Monday, 5 October 2015

dhammapada/brahmanavagga/26.26/innocentbhikkhu

ಕಳ್ಳನಲ್ಲದವನೇ ಬ್ರಾಹ್ಮಣ
ಯಾರು ತನಗೆ ನೀಡದುದ್ದನ್ನು ಅದು
ಉದ್ದವಾಗಿಯೇ ಇರಲಿ ಅಥವಾ ಗಿಡ್ಡದಾಗಿಯೇ ಇರಲಿ,
ಅಣುವಿನಷ್ಟೇ (ಚಿಕ್ಕದಾಗಿ) ಇರಲಿ ಅಥವಾ ದೊಡ್ಡದಾಗಿಯೇ ಇರಲಿ,
ಸುಂದರವಾಗಿಯೇ ಇರಲಿ, ಕುರೂಪವಾಗಿಯೇ ಇರಲಿ,
ತೆಗೆದುಕೊಳ್ಳುವುದಿಲ್ಲವೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.        (409)

ಗಾಥ ಪ್ರಸಂಗ 26.26
ಕಳ್ಳತನ ಆರೋಪ ಹೊತ್ತ ಭಿಕ್ಷು

                ಶ್ರಾವಸ್ತಿಯಲ್ಲಿ ಮಿಥ್ಯಾದೃಷ್ಟಿಯ ಬ್ರಾಹ್ಮಣನೊಬ್ಬನಿದ್ದನು. ಆತನು ತನ್ನ ಮೇಲಂಗಿಯು ದೇಹದ ವಾಸನೆಯಿಂದ ದುರ್ಗಂಧವಾದೀತೆಂದು ತೆಗೆದು ಪಕ್ಕಕ್ಕೆ ಇಟ್ಟನು. ನಂತರ ಮನೆಗೆ ಎದುರಾಗಿ ಕುಳಿತನು. ಹೀಗೆ ಹೊರಗೆಯೇ ವಸ್ತವು ಬಿದ್ದಿತು.
                ಅದೇ ಸಮಯದಲ್ಲಿ ಅರಹಂತತ್ವ ಪಡೆದಿದ್ದಂತಹ ಭಿಕ್ಷುವು ತನ್ನ ಆಹಾರ ಮುಗಿಸಿಕೊಂಡು ವಿಹಾರದತ್ತ ಹೋಗುತ್ತಿದ್ದರು. ಅವರಿಗೆ ವಸ್ತ್ರ ಕಾಣಿಸಿತು. ವಸ್ತ್ರಕ್ಕೆ ವಾರಸುದಾರರು ಯಾರಾದರೂ ಇರಬಹುದೇ ಎಂದು ಸುತ್ತಲೂ ವೀಕ್ಷಿಸಿದನು, ಯಾರೂ ಕಾಣಲಿಲ್ಲ. ಆಗ ಅವನು ಇದು ಬಿಸಾಡಿದಂತಹ ವಸ್ತ್ರವಿರಬಹುದು, ಇದನ್ನು ಚಿಂದಿ ವಸ್ತ್ರದೊಂದಿಗೆ ಚೀವರ ಮಾಡಿಕೊಳ್ಳಬಹುದೆಂದು ಎತ್ತಿಕೊಂಡರು. ಅದೇವೇಳೆ ಆ ಬ್ರಾಹ್ಮಣನು ಇದನ್ನು ಗಮನಿಸಿದನು. ಆತನು ಭಿಕ್ಷುವಿಗೆ ನಿಂದಿಸಿದನು.
                “ಓ ಬೋಳುತಲೆಯವನೇ, ನನ್ನ ವಸ್ತ್ರವೇಕೆ ತೆಗೆದುಕೊಂಡಿರುವೆ?”
                “ಇದು ನಿಮ್ಮ ವಸ್ತ್ರವೇ ಬ್ರಾಹ್ಮಣ?”
                “ಹೌದು ಸಮಣ.
                “ನನಗೆ ಯಾರು ಕಾಣಿಸದ ಕಾರಣ, ಇದು ಎಸೆಯಲ್ಪಟ್ಟ ವಸ್ತ್ರವೆಂದು ಭಾವಿಸಿದೆನು, ತೆಗೆದುಕೊಳ್ಳಿ ಎಂದು ವಸ್ತ್ರವನ್ನು ನೀಡಿ, ಅಲ್ಲಿಂದ ವಿಹಾರಕ್ಕೆ ಹಿಂತಿರುಗಿದನು.
                ಅಲ್ಲಿ ಈ ವಿಷಯವನ್ನು ಸಹ ಭಿಕ್ಷುಗಳಿಗೆ ಹೇಳಿದನು. ಆದರೆ ಅವರು ಅದೆಲ್ಲವನ್ನು ನಂಬದೆ ಹೀಗೆ ಪರಿಹಾಸ್ಯ ಮಾಡಲಾರಂಭಿಸಿದರು: ಸೋದರ, ನಿನ್ನ ಸಿಕ್ಕಂತಹ ಆ ವಸ್ತ್ರವು ಉದ್ದವಾಗಿತ್ತೆ ಅಥವಾ ಗಿಡ್ಡದ್ದಾಗಿತ್ತೆ, ಅದು ನಯವಾಗಿತ್ತೆ ಅಥವಾ ಒರಟಾಗಿತ್ತೆ?
                ಸೋದರರೇ, ಆ ವಸ್ತ್ರವು ಉದ್ದವಾಗಿರಲಿ ಅಥವಾ ಗಿಡ್ಡದಾಗಿರಲಿ, ಉತ್ತಮದ್ದಾಗಿರಲಿ ಅಥವಾ ಕೆಳಮಟ್ಟದ್ದಾಗಿರಲಿ, ನನಗೆ ವಸ್ತ್ರದಲ್ಲಿ ಯಾವುದೇ ಅಂಟುವಿಕೆಯಿಲ್ಲ, ನಾನಂತು ಅದು ತ್ರಾಜ್ಯ ವಸ್ತುವೆಂದೇ ಪರಿಗಣಿಸಿದ್ದೆನು.

                ಆಗ ಆ ಭಿಕ್ಷುಗಳು ಇದನ್ನು ನಂಬದೆ ಭಗವಾನರಲ್ಲಿ ದೂರು ನೀಡಿದಾಗ, ಭಗವಾನರು ಹೀಗೆ ಉತ್ತರಿಸಿದರು: ಭಿಕ್ಷುಗಳೇ, ಈ ಭಿಕ್ಷು ನಿಜವನ್ನೇ ನುಡಿಯುತ್ತಿರುವನು, ಸುಳ್ಳು ಹೇಳುತ್ತಿಲ್ಲ. ಆತನು ಅರಹಂತನಾಗಿದ್ದಾನೆ ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment