Wednesday 5 August 2015

dhammapada/maggavagga/20.6/thepigfacedpeta

ಕಾಯಾ-ವಾಚಾ-ಮನಸಾ ಪರಿಶುದ್ಧಿಯಾಗು

"ಮಾತಿನೆಡೆ ಸದಾ ರಕ್ಷಣೆಯಿರಲಿ, ಮನಸ್ಸಿನಲ್ಲೂ ಸುಸಂಯಮಿತನಾಗು,
ಕಾಯದಿಂದ ಯಾವುದೇ ಅಕುಶಲ ಕರ್ಮವನ್ನು ಮಾಡಿದಿರು,
ಈ ಮೂರು ರೀತಿಯ ಕಮ್ಮಗಳ ಮಾರ್ಗದಲ್ಲಿ ಪರಿಶುದ್ಧನಾಗು ಮತ್ತು 
ಋಷಿಯು ತೋರಿಸಿರುವ ಮಾರ್ಗವನ್ನು ಗಳಿಸುವಂತಾಗು."             (281)

ಗಾಥ ಪ್ರಸಂಗ 20:6
ಸ್ವಾರ್ಥದ ಪರಿಣಾಮ

            ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗಿಜ್ಝಕೂಟ ಪರ್ವತದ ಹತ್ತಿರ ನಡೆಯುತ್ತಿರುವಾಗ ಅವರು ದುಃಸ್ಥಿತಿಯಲ್ಲಿದ್ದಂತಹ ಪ್ರೇತವನ್ನು ನೋಡಿದರು. ಆ ಪ್ರೇತದ ಮುಖವು ಹಂದಿಯದ್ದಾಗಿದ್ದರೆ, ಶರೀರವು ಮನುಷ್ಯನಂತೆಯೇ ಇತ್ತು. ಈ ಪ್ರೇತವನ್ನು ನೋಡಿ ಮೊಗ್ಗಲ್ಲಾನರು ವಿಷಾದದ ನಗೆ ಬೀರಿದರು. ನಂತರ ವಿಹಾರಕ್ಕೆ ಮರಳಿದರು, ಭಗವಾನರ ಬಳಿಗೆ ಹೋಗಿ ಕಂಡಂತಹ ವಿಷಯವನ್ನು ನುಡಿದರು: "ಭಗವಾನ್, ಈ ಪ್ರೇತದ ಬಾಯಿಯಲ್ಲಿ ಹುಳುಗಳ ಹಿಂಡು ಹರಿದಾಡುತ್ತಿತ್ತು."
            "ಓ ಮೊಗ್ಗಲ್ಲಾನ ನಾನು ಸಹಾ ಆ ಪ್ರೇತವನ್ನು ಸಮ್ಮಾಸಂಬೋಧಿ ಪ್ರಾಪ್ತಿಯ ಬಳಿಕ ಕಂಡಿದ್ದೆನು. ಆದರೆ ಜನರಿಗೆ ಇದರ ಬಗ್ಗೆ ನಂಬಿಕೆ ಉಂಟಾಗದೆ ನನ್ನನ್ನೇ ತಪ್ಪಾಗ ಭಾವಿಸುವ ಸಾಧ್ಯತೆ ಇದ್ದುದರಿಂದಾಗಿ ನಾನು ಈ ಹಿಂದೆ ಯಾರಿಗೂ ತಿಳಿಸಿರಲಿಲ್ಲ."
            "ಓ ಮೊಗ್ಗಲ್ಲಾನ, ಈ ಹಿಂದಿದ್ದ ಕಸ್ಸಪ ಬುದ್ಧರ ಕಾಲದಲ್ಲಿ ಈ ಪ್ರೇತವು ಕಸ್ಸಪ ಬುದ್ಧರ ಶಾಸನದಲ್ಲಿಯೇ ಭಿಕ್ಷುವಾಗಿದ್ದನು. ಆತನು ಒಂದುದಿನ ಇಬ್ಬರು ಭಿಕ್ಷುಗಳು ವಾಸಿಸುತ್ತಿದ್ದಂತಹ ವಿಹಾರದ ಒಂದು ಭಾಗಕ್ಕೆ ಬಂದನು. ನಂತರ ತಾನು ಸಹಾ ಅವರೊಂದಿಗೆ ವಾಸಿಸತೊಡಗಿದನು, ಈತನ ಪ್ರವಚನ ಶೈಲಿಯನ್ನು ಜನರು ಮೆಚ್ಚತೊಡಗಿದರು. ಆಗ ಆತನಿಗೆ ಸತ್ಕಾರ ಲಾಭಗಳು ಸಿಗುತ್ತಿತ್ತು. ಆಗ ಆತನಿಗೆ ಈ ಇಬ್ಬರು ಭಿಕ್ಷುಗಳು ಇಲ್ಲದಿದ್ದರೆ ತನಗೆ ಇನ್ನೂ ಹೆಚ್ಚು ಲಾಭವಾಗಬಹುದು ಎಂದೆನಿಸಿ, ಅವರಿಬ್ಬರ ನಡುವೆ ಇಲ್ಲಸಲ್ಲದ್ದನ್ನು ಹೇಳಿ ಜಗಳ ತಂದಿಟ್ಟನು. ಪರಿಣಾಮವಾಗಿ ಆ ಇಬ್ಬರು ಭಿಕ್ಷುಗಳು ಜಗಳವಾಡಿ ಆ ವಿಹಾರವನ್ನೇ ತೊರೆದುಬಿಟ್ಟು ಬೇರೆ ಬೇರೆ ಕಡೆ ಹೋಗಿಬಿಟ್ಟರು.

            ಈ ಪಾಪಕೃತ್ಯದ ಪರಿಣಾಮವಾಗಿ ಆತನು ಸತ್ತನಂತರ ಅವೀಚಿ ನರಕದಲ್ಲಿ ಪುನರ್ಜನ್ಮ ತಾಳಿದನು. ನಂತರ ಅಲ್ಲಿಯೂ ಸತ್ತು ಈ ಪ್ರೇತವಾದನು. ಆತನ ಕುಕರ್ಮದಿಂದಲೇ ಆತನಿಗೆ ಈ ವಿಕೃತರೂಪವಿದೆ. ಆದ್ದರಿಂದ ಭಿಕ್ಷುಗಳೇ, ಒಬ್ಬನು ಕಾಯಾ-ವಾಚಾ ಮತ್ತು ಮನಸಾ ಪರಿಶುದ್ಧತೆಯಿಂದಲೇ ಇರಬೇಕು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment