Friday, 9 October 2015

dhammapada/brahmanavagga/26.34/jyotika

ತೃಷ್ಣೆ ತ್ಯಾಗಿಯೇ ಬ್ರಾಹ್ಮಣ
ಯಾರು ಇಲ್ಲಿ ತೃಷ್ಣೆಯನ್ನು ತ್ಯಜಿಸಿರುವನೋ,
ಎಲ್ಲವನ್ನು ತ್ಯಾಗಮಾಡಿ, ಮನೆಯಿಲ್ಲದವನಾಗಿ
ಯಾರು ತೃಷ್ಣೆಯನ್ನು ನಾಶಮಾಡಿ, ಭವದ ಅಂತ್ಯಕ್ಕೆ
ಬಂದಿರುವನೋ, ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.      (416)

[416 ಗಾಥೆಗೆ ಒಂದು ವಿಶೇಷತೆಯಿದೆ. ಒಂದೇ ಗಾಥೆಗೆ 2 ವಿಭಿನ್ನ ಘಟನೆಗಳಿವೆ. ಘಟನೆಗಳು ಬೇರೆ ಇದ್ದರೂ ಸಹಾ (ಭಗವಾನರು ಈ ಗಾಥೆಯನ್ನು ಎರಡೂ ಕಡೆ ಬಳಸಿದ್ದಾರೆ). ಧಮ್ಮಪದ ಅಟ್ಠಕಥದಲ್ಲಿ ಇದೊಂದೇ ಗಾಥೆ ಈ ರೀತಿ ಬಳಸಲಾಗಿದೆ.]
ಗಾಥ ಪ್ರಸಂಗ 26.34
ಜ್ಯೋತಿಕನ ದಿವ್ಯಭವನ ಹಾಗು ದಿವ್ಯಶಕ್ತಿ

                ಜೋತಿಕ ರಾಜಗೃಹದ ಖ್ಯಾತ ಶ್ರೀಮಂತನಾಗಿದ್ದನು. ಆತನು ಅತ್ಯಂತ ಭವ್ಯವಾದ ಭವನದಲ್ಲಿ ವಾಸಿಸುತ್ತಿದ್ದನು. ಅದರ ರಕ್ಷಣೆಗಾಗಿ ಏಳು ಗೋಡೆಗಳು ಅದನ್ನು ಸುತ್ತುವರೆದಿತ್ತು. ಪ್ರತಿಯೊಂದು ಗೋಡೆಗೂ ಪ್ರವೇಶದ್ವಾರವಿದ್ದು ಒಂದೊಂದು ಪ್ರವೇಶದ್ವಾರಕ್ಕೂ ಯಕ್ಷರು (ಮಾನವಾತೀತ ಜೀವಿಗಳು) ಕಾವಲು ಕಾಯುತ್ತಿದ್ದವು. ಈತನ ಐಶ್ವರ್ಯದ ಖ್ಯಾತಿಯು ಉದ್ದಗಲಕ್ಕೂ ಹಬ್ಬಿತ್ತು ಮತ್ತು ಬಹಳಷ್ಟು ಜನರು ಈ ಭವನವನ್ನು ಕಾಣಲು ಬರುತ್ತಿದ್ದರು.
                ಒಮ್ಮೆ ರಾಜ ಬಿಂಬಿಸಾರನು ಜೋತಿಕನನ್ನು ನೋಡಲು ತನ್ನ ಮಗನಾದ ಅಜಾತಶತ್ರುವಿನೊಂದಿಗೆ ಬಂದಿದ್ದನು. ಆ ಭವನವನ್ನು ನೋಡಿದ ಕೂಡಲೇ ಅಜಾತಶತ್ರುವು ಈ ರೀತಿಯ ನೀಚ ಸಂಕಲ್ಪ ತನ್ನಲ್ಲೇ ಮಾಡಿಕೊಂಡನು: ನಾನು ರಾಜನಾದ ಕೂಡಲೇ ಹೇ ಜೋತಿಕ, ನಿನ್ನನ್ನು ಈ ಭವನದಲ್ಲಿ ಇರಲು ಬಿಡಲಾರೆ, ಈ ಭವನ ಇಂದಿನಿಂದ ನನ್ನದೇ.
                ರಾಜ ಬಿಂಬಿಸಾರನು ಅಲ್ಲಿಂದ ಹೊರಡುವಾಗ ಜೋತಿಕನು ರಾಜರಿಗೆ ಅಗಲವಾದ ಅತ್ಯಮೂಲ್ಯ ಮಾಣಿಕ್ಯವನ್ನು ಉಡುಗೊರೆಯಾಗಿ ನೀಡಿದನು. ತನ್ನ ಭವನಕ್ಕೆ ಭೇಟಿ ಮಾಡುವ ಪ್ರತಿಯೊಬ್ಬರಿಗೂ ಉಡುಗೊರೆ ನೀಡುವ ಸಂಪ್ರದಾಯವನ್ನು ಜೋತಿಕ ಪಾಲಿಸುತ್ತಿದ್ದನು. ಯಾವಾಗ ಅಜಾತಸತ್ತು (ಅಜಾತಶತ್ರು)ವು ತನ್ನ ತಂದೆಯನ್ನು ಕೊಲ್ಲಿಸಿ ಸಿಂಹಾಸನವನ್ನು ಏರಿದನೋ, ಅದಾದ ಕೆಲದಿನಗಳಲ್ಲೇ ಆತನು ಜೋತಿಕನ ಭವನವನ್ನು ಪಡೆಯಲು ಅಪಾರ ಸೈನಿಕರೊಡನೆ ಬಂದನು. ಆದರೆ ಪ್ರತಿಯೊಂದು ಬಾಗಿಲುಗಳಲ್ಲಿ ಯಕ್ಷರು ಕಾವಲು ಕಾಯುತ್ತಿದ್ದರು.
                ಒಮ್ಮೆ ಜೋತಕನು ಬೆಳಿಗ್ಗೆ ಆಹಾರ ಸೇವಿಸಿ ಉಪೋಸಥ ವ್ರತ ಪಾಲಿಸಲು ನಿರ್ಧರಿಸಿ ಅಷ್ಠಾಂಗ ಶೀಲದ ದೀಕ್ಷೆ ಕೈಗೊಂಡು ಆತನು ವಿಹಾರಕ್ಕೆ ತೆರಳಿ ಭಗವಾನರ ಧಮ್ಮವನ್ನು ಆಲಿಸುತ್ತಿದ್ದನು. ಹೀಗಾಗಿ ಯಕ್ಖ ಯಮಕೋಲಿ ಪ್ರಥಮ ಹೆಬ್ಬಾಗಿಲನ್ನು ಕಾಯುತ್ತಿದ್ದನು. ಆಗ ನುಸುಳಲು ಬಂದಂತಹ ಅಜಾತಸತ್ತು ಮತ್ತು ಆತನ ಸೈನಿಕರನ್ನು ಎಲ್ಲಿಗೆ ಹೋಗುತ್ತಿರುವಿರಿ? ಎಂದು ಪ್ರಶ್ನಿಸಿ, ಅವರನ್ನು ದಿಕ್ಕಾಪಾಲಾಗಿ ಓಡುವಂತೆ ಮಾಡಿದನು. ಆಗ ರಾಜನು ಸಹಾ ರಕ್ಷಣೆಗಾಗಿ ಜೋತಿಕನು ಇರುವಲ್ಲಿಗೇ ಬಂದನು. ರಾಜನನ್ನು ಕಂಡು ಜೋತಿಕನು ಪೀಠದಿಂದ ಎದ್ದು ಗೌರವಿಸಿದನು.
                “ಮಹಾರಾಜ, ಏನು ವಿಷಯ? “ಎಂದು ಕೇಳಿದನು.
                “ಜೋತಿಕ, ನಿನ್ನ ಮನುಷ್ಯರನ್ನು ನನ್ನೊಂದಿಗೆ ಹೋರಾಟಕ್ಕೆ ಬಿಟ್ಟು, ಇಲ್ಲಿ ಧಮ್ಮವನ್ನು ಆಲಿಸುವಂತೆ ನಟಿಸುತ್ತಿರುವೆಯಾ?”
                “ಹಾಗಾದರೆ ಮಹಾಪ್ರಭು, ನೀವು ನನ್ನ ಭವನವನ್ನು ತೆಗೆದುಕೊಳ್ಳಲೆಂದು ಬಂದಿದ್ದಿರಾ?”
                “ಹೌದು, ಆ ಉದ್ದೇಶದಿಂದಲೇ ಬಂದಿದ್ದೆನು.
                “ಆದರೆ ಮಹಾಪ್ರಭು, ನನ್ನ ಇಚ್ಛೆಗೆ ವಿರುದ್ಧವಾಗಿ ಸಾವಿರ ರಾಜರೇ ಆಗಲಿ, ನನ್ನ ಭವನವನ್ನು ತೆಗೆದುಕೊಳ್ಳಲಾಗುವುದಿಲ್ಲ.
                ಈ ಮಾತಿನಿಂದ ಅತ್ಯಂತ ಕೋಪಗೊಂಡ ರಾಜನು ಹೀಗೆ ಕೇಳಿದನು: ಅಂದರೆ, ನೀನು ರಾಜನಾಗಬೇಕೆಂದಿರುವೆಯಾ?”
                “ಇಲ್ಲ ಪ್ರಭು, ನನ್ನ ಅರ್ಥ ಅದಲ್ಲ, ನಾನು ಹೇಳಿದ್ದು ಏನೆಂದರೆ ಪೂರ್ವಜನ್ಮದ ಸುಕೃತ ಫಲದಿಂದಾಗಿ ಯಾರೇ ಆಗಲಿ, ರಾಜರೇ ಇರಬಹುದು ಅಥವಾ ಕಳ್ಳರೇ ಇರಬಹುದು. ನನ್ನ ಇಚ್ಛೆಗೆ ವಿರುದ್ಧವಾಗಿ ದಾರದ ತುಂಡನ್ನು ತೆಗೆದುಕೊಂಡು ಹೋಗಲಾರರು.
                ‘ಹಾಗಾದರೆ ನಿನ್ನ ಅನುಮತಿಯಿಂದಲೇ ನಾವು ಭವನವನ್ನು ತೆಗೆದುಕೊಳ್ಳಬಹುದೇ?”
                “ಮಹಾಪ್ರಭು, ಇದೋ ನನ್ನ ಕೈ ಬೆರಳುಗಳಲ್ಲಿ 20 ಉಂಗುರಗಳಿವೆ, ನನಗೆ ಇದನ್ನು ನೀಡುವ ಇಚ್ಛೆಯಿಲ್ಲ, ನಿಮಗೆ ಸಾಧ್ಯವಾದರೆ ತೆಗೆದುಕೊಳ್ಳಿ ನೋಡೋಣ.
                ಈ ಸವಾಲಿನಿಂದ ರಾಜನಿಗೆ ಕೆರಳಿಸಿದಂತಾಯಿತು. ಆತ ನೆಲದಿಂದಲೇ 18 ಮೊಳದಷ್ಟು ಮೇಲಕ್ಕೆ ಗಾಳಿಯಲ್ಲಿ ಹಾರಿದನು. ನಂತರ ಅಲ್ಲಿಂದಲೇ ಇನ್ನಷ್ಟು ಮೇಲೆ ಹಾರಿ ನೆಲದ ಮೇಲೆ ನಿಂತನು. ಅಂತಹ ಶಕ್ತಿವಂತನಾಗಿದ್ದ ರಾಜನು ತನ್ನ ಇಡೀ ಬಲಪ್ರಯೋಗ ಮಾಡಿದರೂ ಸಹಾ ಆತನು ಜೋತಿಕನ ಬೆರಳುಗಳಲ್ಲಿನ ಒಂದು ಉಂಗುರವನ್ನು ಸಹಾ ತೆಗೆಯಲಾಗಲಿಲ್ಲ.
                ಆಗ ಜೋತಿಕನು ರಾಜನಿಗೆ ಹೀಗೆ ಹೇಳಿದನು: ಮಹಾಪ್ರಭು, ತಮ್ಮ ಮೇಲಂಗಿಯನ್ನು ಚಾಚಿರಿ. ರಾಜನು ಮೇಲಂಗಿಯನ್ನು ಚಾಚಿದಾಗ, ಜೋತಿಕನು ತನ್ನ ಬೆರಳುಗಳನ್ನು ನೇರವಾಗಿ ಮಾಡಿ, ಮೇಲಂಗಿಯತ್ತ ಬಾಗಿಸಿದನು. ತಕ್ಷಣ ಆ ಎಲ್ಲಾ ಉಂಗುರಗಳು ಅದರಲ್ಲಿ ಬಿದ್ದವು.
                ಆಗ ಜೋತಿಕನು ಹೀಗೆ ನುಡಿದನು: ಹೀಗೆ ಮಹಾಪ್ರಭು, ನನ್ನ ಇಚ್ಛೆಯಿಲ್ಲದೆ ನನ್ನ ಯಾವುದನ್ನೂ ನೀವು ತೆಗೆದುಕೊಳ್ಳಲಾರಿರಿ ಎಂದು ನುಡಿದ ಜೋತಿಕನು ರಾಜನ ಉಗ್ರ ಕೋಪದಿಂದ ತನ್ನನ್ನು ನಿಯಂತ್ರಿಸಲಾರದ್ದನ್ನು ಕಂಡನು.
                “ಮಹಾಪ್ರಭು, ನಾನು ಈ ಲೋಕದಿಂದ ಬಿಡುಗಡೆ ಹೊಂದಿ ಭಿಕ್ಷುವಾಗಲು ಇಚ್ಛಿಸಿದ್ದೇನೆ, ತಾವು ಅಪ್ಪಣೆ ನೀಡುವಿರಾ? “ಆಗ ರಾಜನಿಗೆ ಈಗ ದಾರಿ ಸುಗಮವಾಯಿತೆಂದು ಭಾವಿಸಿ ತಕ್ಷಣ ಭಿಕ್ಷುವಾಗು ಎಂದನು.
                ನಂತರ ಆ ಕ್ಷಣದಿಂದಲೇ ಇಡೀ ಲೋಕದ ವಸ್ತುಗಳಿಂದ ನಿರಾಮಿಷನಾಗಿ, ಆತನು ಭಗವಾನರ ಸಮ್ಮುಖದಲ್ಲೇ ಭಿಕ್ಷುವಾದನು. ಅದೇದಿನ ಅರಹಂತನಾಗಿಬಿಟ್ಟನು. ಅಂದಿನಿಂದ ಆತನು ಪೂಜ್ಯ (ಭಂತೆ) ಜೋತಿಕನಾಗಿಬಿಟ್ಟನು. ಆದರೆ ಆತನು ಅರಹಂತನಾದ ಕ್ಷಣದಲ್ಲೇ ಆತನ ಭವನವೂ ಸೇರಿ, ಆತನ ಸಕಲ ಐಶ್ವರ್ಯವೆಲ್ಲವೂ ಮಾಯವಾದವು ಮತ್ತು ಆತನ ದಿವ್ಯಶಕ್ತಿಗಳು ಮತ್ತು ಸಂಪತ್ತು ಉತ್ತರ ಕುರುವಿನಲ್ಲಿದ್ದ ಆತನ ಪತ್ನಿಗೆ ಸೇರಿದವು.
                ಒಂದುದಿನ ಭಿಕ್ಷುಗಳ ಆತನಿಗೆ ಹೀಗೆ ಕೇಳಿದರು: ಜೋತಿಕ, ನೀವು ಭವನಕ್ಕಾಗಲಿ, ಅಥವಾ ಪತ್ನಿಗಾಗಲಿ ಬಯಸುತ್ತಿರುವಿರಾ?”
                “ಖಂಡಿತವಾಗಿಯೂ ಇಲ್ಲ.

                ಇದರ ಸಂಬಂಧ ಭಿಕ್ಷುಗಳು ಭಗವಾನರ ಬಳಿಗೆ ಬಂದು ತಿಳಿಸಿದಾಗ, ಭಗವಾನರು ಈ ಮೇಲಿನ ಗಾಥೆ ನುಡಿದು, ಆತನು ಅರಹಂತನೆಂದು ಸಾರಿದರು. 

No comments:

Post a Comment