ದುಷ್ಕೃತ್ಯ
ಮಾಡದವನೇ ಬ್ರಾಹ್ಮಣ
ಯಾರು ಕಾಯದಿಂದಾಗಲಿ,
ವಾಚಾದಿಂದಾಗಲಿ,
ಅಥವಾ ಮನಸ್ಸಿನಿಂದಾಗಲಿ,
ದುಷ್ಕೃತ್ಯ ಮಾಡುವುದಿಲ್ಲವೋ
ಈ ರೀತಿಯಲ್ಲಿ
ಸಂಯಮಿತರಾದವರನ್ನು
ನಾನು ಬ್ರಾಹ್ಮಣ ಎನ್ನುವೆನು. (391)
ಗಾಥ ಪ್ರಸಂಗ 26.8
ಪ್ರಜಾಪತಿ ಗೋತಮಿಯ ಚರಿತೆ
ಮಹಾ ಪ್ರಜಾಪತಿ ಗೋತಮಿಯು ಸಿದ್ಧಾರ್ಥ ಗೋತಮ ಬುದ್ಧರಿಗೆ ಮಲತಾಯಿ
ಆಗಿದ್ದಳು. ಭಗವಾನರ ತಾಯಿಯಾದ ಮಹಾಮಯಾದೇವಿಯು ಬೋಧಿಸತ್ವರ ಜನನದ ಏಳನೆಯ ದಿನದ ನತರ
ಮೃತ್ಯುವಶವಾದಾಗ, ಮಹಾ ಪ್ರಜಾಪತಿ ಗೋತಮಿಯೇ
ಪಟ್ಟದ ರಾಣಿಯಾದಳು. ಆಕೆಯ ಮಹಾ ತ್ಯಾಗವನ್ನು ಪ್ರಶಂಸಿಸಬೇಕಾಗಿದೆ. ಏಕೆಂದರೆ ಆಕೆಯ ಐದು ದಿನಗಳ
ಪುತ್ರನಾದ ನಂದನನ್ನು ಆಕೆ ದಾದಿಯ ಕೈಗೆ ಒಪ್ಪಿಸಿ, ತಾನು ಬೋಧಿಸತ್ವರನ್ನು ಸ್ವತಃ ತಾಯಿಯ ನೆನಪು ಬಾರದಂತೆ ಬೆಳೆಸಿದ್ದಳು. ಹೀಗಾಗಿ ಆಕೆಯು
ಭಗವಾನರ ಮಹಾ ಹಿತೈಷಿಯಾಗಿದ್ದಳು.
ಯುವರಾಜ ಸಿದ್ಧಾರ್ಥ ಗೋತಮರು ಬುದ್ಧತ್ವ ಪ್ರಾಪ್ತಿಮಾಡಿಕೊಂಡು
ಬುದ್ಧರಾಗಿ ಹಿಂತಿರುಗಿದರು. ಆಗ ಅವರ ಬೋಧನೆ ಆಲಿಸಿ ಗೋತಮಿಯು ಸೋತಪನ್ನಳಾದಳು, ಮುಂದೆ ಸಕದಾಗಾಮಿಯೂ ಆದಳು. ಆದರೆ ಪತಿಯ ಪರಿನಿಬ್ಬಾಣದ ನಂತರ ಅವಳು
ಭಿಕ್ಷುಣಿಯಾಗಲು ನಿರ್ಧರಿಸಿದಳು. ಆದರೆ ಅದರಿಂದಾಗುವ ಅನಾನುಕೂಲ ಗಮನಿಸಿ ಭಗವಾನರು ಅದಕ್ಕೆ
ಸಮ್ಮತಿಸುವುದಿಲ್ಲ. ಆಗ ಭಗವಾನರು ವೇಸಾಲಿಯ ಮಹಾವನವೆಂಬ ಅರಣ್ಯದಲ್ಲಿದ್ದರು. ಆಗ ಪ್ರಜಾಪತಿ
ಗೋತಮಿಯು ತನ್ನಂತೆ ಭಿಕ್ಷುಣಿಯಾಗುವ ಆಸೆಯಿಂದಿದ್ದ 500 ಸ್ತ್ರೀಯರನ್ನು ಕರೆದುಕೊಂಡು ಕಪಿಲವಸ್ತುವಿನಿಂದ ವೈಶಾಲಿಗೆ ಬಂದಳು. ಆದರೆ ಅವರೆಲ್ಲಾ
ಸ್ವಯಂ ಆಗಿ ತಾವೇ ಕೇಶಮುಂಡನ ಮಾಡಿಕೊಂಡು ಸ್ವಯಂ ಕಾಷಾಯ ವಸ್ತ್ರ ಧರಿಸಿ ಭಗವಾನರನ್ನು ಭಿಕ್ಷುಣಿ
ಸಂಘದ ಸ್ಥಾಪನೆಗೆ ಅನುಮತಿ ಕೋರಿದರು. ಹೀಗೆ ಮೂರುಬಾರಿ ಕೋರಿದಾಗಲೂ ಭಗವಾನರು ನಿರಾಕರಿಸಿದರು. ಆಗ
ಪೂಜ್ಯ ಆನಂದರ ಸಂಧಾನದೊಂದಿಗೆ ಹಾಗು ಭಗವಾನರು ಭವಿಷ್ಯದಲ್ಲಿ ಅನಾಹುತಗಳಿಗೆ ಎಡೆಯಾಗಬಾರದೆಂದು
ಎಂಟು ವಿಶೇಷ ನಿಯಮಗಳೊಂದಿಗೆ ಭಿಕ್ಷುಣಿ ಸಂಘದ ಸ್ಥಾಪನೆ ಆಗುತ್ತದೆ. ಹಾಗು ಸ್ತ್ರೀಯರು
ಭಿಕ್ಷುಣಿಯರಾಗಲು ಅನುಮತಿ ದೊರೆಯುತ್ತದೆ. ಆ ಸಮಯದಲ್ಲಿ ಕೆಲವು ಭಿಕ್ಷುಣಿಯರ ಮನಸ್ಸಿನಲ್ಲಿ ಈ
ರೀತಿಯ ಆಲೋಚನೆ ಉಂಟಾಗುತ್ತದೆ. ಅದು ಏನೆಂದರೆ ಪ್ರಜಾಪತಿ ಗೋತಮಿಯು ಸರಿಯಾದ ಕ್ರಮದಲ್ಲಿ
ಸಂಘವನ್ನು ಸೇರಿಲ್ಲ. ತಾನೇ ಸ್ವಯಂ ಕೇಶಮುಂಡನ ಮತ್ತು ಕಾಷಾಯವಸ್ತ್ರಧಾರಣೆ
ಮಾಡಿಕೊಂಡಿದ್ದರಿಂದಾಗಿ ಆಕೆಗೆ ಗುರುವಿಲ್ಲ, ಹೀಗಾಗಿ ಆಕೆಯು ನಿಜ
ಭಿಕ್ಷುಣಿಯಲ್ಲ. ಈ ಯೋಚನೆಯು ಮುಂದೆ ಹಲವಾರು ಭಿಕ್ಷುಣಿಯರಲ್ಲಿಯೂ ಹರಡಿ ಆಕೆಯೊಂದಿಗೆ ಉಪಾಸೋತ
ಮುಂತಾದವುಗಳಲ್ಲಿ ಬೆರೆಯುತ್ತಿರಲಿಲ್ಲ.
ನಂತರ ಈ ವಿಷಯವು ಭಗವಾನರ ಬಳಿಗೆ ಹೋಯಿತು. ಆಗ ಭಗವಾನರು ಹೀಗೆ ಹೇಳಿ
ಅವರೆಲ್ಲರ ಮಿಥ್ಯಾ ಚಿಂತನೆಗೆ ತೆರೆ ಎಳೆದರು.
ಏತಕ್ಕಾಗಿ ಹಾಗೆ ನುಡಿಯುವಿರಿ. ನಾನು ಆಕೆಗೆ ಎಂಟು ಗುರು ಧಮ್ಮಗಳನ್ನು
ನೀಡಿದ್ದೇನೆ. ಆಕೆ ನನ್ನಿಂದಲೇ ಕಲಿತು ಅಭ್ಯಸಿಸುತ್ತಿದ್ದಾಳೆ. ನಾನೇ ಆಕೆಗೆ ಗುರುವಾಗಿರುವೆನು.
ಬದಲಾಗಿ ಆಕೆಯು ಭಿಕ್ಷುಣಿ ಸಂಘಕ್ಕೆ ಮಹಾ ಕಾರಣಕರ್ತಳು. ಎಲ್ಲಕ್ಕಿಂತ ಮಿಗಿಲಾಗಿ ಆಕೆಯು
ಅರಹಂತಳಾಗಿರುವುದು. ಆಕೆಯ ಬಗ್ಗೆ ಹೀಗೆಲ್ಲಾ ಸಂಶಯ ತಾಳದಿರಿ ಎಂದು ನುಡಿದು ಈ ಮೇಲಿನ ಗಾಥೆ
ನುಡಿದರು.
No comments:
Post a Comment