Wednesday 5 August 2015

dhammapada/maggavagga/20.11/kisagotami

ಮರಣವು ಮಹಾ ಹೊಳೆಯಂತೆ ಆಕ್ರಮಿಸುವುದು
"ತನ್ನ ಪುತ್ರ, ತನ್ನ ಪಶುಸಂಪತ್ತಿಯೆಂದು
ತೀವ್ರವಾಗಿ ಆಸಕ್ತರಾಗಿ ಮತ್ತರಾಗಿರುವ ನರನನ್ನು,
ನಿದ್ರಿಸುತ್ತಿರುವ ಗ್ರಾಮಕ್ಕೆ ಮಹಾ ಪ್ರವಾಹವು
ಕೊಚ್ಚಿಕೊಂಡು ಹೋಗುವ ಹಾಗೇ ಮೃತ್ಯುವು ತೆಗೆದುಕೊಂಡುಹೋಗುತ್ತದೆ."     (287)

ಗಾಥ ಪ್ರಸಂಗ 20:11
ಕಿಸಾಗೋತಮಿಗೆ ಸಾಂತ್ವನ

           
ಗಾಥ ಪ್ರಸಂಗ 8:13
ಸಾವಿಗೆ ಸಾಸುವೆಯ ಔಷಧಿ ಹುಡುಕಿದ ಕಿಸಾಗೋತಮಿಯ ಘಟನೆ
                ಕಿಸಾ ಗೊತಮಿಯು ಶ್ರಾವಸ್ತಿಯ ಶ್ರಿಮಂತನ ಮಗಳಾಗಿದ್ದಳು. ಆಕೆ ಅತಿ ತೆಳ್ಳಗೆ ಇದ್ದ ಕಾರಣ ಎಲ್ಲರೂ ಕಿಸಾ (ಕೃಶ) ಗೌತಮಿ (ಗೋತಮಿ) ಎಂದು ಕರೆಯುತ್ತಿದ್ದರು. ಆಕೆಯು ಶ್ರೀಮಂತ ಯುವಕನೊಂದಿಗೆ ವಿವಾಹವಾಗಿ, ಆಕೆಗೆ ಮಗನು ಜನಿಸಿದನು. ಆದರೆ ಆ ಮಗುವು ಅಂಬೆಗಾಲಿಡುವ ವಯಸ್ಸಿನಲ್ಲೇ ಸತ್ತುಹೋದನು. ಈ ವಿಷಯ ಕಿಸಾಗೋತಮಿಗೆ ಸಹಿಸಲಾರದ ದುಃಖ ನೀಡಿತು. ಆಕೆಗೆ ಸಾವೆಂದರೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಆಕೆಯ ಮಗುವು ರೋಗಗ್ರಸ್ಥವಾಗಿ ಹೀಗಾಗಿದೆ ಎಂದು ತಿಳಿದು ಮಗುವನ್ನು ಉಳಿಸಿರೆಂದು ಮಗುವನ್ನು ಎತ್ತಿಕೊಂಡು, ಊರೆಲ್ಲಾ ಸುತ್ತಾಡಿದಳು. ಜನರು ಆಕೆಯನ್ನು ಹುಚ್ಚಿಯೆಂದು ತಿಳಿದರು. ಆದರೆ ಒಬ್ಬ ಪ್ರಜ್ಞಾವಂತನು ಆಕೆಯ ಮನಸ್ಥಿತಿ ಗಮನಿಸಿ ಆಕೆಗೆ ಈ ಸಲಹೆ ನೀಡಿದನು: ಓ ತಂಗಿಯೇ, ಈ ಲೋಕದಲ್ಲಿ ಬುದ್ಧರೊಬ್ಬರೇ ನಿನಗೆ ಔಷಧ ನೀಡಬಲ್ಲರು. ನೀನು ಅವರ ಬಳಿಗೆ ಹೋಗುವೆಯಾದರೆ, ನಿನಗೆ ಮಂಗಳವಾಗುವುದು. ಅದನ್ನು ಆಲಿಸಿದ ಆಕೆಯು ಬುದ್ಧರ ಬಳಿಗೆ ಧಾವಿಸಿ ಬಂದಳು. ಹಾಗು ಬುದ್ಧರಿಗೆ ತನ್ನ ಮಗುವನ್ನು ಉಳಿಸಿಕೊಡಿರೆಂದು ಯಾಚಿಸಿದಳು.
                ಆಗ ಬುದ್ಧರು ಆಕೆಗೆ ಹೀಗೆ ಹೇಳಿದರು: ಮಗಳೇ, ಹಿಡಿಯಷ್ಟು ಸಾಸುವೆಯನ್ನು ತೆಗೆದುಕೊಂಡು ಬಾ, ನಾನು ನಿನ್ನ ಮಗುವನ್ನು ಸಾವಿನಿಂದ ಪಾರುಮಾಡುವೆ. ಆದರೆ ನೆನಪಿರಲಿ, ನೀನು ತರುವ ಮನೆಯಲ್ಲಿ ಯಾರೂ ಸತ್ತಿರಬಾರದು. ಅದನ್ನು ಆಲಿಸಿದ ಕಿಸಾಗೋತಮಿಯು ತಕ್ಷಣವೇ ಸಾಸುವೆ ತರಲು ಹೋದಳು. ಆಕೆ ಸಾಸುವೆ ಕೇಳಿದಾಗ ಪ್ರತಿಯೊಬ್ಬರೂ ಸಾಸುವೆ ನೀಡಲು ಮುಂದಾದರು. ಆದರೆ ಆಕೆಯು ಆ ಮನೆಯಲ್ಲಿ ಯಾರೂ ಸಾವು ಪಡೆದಿಲ್ಲ ತಾನೇ ಎಂದು ಪ್ರಶ್ನಿಸಿದಾಗ, ಪ್ರತಿಯೊಬ್ಬರ ಮನೆಯಲ್ಲಿ ಸಾವುಗಳಾಗಿದ್ದನ್ನು ಕಂಡಳು. ಆಗ ಆಕೆಗೆ ಪ್ರತಿಯೊಂದು ಮನೆಯಲ್ಲಿ, ಪ್ರತಿ ಕುಟುಂಬದಲ್ಲಿ ಸಾವುಗಳಾಗುತ್ತಿರುವುದನ್ನು ಕಂಡಳು. ಜೀವಿಸುತ್ತಿರುವ ಜನಗಳಿಗಿಂತ ಸಾಯುತ್ತಿರುವ ಜನರೇ ಹೆಚ್ಚಾಗಿರುವುದು ಆಕೆಗೆ ಕಂಡುಬಂದಿತು. ಪ್ರತಿ ಜೀವಿಸುತ್ತಿರುವ ಜೀವಿಯು ಸಾಯಲೇಬೇಕು, ಜೀವನ ಕ್ಷಣಿಕ, ಸಾವು ಖಚಿತ ಎಂದು ಆಕೆಗೆ ಅರಿವಾದ ಕ್ಷಣದಲ್ಲೇ, ಆಕೆಗೆ ತನ್ನ ಮಗುವಿನ ಬಗ್ಗೆ ಇದ್ದ ಅಭಿಪ್ರಾಯ ಬದಲಾಯಿತು. ಆಕೆಯ ಚಿತ್ತವು ಆ ಮಗುವಿನ ಮೇಲಿದ್ದ ಅಂಟುವಿಕೆಯಿಂದ ಮುಕ್ತವಾಯಿತು.
                ಆಗ ಆಕೆಯು ಆ ಮಗುವಿನ ಶವವನ್ನು ಕಾಡಿನಲ್ಲಿಯೇ ಬಿಟ್ಟು ಬುದ್ಧರ ಬಳಿಗೆ ಬಂದಳು. ಹೀಗೆ ಹೇಳಿದಳು- ಭಂತೆ, ಸಾವಿಲ್ಲದ ಯಾವ ಮನೆಯೂ ಇಲ್ಲ, ಪ್ರತಿ ನಗರ, ಪ್ರತಿ ಹಳ್ಳಿಯಲ್ಲಿ ಎಲ್ಲೆಡೆಯೂ ಜೀವಿಸುವವರ ಸಂಖ್ಯೆಗಿಂತ, ಸತ್ತವರ ಸಂಖ್ಯೆಯೇ ಹೆಚ್ಚಾಗಿದೆ. ಆಗ ಬುದ್ಧ ಭಗವಾನರು ಹೀಗೆ ಹೇಳಿದರು- ಓ ಗೋತಮಿ, ನೀನು ಕೇವಲ ನಿನ್ನ ಮಗುವೇ ಸತ್ತಿದೆ ಎಂದು ಭ್ರಮಿಸಿದೆ, ಆದರೆ ಎಲ್ಲಾ ಜೀವಿಗಳು ಸಾವಿಗೆ ಗುರಿಯಾಗುವ ನಿತ್ಯ ನಿಯಮಕ್ಕೆ ಒಳಪಟ್ಟಿವೆ. ಹೇಗೆಂದರೆ ಸಾವಿನ ರಾಜಕುಮಾರನು ಉಗ್ರ ಪ್ರವಾಹದ ಹೊಳೆಯ ಪ್ರತಿ ಜೀವಿಯನ್ನು ಕೊಚ್ಚಿಕೊಂಡು ಹೋಗುವ ಹಾಗೆ, ಬಯಕೆಗಳು ತೃಪ್ತವಾಗುವ ಮುನ್ನವೇ ಕೊಲ್ಲುತ್ತ ಹೋಗುತ್ತದೆ. ನೀನು ನಿನ್ನ ಮಗುವೇ ಸತ್ತಿದೆ ಎಂದು ಭಾವಿಸಿದೆ. ಆದರೆ ಈಗ ನಿನಗೆ ಪ್ರತಿಯೊಂದು ಜೀವಿಯು ಸಾಯುವುದು, ಜೀವಿಗಳ ಬಯಕೆಗಳು ಈಡೇರುವ ಮುನ್ನವೇ ಮರಣವು ಜೀವಿತವನ್ನು ನಾಶಗೈಯ್ಯುವುದು ಎಂದು ಅರಿತಿರುವೆ ಎಂದರು. ಇದನ್ನು ಯೋಗ್ಯವಾಗಿ ಗ್ರಹಿಸಿದ ಕಿಸಾಗೋತಮಿಯಲ್ಲಿ ಖಂದಗಳ ತ್ರಿಲಕ್ಷಣಗಳು ಅರಿವಾಗಿ ಅನಿತ್ಯ, ದುಃಖ, ಅನಾತ್ತಗಳ ಸಾಕ್ಷಾತ್ಕಾರವಾಗಿ ಸೋತಾಪತ್ತಿ ಫಲ ಪಡೆದಳು, ನಂತರ ಆಕೆ ಭಿಕ್ಷುಣಿಯಾದಳು.
                ಆಕೆ ಪರಿಶ್ರಮಯುತ ಭಿಕ್ಷುಣಿಯಾಗಿದ್ದಳು ಮತ್ತು ಸದಾ ಸ್ಮೃತಿವಂತೆಯಾಗಿದ್ದಳು. ತನ್ನ ಧಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದಳು. ತನ್ನ ಚಿತ್ತವಿಶುದ್ಧಿಗಾಗಿ ಅಪಾರ ಶ್ರಮಪಡುತ್ತಿದ್ದಳು.
                ಒಂದುರಾತ್ರಿ ಆಕೆ ದೀಪಗಳನ್ನು ಹಚ್ಚಿ ಸ್ವಲ್ಪ ದೂರದಲ್ಲಿ ಕುಳಿತಳು. ಆಕೆ ಜ್ವಾಲೆಗಳನ್ನು ಗಮನಿಸುತ್ತ ಧ್ಯಾನಿಸಿದಳು. ನಂತರ ಆಕೆಯು ಗಮನಿಸಿದ್ದು ಏನೆಂದರೆ ಕೆಲವು ದೀಪಗ ಜ್ವಾಲೆಗಳು ಪ್ರಜ್ವಲಿಸಿ ಉರಿದರೆ, ಕೆಲವು ಮಿಣುಕು ಮಸಕಾಗಿ ಉರಿದವು. ಆಗ ಆಕೆಯು ಜ್ವಾಲೆಗಳ ಬಗ್ಗೆ ಈ ರೀತಿ ಚಿಂತನೆ ಮಾಡಿದಳು. ಈ ದೀಪಗಳ ಹಾಗೇ ಎಲ್ಲಾ ಜೀವಿಗಳೂ ಸಹಾ, ಕೆಲವು ಪ್ರಜ್ವಲಿಸಿ ಉರಿಯುತ್ತವೆ, ಕೆಲವು ಮಂಕಾಗಿ ಉರಿಯುತ್ತವೆ ಮತ್ತು ಕೆಲವು ಆರಿಹೋಗುತ್ತವೆ. ಹಾಗೆಯೇ ಯಾರು ನಿಬ್ಬಾಣ ಪಡೆದಿದ್ದಾರೋ ಅವರು ಯಾರಿಗೂ ಕಾಣಿಸುವುದಿಲ್ಲ.
                ಆಗ ಬುದ್ಧರಿಗೂ ಈಕೆ ಪಕ್ವ ಸ್ಥಿತಿಯಲ್ಲಿ ಇರುವಳೆಂದು ಅರಿವಾಗಿ ಜೇತವನದ ವಿಹಾರದಿಂದಲೇ ತಮ್ಮ ಬಿಂಬದ ಕಿರಣವನ್ನು ಆಕೆಯ ಮುಂದೆ ಪ್ರತ್ಯಕ್ಷಗೊಳಿಸಿ, ಆಕೆಯು ಅನಿತ್ಯವನ್ನು ಇನ್ನೂ ಸ್ವಷ್ಟವಾಗಿ ಗ್ರಹಿಸುವಂತೆ ಪ್ರೋತ್ಸಾಹಿಸಿದರು. ನಂತರ ಈ ಗಾಥೆಯನ್ನು ನುಡಿದರು.
 ಅಮರತ್ವವನ್ನು ಕಂಡ ಒಂದು ದಿನ,
ಕಂಡಿಲ್ಲದ ಉಳಿದವರ ಇಡೀ ಜೀವನಕ್ಕಿಂತ ಉತ್ತಮ
ಒಬ್ಬನು ಅಮರತ್ವದ ಸ್ಥಿತಿಯನ್ನು ಅರಿಯದೆ ಶತವರ್ಷಗಳನ್ನು ಜೀವಿಸಬಹುದುಆದರೆ ಅಮರತ್ವವನ್ನು ಗ್ರಹಿಸಿದ ಒಂದು ದಿನದ ಜೀವಿತವು ಅದಕ್ಕಿಂತ ಶ್ರೇಷ್ಠಕರವಾಗಿರುತ್ತದೆ.         (114)
 ಆಗ ಕಿಸಾಗೋತಮಿಯು ಕೊನೆಗೂ ಮರಣವಿರದ ಸ್ಥಾನ ತಲುಪಿ ಅರಹಂತೆಯಾದಳು.

No comments:

Post a Comment