂಧವಾಗಿ ಆ ಭಿಕ್ಷುವನ್ನು ಕರೆದುಕೊಂಡು ಭಗವಾನರ ಸಮ್ಮುಖದಲ್ಲಿ ನಿಲ್ಲಿಸಿದರು.
            "ಭಿಕ್ಷು, ನೀನು ನಿಜವಾಗಿ ಪ್ರಾಣಿಹತ್ಯೆಯನ್ನು ಮಾಡಿದೆಯಾ?" "ಹೌದು ಭಂತೆ."

            "ಓ ಭಿಕ್ಷುವೇ, ನನ್ನ ಧಮ್ಮದಲ್ಲಿ ನೀನು ಸೇರಿಯೂ ಸಹಾ ಇಂತಹ ಕೆಲಸವನ್ನು ಹೇಗೆತಾನೇ ಮಾಡಿದೆ. ಪ್ರಪಂಚವನ್ನು ತೊರೆದು ಸಹಾ, ಹಿಂಸೆಯನ್ನೇಕೆ ತೊರೆಯದಾದೆ, ಯಾರು ಸದಾ ಉನ್ನತಿಯನ್ನು ಪಾಲಿಸಬೇಕಿತ್ತೋ, ಅಂತಹವನಾದ ನೀನು, ದಯಾಹೀನನಾಗಿ ಹಿಂಸೆಯನ್ನು ಹೇಗೆತಾನೇ ಮಾಡಿದೆ? ದುಃಖದಿಂದ ಮುಕ್ತನಾಗಲು ಪ್ರಯತ್ನಿಸುತ್ತಿರುವ ನೀನು ಪರ ಜೀವಿಗೆ ಹೇಗೆತಾನೆ ಹಿಂಸಿಸಿದೆ, ದುಃಖವನ್ನಿತ್ತೆ? ಓಹ್ ಭಿಕ್ಷುವಾದವನು ಖಂಡಿತವಾಗಿ ಕಾಯಾ, ವಾಚಾ ಮತ್ತು ಮನಸ್ಸಿನಲ್ಲಿಯೂ ಹಿಂಸಾ ಭಾವನೆ ಮಾಡಬಾರದು. ತ್ರಿಶರಣಪೂರ್ವಕವಾಗಿ ಭಿಕ್ಷುವು ಸಂಯಮಿತನಾಗಿರಬೇಕು" ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment