Friday, 6 February 2015

dhammapada/puppavagga/4.7/cattapaani

ಬೋಧನೆಗಿಂತ ಸಾಧನೆ ಮೇಲು
ಪುಷ್ಪವೊಂದು ಆಕರ್ಷಣೀಯವು, ಹೊಳಪುಳ್ಳ ವರ್ಣವುಳ್ಳದ್ದು ಆಗಿದ್ದರೂ ಸುಂಗಂಧ ವಿಲ್ಲದಿದ್ದರೆ ಹೇಗೊ, ಹಾಗೆಯೇ ಕಾರ್ಯಗತವಾಗದ ಸುಭಾಷಿತ ವಚನಗಳು ನಿಷ್ಫಲವಾಗುತ್ತದೆ.            (51)
ಪುಷ್ಪವೊಂದು ಆಕರ್ಷಣೀಯವು, ಹೊಳಪುಳ್ಳ ವರ್ಣವುಳ್ಳದ್ದು ಆಗಿ ಸುಗಂಧಮಯವಾಗಿದ್ದರೆ ಹೇಗೋ, ಹಾಗೆಯೇ ಕಾರ್ಯಗತವಾಗಿರುವ ಸುಭಾಷಿತ ವಚನಗಳು ಸಫಲವಾಗುತ್ತದೆ. (52)
ಗಾಥ ಪ್ರಸಂಗ 4:7
ಯಾರಿಗೆ ನಾವು ಗೌರವಿಸಬೇಕು ?

                ಚತ್ತಪಾನಿ ಎಂಬ ಉಪಾಸಕ ಶ್ರಾವಸ್ತಿಯಲ್ಲಿದ್ದನು. ಆತ ಸಕದಾಗಾಮಿ ಪ್ರಾಪ್ತಿಮಾಡಿದ್ದನು. ಒಮ್ಮೆ ಆತನು ಜೇತವನ ವಿಹಾರದಲ್ಲಿದ್ದನು. ಅಲ್ಲಿ ಆತನು ಬುದ್ಧರ ಬೋಧನೆ ಕೇಳುತ್ತಿದ್ದಾಗ ರಾಜ ಪಸೇನದಿಯು ಅಲ್ಲಿಗೆ ಬಂದನು. ಆದರೆ ಚತ್ತಪಾನಿಯು ರಾಜನನ್ನು ಕಂಡು ಮೇಲೆದ್ದು ಗೌರವಿಸಲಿಲ್ಲ. ಏಕೆಂದರೆ ಹಾಗೆ ಮಾಡಿದರೆ ಬುದ್ಧರಿಗೆ ಅಗೌರವ ಸೂಚಿಸಿದಂತೆ ಆಗುವುದು ಎಂದು ಆತನು ಭಾವಿಸಿದನು. ಆದರೆ ರಾಜನಿಗೆ ಇದು ಗೊತ್ತಾಗದೆ ಸ್ವಲ್ಪ ಒಳಗೊಳಗೆ ಕುಪಿತನಾದನು. ಬುದ್ಧರಿಗೆ ಇದು ಅರಿವಾಗಿ ಚತ್ತಪಾನಿಯ ಸದ್ಗುಣಗಳನ್ನು ತಿಳಿಸಿ ಹೊಗಳಿದರು. ಆತ ಧಮ್ಮದಲ್ಲಿ ಬಹುಶ್ರುತನೆಂದು ತಿಳಿಸಿದರು. ಇದನ್ನು ಅರಿತ ರಾಜ ಪೂರ್ಣ ಶಾಂತನಾದನು. ನಂತರ ರಾಜನು ಚತ್ತಪಾಣಿಗೆ ತನ್ನ ರಾಣಿಯರಿಗೆ ಬಂದು ಧಮ್ಮಬೋಧಿಸು ಎಂದು ಕೇಳಿಕೊಂಡನು. ಆತನು ನಯವಾಗಿ ನಿರಾಕರಿಸಿ ಈ ಕಾರ್ಯಕ್ಕೆ ಭಿಕ್ಷುಗಳೇ ಸೂಕ್ತವೆಂದು ತಿಳಿಸಿ, ಬುದ್ಧರಿಗೆ ಕೇಳಿಕೊಂಡರೆ ಅವರೇ ಭಿಕ್ಷುಗಳನ್ನು ಕಳುಹಿಸುವರು ಎಂದು ತಿಳಿಸಿದನು. ಆಗ ರಾಜನು ಭಗವಾನರಲ್ಲಿ ವಿನಂತಿಸಿಕೊಂಡಾಗ ಭಗವಾನರು ಆ ಕಾರ್ಯಕ್ಕೆ ಭಿಕ್ಷು ಆನಂದರವರನ್ನು ಕಳುಹಿಸಿದರು. ನಂತರ ಆನಂದರವರು ಪ್ರತಿದಿನ ರಾಣಿ ಮಲ್ಲಿಕಾ ಮತ್ತು ರಾಣಿ ವಾಸಭಖತ್ತಿಯಾರಿಗೆ ಬೋಧಿಸಿದರು. ಮಲ್ಲಿಕಾಳು ಧಮ್ಮವನ್ನು ಗಂಭೀರವಾಗಿ ಕಲಿತಳು. ಆದರೆ ವಾಸಭಖತ್ತಿಯ ಅಂತಹ ಗಮನ ನೀಡಲಿಲ್ಲ.
                ಭಗವಾನರು ಆನಂದರವರನ್ನು ಪ್ರಶ್ನಿಸಿದರು ಆನಂದ ಉಪಾಸಿಕೆಯರು ಧಮ್ಮವನ್ನು ಕಲಿಯುತ್ತಿದ್ದಾರೆಯೇ?
                ಹೌದು ಭಗವಾನ್.
                ಯಾರು ಚೆನ್ನಾಗಿ ಕಲಿಯುತ್ತಿದ್ದಾರೆ?
                ರಾಣಿ ಮಲ್ಲಿಕಾರವರು ಚೆನ್ನಾಗಿ ಕಲಿಯುತ್ತಿದ್ದಾರೆ. ಆಕೆ ಶ್ರದ್ಧೆಯಿಂದ ಮನನ ಮಾಡುತ್ತಾರೆ. ಅರ್ಥವನ್ನು ಚೆನ್ನಾಗಿ ಮಾಡಿಕೊಳ್ಳುತ್ತಾರೆ. ಹಾಗೆಯೇ ಅದರಂತೆ ಪಾಲನೆಯನ್ನೂ ಮಾಡುತ್ತಾರೆ. ಆದರೆ ವಾಸಭಖತ್ತಿಯ ಹಾಗೆ ಕಲಿಯುತ್ತಿಲ್ಲ. ಆಕೆಯಲ್ಲಿ ಶ್ರದ್ಧೆಯಾಗಲಿ, ನೆನಪಾಗಲಿ, ಅರ್ಥವಾಗಲಿ ಪಾಲನೆಯಾಗಲಿ ಇಲ್ಲ ಎಂದರು.

                ಆನಂದ ಧಮ್ಮವು ಕೇಳುವುದರಲ್ಲಿ ಶ್ರದ್ಧೆಯಿರುವವರಿಗೆ, ಕಲಿಯುವವರಿಗೆ, ಮನನ ಮಾಡುವವರಿಗೆ, ಹಾಗು ಪಾಲನೆ ಮಾಡುವವರಿಗಾಗಿಯಿದೆ ಎಂದು ನುಡಿದು ಮೇಲಿನ ಗಾಥೆ ನುಡಿದರು.

dhammapada/puppavagga/4.6/paatika

ಪರರ ಕುಂದುಗಳನ್ನು ಕಾಣಬೇಡ, ನಿನ್ನ ಕೃತ್ಯಗಳನ್ನು ಕಾಣುವಂತಾಗು
ಪರರ ದೋಷಗಳನ್ನು ಹುಡುಕುವುದು ಬೇಡ, ಪರರ ಮಾಡಿರುವ ಮತ್ತು ಮಾಡಿಲ್ಲದ ಕುರಿತು ಯೋಚನೆ ಬೇಡ, ಬದಲಾಗಿ ಒಬ್ಬನು ತಾನು ಮಾಡಿದ ಮತ್ತು ಮಾಡಿಲ್ಲದ ಕುರಿತು ವಿಶ್ಲೇಷಿಸಲಿ.         (50)
ಗಾಥ ಪ್ರಸಂಗ 4:6
ಪರರ ನಿಂದೆಯ ಕಡೆ ಗಮನಬೇಡ

                ಶ್ರಾವಸ್ತಿಯ ಶ್ರೀಮಂತ ಮಹಿಳೆಯೊಬ್ಬಳು ಪಾತಿಕನೆಂಬ ನಗ್ನ ಸನ್ಯಾಸಿಗೆ ಶಿಷ್ಯೆಯಾಗಿದ್ದಳು. ಆಕೆಗೆ ಆತನ ಮೇಲೆ ಅಪಾರ ಗೌರವ ಮತ್ತು ಭಕ್ತಿಯಿತ್ತು. ತನ್ನ ಮಗನಂತೆ ಆತನನ್ನು ಸಲಹುತ್ತಿದ್ದಳು.
                ಆಕೆಗೆ ಹಲವಾರು ಮಿತ್ರರು ಮತ್ತು ನೆರೆಹೊರೆಯವರು ಇದ್ದರು. ಅವರೆಲ್ಲಾ ಬುದ್ಧರ ಶಿಷ್ಯರಾಗಿದ್ದರು. ಅವೆರೆಲ್ಲಾ ಆಗಾಗ್ಗೆ ಬುದ್ಧರನ್ನು ಕಂಡು ಧಮ್ಮವನ್ನು ಆಲಿಸಿ ಬುದ್ಧರನ್ನು, ಧಮ್ಮವನ್ನು ಮತ್ತು ಸಂಘವನ್ನು ಹೊಗಳುತ್ತಿದ್ದರು. ಇದನ್ನು ಆಲಿಸಿದ ಆಕೆಗೆ ಬುದ್ಧರನ್ನು ಕಾಣಲು ವಿಹಾರಕ್ಕೆ ಹೋಗುವ ಇಚ್ಛೆಯಾಯಿತು. ಅದನ್ನು ಆಕೆ ಪಾತಿಕನಿಗೆ ಹೇಳಿದಾಗ ಆತನು ಹಲವಾರುಬಾರಿ ತಡೆಯುತ್ತಿದ್ದನು.
                ಈಗ ಆಕೆ ವಿಹಾರಕ್ಕೆ ಹೋಗುವ ಬದಲು ತನ್ನ ಮನೆಯಲ್ಲೇ ಔತಣ ನೀಡಲು ಬುದ್ಧರಿಗೆ ತನ್ನ ಮಗನ ಮೂಲಕ ಆಹ್ವಾನಿಸಿದಳು. ಉತ್ತಮವಾದ ಆಹಾರವನ್ನು ಆಕೆಯು ಬುದ್ಧರಿಗೆ ನೀಡಿದಳು. ಭಗವಾನರು ಆಹಾರ ಸೇವನೆಯ ನಂತರ ಅನುಮೋದನಾ ಮಾಡಿದರು (ಅಭಿನಂದನೆ). ಬುದ್ಧರ ವೈಶಿಷ್ಯಪೂರ್ಣ ಧ್ವನಿ ಕೇಳಿ ಆಕೆಗೆ ಆನಂದವಾಯಿತು. ನಂತರ ಮೊದಲಬಾರಿ ಧಮ್ಮವನ್ನು ಕೇಳಿದ್ದರಿಂದ ಆಕೆ ಮನವೆಲ್ಲಾ ಆನಂದದಿಂದ ತುಂಬಿಹೋಯಿತು. ತುಂಬಾ ಚೆನ್ನಾಗಿ ಹೇಳಿದಿರಿ ಎಂದು ಆಕೆ ಉದ್ಗಾರ ಮಾಡಿದಳು.
                ಆ ಸಮಯದಲ್ಲಿ ಪಾತಿಕ ಪಕ್ಕದ ಕೋಣೆಯಲ್ಲಿದ್ದನು. ಆತನಿಗೆ ಆಕೆಯ ಉದ್ಗಾರ ಕೇಳಿ ಇನ್ನು ಈಕೆ ನನ್ನ ಶಿಷ್ಯಳಾಗಿ ಉಳಿಯುವುದಿಲ್ಲ ಎಂದು ಯೋಚಿಸುತ್ತಾ ಕೋಪದಿಂದ ಆಕೆಯಲ್ಲಿಗೆ ಬಂದು ಬುದ್ಧರಿಗೆ ಮತ್ತು ಆಕೆಗೂ ಬೈಯ್ದಾಡಿದನು ಮತ್ತು ಶಪಿಸಿದನು. ನಂತರ ಬೈಯುತ್ತಲೇ ಮನೆಯಿಂದ ಹೊರಹೋದನು.

                ಆಗ ಆಕೆಗೆ ಮನಸ್ಸು ವಿಚಲಿತವಾಯಿತು, ಚದುರಿತು. ಆಗ ಬುದ್ಧರು ಆಕೆಗೆ ಹೀಗೆ ಕೇಳಿದರು ಉಪಾಸಿಕೆ, ನೀನು ಧಮ್ಮವನ್ನು ಆಲಿಸಲು ಮನಸ್ಸನ್ನು ಕೇಂದ್ರೀಕೃತಗೊಳಿಸುತ್ತಿಲ್ಲ. ಭಂತೆ ನನಗೆ ಪಾತಿಕನ ಬೈಗುಳಗಳು ಕ್ಷೊಭೆಗೊಳಿಸುತ್ತಿವೆ. ಆಗ ಭಗವಾನರು ಮೇಲಿನ ಗಾಥೆಯನ್ನು ನುಡಿದರು. ಅದನ್ನು ಆಲಿಸಿದ ನಂತರ ಆಕೆ ಸೋತಪತ್ತಿ ಫಲ ಪಡೆದಳು. 

dhammapada/puppavagga/4.5/kosia

ಮುನಿಗಳು ಯಾರಿಗೂ ಯಾವುದಕ್ಕೂ ಹಾನಿ ಮಾಡುವುದಿಲ್ಲ
ಹೇಗೆ ಭ್ರಮರವು ಪುಷ್ಪಕ್ಕೆ ಅಥವಾ ಅದರ ವರ್ಣಕ್ಕೆ ಅಥವಾ ಗಂಧಕ್ಕೆ ಹಾನಿಮಾಡದೆ ಕೇವಲ ರಸವನ್ನು ತೆಗೆದುಕೊಳ್ಳವ ಹಾಗೆ ಮುನಿಗಳು ಗ್ರಾಮಗಳಲ್ಲಿ
ಚಲಿಸುತ್ತಾರೆ.        (49)
ಗಾಥ ಪ್ರಸಂಗ 4:5
ಕೋಸಿಯಾ ಕೃಪಣನ ಕಸಿವಿಸಿ

                ರಾಜಗೃಹದ ಸಮೀಪ ಸಕ್ಕಾರವೆಂಬ ಹಳ್ಳಿಯಿತ್ತು. ಅಲ್ಲಿ ಕೋಸಿಯನೆಂಬ ಶ್ರೀಮಂತ ಕೃಪಣನಿದ್ದನು. ಆತನು ಯಾರಿಗೂ ಏನನ್ನೂ ಸ್ವಲ್ಪವೂ ದಾನ ನೀಡುತ್ತಿರಲಿಲ್ಲ. ಒಂದುದಿನ ಆತನಿಗೆ ಒಬ್ಬಟ್ಟಿನಂತಹ ತಿಂಡಿ ತಿನ್ನುವ ಬಯಕೆಯಾಯಿತು. ಆದರೆ ಪರರಲ್ಲಿ ಹಂಚಿ ತಿನ್ನುವ ಪ್ರವೃತ್ತಿ ಆತನಲ್ಲಿ ಇಲ್ಲದ ಕಾರಣ ಆತನು ತನ್ನ ಪತ್ನಿಯೊಂದಿಗೆ ಮಹಡಿಯ ಎತ್ತರದ ಅಂತಸ್ತಿನಲ್ಲಿ ಕುಳಿತು ಅಲ್ಲಿ ಯಾರೂ ಕಾಣಲಾರರು ಎಂಬ ನಿರಾಳ ಹೊಂದಿ ಇಬ್ಬರೂ ಒಬ್ಬಟ್ಟು ತಯಾರಿಸಲಾರಂಭಿಸಿದರು.
                ಅಂದು ಮುಂಜಾನೆಯೇ ಭಗವಾನರು ತಮ್ಮ ದಿವ್ಯದೃಷ್ಟಿಯಿಂದಾಗಿ ಈ ಇಬ್ಬರು ದಂಪತಿಗಳು ಸೋತಪನ್ನರಾಗುತ್ತಾರೆ ಎಂದು ತಿಳಿಸಿದರು. ಆದ್ದರಿಂದ ಅವರು ಋದ್ದಿಶಕ್ತಿ ಪ್ರವೀಣ ಮಹಾ ಮೊಗ್ಗಲಾನರನ್ನು ಕರೆಸಿ ಆ ಶ್ರೀಮಂತ ದಂಪತಿಯನ್ನು ಮಧ್ಯಾಹ್ನದ ಹೊತ್ತಿಗೆ ಕರೆತರಬೇಕೆಂದು ತಿಳಿಸಿದರು. ಇದ್ದಿಬಲಗಳನ್ನು ಹೊಂದಿದ್ದ ಮೊಗ್ಗಲಾನರು ತಕ್ಷಣ ಅಲ್ಲಿಂದ ಮರೆಯಾಗಿ ಕೋಸಿಯನ ಉಪ್ಪರಿಗೆಯ ಕಿಟಕಿ ಬಳಿ ನಿಂತರು.
                ಕೋಸಿಯ ಮೊಗ್ಗಲಾನರನ್ನು ನೋಡಿದ. ಅಲ್ಲಿಂದ ಹೊರಹೋಗುವಂತೆ ಕೂಗಾಡಿದ. ಆದರೆ ಮೊಗ್ಗಲಾನರು ಏನನ್ನು ನುಡಿಯದೆ ನಿಶ್ಶಬ್ದದಿಂದಿದ್ದರು. ಕೊನೆಗೆ ಕೋಸಿಯನೆ ಸೋತು ಹೆಂಡತಿಯೊಡನೆ ಹೀಗೆ ಹೇಳಿದನು ಚೂರು ಒಬ್ಬಟ್ಟು ಮಾಡಿ ಆ ಭಿಕ್ಷುವಿಗೆ ನೀಡು ಆಕೆ ಅದರಂತೆ ಮಾಡಿದಳು. ಆದರೆ ಆಶ್ಚರ್ಯ! ಅದು ಇಡೀ ಬಾಣಲಿಯನ್ನೇ ತುಂಬಿಸಿತು. ಕೋಸಿಯನಿಗೆ ಹೆಂಡತಿ ಹೆಚ್ಚು ಹಾಕಿರಬಹುದೆಂದು ಆಕೆಯನ್ನು ಬಯ್ದು ತಾನೇ ಚೂರು ಒಬ್ಬಟ್ಟನ್ನು ಬಾಣಲಿಗೆ ಹಾಕಿದ. ಅದೂ ಸಹ ಇಡೀ ಬಾಣಲಿಯನ್ನು ತುಂಬಿಸಿತು. ಆತ ಎಷ್ಟೇ ಚಿಕ್ಕ ಚೂರು ಬಾಣಲಿಗೆ ಹಾಕಿದರೂ ಅದು ಇಡೀ ಬಾಣಲಿಯಷ್ಟು ದಪ್ಪವಾಗಿ ಉಬ್ಬುತ್ತಿತ್ತು. ಕೊನೆಗೆ ಕೋಸಿಯನು ಹೆಂಡತಿಗೆ ಒಂದು ಒಬ್ಬಟ್ಟನ್ನು ಮೊಗ್ಗಲಾನರಿಗೆ ಕೊಟ್ಟು ಕಳುಹಿಸು ಎಂದನು. ಆಕೆ ಹಾಗೇ ಮಾಡಲು ಹೋದಾಗ ಎಲ್ಲಾ ಒಬ್ಬಟ್ಟುಗಳು ಅಂಟಿಕೊಂಡಿದ್ದವು. ಆಕೆಗೆ ಒಂದನ್ನು ಪ್ರತ್ಯೇಕಿಸಲು ಆಗಲಿಲ್ಲ. ಕೊನೆಗೆ ಕೋಸಿಯನೇ ಬೇರ್ಪಡಿಸಲು ಪ್ರಯತ್ನಿಸಿದನು. ಆದರೆ ಅದು ಸಾಧ್ಯವಾಗದೆ ನಿರಾಶೆಯಾಗಿ ಆತನ ಅಭಿಲಾಶೆ ಮತ್ತು ಹಸಿವು ಕಳೆದುಕೊಂಡನು. ಎಲ್ಲವನ್ನೂ ಈ ಭಿಕ್ಷುವಿಗೆ ನೀಡು ಎಂದನು. ಅದನ್ನು ಸ್ವೀಕರಿಸಿದ ಮೊಗ್ಗಲಾನರು ದಾನದ ಬಗ್ಗೆ ಪ್ರವಚನವೊಂದನ್ನು ನುಡಿದರು. ನಂತರ ಅವರಿಗೆ ಅವರಿಗಾಗಿ ಬುದ್ಧರು ಮತ್ತು ಸಂಘವು ಕಾಯುತ್ತಿದೆ ಎಂದು ಹೇಳಿದರು. ಶ್ರಾವಸ್ತಿಯ ಜೇತವನವು ಅಲ್ಲಿ 45 ಯೋಜನ ದೂರವಿತ್ತು. ಆದರೆ ಮಹಾ ಮೊಗ್ಗಲಾನರವರ ತಮ್ಮ ಅತೀಂದ್ರೀಯ ಶಕ್ತಿಯಿಂದಾಗಿ ಕೋಸಿಯ, ಆತನ ಪತ್ನಿ ಮತ್ತು ಒಬ್ಬಟ್ಟುಗಳ ಬುಟ್ಟಿಯ ಸಮೇತ ಬುದ್ಧರ ಮುಂದೆ ಪ್ರತ್ಯಕ್ಷರಾದರು. ಆ ಒಬ್ಬಟ್ಟುಗಳನ್ನು 500 ಭಿಕ್ಷುಗಳಿಗೆ ದಾನ ನೀಡಿದರು. ಆ ಒಬ್ಬಟ್ಟಿನ ಬುಟ್ಟಿಯು ಸರಿಯಾಗಿ 500 ಭಿಕ್ಷುಗಳಿಗೆ ಸರಿಹೋಯಿತು. ನಂತರ ಭಗವಾನರು ನೀಡಿದ ಉಪದೇಶದಿಂದ ಅವರು ಸೋತಪತ್ತಿಫಲ ಪಡೆದರು.

                ಸಂಜೆ ಭಿಕ್ಷುಗಳು ಮಹಾಮೊಗ್ಗಲಾನರ ಪ್ರತಾಪವನ್ನು ಮೆಚ್ಚಿ ಆ ವಿಷಯವನ್ನು ಚಚರ್ಿಸುವಾಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ ಹೇಳಿದರು ಭಿಕ್ಷುಗಳೇ, ನೀವು ಸಹಾ ಮೊಗ್ಗಲಾನರ ತರಹ ಜೀವಿಸಬೇಕು. ಗ್ರಾಮದವರಿಂದ ಆಹಾರ ಪಡೆಯುವಾಗ ಅವರ ಶ್ರದ್ಧೆಗೆ ಮತ್ತು ಐಶ್ವರ್ಯಕ್ಕೆ ಯಾವುದೇ ಹಾನಿಯಾಗದಂತೆ ಸಂಚರಿಸಬೇಕು ಎಂದು ನುಡಿದು ಮೇಲಿನ ಗಾಥೆ ನುಡಿದರು. 

dhammapada/puppavagga/4.4/patipujika kumari

ಇಂದ್ರೀಯ ಭೋಗಿಯು ತೃಪ್ತಿತಾಳುವ ಮುನ್ನವೇ ಮರಣಿಸುತ್ತಾನೆ
ಇಂದ್ರೀಯ ಸುಖಗಳೆಂಬ ಪುಷ್ಪಗಳನ್ನು ಸಂಗ್ರಹಿಸುವವನಿಗೆ ಬಂಧಿತ ಮನಸ್ಸುಳ್ಳವಗೆ, ಇಂದ್ರೀಯ ಸುಖದಲ್ಲಿ ಅತೃಪ್ತನಾದವನನ್ನು ಹಂತಕನು ತನ್ನ ವಶ ಮಾಡಿಕೊಳ್ಳುವನು. (48)
ಗಾಥ ಪ್ರಸಂಗ 4:4
ಪತಿಪೂಜಿಕ ಕುಮಾರಿಯ ವೃತ್ತಾಂತ

                ಪತಿಪೂಜಿಕ ಕುಮಾರಿಯು ಶ್ರಾವಸ್ತಿಯ ಸ್ತ್ರೀಯಾಗಿದ್ದಳು. ಆಕೆಗೆ ಹದಿನಾರು ವಯಸ್ಸಿನಲ್ಲಿ ವಿವಾಹವಾಗಿ ನಾಲ್ಕು ಮಕ್ಕಳಾದವು. ಆಕೆ ಶೀಲವಂತೆ, ಹಾಗೆಯೇ ದಾನಿಯೂ ಆಗಿದ್ದಳು. ಆಕೆ ಭಿಕ್ಷುಗಳಿಗೆ ದಾನ ಮಾಡಲು ಸದಾ ಆನಂದಪಡುತ್ತಿದ್ದಳು. ಅಷ್ಟೇ ಅಲ್ಲ, ಆಕೆಯು ಆಗಾಗ್ಗೆ ವಿಹಾರದಲ್ಲಿ ಹೋಗಿ ಅಲ್ಲಿನ ಕಸಗಳನ್ನೆಲ್ಲಾ ಶುಚಿಗೊಳಿಸುತ್ತಿದ್ದಳು ಮತ್ತು ವಿಹಾರದಲ್ಲಿ ನೀರು ತುಂಬಿ ಬರುತ್ತಿದ್ದಳು. ಆಕೆಗೆ ವಿಶೇಷವಾದ ಜ್ಞಾನವಿತ್ತು, ಅದೆಂದರೆ ಜಾತಿಸ್ಸರ ಞ್ಞಾನ. ಅಂದರೆ ಹಿಂದಿನ ಜನ್ಮಗಳ ನೆನಪು. ಆಕೆ ಹಿಂದಿನ ಜನ್ಮದಲ್ಲಿ ತಾವತಿಂಸ ಲೋಕದಲ್ಲಿ ಮಾಲಾಭಾರಿ ಎಂಬುವವನಿಗೆ ಪತ್ನಿಯಾಗಿದ್ದಳು. ಆಕೆ ಆ ಹಿಂದಿನ ಜನ್ಮದಲ್ಲಿ ದೇವಲೋಕದ ಉದ್ಯಾನ ವನದಲ್ಲಿ ಹೂಗಳನ್ನು ಕೀಳುತ್ತಿರುವಾಗ ಅಲ್ಲಿಂದ ಮರೆಯಾಗಿ ಇಲ್ಲಿ ಹುಟ್ಟಿದಳು. ಆಕೆ ಒಂದು ಉಪಾಯ ಕೌಶಲ್ಯವನ್ನು ರೂಢಿಸಿಕೊಂಡಿದ್ದಳು. ಅದೇನೆಂದರೆ ಆಕೆ ಯಾವುದೇ ಪುಣ್ಯಕಾರ್ಯ ಮಾಡಲಿ ಅದರ ಫಲದಿಂದ ಆಕೆ ತಾವತಿಂಸದಲ್ಲಿ ಮತ್ತೆ ಮಾಲಾಭಾರಿಯ ಪತ್ನಿಯಾಗಲು ಇಚ್ಛಿಸುತ್ತಿದ್ದಳು.
                ಒಂದುದಿನ ಆಕೆಯು ಕಾಯಿಲೆ ಬಿದ್ದು ಸಂಜೆಯೇ ತೀರಿಹೋದಳು. ಆಕೆಯ ಇಚ್ಛೆಯಂತೆ ಆಕೆ ಮಾಲಾಭಾರಿಯ ಸಮೀಪ ಮತ್ತೆ ಕಾಣಿಸಿಕೊಂಡಳು. (ಇಲ್ಲಿನ ನೂರು ವರ್ಷ ತಾವಂಸಿಕ ಲೋಕದ ಒಂದು ದಿನಕ್ಕೆ ಸಮವಾಗಿತ್ತು). ಅಲ್ಲಿ ಅವರಿನ್ನು ಉದ್ಯಾನವನದಲ್ಲಿ ಆಟವಾಡುತ್ತಿದ್ದರು. ಮಾಲಾಭಾರಿಯು ಆಕೆಗೆ ಇಡೀ ಬೆಳಿಗ್ಗೆ ಎಲ್ಲಿ ಹೋಗಿದ್ದೆ ಎಂದು ಕೇಳಿದಾಗ ಆಕೆ ಇಡೀ ಘಟನೆ ತಿಳಿಸಿದಳು.

                ಆದರೆ ಶ್ರಾವಸ್ತಿಯಲ್ಲಿ ಆಕೆಯ ಮರಣದಿಂದ ಕೆಲವು ಭಿಕ್ಷುಗಳು ದುಃಖಿತರಾದರು. ಅವರು ಬುದ್ಧರಿಗೆ ಆಕೆ ಬೆಳಿಗ್ಗೆ ದಾನನೀಡಿ ಸಂಜೆಯೇ ತೀರಿಕೊಂಡಳು ಎಂದರು. ಆಗ ಭಗವಾನರು ಜೀವನದ ಕ್ಷಣಿಕತೆ ಹೇಳಿ ಅತೃಪ್ತಿಯಿಂದಲೇ ಅಂತ್ಯಗೊಳ್ಳುವ ಜೀವಿಗಳ ಬಗ್ಗೆ ಹೇಳಿ ಮೇಲಿನ ಗಾಥೆ ನುಡಿದರು. 

dhammapada/puppavagga/4.3/vidudabha

ಸುಖಾನ್ವೇಷಿಯು ಕೊಚ್ಚಿ ಹೋಗುತ್ತಾನೆ
ಇಂದ್ರೀಯ ಸುಖಗಳೆಂಬ ಹೂವುಗಳನ್ನು ಸಂಗ್ರಹಿಸುತ್ತಿರುವವನಿಗೆ ಪೇಚಾಟದ ಮನದವನಿಗೆ, ಮಲಗಿರುವ ಹಳ್ಳಿಯನ್ನು ಪ್ರವಾಹವು ಕೊಚ್ಚಿ ಹೋಗುವ ಹಾಗೆ ಮರಣವು ಹೊತ್ತಿಕೊಂಡು ಹೋಗುತ್ತದೆ       (47)
ಗಾಥ ಪ್ರಸಂಗ 4:3
ಸೇಡಿನ ಪರಿಣಾಮ ಭೀಕರ ದುಃಖ

                ಕೋಸಲ ದೇಶದ ರಾಜ ಪಸೇನದಿಗೆ ಬುದ್ಧರಿಗೆ ಪ್ರಿಯನಾಗಬೇಕೆಂದು ಬಯಸುತ್ತಿದ್ದನು. ಅದಕ್ಕಾಗಿ ಆತನು ಶಾಕ್ಯ ವಂಶದಲ್ಲಿ ಮದುವೆಯಾಗುವೆನೆಂದು ನಿರ್ಧರಿಸಿದನು. ಇದು ಆತನ ವೈಯಕ್ತಿಕ ನಂಬಿಕೆಯಾಗಿತ್ತು. ಇಂತಹ ಸಂದೇಶವನ್ನು ಆತನು ಕಳುಹಿಸಿದನು. ಆದರೆ ಶಾಕ್ಯರಿಗೆ ಕೋಶಲರಾಜನು ತಮಗೆ ಸಮನಲ್ಲ ಎಂಬ ನಂಬಿಕೆಯಿತ್ತು. ಆದ್ದರಿಂದ ಅವರು ಆತನಿಗೆ ತಮ್ಮ ಹೆಣ್ಣು ನೀಡದಿರಲು ನಿರ್ಧರಿಸಿದರು. ಆದರೆ ಪಸೇನದಿಯ ಪರಾಕ್ರಮದ ಬಗ್ಗೆ ಅವರಿಗೆ ಹೆದರಿಕೆಯಿತ್ತು. ಆದ್ದರಿಂದ ಅವರೊಂದು ಉಪಾಯ ಮಾಡಿದರು. ಶಾಕ್ಯ ವಂಶಜರಾದ ಮಹಾನಾಮ ದಾಸಿಯೊಂದಿಗೆ ಜನಿಸಿದ ಸುಂದರ ಕನ್ಯೆಯಾದ ವಾಸಭಖತ್ತಿಯಾಳನ್ನೇ ಶಾಕ್ಯ ರಾಜಕುಮಾರಿ ಎಂದು ತೋರಿಸಿ ಸತ್ಯದ ಅರಿವಿಲ್ಲದ ಪಸೇನದಿಗೆ ಕೊಟ್ಟು ವಿವಾಹ ಮಾಡಿದರು. ಪಸೇನದಿಯು ಆಕೆಯನ್ನು ತನ್ನ ರಾಣಿಯರಲ್ಲಿ ಒಬ್ಬಳಾಗಿ ಸ್ಥಾನ ನೀಡಿದರು. ಅವರಿಗೆ ಜನಿಸಿದ ರಾಜಕುಮಾರನೇ ವಿಡೂಡಭ, ಆತನು ಯುವಕನಾದಾಗ ಒಮ್ಮೆ ತನ್ನ ತಾಯಿಯ ಊರಾದ ಕಪಿಲವಸ್ತುವಿಗೆ ಹೊರಟನು.
                ಆದರೆ ವಂಶ ಅಹಂಕಾರದಿಂದ ಕೂಡಿದ ಶಾಕ್ಯರು ವಿಡುಡವನಿಗಿಂತ ಕಿರಿಯರಾದ ರಾಜಕುಮಾರರನ್ನೆಲ್ಲಾ ದೂರದ ಹಳ್ಳಿಗೆ ಕಳುಹಿಸಿದರು. ಏಕೆಂದರೆ ಅವರು ವಿಡುಡಭನಿಗೆ ವಂದಿಸಬಾರದೆಂಬ ಕಾರಣದಿಂದ ಹಾಗೇ ಮಾಡಿದರು. ವಿಡುಡಭನಿಗೆ ಕೆಲಕಾಲ ಸತ್ಕಾರ ಔತಣ ಸಿಕ್ಕಿತು. ನಂತರ ಅವರೆಲ್ಲರೂ ಕೋಶಲಕ್ಕೆ ಹಿಂತಿರುಗುವಾಗ, ಅವರಲ್ಲಿ ಒಬ್ಬನು ಏನನ್ನು ತೆಗೆದುಕೊಳ್ಳಲು ಮರೆತಿದ್ದನು. ಅದನ್ನು ಪಡೆಯಲು ಆತನು ಅರಮನೆಗೆ ಹಿಂತಿರುಗಿದಾಗ ಅಲ್ಲಿನ ದಾಸಿಯೊಬ್ಬಳು ವಿಡೂಡಭ ಕುಳಿತಿದ್ದ ಆಸನವನ್ನು ಹಾಲಿನಿಂದ ತೊಳೆಯುತ್ತಿದ್ದಳು. ತೊಳೆಯುತ್ತ ಆಕೆಯು ಆತನನ್ನು ಹೀಗೆ ನಿಂದಿಸಿದಳು ಇದೇ ಆ ಸ್ಥಳ, ಅದರಮೇಲೆ ಆ ದಾಸಿಪುತ್ರನು ಕುಳಿತಿದ್ದ... ಇದನ್ನು ಕೇಳಿದ ವಿಡೂಡಭನ ಸ್ನೇಹಿತನಿಗೆ ಆಶ್ಚರ್ಯವಾಯಿತು. ಆತ ಉಪಾಯದಿಂದ ಆಕೆಯನ್ನು ವಿಚಾರಿಸಿದಾಗ ಆಕೆಯು ಮಹಾನಾಮ ಮತ್ತು ದಾಸಿಯ ಪುತ್ರಿಯೆ ವಾಸಭಖತ್ತಿಯಾ ಆಕೆಯ ಮಗನೇ ಈ ವಿಡೂಡಭ ಎಂದು ವಿವರವಾಗಿ ತಿಳಿಸಿದಳು.
                ಇದನ್ನು ಕೇಳಿದ ವಿಡೂಡಭನಿಗೆ ಅತ್ಯಂತ ಕ್ರೋಧ ಉಂಟಾಯಿತು. ಆತ ಈ ರೀತಿ ಪ್ರತಿಜ್ಞೆ ಮಾಡಿದನು ನಾನು ಮುಂದೆ ರಾಜನಾಗುತ್ತೇನೆ. ಆಗ ನನ್ನ ಪೀಠವನ್ನು ಹಾಲಿನಿಂದ ತೊಳೆದ ಶಾಕ್ಯರ ಸಮೂಹವನ್ನೇ ಸಾಮೂಹಿಕ ಹತ್ಯೆ ಮಾಡುವೆ ಅದರಂತೆಯೇ ಅತ ಮುಂದೆ ಮಹಾನಾಮ ಮತ್ತು ಕೆಲವು ಪ್ರೀತಿಪಾತ್ರರನ್ನು ಬಿಟ್ಟು ಅತ ಎಲ್ಲರನ್ನು ಸಾಮೂಹಿಕ ಹತ್ಯೆ ಮಾಡುತ್ತಾನೆ.
                ನಂತರ ಆತ ತನ್ನ ರಾಜ್ಯದೆಡೆ ಹೊರಡುವಾಗ ಅಚಿರವತಿ ನದಿಯ ದಡದಲ್ಲಿ ಬಿಡಾರವನ್ನು ಹೂಡಿದನು. ಆದರೆ ಆ ರಾತ್ರಿ ಭೀಕರ ಮಳೆಯು ಸುರಿದು, ನದಿಯು ಉಕ್ಕಿ ಪ್ರವಾಹವು ಪ್ರಬಲವಾಗಿ ವಿಡೂಡಭನ ಬಿಡಾರಕ್ಕೆ ಅಪ್ಪಳಿಸಿ ಎಲ್ಲರನ್ನೂ ತನ್ನಲ್ಲಿ ಸೆಳೆದುಕೊಂಡು ಅವರ ಕತೆ ಮುಗಿಸಿತು.
                ಬುದ್ಧರ ಬಳಿಗೆ ಈ ಎರಡು ಘಟನೆಗಳು ಕೇಳಿಬಂದಿತು. ಆಗ ಭಗವಾನರು ಶಾಕ್ಯರ ಹಿಂದಿನ ಜನ್ಮದ ವೃತ್ತಾಂತ ತಿಳಿಸಿದರು. ಅವರು ಹಿಂದಿನ ಜನ್ಮದಲ್ಲಿ ನದಿಗೆ ವಿಷಬೆರೆಸಿ ಸಹಸ್ರಾರು ಮೀನಿಗಳಿಗೆ ಸಾಮೂಹಿಕ ಹತ್ಯೆ ಮಾಡಿದ್ದರು. ಅದರ ಪರಿಣಾಮವೇ ಈ ಜನ್ಮದಲ್ಲಿ ಅವರು ಸಾಮೂಹಿಕವಾಗಿ ಕೊಲ್ಲಲ್ಪಟ್ಟರು.

                ನಂತರ ಭಗವಾನರು ಈ ಮೇಲಿನ ಗಾಥೆ ನುಡಿದರು. 

dhammapada/puppavagga/4.2/meditation on mirage

ಈ ಕಾಯವು ಮರೀಚಿಕೆಯಂತೆ
ನೊರೆಯಂತೆಯೇ ಕಾಯವು ಇದೆ ಎಂದರಿತು, ಮರೀಚಿಕೆಯಂತಹ ಅದರ ಸ್ವಭಾವವನ್ನು ಗ್ರಹಿಸಿ, ಮಾರನ (ಇಂದ್ರೀಯಾಭಿಲಾಷೆಯ) ಪುಷ್ಪಬಾಣಗಳನ್ನು ಕತ್ತರಿಸಿ ಅದೃಷ್ಯನಾಗು, ನೀ ಮೃತ್ಯುರಾಜನ ಕಣ್ಣಿನಿಂದಾಗಿ.     (46)
ಗಾಥ ಪ್ರಸಂಗ 4:2
ಮರಿಚಿಕೆಯ ಧ್ಯಾನ
                ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನ ವಿಹಾರದಲ್ಲಿ ನೆಲಸಿದ್ದರು. ಆಗ ಒಬ್ಬ ಭಿಕ್ಷುವು ಬುದ್ಧರಿಂದ ಧ್ಯಾನದ ವಿಷಯ ಸ್ವೀಕರಿಸಿ ಧ್ಯಾನ ಮಾಡಲು ಕಾಡಿಗೆ ಹೊರಟನು.

                ಆತನು ಧ್ಯಾನದಲ್ಲಿ ತಲ್ಲೀನನಾದನು, ಅಪಾರವಾಗಿ ಪರಿಶ್ರಮಿಸಿದನು. ಆದರು ಸಹಾ ಆತನು ಏಳಿಗೆಯನ್ನು ಹೊಂದಲಿಲ್ಲ. ಆತನಿಗೆ ನಿರಾಸೆಯಾಯಿತು. ಆಗ ಆತನು ಈ ರೀತಿ ಯೋಚಿಸಿದನು ನಾನು ಜೇತವನಕ್ಕೆ ಹಿಂದಿರುಗಿ ಭಗವಾನರಲ್ಲಿ ನನ್ನ ವ್ಯಕ್ತಿತ್ವಕ್ಕೆ ತಕ್ಕಂತೆ ಬೇರೊಂದು ಧ್ಯಾನ ವಿಷಯವನ್ನು ಕೋರಿಕೊಂಡು ಆಯ್ಕೆ ಮಾಡಿಕೊಳ್ಳು ವೆನು ಈ ರೀತಿಯ ಯೋಚನೆಗಳಿಂದ ಆತನು ಜೇತವನಕ್ಕೆ ಹಿಂತಿರುಗುತ್ತಾ ಇದ್ದನು.
                ದಾರಿಯಲ್ಲಿ ಆತನು ಮರಿಚಿಕೆಯನ್ನು ಕಂಡನು. ತನ್ನಲ್ಲಿ ಜಾಗರೂಕತೆಯಿಂದ ವಿಶ್ಲೇಷಿಸಿಕೊಂಡು ಅದು ಕೇವಲ ಭ್ರಮೆ, ವಾತಾವರಣದಿಂದ ಆದುದು, ಹೊರತು ನೀರಲ್ಲ ಎಂದು ಸಮಾಧಾನಪಡುತ್ತಾ ಹಾಗೆಯೇ ಆತನಿಗೆ ಈ ಬಗೆಯ ಚಿಂತನೆ ಉದಯಿಸಿತು. ಈ ದೇಹವು ಸಹಾ ಭ್ರಮೆಯಾಗಿದೆ, ಅನಿಶ್ಚಿತತೆಯಿಂದ ಕೂಡಿದೆ, ಅಷ್ಟೇ ಅಲ್ಲದೆ ಜನ್ಮ ಜರಾಮರಣಕ್ಕೆ ಕಾರಣವಾಗಿದೆ... ಈ ರೀತಿಯಲ್ಲಿ ಮರಿಚಿಕೆಯ ದೇಹದ ಧ್ಯಾನ ಆರಂಭಿಸಿದನು. ನಂತರ ಆತನು ಅಚರಾವತಿ ನದಿಯ ಹತ್ತಿರ ಹೋಗಿ ಸ್ನಾನ ಮಾಡಿ ಹತ್ತಿರದಲ್ಲಿರುವ ಮರದ ಬುಡದಲ್ಲಿ ವಿಶ್ರಮಿಸಿದನು. ಆಗ ಆತನಿಗೆ ನದಿಯಲ್ಲಿ ನೊರೆಯನ್ನು ಕಂಡನು. ಆಗ ಆತನಿಗೆ ಮತ್ತೆ ಚಿಂತನೆ ಆರಂಭವಾಯಿತು ಓಹ್ ಈ ದೇಹವು ಸಹಾ ನೊರೆಯಂತೆ ಉದಯಿಸಿ ಅಳಿಯುತ್ತದೆ. ಓಹ್ ಈ ದೇಹವು ಅಶುಭವಾಗಿದೆ, ಅನಿತ್ಯವಾಗಿದೆ, ದುಃಖಕರವಾಗಿದೆ. ಸದಾ ಪರಿವರ್ತನೆ ಹೊಂದುತ್ತಲೆ ಇರುತ್ತದೆ. ಈ ಯೌವ್ವನ ನಶ್ವರ, ಈ ಅರೋಗ್ಯ ನಶ್ವರ ಈ ಜೀವನ ಅನಿಶ್ಚಿತವಾಗಿದೆ... ಇವೆಲ್ಲವೂ ಈ ಮರಿಚಿಕೆಯಂತೆ... ನೊರೆಯಂತೆ ಕ್ಷಣಿಕವಾಗಿದೆ, ಅನಿತ್ಯವಾಗಿದೆ...
                ಅದೇ ವೇಳೆಯಲ್ಲಿ ಬುದ್ಧ ಭಗವಾನರು ಜೇತವನದ ವಿಹಾರದಲ್ಲಿದ್ದರು. ಅವರಿಗೆ ಈ ಭಿಕ್ಷುವಿನ ಸಾಧನೆ ಗಮನಕ್ಕೆ ಬಂದಿತು. ಆಗ ಬುದ್ಧರು ಈತನಿಗೆ ಜ್ಞಾನೋದಯ ಸ್ಥಿರ ಮಾಡಲು ಇದು ಸಕಾಲ ಎಂದು ನಿರ್ಧರಿಸಿ ಆ ಭಿಕ್ಷುವಿನ ಮುಂದೆ ಪ್ರತ್ಯಕ್ಷರಾದರು ಹಾಗು ಹೀಗೆ ಹೇಳಿದರು : ಭಿಕ್ಷು, ನೀನು ಸರಿಯಾದ ದಾರಿಯಲ್ಲಿದ್ದೀಯೆ, ಅದನ್ನೇ ಮುಂದುವರಿಸು, ನಿಜಕ್ಕೂ ದೇಹವು ಮರಿಚಿಕೆಯಂತೆ ಹಾಗು ನೊರೆಯಂತೆ ಅನಿತ್ಯಕರವಾಗಿದೆ ಎಂದು ಹೇಳಿ ಈ ಗಾಥೆಯನ್ನು ನುಡಿದರು.

                ಈ ಗಾಥೆಯ ನಂತರ ಆ ಭಿಕ್ಷುವು ಅರಹಂತನಾದನು.

dhammapada/puppavagga/4.1/500minks

                     ಪುಷ್ಪವಗ್ಗ

ಶ್ರೇಷ್ಠ ಆರ್ಯಶ್ರಾವಕ ತನ್ನನ್ನು ಜಯಿಸುತ್ತಾನೆ
ಯಾರು ತನ್ನಲ್ಲಿ ತಾನೇ ಈ ಪೃಥ್ವಿಯನ್ನು ಮತ್ತು ಈ ಯಮ (ಸುಗತಿ) ಲೋಕವನ್ನು ಮತ್ತು ಈ ಲೋಕವನ್ನು ಮತ್ತು ದೇವಲೋಕವನ್ನು ಅರಿಯುವವರಾರು? ಯಾರು ಸಂಬೋಧಿತಶೀಲರು ಫಥವನ್ನು ಅನ್ವೇಷಿಸುವವರು? ಹೇಗೆ ಪುಷ್ಪಗಳನ್ನು ಕಿತ್ತು, ಹೂಮಾಲೆಯ ಕೌಶಲ್ಯ ಅರಿಯುವ ಮಾಲೆಕಾರನಂತೆ ಅರಿಯುವವರಾರು?  (44)
ಸಾಧನೆಯ ಹಾದಿಯಲ್ಲಿರುವಂತಹ (ಸೇಖ)ನೇ ಈ ಪೃಥ್ವಿಯನ್ನು ಯಮಸಹಿತ ಎಲ್ಲಾ ದೇವಲೋಕಗಳನ್ನು ಅರಿಯುತ್ತಾನೆ. ಸೇಖನೇ ಸುಬೋಧಿತ ಶೀಲದ ಪಥ ಅನ್ವೇಷಿಸುತ್ತಾನೆ. ಮಾಲಕಾರನು ಹೂಗಳನ್ನು ಕಿತ್ತು ಕೌಶಲ್ಯ ಅರಿಯುವವನಂತೆ ಅರಿಯುತ್ತಾನೆ.     (45)
ಗಾಥ ಪ್ರಸಂಗ 4:1
ಕಾಯದ ಮೇಲೆ ಸಮಾಧಿ ಹರಿಸಿರಿ

                500 ಜನ ಭಿಕ್ಷುಗಳು ಭಗವಾನರೊಡನೆ ಕೆಲಕಾಲವಿದ್ದು ನಂತರ ಜೇತವನ ವಿಹಾರಕ್ಕೆ ಹೊರಟರು. ಸಂಜೆ ತಮ್ಮ ಪ್ರಯಾಣದ ಬಗ್ಗೆ ಚಚರ್ಿಸಲಾರಂಭಿಸಿದರು. ಆ ಭೂಮಿಯು ಹೇಗಿತ್ತು? ಆದರ ಸಮಕಟ್ಟು ಹೇಗೆ? ಬೆಟ್ಟಗಳು ಹೇಗಿತ್ತು? ಮಣ್ಣಿನ ಬಣ್ಣ ಹೇಗಿತ್ತು...? ಎಂದು ಚಚರ್ಿಸುತ್ತಿದ್ದರು. ಆಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ ಹೇಳಿದರು ಭಿಕ್ಷುಗಳೇ, ನೀವು ಮಾತನಾಡುತ್ತಿರುವ ಪೃಥ್ವಿಯು ಶರೀರದ ಹೊರಗಿನದು. ನೀವು ನಿಮ್ಮ ಕಾಯದಲ್ಲಿರುವ ಪೃಥ್ವಿಯನ್ನು ಗಮನಿಸಿ, ನಿಮ್ಮ ಶರೀರದ ಯಥಾಭೂತ ಸ್ಥಿತಿ ಅರಿಯುವವರಾಗಿ ಕಾಯಾನುಪಸ್ಸಿಯಾಗಿ ವಿಹರಿಸಿ ಎಂದು ಹೇಳಿ ಈ ರೀತಿ ಕಾಯಾನುಪಸ್ಸಿಯಾಗಿ ವಿಹರಿಸುವಾಗ ಆತನು ಎಲ್ಲಾ ಲೋಕವನ್ನು ಅರಿಯುವವನು ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು.

                ನಂತರ ಭಿಕ್ಷುಗಳು ಸಾಧನೆ ಮಾಡಿ ಅರಹಂತರಾದರು.