Wednesday 5 August 2015

dhammapada/maggavagga/20.9/thesonofgoldsmith

ಶಾಂತಿಯ ಸ್ನೇಹರಹಿತತೆಯೇ ಮಹೋನ್ನತ ಮಾರ್ಗ
"ತನ್ನ ಬಗ್ಗೆ ಇರುವ ಸ್ನೇಹ (ಅಂಟುವಿಕೆ)ವನ್ನು ಕಿತ್ತುಹಾಕು.
ಹೇಗೆಂದರೆ ಶರದ್ ಋತುವಿನ ಕುಮುದವನ್ನು ಬೇರುಸಹಿತ ಕೀಳುವಂತೆ
ಸುಗತರಿಂದ ಉಪದೇಶಿಸಲ್ಪಟ್ಟ ನಿಬ್ಬಾಣದ  ಈ ಶಾಂತಿ ಮಾರ್ಗವನ್ನು
ಅಭಿವೃದ್ಧಿಗೊಳಿಸು."    (285)

ಗಾಥ ಪ್ರಸಂಗ 20:9
ಅಕ್ಕಸಾಲಿಗನ ಪುತ್ರನಿಗೆ ಪದ್ಮಪುಷ್ಪದ ಧ್ಯಾನ

            ಶ್ರಾವಸ್ತಿಯ ಅಕ್ಕಸಾಲಿಗನ ಮಗನು ಪೂಜ್ಯ ಸಾರಿಪುತ್ರರಿಂದ ಆಕರ್ಷಣೆಗೆ ಒಳಪಟ್ಟು ಸಂಘಕ್ಕೆ ಸೇರುತ್ತಾನೆ. ನಂತರ ಸಾರಿಪುತ್ರರು ಆತನಿಗೆ ಅಶುಭ ಧ್ಯಾನಗಳ ವಿಷಯವನ್ನೇ ಧ್ಯಾನಕ್ಕೆ ನೀಡಿದರು. ನಂತರ ಆತನು ಅಡವಿಗೆ ಅಲ್ಲಿ ಸಮೀಪದಲ್ಲಿದ್ದ ಶವಗಳ ವೀಕ್ಷಣೆ ಮಾಡಿ ನಂತರ ಕಾಡಿನ ವೃಕ್ಷದ ಕೆಳಗೆ ಪದ್ಮಾಸೀನನಾಗಿ ಶವ ಶರೀರದ ಅಸಹ್ಯಗಳ ಕುರಿತಾದ ಧ್ಯಾನ ಮಾಡಿದನು. ಹೀಗೆಯೇ ನಾಲ್ಕು ತಿಂಗಳು ಸಾಧನೆ ಮಾಡಿದರೂ ಸಹಾ ಆತನು ಪ್ರಗತಿಕಾಣದಾದನು. ಆಗ ಆತನು ಪುನಃ ಸಾರಿಪುತ್ರರನ್ನು ಭೇಟಿಮಾಡಿ ಇನ್ನಷ್ಟು ವಿವರಗಳನ್ನು ಕೇಳಿ, ಮತ್ತೆ ಧ್ಯಾನದಲ್ಲಿ ಮುಂದುವರೆದರೂ ಸಹಾ ಆತನು ಧ್ಯಾನ ಸಿದ್ಧಿಸಲು ಮಾರ್ಗಫಲ ಪಡೆಯಲು ವಿಫಲನಾದನು. ಮತ್ತೆ ಸಾರಿಪುತ್ರರನ್ನು ಭೇಟಿ ಮಾಡಿದನು. ಆಗ ಸಾರಿಪುತ್ರರಿಗೆ ಈತನು ಒಗಟಾಗಿ ಕಾಣಿಸಿದ್ದರಿಂದಾಗಿ ಆತನನ್ನು ಭಗವಾನರ ಬಳಿಗೆ ಬಂದರು.
            ಆಗ ಭಗವಾನರು ಸಾರಿಪುತ್ರರಿಗೆ "ಸಾರಿಪುತ್ರ, ನಿನಗೆ ಆಶಯಾನುಶಯ ಜ್ಞಾನವಿಲ್ಲ (ಪರರ ಪ್ರಚನ್ನತೆಯ ಜ್ಞಾನ). ಈತನನ್ನು ಕರೆದುಕೊಂಡು ಸಂಜೆಗೆ ಬಾ" ಎಂದರು. ಭಗವಾನರು ಹಾಗೆ ಹೇಳಿದಕ್ಕೂ ಕಾರಣವಿತ್ತು. ಅಕ್ಕಸಾಲಿಗನ ಪುತ್ರನು ಕಳೆದ 500 ಜನ್ಮಗಳಿಂದಲೂ ತನ್ನ ಇಚ್ಛೆಯಂತೆಯೇ ಅಕ್ಕಸಾಲಿಗರ ಮನೆಯಲ್ಲಿಯೇ ಹುಟ್ಟಿದ್ದನು. ಸದಾ ಶುಭವನ್ನೇ ವೀಕ್ಷಿಸಿದ ಆತನಿಗೆ ಅಶುಭ ಧ್ಯಾನದಲ್ಲಿ ಹಿಡಿತ ಸಿಕ್ಕಿರಲಿಲ್ಲ. ಹೀಗಾಗಿ ಭಗವಾನರು ಆತನಿಗೆ ಶುಭ ಧ್ಯಾನಗಳಲ್ಲಿ (ಕಸಿಣಾ) ಒಂದಾದ ಪುಷ್ಪ ಕಸಿಣಾ ಧ್ಯಾನ ಮಾಡಲು ಆದೇಶಿಸಿದರು.
            ಭಗವಾನರೇ ಆತನಿಗೆ ರಮಣೀಯ ಸ್ಥಳವೊಂದರಲ್ಲಿ ಕುಳ್ಳಿರಿಸಿದರು. ನಂತರ ಆತನ ತುಸು ದೂರದಲ್ಲಿ ತಮ್ಮ ಅತೀಂದ್ರಿಯ ಬಲದಿಂದಾಗಿ ಬಂಡಿಯ ಚಕ್ರದಷ್ಟು ಬೃಹತ್ತಾದ ಸುಂದರ ಕಮಲದ ಹೂವನ್ನು ಸೃಷ್ಟಿಸಿದರು. ನಂತರ ಆತನಿಗೆ ಧ್ಯಾನಿಸಲು ಹೇಳಿದರು. ಆಗ ಆ ಯುವ ಭಿಕ್ಷುವು ಬೃಹತ್ತಾದ, ಸುಂದರವಾದ, ಸುಗಂಧಮಯ ಪದ್ಮ ಪುಷ್ಪವನ್ನು ಧ್ಯಾನಿಸಲು ಆರಂಭಿಸಿದನು. ಆತನಿಗೆ ಈ ದೃಶ್ಯವು ಅತ್ಯಂತ ಮನೋಹರವಾಗಿ ಕಂಡಿತು. ಆತನು ಅದನ್ನು ವೀಕ್ಷಿಸುತ್ತಿದ್ದಂತೆಯೇ ಆತನಲ್ಲಿ ಆನಂದವು (ಪೀತಿ) ಪ್ರವಾಹದಂತೆ ಉಕ್ಕಿತು. ರಭಸವಾಗಿ ಬೀಳುವ ಮಳೆಯಂತೆ ಆತನ ಶರೀರವೆಲ್ಲಾ ಆನಂದದಿಂದ ತುಂಬಿತು. ಹಾಗೆಯೇ ಆತನು ಚತುರ್ಥ ಧ್ಯಾನವನ್ನು ಪ್ರಾಪ್ತಿಮಾಡಿದನು.
            ಗಂಧಕುಟಿಯಲ್ಲಿ ಪದ್ಮಾಸೀನರಾಗಿದ್ದ ಭಗವಾನರಿಗೆ ಈ ಯುವ ಭಿಕ್ಷುವು ಪಕ್ವಸ್ಥಿತಿಗೆ ಬಂದಿರುವುದು ಅರಿವಾಯಿತು. ತಕ್ಷಣ ತಮ್ಮ ಅತೀಂದ್ರಿಯ ಬಲದಿಂದಾಗಿ ಅವರು ಆ ಹೂವಿನಲ್ಲಿ ಅನಿತ್ಯತೆ ಉಂಟುಮಾಡಿದರು. ಆಗ ಕ್ರಮೇಣವಾಗಿ ಆ ಹೂವು ಬಣ್ಣಗೆಟ್ಟಿತು, ಬಾಡಿತು, ಸುಗಂಧರಹಿತವಾಯಿತು, ಶಿಥಿಲವಾಗಿ ದಳಗಳು ಉದುರತೊಡಗಿದವು. ಹೂವಿನಲ್ಲಿ ಅನಿತ್ಯತೆ ಗಮನಿಸಿದ ಆ ಯುವಕನು ನಂತರ ಅನಿತ್ಯತೆಯ ದೃಷ್ಟಿಕೋನವನ್ನು ಸಮಸ್ತ ವಸ್ತುಗಳಲ್ಲಿ ವಿಸ್ತರಿಸಿದನು. ಕೊನೆಗೆ ಶರೀರದಲ್ಲೂ ಅನಿತ್ಯತೆ ಕಂಡನು. ನಂತರ ವೇದನೆಗಳಲ್ಲಿ, ಚಿತ್ತದಲ್ಲಿ ಅನಿತ್ಯತೆಯನ್ನು ಕಂಡನು. ಸರ್ವವೂ ಪರಿವರ್ತನಿಯ, ದುಃಖಕಾರಕ ಮತ್ತು ಅನಾತ್ಮಮಯವಾಗಿ ಗೋಚರಿಸಿದವು. ಆಗಲೂ ತನ್ನ ಅಂಟುವಿಕೆಯನ್ನು ಬೇರುಸಹಿತ ಕಿತ್ತುಹಾಕಲು ಹಿಂದು ಮುಂದು ನೋಡುತ್ತಿದ್ದ ಆತನಿಗೆ ಭಗವಾನರು ತಮ್ಮ ಪ್ರತಿಬಿಂಬವನ್ನು ಆತನ ಮುಂದೆ ಪ್ರತ್ಯಕ್ಷಗೊಳಿಸಿ ಈ ಮೇಲಿನ ಗಾಥೆಯನ್ನು ನುಡಿದರು. ತಕ್ಷಣ ಅವರ ಸಾರ ಸ್ವೀಕರಿಸಿ ಅದರಂತೆಯೇ ನಡೆದು ಆ ಕ್ಷಣದಲ್ಲೇ ಅರಹಂತನಾದನು

No comments:

Post a Comment