ಅರಹಂತನೇ
ಬ್ರಾಹ್ಮಣ
ಯಾರು ಜೀವಿಗಳ ಮರಣವನ್ನು
ಮತ್ತು ಪುನಃ ಉತ್ಪತ್ತಿಯನ್ನು
ಸರ್ವಹಂತದಲ್ಲೂ ಅರಿತಿರುವನೋ,
ಹಾಗು ಅಂಟದವನೋ,
ಸುಗತನೋ, ಬುದ್ಧನೋ ಅಂತಹವನನ್ನು
ನಾನು ಬ್ರಾಹ್ಮಣ
ಎನ್ನುತ್ತೇನೆ. (419)
ಯಾರ ಗತಿಯನ್ನು ದೇವ,
ಗಂಧರ್ವ, ಮನುಷ್ಯರ್ಯಾರು
ತಿಳಿಯಲಾರರೋ, ಕ್ಷೀಣಾಸವನೋ
(ಅಸವಗಳನ್ನು ಕ್ಷೀಣಿಸಿ
ನಾಶಗೊಳಿಸಿರುವವನೋ)
ಅರಹಂತನೋ ಅಂತಹವನನ್ನು ನಾನು
ಬ್ರಾಹ್ಮಣ ಎನ್ನುತ್ತೇನೆ. (420)
ಗಾಥ ಪ್ರಸಂಗ 26.37
ತಲೆಬುರುಡೆ ತಟ್ಟಿ ಭವಿಷ್ಯ
ತಿಳಿಯುವ ವಂಗೀಸ
ರಾಜಗೃಹದಲ್ಲಿ ವಂಗೀಶ (ವಂಗೀಸ)ನೆಂಬ ಬ್ರಾಹ್ಮಣನಿದ್ದನು. ಆತನಲ್ಲಿ
ವಿಶಿಷ್ಟತೆಯೊಂದಿತ್ತು. ಅದೆಂದರೆ, ಮಾನವನ ತಲೆಬುರುಡೆ
ತಟ್ಟುತ್ತಲೇ ಈ ಮಾನವ ಎಲ್ಲಿ ಜನಿಸಿದ್ದಾನೆ ಎಂದು ನಿಖರವಾಗಿ ತಿಳಿಸುತ್ತಿದ್ದನು. ಈ ಮನುಷ್ಯ
ನರಕದಲ್ಲಿ ಹುಟ್ಟಿದ್ದಾನೆ ಅಥವಾ ಪ್ರಾಣಿ ಲೋಕದಲ್ಲಿ ಹುಟ್ಟಿದ್ದಾನೆ ಅಥವಾ ಪ್ರೇತವಾಗಿದ್ದಾನೆ
ಅಥವಾ ಪುನಃ ಮಾನವನಾಗಿದ್ದಾನೆ ಎಂದು ಹೇಳುತ್ತಿದ್ದನು. ಹೀಗಾಗಿ ಆತನಲ್ಲಿ ಈ ಶಕ್ತಿ ಕಂಡಂತಹ ಬ್ರಾಹ್ಮಣರು
ಈ ವಿದ್ಯೆಯನ್ನು ಹಣಕ್ಕಾಗಿ ಬಳಸಲು ಆರಂಭಿಸಿದರು. ಆತನಿಗೆ ಕೆಂಪುವಸ್ತ್ರ ಧರಿಸಿ ಆತನನ್ನು
ರಾಜ್ಯದಾದ್ಯಂತ ಕರೆದುಕೊಂಡು ಹೋಗಿ ಹೀಗೆ ಹೇಳುತ್ತಿದ್ದರು: ಈ ಬ್ರಾಹ್ಮಣನಾದ ವಂಗೀಶನು ಮಾನವರ
ತಲೆಬುರುಡೆಯನ್ನು ತಟ್ಟಿ ಅವರು ಸತ್ತನಂತರ ಮರು ಹುಟ್ಟಿರುವಂತಹ ಸ್ಥಿತಿಯನ್ನು ಹೇಳುತ್ತಾನೆ.
ನಿಮ್ಮ ಬಂಧು-ಬಾಂಧವರ ಗತಿಯನ್ನು ತಿಳಿಯಬಯಸುವಂತಹವರು ಈತನನ್ನು ಭೇಟಿಮಾಡಿರಿ.
ಹೀಗೆ ಜನರು ತಮ್ಮ ಶಕ್ತ್ಯಾನುಸಾರವಾಗಿ ಹತ್ತು ಅಥವಾ ಇಪ್ಪತ್ತು ಅಥವಾ
ನೂರು ಅಥವಾ ಸಾವಿರಗಳನ್ನು ತೆತ್ತು ತಮ್ಮ ಬಂಧು-ಬಾಂಧವರ ಗತಿ ತಿಳಿಯುತ್ತಿದ್ದರು.
ಅವರು ಹೀಗೆಯೇ ಸಾಗುತ್ತಾ ಶ್ರಾವಸ್ಥಿಗೆ ಬಂದರು. ಶ್ರಾವಸ್ಥಿಯ ಜೇತವನದ
ಬಳಿಯಲ್ಲಿ ವಾಸಸ್ಥಳವನ್ನು ತೆಗೆದುಕೊಂಡರು. ಪ್ರತಿದಿನ ಉಪಹಾರದ ನಂತರ ಜನರು ಸುಗಂಧಗಳಿಂದ,
ಪುಷ್ಪಮಾಲೆಗಳಿಂದ ಕೂಡಿ ಜೇತವನಕ್ಕೆ ಧಮ್ಮವನ್ನು ಆಲಿಸಲು
ಹೋಗುತ್ತಿದ್ದರು.
ಆಗ ವಂಗೀಶನ ಕಡೆಯವರು ನೀವೆಲ್ಲಿಗೆ ಹೋಗುತ್ತಿರುವಿರಿ? ಎಂದು ಪ್ರಶ್ನಿಸಿದರು. ಧಮ್ಮವನ್ನು ಆಲಿಸಲು ವಿಹಾರಕ್ಕೆ
ಹೋಗುತ್ತಿದ್ದೇವೆ.
ಅಲ್ಲಿ ಹೋಗಿ ನೀವು ಏನು ಲಾಭ ಪಡೆಯುವಿರಿ? ನಮ್ಮಲ್ಲಿ ವಂಗೀಶನೆಂಬ ಬ್ರಾಹ್ಮಣನಿದ್ದಾನೆ, ಆತನು ಶವಗಳ
ಕಾಪಾಲಗಳನ್ನು ತಟ್ಟುತ್ತಲೇ, ಸತ್ತಿರುವವನು
ಎಲ್ಲಿ ಹುಟ್ಟಿರುವನೆಂದು ಹೇಳಿಬಿಡುತ್ತಾನೆ, ನಿಮ್ಮ
ಬಾಂಧವ್ಯರಾರಾದರೂ ಸತ್ತಿದ್ದರೆ, ಬಂದು
ಪರೀಕ್ಷಿಸಿರಿ.
ನಿಮ್ಮ ವಂಗೀಶ ಎಷ್ಟರವನು, ಭಗವಾನರು ತಲೆಬುರುಡೆ ತಟ್ಟದೆಯೇ, ಶವವನ್ನು ಸಹಾ
ನೋಡದೆಯೇ ಶವದ ಮುಂದಿನ ಗತಿಯಷ್ಟೇ ಅಲ್ಲ, ಬದುಕಿರುವಾಗಲೇ
ಆತನು ಎಲ್ಲಿ ಹುಟ್ಟುವನೆಂದು ಹೇಳಬಲ್ಲರು. ಆದ್ದರಿಂದ ನಮ್ಮ ಭಗವಾನರೇ ಶ್ರೇಷ್ಠರಾಗಿದ್ದಾರೆ ಎಂದು
ಉಪಾಸಕರು ಉತ್ತರಿಸಿದರು.
ಇದನ್ನು ನಂಬದ ವಂಗೀಶ ಹಾಗು ಆತನ ಬ್ರಾಹ್ಮಣರು ಸತ್ಯವನ್ನು
ಪರೀಕ್ಷಿಸಲು ವಿಹಾರಕ್ಕೆ ಬಂದರು.
ಭಗವಾನರಿಗೆ ಈತನ ಉದ್ದೇಶ ತಿಳಿದುಹೋಗಿ ಅವರು ಭಿಕ್ಷುವೊಬ್ಬನಿಗೆ ಹೇಳಿ
ನರಕದಲ್ಲಿ ಹುಟ್ಟಿರುವವನ ಕಪಾಲ, ಪ್ರಾಣಿಜನ್ಮವೆತ್ತಿದವನ
ಕಪಾಲ, ಪ್ರೇತನಾಗಿರುವವನ ಕಪಾಲ, ದೇವತ್ವ ಹೊಂದಿದವನ ತಲೆಬುರುಡೆ ಹಾಗು ಅರಹಂತರಾಗಿರುವವನ ತಲೆಬುರುಡೆಯನ್ನು ತರಿಸಿ ಒಂದು
ಸಾಲಾಗಿ ಇರಿಸಿದರು.
ವಂಗೀಶ ಭಗವಾನರತ್ತ ಪ್ರವೇಶಿಸುತ್ತಲೇ ಭಗವಾನರು ಆತನಿಗೆ ಹೀಗೆ
ಪ್ರಶ್ನಿಸಿದರು:” ಓಹ್, ನೀನೇ ಅಲ್ಲವೆ,
ಕಪಾಲಗಳನ್ನು ತಟ್ಟಿ ಅದರ ಪುನರ್ಜನ್ಮವನ್ನು ನುಡಿಯುವವನು. ಇಲ್ಲಿ ಐದು
ತಲೆಬರುಡೆಗಳಿವೆ, ಅವರಲ್ಲಿ ಯಾರ್ಯಾರು ಎಲ್ಲಿ
ಹುಟ್ಟಿರುವವರು ಎಂದು ತಿಳಿಸಬಲ್ಲೆಯಾ?”
“ಖಂಡಿತವಾಗಿ.”
“ಹಾಗಾದರೆ ತಿಳಿಸು”.
“ಈ ತಲೆಬುರುಡೆಯವನು ನರಕದಲ್ಲಿ ಹುಟ್ಟಿರುವನು.”
“ಸಾಧು, ಸಾಧು ನಿಜ,
ಮುಂದುವರೆಸು.”
“ಈ ತಲೆಬುರುಡೆಯವ ಪ್ರಾಣಿ ಜನ್ಮವೆತ್ತಿದ್ದಾನೆ……., ಈತನು ಪ್ರೇತವಾಗಿದ್ದಾನೆ, ………ಈ ತಲೆಬರುಡೆಯವನು ದೇವಜನ್ಮವೆತ್ತಿದ್ದಾನೆ.”
“ಸಾಧು, ಸಾಧು ನಿಜ,
ಮುಂದುವರೆಸು, ಇದು ಯಾರ
ತಲೆಬುರುಡೆ?”
ಈ ಬಾರಿ ಐದನೆಯ ತಲೆಬರುಡೆಯ ಭವಿಷ್ಯವನ್ನು ಆತನು ಅದರ ಮುಂದಿನ ಗತಿ
ಹೇಳಲಾರದೆ ಹೋದನು.
“ವಂಗೀಶ, ನಿನಗೆ ಇದರ ಮುಂದಿನ
ಗತಿ ತಿಳಿದಿಲ್ಲ, ಆದರೆ ನನಗೆ ತಿಳಿದಿದೆ.”
“ಭಗವಾನ್, ನನಗೂ ಇದನ್ನು
ಕಲಿಸಿಕೊಡಿ.”
“ಆದರೆ ಭಿಕ್ಷುಗಳಲ್ಲದವರಿಗೆ ನಾನು ಕಲಿಸಲಾರೆ.”
ಆಗ ವಂಗೀಶನು ಹೀಗೆ ಯೋಚಿಸಿದನು: ನಾನು ಈ ವಿದ್ಯೆಯನ್ನು ಬಲ್ಲವನಾದರೆ
ಇಡೀ ಭಾರತಕ್ಕೆ ಅಗ್ರವ್ಯಕ್ತಿ ಆಗುತ್ತೇನೆ.
ಆಗ ಆತನು ತನ್ನ ಸಹಚರರಿಗೆ ಹೀಗೆ ಹೇಳಿದನು: “ನೀವು ಇಲ್ಲೇ ಕೆಲದಿನಗಳು ಇರಿ, ನಾನು
ಭಿಕ್ಷುವಾಗಬಯಸುತ್ತೇನೆ.”
ನಂತರ ವಂಗೀಸನು ಭಿಕ್ಷುವಾಗಿ ಭಂತೆ (ಪೂಜ್ಯ) ವಂಗೀಸನಾದನು. ಭಗವಾನರು
ಆತನಿಗೆ 32 ದೇಹದ ಅಂಗಗಳ ಧ್ಯಾನವಾದ ಕಾಯಗತಾನುಸತಿ ಧ್ಯಾನವನ್ನು
ಅಭ್ಯಸಿಸಲು ಹೇಳಿದರು. ಅದರಲ್ಲಿ ಬರುವ ಪದಗಳ ಜಪ ಮಾಡಲು ಹಾಗು ಕಲ್ಪಿಸುವ ವಿಧಾನ ಹೇಳಿದರು.
ಇಲ್ಲಿ ಬ್ರಾಹ್ಮಣರು ಕಾಲಕಾಲಕ್ಕೆ ಬಂದು ಕಲಿತಿದ್ದು ಆಯಿತೆ? ಎಂದು ಕೇಳಲು ಬರುತ್ತಿದ್ದರು. ಇನ್ನೂ ಆಗಿಲ್ಲವೆಂದು ವಂಗೀಸನು
ನುಡಿಯುತ್ತಿದ್ದನು. ಆದರೆ ಕೆಲದಿನಗಳ ನಂತರ ಆತನು ಅರಹಂತನಾಗಿಬಿಟ್ಟನು. ಅನಂತರ ಆ ಬ್ರಾಹ್ಮಣರು
ಬಂದು ಕಲಿತಿದ್ದು ಆಯಿತೆ? ಎಂದು ಪ್ರಶ್ನಿಸಿದಾಗ
ವಂಗೀಸನು ಹೀಗೆ ಉತ್ತರಿಸಿದನು:” ಓ ಬ್ರಾಹ್ಮಣರೇ, ನೀವು ಈ ನಗರದಿಂದಲೇ ಹೊರಡಿ, ನಾನು ನಿಮ್ಮ ಜೊತೆ ಬರಲಾರೆ, ಅಷ್ಟೇ ಅಲ್ಲ,
ನನಗೆ ಆ ವಿದ್ಯೆಯನ್ನು ಕಲಿಯುವ ಅವಶ್ಯಕತೆಯೇ ಇಲ್ಲ.”
ಇದನ್ನು ಕೇಳಿದ ಭಿಕ್ಷುಗಳು ಭಗವಾನರ ಬಳಿಗೆ ಬಂದು ಹೀಗೆ ಕೇಳಿದರು:
ಭಗವಾನ್, ಪೂಜ್ಯ ವಂಗೀಸನು ಅರಹಂತನಾದೆನೆಂದು ಹೇಳುತ್ತಿದ್ದಾನೆ,
ಇದು ನಿಜವೇ?
ಹೌದು ಭಿಕ್ಷುಗಳೇ! ಯಾರು ಜೀವಿಗಳ ಜನನ ಮರಣ ಬಲ್ಲವನೋ... ಆತನೇ
ಅರಹಂತನೆಂದು ಈ ಮೇಲಿನ ಗಾಥೆಯನ್ನು ನುಡಿದರು.