ಬುದ್ಧರು ಎಲ್ಲಾ
ನಾಯಕರಲ್ಲೂ ಪ್ರಕಾಶಿಸುತ್ತಾರೆ
ಹಗಲಿನಲ್ಲಿ ಸೂರ್ಯನು
ಪ್ರಕಾಶಿಸುತ್ತಾನೆ,
ರಾತ್ರಿಯಲ್ಲಿ ಚಂದಿರನು
ಕಾಂತಿಯುಕ್ತನಾಗಿರುತ್ತಾನೆ,
ಯುದ್ಧ ಕವಚಗಳಿಂದ
ಕ್ಷತ್ರಿಯನು ಹೊಳೆದರೆ,
ಧ್ಯಾನದಿಂದ ಬ್ರಾಹ್ಮಣನು
ಹೊಳೆಯುತ್ತಾನೆ,
ಆದರೆ ಎಲ್ಲಾ
ಹಗಲು-ರಾತ್ರಿಯಲ್ಲಿಯು ಬುದ್ಧರು
ತಮ್ಮ ಪರಮ ತೇಜಸ್ಸಿನಿಂದ ಕಂಗೊಳಿಸಿ
ಶೋಭಿಸುತ್ತಿರುತ್ತಾನೆ. (387)
ಗಾಥ ಪ್ರಸಂಗ 26.5
ಬುದ್ಧ ಭಗವಾನರ ಸಾಟಿಯಿಲ್ಲದ
ತೇಜಸ್ಸು
ಅಂದು ಏಳನೆಯ ತಿಂಗಳ ಪೂರ್ಣಮೆಯಾಗಿತ್ತು. ಅಂದು ಶ್ರಾವಸ್ತಿಯಲ್ಲಿ
ಕಡೆಯ ಹಬ್ಬದ ದಿನವೂ ಆಗಿತ್ತು. ಆಗ ಕೋಸಲದ ಮಹಾರಾಜನಾದ ಪಸೇನದಿಯು ತನ್ನ ಯುದ್ಧ ಕವಚಗಳನ್ನು
ಆಭರಣಗಳಿಂದ ಮುಕ್ತನಾಗಿ, ಗಂಧ ಪುಷ್ಟಗಳನ್ನು ಕೈಯಲ್ಲಿ
ಹಿಡಿದು ಭಗವಾನರಿಗೆ ಭೇಟಿಯಾಗಲು ಬಂದಿದ್ದನು.
ಅದೇ ಸಮಯದಲ್ಲಿ ಪೂಜ್ಯ ಭಿಕ್ಷು ಕಾಲುದಾಯಿಯು ಸಭಾಂಗಣದ ಹೊರಗೆ ಕುಳಿತು
ಆಳವಾದ ಧ್ಯಾನದಲ್ಲಿ ನಿರತನಾಗಿದ್ದನು. ಹೀಗಾಗಿ ಆತನ ಶರೀರವು ಕಾಂತಿಯುಕ್ತವಾಗಿ ಹೊಂಬಣ್ಣಕ್ಕೆ
ತಿರುಗಿತ್ತು.
ಆಗ ಭಂತೆ ಆನಂದರವರು ಆಕಾಶವನ್ನು ವೀಕ್ಷಿಸಿದರು. ಪಶ್ಚಿಮದಲ್ಲಿ
ಸೂರ್ಯನು ಪ್ರಕಾಶಿಸುತ್ತ ಮುಳುಗುವುದರಲ್ಲಿ ಇದ್ದನು. ಹಾಗೆಯೇ ಪೂರ್ವದಲ್ಲಿ ಪೂರ್ಣ ಚಂದಿರನು
ಕಾಂತಿಯುಕ್ತನಾಗಿ ಏರುತ್ತಾ ಉರುಳುತ್ತಿದ್ದನು. ಆಗ ಆನಂದರವರು ರಾಜನತ್ತ ನೋಡಿದಾಗ ಅವರು ಕ್ಷಾತ್ರ
ತೇಜಸ್ಸಿನಿಂದ ಹೊಳೆದರು. ಹಾಗೇ ಅವರ ಗಮನವು ಕಾಲುದಾಯಿಯತ್ತ ಹರಿದಾಗ ಅವರು ಧ್ಯಾನದಿಂದಾಗಿ
ಸುವರ್ಣಪ್ರಭೆಯಿಂದಾಗಿ ಬೆಳಗುತ್ತಿದ್ದರು. ಕೊನೆಗೆ ಅವರು ಬುದ್ಧರತ್ತ ನೋಡಿದಾಗ ಭಗವಾನರು ಈ
ಎಲ್ಲವನ್ನು ಮೀರಿಸುವಂತಹ ಪರಮ ತೇಜಸ್ಸಿನಿಂದ ಕೂಡಿರುವುದು ಕಂಡರು. ಆಗ ಆಶ್ಚರ್ಯದಿಂದಾಗಿ
ಆನಂದರವರು ಹೀಗೆ ಉದ್ಗರಿಸಿದರು: ಓಹ್ ಭಗವಾನ್! ತಮ್ಮ ಶರೀರದಿಂದ ಹೊರಹೊಮ್ಮುತ್ತಿರುವ ಪರಮದಿವ್ಯ
ತೇಜಸ್ಸು, ಸೂರ್ಯ ಚಂದಿರನನ್ನು ಮಂಕಾಗಿಸಿದೆ. ಶಸ್ತ್ರ ಕವಚದಿಂದ
ಆವೃತನಾದ ರಾಜನನ್ನು ಕಾಂತಿಹೀನನ್ನಾಗಿಸಿದೆ. ಧ್ಯಾನಿಯಾದ ಅರಹಂತರ ಪ್ರಭೆಯು ಸಪ್ಪಗಾಗಿದೆ ಎಂದರು.
ಆಗ ಭಗವಾನರು ಈ ಮೇಲಿನ ಗಾಥೆಯನ್ನು ನುಡಿಯುತ್ತ ಹೀಗೆ ಹೇಳಿದರು: ಆನಂದ,
ಎಲ್ಲಾ ಬುದ್ಧರು ಹಗಲು ರಾತ್ರಿಯು ಶರೀರ ತೇಜಸ್ಸಿನ ಜೊತೆಗೆ ಐದು ವಿಧದ
ತೇಜಸ್ಸಿನಿಂದ ಬೆಳಗುತ್ತಾರೆ ಎಂದರು.
(ಆ ಐದು ವಿಧದ ತೇಜಸ್ಸೆಂದರೆ: 1) ಶೀಲ ತೇಜಸ್ಸು, 2) ಸದ್ಗುಣ ತೇಜಸ್ಸು
3) ಪ್ರಜ್ಞಾ ತೇಜಸ್ಸು 4)
ಪುಣ್ಯ ತೇಜಸ್ಸು 5) ಧಮ್ಮ ತೇಜಸ್ಸು.
No comments:
Post a Comment