ಆಂತರ್ಯದಲ್ಲಿ
ಶುದ್ಧನಾಗು
ಈ ಜಟೆಯಿಂದೇನು ಲಾಭ?
ಮೂರ್ಖನೇ!
ಈ ಕೃಷ್ಣಾಜೀನದಿಂದೇನು
(ಜಿಂಕೆಯ ಚರ್ಮ) ಪ್ರಯೋಜನ?
ಆಂತರ್ಯದಲ್ಲಿ ಕಲ್ಮಶಗಳಿಂದ
(ಸಂಗ್ರಹೇಚ್ಛೆಯಿಂದ) ಕೂಡಿರುವೆ
ಆದರೆ ಬಾಹ್ಯದಲ್ಲಿ ಮಾತ್ರ
ಅಲಂಕೃತನಾಗಿರುವೆ. (394)
ಗಾಥ ಪ್ರಸಂಗ 26.11
ವಂಚಕ ಬ್ರಾಹ್ಮಣನ ಆಟ, ಜ್ಞಾನಿಗಳ ಹತ್ತಿರ ನಡೆಯದು
ವಂಚಕ ಬ್ರಾಹ್ಮನೊಬ್ಬನು ಕಕುಧ ವೃಕ್ಷವನ್ನು ಏರಿದ. ಆ ವೃಕ್ಷವು
ವೈಶಾಲಿ ನಗರದ ಬಳಿಯಿತ್ತು. ಆತನ ತನ್ನ ಕಾಲುಗಳನ್ನು ಆ ರೆಂಬೆಗೆ ಸಿಕ್ಕಿಸಿಕೊಂಡು ತಾನು
ತಲೆಕೆಳಗಾಗಿ ಬೇತಾಳನಂತೆ ಅಥವಾ ಬಾವಲಿಯಂತೆ ನೇತಾಡುತ್ತಾ ಹೀಗೆ ಕೂಗುತ್ತಿದ್ದನು. ಓ ವೈಶಾಲಿ
ನಗರವಾಸಿಗಳೇ ಕೇಳಿ ಇಲ್ಲಿ, ನನಗೆ 100 ಕಪಿಲಗಳನ್ನು (ಹಸು) ನೀಡಿ, ನೂರು ಕಹಾಪಣ (ಹಣ) ನೀಡಿ, ಜೊತೆಗೆ ದಾಸಿಯನ್ನು
ನೀಡಿ, ನೀವು ನಾನು ಯಾಚಿಸುತ್ತಿರುವುದನ್ನು ನೀಡದೆ ಹೋದರೆ
ನಾನು ಕಾಲು ಸಡಿಲಿಸಿ, ಹೀಗೆ ನೆಲದಮೇಲೆ ಬಿದ್ದು ತಲೆ
ಅಪ್ಪಳಿಸಿ, ಸತ್ತುಹೋಗುವೆನು. ನನ್ನಂತಹ ಸಾಧಕ ಬ್ರಾಹ್ಮಣನ
ಮರಣದಿಂದಾಗಿ ನಂತರ ಈ ನಗರವು ನಗರವಾಗಿ ಉಳಿಯದು.
ಆಗ ಆ ನಗರವಾಸಿಗಳು ಈತನ ಮಾತಿನಿಂದ ಭೀತರಾಗಿ ಆತನ ತಗಾದೆಯ
ಕೋರಿಕೆಗಳಿಗೆ ಒಪ್ಪಿದರು. ಆತನಿಗೆ ಒಲಿಸಿ ಕೆಳಗಿಳಿಸಿ ನಂತರ ಆತನು ಬೆದರಿಸಿ ಯಾಚಿಸಿದ್ದನ್ನು
ಆತನಿಗೆ ನೀಡಿದರು. ಆತನು ಹೀಗೆ ವಸೂಲಿ ಮಾಡಿದ್ದನ್ನು ಸ್ವೀಕರಿಸಿ ಅಲ್ಲಿಂದ ಹೊರಟನು.
ಆ ವಂಚಕ ಬ್ರಾಹ್ಮಣನು ನಂತರ ವಿಹಾರದ ಪಕ್ಕ ಹಸುವಿನಂತೆ ಗುಟುರು
ಹಾಕುತ್ತಾ ಅಡ್ಡಾಡುವಾಗ ಬೆಳಿಗ್ಗೆ ಅತನನ್ನು ವೈಶಾಲಿಯ ಕುಕುದ ವೃಕ್ಷದ ಬಳಿ ನೋಡಿದ್ದ ಭಿಕ್ಷುಗಳು
ಆತನಿಗೆ ಹೀಗೆ ಕೇಳಿದರು: ಬ್ರಾಹ್ಮಣ ನೀನು ಕೋರಿದ್ದ ಅವೆಲ್ಲವೂ ನೀನು ಪಡೆದೆಯಾ?
ಹೌದು ಪಡೆದೆನು ಎಂದು ಉತ್ತರಿಸಿ ಆತನು ನಡೆದನು. ನಂತರ ಭಿಕ್ಷುಗಳು ಈ
ವಿಷಯವನ್ನು ಭಗವಾನರಿಗೆ ತಿಳಿಸಿದರು.
ಆಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ಈ ಬ್ರಾಹ್ಮಣನು ಹೀಗೆ ವಂಚಿಸುತ್ತ ಜೀವಿಸುತ್ತಿರುವುದು ಇದೇ ಮೊದಲೇನಲ್ಲ. ಈತನು ತನ್ನ
ಹಿಂದಿನ ಜನ್ಮದಲ್ಲೂ ಹೀಗೆ ಮಾಡಿದ್ದಾನೆ. ಆದರೆ ಸಾಧಾರಣ ಜನರು ಇದಕ್ಕೆ ಮೋಹದಿಂದ
ಗುರಿಯಾಗುತ್ತಾರೆ, ಆದರೆ ಜ್ಞಾನಿಗಳಲ್ಲಿ ಈತನ
ಆಟವು ಎಂದಿಗೂ ನಡೆದಿಲ್ಲ, ನಡೆಯುವುದೂ ಇಲ್ಲ ಎಂದರು. ಆಗ
ಭಿಕ್ಷುಗಳ ಕೋರಿಕೆಯಂತೆ ಆತನ ಹಿಂದಿನ ಜನ್ಮದ ಆ ವೃತ್ತಾಂತವನ್ನು ತಿಳಿಸಿದರು.
ಬಹಳ ಕಾಲದ ಹಿಂದೆ ತಪಸ್ವಿಯೋರ್ವನು ರೈತರಿರುವ ಹಳ್ಳಿಯತ್ತ
ವಾಸಿಸುತ್ತಿದ್ದನು. ಆದರೆ ಈ ತಾಪಸಿ ಹೆಸರಿಗಷ್ಟೇ, ಆಂತರ್ಯದಲ್ಲಿ ವಂಚಕನಾಗಿದ್ದನು. ಆ ಹಳ್ಳಿಯ ಕುಟುಂಬವೊಂದು ಈತನನ್ನು ನೋಡಿಕೊಳ್ಳುತ್ತಿತ್ತು.
ಆತನ ಅಗತ್ಯಗಳಾದ ಆಹಾರ ಇನ್ನಿತರ ಎಲ್ಲವನ್ನೂ ಅವರು ಪೂರೈಸುತ್ತಿದ್ದರು. ತಮ್ಮ ಮಕ್ಕಳಿಗೆ
ನೀಡುವಷ್ಟು ಉತ್ತಮ ಆಹಾರವನ್ನು ಆತನಿಗೂ ನೀಡುತ್ತಿದ್ದರು. ಸಂಜೆ ಆಹಾರ ಸಿದ್ಧಪಡಿಸಿ ಮಾರನೆಯ
ಮುಂಜಾನೆಯೇ ಆತನಿಗೆ ನೀಡುತ್ತಿದ್ದರು.
ಆತನ ಕುಟೀರದ ಸ್ವಲ್ಪದೂರದಲ್ಲಿ ಹುತ್ತವೊಂದಿತ್ತು, ಅದರಲ್ಲಿ ಉಡವು ವಾಸಿಸುತ್ತಿತ್ತು. ಆ ಉಡವು ಕಾಲಕಾಲಕ್ಕೆ ಬಂದು
ತಪಸ್ವಿಗೆ ವಂದಿಸಿ ಹೋಗುತ್ತಿತ್ತು. ಒಂದುದಿನ ಈ ವೇಷಧಾರಿ ತಪಸ್ವಿಗೆ ಆ ಉಡ ತಿನ್ನುವ
ಬಯಕೆಯಾಯಿತು. ಅದನ್ನು ಕೊಲ್ಲುವುದಕ್ಕಾಗಿ ಆತನು ದೊಣ್ಣೆಯೊಂದನ್ನು ಬಟ್ಟೆಯಲ್ಲಿ ಅಡಗಿಸಿಕೊಂಡು
ನಿದ್ರಿಸುತ್ತಿರುವಂತೆ ನಟಿಸಿದನು. ಆಗ ಆತನ ಸಂಶಯಾಸ್ಪದ ವರ್ತನೆಯನ್ನು ಕಂಡು ಆ ಉಡಕ್ಕೆ
ಜಾಗ್ರತೆಯುಂಟಾಯಿತು. ಅದು ಕೂಡಲೇ ಹಿಂತಿರುಗಲು ಆರಂಭಿಸಿತು. ಆಗ ತಪ್ಪಿಹೋಗುವುದೆಂದು ಆತನು ಆ
ದೊಣ್ಣೆಯನ್ನು ಉಡದತ್ತ ಎಸೆದನು. ಆದರೆ ಉಡವು ಪಕ್ಕಕ್ಕೆ ನುಸುಳಿ ತಪ್ಪಿಸಿಕೊಂಡಿತು. ನಂತರ
ಹುತ್ತವನ್ನು ಸೇರಿತು. ನಂತರ ತಲೆಯನ್ನು ಹೊರಚಾಚಿ ಈ ಮೇಲಿನ ಗಾಥೆಯನ್ನು ಉಡವಾಗಿದ್ದ ಬೋಧಿಸತ್ವರು
ಆಗ ಹೇಳಿದ್ದರು.
No comments:
Post a Comment