Thursday, 8 October 2015

dhammapada/brahmanavagga/26.32/sundarasamudra

ಕಾಮತ್ಯಾಗಿಯೇ ಬ್ರಾಹ್ಮಣ
ಯಾರು ಇಲ್ಲಿ ಕಾಮವನ್ನು ತ್ಯಜಿಸಿರುವನೋ,
ಎಲ್ಲವನ್ನು ತ್ಯಾಗಮಾಡಿ, ಮನೆಯಿಲ್ಲದವನಾಗಿರುವನೋ,
ಯಾರು ಕಾಮನೆಗಳನ್ನು ನಾಶಮಾಡಿ, ಭವದ ಅಂತ್ಯಕ್ಕೆ
ಬಂದಿರುವನೋ, ಅಂತಹವನನ್ನು ಬ್ರಾಹ್ಮಣ ಎನ್ನುತ್ತೇನೆ.                (415)

ಗಾಥ ಪ್ರಸಂಗ 26.32
ಸುಂದರ ಸಮುದ್ರನ ಅಮೋಘ ವಿಜಯ

                ಶ್ರಾವಸ್ತಿಯಲ್ಲಿ ಸುಂದರ ಸಮುದ್ರಕುಮಾರನೆಂಬ ಗೃಹಪತಿ ಪುತ್ರನಿದ್ದನು. ಆತನು 40 ಕೋಟಿಗೂ ಹೆಚ್ಚಿನ ಐಶ್ವರ್ಯಕ್ಕೆ ವಾರಸುದಾರನಾಗಿದ್ದನು. ಒಂದುದಿನ ಜನರು ಜೇತವನಕ್ಕೆ ಹೋಗುತ್ತಿರುವುದು ಕಂಡು ಆತನು ಸಹಾ ಭಗವಾನರ ಬೋಧನೆಯನ್ನು ಆಲಿಸಿದನು. ಭಗವಾನರ ಬೋಧನೆಯಿಂದಾಗಿ ಆತನಿಗೆ ಲೌಕಿಕತೆಯಲ್ಲಿ ಆಸಕ್ತಿ ಹೊರಟುಹೋಗಿ ಭಿಕ್ಷುವಾಗಲು ತವಕಿಸಿದನು. ಆತನು ಭಗವಾನರ ಬಳಿ ಭಿಕ್ಷುವನ್ನಾಗಿಸಲು ಅಪ್ಪಣೆ ಕೇಳಿದನು. ಆಗ ಭಗವಾನರು ತಂದೆ-ತಾಯಿಯರ ಅಪ್ಪಣೆಯಿಲ್ಲದೆ ಸಂಘಕ್ಕೆ ಸೇರುವ ಹಾಗಿಲ್ಲ ಎಂದರು. ಆಗ ಆತನು ತಂದೆ-ತಾಯಿಗಳ ಅಪ್ಪಣೆ ಪಡೆದು ಭಿಕ್ಷುವಾದನು. ನಂತರ ಆತನು ಜೇತವನದಿಂದ ರಾಜಗೃಹಕ್ಕೆ ಹೋಗಿ ವಾಸಿಸಿದನು.
                ಇತ್ತ ಶ್ರಾವಸ್ತಿಯಲ್ಲಿ ಹಬ್ಬದ ದಿನದಂದು ಸುಂದರ ಸಮುದ್ರನ ತಂದೆ-ತಾಯಿಗಳು ತಮ್ಮ ಮಗನ ಮಿತ್ರರೆಲ್ಲರೂ ಅತ್ಯಂತ ಆನಂದದಿಂದ ಭವ್ಯದಿಂದ ಹಬ್ಬದ ಆನಂದದಲ್ಲಿರುವುದನ್ನು ಕಂಡು ಅವರಿಗೆ ಅಪಾರ ದುಃಖವಾಗಿ ಪ್ರಲಾಪಿಸಿದರು. ಆಗ ದಾರಿಯಲ್ಲಿ ಹೋಗುತ್ತಿದ್ದ ವೇಶ್ಯೆಯೊಬ್ಬಳು ಅವರ ಅಳು ಕೇಳಿ ಮನೆಗೆ ಬಂದು ಅಮ್ಮಾ ಏತಕ್ಕಾಗಿ ಅಳುತ್ತಿರುವಿರಿ? ಎಂದು ಕೇಳಿದಳು. ನನ್ನ ಮಗನು ಲೌಕಕತೆ ವಜರ್ಿಸಿ, ಭಿಕ್ಷುವಾಗಿದ್ದಾನೆ, ಇದೇ ನಮ್ಮ ದುಃಖಕ್ಕೆ ಕಾರಣವಾಗಿದೆ.
                “ನಾನು ನಮ್ಮ ಮಗನಿಗೆ ಪುನಃ ಲೌಕಿಕತೆಗೆ ತಂದರೆ ನನಗೆ ಏನನ್ನು ನೀಡುವಿರಿ?”
                “ಬಹುಪಾಲು ಆಸ್ತಿಗೆ ನಿನ್ನನ್ನು ಒಡತಿಯನ್ನಾಗಿಸುವೆವು ಎಂದರು.
                “ಸರಿ ನನ್ನ ಖಚರ್ಿಗೆ ಹಣ ನೀಡಿ ಎಂದು ಹೇಳಿ ಆತನ ಬಗ್ಗೆ ವಿವರಣೆಯೆಲ್ಲಾ ಪಡೆದು, ಆಕೆ ರಾಜಗೃಹಕ್ಕೆ ಹೋದಳು. ರಾಜಗೃಹದಲ್ಲಿ ಆ ಭಿಕ್ಷುವು ಭಿಕ್ಷೆಗೆ ಹೋಗುತ್ತಿದ್ದ ಬೀದಿಯನ್ನು ಸಹಾ ಪತ್ತೆಹಚ್ಚಿ, ಅಲ್ಲೇ ಮನೆಯನ್ನು ಸಹಾ ಕೊಂಡಳು. ನಂತರ ಪ್ರತಿದಿನ ಆಹಾರವನ್ನು ತಯಾರಿಸಿ ಆತನಿಗೆ ಕಾಯುತ್ತಿದ್ದಳು. ನಂತರ ಒಂದುದಿನ ಆಹಾರವನ್ನು ನೀಡಿದಳು, ನಂತರ ಪ್ರತಿದಿನ ಆಹಾರ ನೀಡತೊಡಗಿದಳು. ಕೆಲದಿನಗಳ ನಂತರ ಆಕೆಯು ಭಿಕ್ಷುವಿಗೆ ಹೀಗೆ ಹೇಳಿದಳು: ಪೂಜ್ಯರೇ, ಮನೆಯೊಳಕ್ಕೆ ಬಂದು ಆಹಾರ ಸೇವಿಸಿ. ನಂತರ ಮನೆಯೊಳಕ್ಕೆ ಪ್ರತಿದಿನವೂ ಆಹ್ವಾನಿಸಿ ಆಹಾರ ನೀಡತೊಡಗಿದಳು. ನಂತರ ಒಂದುದಿನ ಇಲ್ಲಿ ತುಂಬಾ ಕಸವಿದೆ, ದೂಳಿದೆ, ಮಹಡಿಯ ಮೇಲೆ ಆಹಾರ ಸೇವಿಸಿ ಎನ್ನುತ್ತಾ ಆಕೆ ಅಲ್ಲಿ ಆಹಾರ ಸಿದ್ಧಪಡಿಸಿದಳು. ಭಿಕ್ಷುವು ಮೇಲಿನ ಮಹಡಿಯನ್ನು ಪ್ರವೇಶಿಸಿದ ನಂತರ ಆಕೆಯು ದ್ವಾರವನ್ನು ಮುಚ್ಚಿದಳು. ನಂತರ ಆಕೆಯು ಇಂದ್ರಿಯಗಳು ಚಂಚಲವಾಗುವಂತೆ ಹಾವಭಾವಗಳಿಂದ ಆಕಷರ್ಿಸುತ್ತಾ ಹೀಗೆ ಹೇಳಿದಳು: ನೀವು ನನ್ನ ಗಂಡನಾಗಿ, ನಾನು ನಿಮ್ಮ ಪತ್ನಿಯಾಗುವೆ, ನಾವಿಬ್ಬರೂ ವಿವಾಹವಾಗಿ ಸುಖವಾಗಿರೋಣ, ಮಧ್ಯ ವಯಸ್ಸಿನಲ್ಲಿ ಬೇಕಾದರೆ ಇಬ್ಬರೂ ಭಿಕ್ಷು ಭಿಕ್ಷುಣಿಯಾಗೋಣ, ನಂತರ ನಿಬ್ಬಾಣಕ್ಕೆ ಶ್ರಮಿಸೋಣ ಎಂದಳು.
                ತಕ್ಷಣ ಭಿಕ್ಷುವಿಗೆ ತಾನು ಮನೆಯೊಳಗೆ ಸಲುಗೆಯಿಂದ ಬಂದು, ತಪ್ಪು ಮಾಡಿದೆ ಎಂದು ಅರಿವಾಯಿತು. ತನ್ನಲ್ಲೇ ಹೀಗೆ ಹೇಳಿಕೊಂಡನು: ನಿಜಕ್ಕೂ ನಾನು ನಿರ್ಲಕ್ಷಿಸಿ, ಅಜಾಗರೂಕನಾದೆನು, ದೊಡ್ಡ ತಪ್ಪು ಮಾಡಿದೆನು ಎಂದೆನಿಸುತ್ತಿದೆ.
*   *   *
                ಅದೇ ಸಮಯದಲ್ಲಿ ಭಗವಾನರಿಗೆ ಸುಂದರ ಸಮುದ್ರನ ಮೇಲೆ ನಡೆಯುತ್ತಿರುವ ಪ್ರಲೋಭನೆ ಅರಿತರು. ಆಗ ಅವರು ಮಂದಹಾಸ ಬೀರಿದರು. ಅದನ್ನು ಗಮನಿಸಿದ ಆನಂದರು ಹೀಗೆ ಪ್ರಶ್ನಿಸಿದರು: ಭಗವಾನ್, ಈ ನಗುವಿಗೆ ಕಾರಣವೇನು? ಆಗ ಭಗವಾನರು ರಾಜಗೃಹದಿಂದ 45 ಯೋಜನ ದೂರದಲ್ಲಿದ್ದ ಶ್ರಾವಸ್ತಿಯಲ್ಲಿದ್ದರು. ಅವರು ತಮ್ಮ ದಿವ್ಯದೃಷ್ಟಿಗೆ ಕಾಣಿಸುತ್ತಿದ್ದ ದೃಶ್ಯವನ್ನು ಆನಂದರಿಗೆ ಹೀಗೆ ಹೇಳಿದರು: ಆನಂದ, ರಾಜಗೃಹದಲ್ಲಿ ಏಳು ಅಂತಸ್ತಿನ ಕಟ್ಟಡ ಒಂದಿದೆ, ಅಲ್ಲಿ ಸುಂದರ ಸಮುದ್ರನಿಗೂ ಹಾಗು ಸುಂದರ ವೇಶ್ಯೆಯ ನಡುವೆ, ವೈರಾಗ್ಯದ ಹಾಗು ಪ್ರಲೋಭನೆಯ ನಡುವೆ ಯುದ್ಧ ನಡೆಯುತ್ತಿದೆ.
                “ಭಗವಾನ್, ಯಾರು ಗೆಲ್ಲಬಹುದು? ಹಾಗು ಯಾರು ಸೋಲಬಹುದು?”
                “ಆನಂದ, ಸುಂದರ ಸಮುದ್ರನೇ ಗೆಲ್ಲುವನು, ವೇಶ್ಯೆಯು ಸೋಲುವಳು ಎಂದರು.
*  *  *
                ಇತ್ತ ಆ ವೇಶ್ಯೆಯು ಆ ಭಿಕ್ಷುವನ್ನು ಆಕಷರ್ಿಸಲು ತನ್ನ ಸರ್ವ ವಿದ್ಯೆ ಹಾಗು ಸರ್ವ ಪ್ರಯತ್ನ ಮಾಡಿಯೂ ಸಹಾ ಆತನ ದೃಢತೆಯನ್ನು ಚಂಚಲಗೊಳಿಸಲಾಗಲಿಲ್ಲ.
                ಅದೇ ಕ್ಷಣ ಭಗವಾನರು ತಮ್ಮ ತೇಜೋಭರಿತ ಪ್ರತಿಬಿಂಬವನ್ನು ಆತನ ಮುಂದೆ ಪ್ರತ್ಯಕ್ಷಗೊಳಿಸಿ ಹೀಗೆ ನುಡಿದರು: ಭಿಕ್ಷುವೇ, ಎಲ್ಲಾಬಗೆಯ ಕಾಮಗಳನ್ನು ಮನಸ್ಸಿನ ಮೂಲದಿಂದಲೇ ಕಿತ್ತು ಬಿಟ್ಟುಬಿಡು. ಈ ಎಲ್ಲಾ ಅಸೆಗಳಿಂದ ಸ್ವತಂತ್ರನಾಗು ಎಂದರು. ನಂತರ ಈ ಗಾಥೆಯನ್ನು ನುಡಿದರು. ತಕ್ಷಣ ಆ ಭಿಕ್ಷುವು ಸೂಕ್ಷ್ಮ ಹಂತದಲ್ಲಿದ್ದ ಎಲ್ಲಾ ಇಚ್ಛೆಗಳನ್ನು ನಿಶ್ಶೇಷವಾಗಿ ನಾಶಗೊಳಿಸಿದನು. ಅಂಟುಕೊಳ್ಳುವಿಕೆಯಿಂದ ಮುಕ್ತನಾಗಿ, ಅದೇ ಸ್ಥಳದಲ್ಲೇ ಅರಹಂತನಾದನು. ನಂತರ ಉದಯಿಸಿದ ಇದ್ಧಿಶಕ್ತಿಯಿಂದಾಗಿ, ಗಾಳಿಯಲ್ಲಿ ಹಾರಿ, ಆ ಮನೆಯ ವೃತ್ತಾಕಾರದ ತುದಿಯಿಂದ ಹೊರಬಂದು ಹಾಗೆಯೇ ಶ್ರಾವಸ್ತಿಯತ್ತ ಪ್ರಯಾಣ ಬೆಳೆಸಿ, ಭಗವಾನರ ಸಮ್ಮುಖದಲ್ಲಿ ಇಳಿದು ಬಂದು ಭಗವಾನರ ಪಾದಗಳಿಗೆ ವಂದಿಸಿದನು.

                ಅಂದು ಸಂಜೆ ಆ ಭಿಕ್ಷುವಿನ ಬಗ್ಗೆಯೇ ಭಿಕ್ಷುಗಳು ಮಾತನಾಡುತ್ತಿದ್ದರು. ಅಲ್ಲಿಗೆ ಬಂದಂತಹ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನಾನು ಆತನಿಗೆ ಹೀಗೆ ಸಹಾಯ ಮಾಡಿ ರಕ್ಷಿಸಿದ್ದು ಇದೇ ಮೊದಲೇನಲ್ಲ. ಇಂತಹುದೇ ಪ್ರಸಂಗ ಹಿಂದಿನ ಜನ್ಮದಲ್ಲೂ ನಡೆದಿತ್ತು ಎಂದರು. 

No comments:

Post a Comment