Wednesday 5 August 2015

dhammapada/maggavagga/20.7/polita

ಧ್ಯಾನ ಮತ್ತು ಪ್ರಜ್ಞಾ ಪರಸ್ಪರಾವಲಂಬನೆ ಹೊಂದಿವೆ
"ಧ್ಯಾನದಿಂದಲೇ ಪ್ರಜ್ಞಾವು (ಪ್ರಜ್ಞೆ / ಪಞ್ಞಾ) ಉದಯಿಸುವುದು,
ಧ್ಯಾನವಿಲ್ಲದೆ ಪ್ರಜ್ಞಾವು ಕ್ಷೀಣಿಸುವುದು,
ಅಭಿವೃದ್ಧಿಯ ಮತ್ತು ಅವನತಿಯ ಈ ಎರಡು ವಿಧದ
ಪಥಗಳನ್ನು ಗಮನಿಸಿ, ಒಬ್ಬನು ತನ್ನನ್ನು ಪ್ರಜ್ಞಾ             
ಪ್ರವಧರ್ಿಸುವತ್ತ ಸಾಗಲಿ."       (282)

ಗಾಥ ಪ್ರಸಂಗ 20:7
ಸಾಕ್ಷಾತ್ಕಾರರಹಿತ ಜ್ಞಾನ ವ್ಯರ್ಥ

            ಪೋಲಿತನೆಂಬ ಹಿರಿಯ ಭಿಕ್ಷುವು ತಿಪಿಟಕವನ್ನೆಲ್ಲಾ (ಧಮ್ಮವಿನಯ) ಚೆನ್ನಾಗಿ ಬಲ್ಲವನಾಗಿದ್ದನು. ಹೀಗಾಗಿ ಆತನು ತುಸು ಅಹಂಭಾವಿಯಾದನು. ತಾನೇ ಜ್ಞಾನಿಯೆಂದು ಬೀಗಲಾರಂಭಿಸಿದನು. ಭಗವಾನರು ಆತನ ದೌರ್ಬಲ್ಯವಾದ ಸೋಮಾರಿತನ ಹಾಗು ಅಹಂಭಾವವನ್ನು ತೆಗೆದುಹಾಕಬೇಕೆಂದು ಬಯಸಿದನು. ಆತನನ್ನು ಸರಿಹಾದಿಗೆ ತರಬೇಕೆಂದು ಅವರು ಉಪಾಯವೊಂದನ್ನು ಮಾಡಿದರು. ಅದೆಂದರೆ: ಆತನು ಸಿಕ್ಕಾಗೆಲ್ಲಾ 'ನಿಷ್ಪ್ರಯೋಜಕ ಪೋಲಿತ' ಎಂದು ಕರೆಯಲಾರಂಭಿಸಿದರು. ಇದರಿಂದ ಪೋಲಿತನಿಗೆ ಆಘಾತವಾಯಿತು. ಆತನಿಗೆ ಅರಿವಿಲ್ಲದಂತಹ ದೌರ್ಬಲ್ಯ ಗೋಚರವಾಯಿತು. ಇದರಿಂದಾಗಿ ಜ್ಞಾನಿಯಾಗಿದ್ದ ಆತನು ಕ್ರುದ್ಧನಾಗಲಿಲ್ಲ. ಬದಲಾಗಿ ತನ್ನನ್ನು ಸರಿಹಾದಿಗೆ ತಂದುಕೊಳ್ಳಬೇಕೆಂದುಕೊಂಡನು. ಆತನು ಧ್ಯಾನದಲ್ಲಿ ಗಂಭೀರ ಶ್ರಮವನ್ನೇ ಹಾಕಿರಲಿಲ್ಲ, ಆತನು ಮಾರ್ಗ ಫಲಗಳನ್ನು ಪ್ರಾಪ್ತಿಮಾಡುವುದಿರಲಿ, ಕಡೇಪಕ್ಷ ಪ್ರಥಮ ಸಮಾಧಿಯನ್ನು ಸಹಾ ಪ್ರಾಪ್ತಿಮಾಡಿರಲಿಲ್ಲ. ಹೀಗಾಗಿ ಆತನು ತನ್ನನ್ನು ಮಹಾ ಪ್ರಯೋಜಕನೆಂದು ಸಾಬೀತುಪಡಿಸಲು ಅಲ್ಲಿಂದ (ಜೇತವನದಿಂದ) 20 ಯೋಜನ ದೂರದಲ್ಲಿರುವ ವಿಹಾರಕ್ಕೆ ಹೋದನು.
            ಆ ವಿಹಾರದಲ್ಲಿ ಕೇವಲ 30 ಭಿಕ್ಷುಗಳಿದ್ದರು. ಮೊದಲು ಆತನು ಪ್ರಧಾನ ಭಿಕ್ಷುವಿನ ಬಳಿಗೆ ಹೋದನು. ನಂತರ ಅವರಲ್ಲಿ ತನ್ನನ್ನು ಶಿಷ್ಯನನ್ನಾಗಿಸಲು ಕೇಳಿಕೊಂಡರು. ಅವರು ಬೇರೊಂದು ಭಿಕ್ಷುವಿನ ಕಡೆಗೆ ಸೂಚಿಸಿದರು. ಅವರು ಸಹಾ ಮತ್ತೊಬ್ಬ ಭಿಕ್ಷುವಿನ ಬಳಿಗೆ ಕಳುಹಿಸಿದರು. ಹೀಗೆಯೇ ಎಲ್ಲರೂ ಮತ್ತೊಬ್ಬನನ್ನು ಸೂಚಿಸುತ್ತ, ಅವರು ಕೊನೆಗೆ ಬಂದಿದ್ದು ಏಳು ವರ್ಷದ ಅರಹಂತ ಸಾಮಣೇರರ ಬಳಿ. ಆದರೆ ಆ ಕಿರಿಯ ಅರಹಂತರು ಆತನಿಗೆ ಶಿಷ್ಯತ್ವ ನೀಡಲು ಕಠಿಣ ಕರಾರುಗಳನ್ನು ಹಾಕಿದರು. ಅದೇನೆಂದರೆ: ಅವರು ನೀಡುವ ಶಿಕ್ಷಣವನ್ನು ಚಾಚುತಪ್ಪದೆ ಪಾಲಿಸುವುದು. ಇದಕ್ಕೆ ಪೋಲಿತನು ಒಪ್ಪಿದನು. ನಂತರ ಅವನು ಧ್ಯಾನದಲ್ಲಿ ಅಪಾರ ಪರಿಶ್ರಮ ಮಾಡತೊಡಗಿದರು. ಅವರ ಚಿತ್ತವು ದೇಹದ ನಿಜಸ್ವರೂಪ ಅರಿಯುವಲ್ಲಿ ಸ್ಥಿರವಾಯಿತು.

            ಭಗವಾನರಿಗೆ ಪೋಲಿತನ ಸಾಧನೆ ಚರಮಸ್ಥಿತಿಯತ್ತ ಸಾಗುತ್ತಿರುವುದು ಗಮನಕ್ಕೆ ಬಂದಿತು. ಆಗ ಅವರು ಆತನ ಮುಂದೆ ಪ್ರತ್ಯಕ್ಷರಾಗಿಈ ಗಾಥೆಯನ್ನು ನುಡಿದರು. ಅದರ ಆಳ ಅರ್ಥ ಅರಿತು ಆತನು ಪ್ರಜ್ಞಾವಿಕಾಸಗೊಳಿಸಿ ಕೂಡಲೇ ಅರಹಂತನಾದನು.

No comments:

Post a Comment