Monday, 13 July 2015

dhammapada/malavagga/18.12/questionsofsubhaddha

ಬೇರೆಡೆಯಲ್ಲಿ ಅರಹಂತರಿಲ್ಲ

"ಆಕಾಶದಲ್ಲಿ ಫಥವಿಲ್ಲ,
ಬಾಹ್ಯದಲ್ಲಿ ಸಮಣನಿಲ್ಲ,
ಪ್ರಜೆಗಳು ಪ್ರಾಪಂಚಿಕತೆಯಲ್ಲಿ ರತರಾಗಿರುವರು,
ತಥಾಗತರು ನಿಷ್ಪಾಪಂಚಿಕರಾಗಿದ್ದಾರೆ."        (254)

"ಆಕಾಶದಲ್ಲಿ ಫಥವಿಲ್ಲ,
ಬಾಹ್ಯದಲ್ಲಿ ಸಮಣನಿಲ್ಲ,
ಸಂಖಾರಗಳು ಶಾಶ್ವತವಲ್ಲ,
ಬುದ್ಧರಲ್ಲಿ ಅಸ್ಥಿರತೆಯಿಲ್ಲ."            (255)

ಗಾಥ ಪ್ರಸಂಗ 18:12
ಸುಭದ್ಧ ಪರಿವ್ರಾಜಕನ ಶ್ರೇಷ್ಠ ಪ್ರಶ್ನೆಗಳು

            ಆಗ ಭಗವಾನರು ಕುಸಿನಾರ ನಗರದ ಮಲ್ಲರ ಉಪವತ್ತನದ ಸಾಲವೃಕ್ಷಗಳ ವನದಲ್ಲಿ ತಂಗಿದ್ದರು. ಅವರು ಪರಿನಿಬ್ಬಾಣ ಪಡೆಯುವವರಿದ್ದರು. ಅವರು ಎರಡು ಸುಂದರ ಅವಳಿ ಸಾಲವೃಕ್ಷಗಳ ನಡುವೆ ತಥಾಗತ ಶಯ್ಯೆಯಲ್ಲಿ ಮಲಗಿದ್ದರು.
*  *  *
            ಸುಭದ್ದನ ಸೋದರನು ತನ್ನ ಕೃಷಿಯ ಮೊದಲ ಫಲದಿಂದ 9 ಬಾರಿ ದಾನ ಮಾಡಿದ್ದನು. ಆದರೆ ಸುಭದ್ದನು ದಾನದ ಇಚ್ಛೆಯಿಲ್ಲದೆ ದಾನ ಮಾಡಿರಲಿಲ್ಲ. ಆದರೆ ಕೊನೆಗೊಮ್ಮೆ ದಾನ ಮಾಡಿದ್ದನು. ಈ ರೀತಿಯ ದಾನರಹಿತತೆಯಿಂದಾಗಿ ಅತನು ಬುದ್ಧರನ್ನು ದಶರ್ಿಸುವ ಭಾಗ್ಯವನ್ನು ಪಡೆದಿರಲಿಲ್ಲ. ಹೀಗಾಗಿ ಆತನು ಭಗವಾನರನ್ನು ಬೋಧಿಪ್ರಾಪ್ತಿಯ ಸಮಯದಲ್ಲಿಯಾಲಿ, ನಂತರವಾಗಲಿ ದಶರ್ಿಸಲೇ ಇಲ್ಲ.
*  *  *
            ಭಗವಾನರ ಪರಿನಿಬ್ಬಾಣದ ಕಾಲವು ಅತಿ ಹತ್ತಿರವಾಗಿತ್ತು. ಆಗ ಸುಭದ್ದನು ಹೀಗೆ ಯೋಚಿಸಿದನು: "ನನ್ನಲ್ಲಿರುವ ಸಂಶಯಗಳನ್ನು ನಾನು ಹಲವಾರು ಹಿರಿಯ ದಾರ್ಶನಿಕರ ಬಳಿ ಪ್ರಶ್ನಿಸಿದ್ದೇನೆ. ಆದರೂ ಅವರ ಉತ್ತರದಿಂದ ಪರಿಹಾರವಾಗಲಿಲ್ಲ, ನಾನು ಭಗವಾನರನ್ನು ವಯಸ್ಸಿನಲ್ಲಿ ಕಿರಿಯರೆಂದು ಅವರ ಬಳಿಗೆ ಹೋಗಲೇ ಇಲ್ಲ. ಹೀಗಾಗಿ ಪ್ರಶ್ನಿಸಲೂ ಇಲ್ಲ. ಈಗಂತೂ ಭಗವಾನರು ಪರಿನಿಬ್ಬಾಣ ಪಡೆಯಲಿದ್ದಾರೆ, ಈಗಲು ನಾನು ಹೋಗದಿದ್ದರೆ ನಂತರ ನಾನು ಖಂಡಿತವಾಗಿ ಪಶ್ಚಾತ್ತಾಪಪಡಬೇಕಾಗುವುದು" ಎಂದು ಚಿಂತಿಸಿ ಆತನು ಭಗವಾನರ ಬಳಿಗೆ ಬಂದನು.
            ಆದರೆ ಭಗವಾನರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದಾಗಿ ಭಂತೆ ಆನಂದರು ಸುಭದ್ಧನನ್ನು ತಡೆಯಲು ಯತ್ನಿಸಿದರು. ಆದರೆ ಅನುಕಂಪಭರಿತರಾದ ಭಗವಾನರು ಆತನ ಜಿಜ್ಞಾಸೆಯನ್ನು ಪರಿಹರಿಸಲು "ಆನಂದ, ಸುಭದ್ದನನ್ನು ತಡೆಯಬೇಡ, ಆತನಿಗೆ ಪ್ರಶ್ನಿಸಲು ಬಿಡು" ಎಂದರು.
            ನಂತರ ಸುಭದ್ದನು ಪರದೆ ದಾಟಿ ಒಳಪ್ರವೇಶಿಸಿದನು. ಭಕ್ತಿಯಿಂದ ಭಗವಾನರ ಪಾದದಡಿ ಕುಳಿತು, ಭಗವಾನರಲ್ಲಿ ಈ ಪ್ರಶ್ನೆಗಳನ್ನು ಕೇಳಿದನು:
1)          ಆಕಾಶದಲ್ಲಿ ಪಥಗಳಿವೆಯೇ?
2)          ಬುದ್ಧ ಶಾಸನದ ಹೊರತಾಗಿ ಬಾಹ್ಯದಲ್ಲಿ (ಅನ್ಯ ಪಂಥಿಯರಲ್ಲಿ) ಆರ್ಯರು (ಅರಹಂತರು, ಅನಾಗಾಮಿಗಳು, ಸಕದಗಾಮಿಗಳು, ಸೋತಪನ್ನರು) ಇರುವರೇ?
3)          ಸಂಖಾರಗಳು ಶಾಶ್ವತವೇ?
            ಆಗ ಭಗವಾನರು ಈ ಮೂರು ಪ್ರಶ್ನೆಗಳಿಗೆ ನಕಾರಾತ್ಮಕವಾಗಿ ಈ ಗಾಥೆಯ ಮೂಲಕ ತಿಳಿಸಿದರು.


            (ಅಂದರೆ ಆಕಾಶದಲ್ಲಿ ಭೂಮಿಯ ಮೇಲಿರುವಂತೆ ಪ್ರತ್ಯೇಕ ದಾರಿಗಳು, ಹೆದ್ದಾರಿಗಳು ಇರುವುದಿಲ್ಲ. ಇಡೀ ಆಕಾಶವೇ ಮಾರ್ಗವಾಗಿದೆ ಎಂದರ್ಥ. ಬೇರೆ ಧರ್ಮಗಳಲ್ಲಿ ನಾವು ಅರಹಂತರನ್ನು (ಆರ್ಯ) ಕಾಣಲಾಗುವುದಿಲ್ಲ. ಇದಕ್ಕೆ ತಾಳೆಯಿದೆ, ಅರಹಂತರಾದವರು ಪೂರ್ಣ ಅಹಿಂಸೆಯಿಂದಿರುವವರು, ಸುಶೀಲವಂತರು, ತ್ಯಾಗಮಯಿಗಳು, ಅನಾಸಕ್ತರು, ಸಹನಾಶೀಲರು, ಪೂರ್ಣಪ್ರಜ್ಞರು, ಸತ್ಯಶೀಲರು, ಸಮಚಿತ್ತವುಳ್ಳವರು, ನಿಷ್ಪಪ್ರಾಪಂಚಿಕರು ಆಗಿರುತ್ತಾರೆ. ಇವೆಲ್ಲಾ ಜಗತ್ತಿನ ಬೇರ್ಯಾವ ದಾರ್ಶನಿಕರಲ್ಲಿ ನಾವು ಕಾಣಲಾಗುವುದಿಲ್ಲ. ಅವರಲ್ಲಿ ಒಂದಲ್ಲ ಒಂದು ಬಂಧನವನ್ನು ಸ್ವತಃ ಕಾಣುತ್ತೇವೆ. ಎಲ್ಲಿ ಆರ್ಯಸತ್ಯಗಳು ಇವೆಯೋ, ಅಲ್ಲಿ ಮಾತ್ರ ನಾವು ಆರ್ಯ ಸಮಣರನ್ನು ಕಾಣಬಹುದಾಗಿದೆ ಹೊರತು ಬೇರೆಡೆ ಅಲ್ಲ. ಏಕೆಂದರೆ ಅವರು ಮಾತ್ರವೇ ಅಷ್ಠಾಂಗಮಾರ್ಗ ಪೂರ್ಣವಾಗಿ ಪಾಲಿಸುತ್ತಾರೆ. ಇನ್ನೂ ಕೆಲವು ಸಂಖಾರಗಳನ್ನು ಅನ್ಯ ಧರ್ಮದಲ್ಲಿ ಶಾಶ್ವತ ಎನ್ನುವರು. ಉದಾಹರಣೆಗೆ ಆನಂದ ಅಥವಾ ಜ್ಞಾನ ಇತ್ಯಾದಿ. ಆದರೆ ಬೌದ್ಧರ ಪ್ರಕಾರ ಯಾವ ಸಂಖಾರವೂ ಶಾಶ್ವತವಲ್ಲ.)

dhammapada/malavagga/18.11/ujjhanasanni

ಪರದೋಷಿಯು ಅಸವಕ್ಷಯಕ್ಕೆ ದೂರ

"ಯಾರು ಪರರ ದೋಷಗಳನ್ನೇ ಕಾಣುತ್ತಿರುವನೋ,
ನಿತ್ಯ ರೇಗುತ್ತಾ ಪರರಲ್ಲಿ ಅಪಹಾಸ್ಯ ಮಾಡುವನೋ,
ಅಂತಹವನ ಆಸವಗಳು (ಕಲ್ಮಶಗಳು) ವಧರ್ಿಸುತ್ತವೆ,
ಆತನು ಆಸವ ಕ್ಷಯದಿಂದ (ಕಲ್ಮಶ ಕ್ಷಯಕ್ಕೆ) ದೂರವೇ ಇರುತ್ತಾನೆ."  (253)

ಗಾಥ ಪ್ರಸಂಗ 18:11
ಉಜ್ಝಾನಸನ್ನಿಯ ದೋಷ ಹುಡುಕುವಿಕೆ

            ಭಂತೆ, ಉಜ್ಝಾನಸನ್ನಿಯು ಸದಾ ಪರರಲ್ಲಿ ದೋಷವನ್ನು ಹುಡಕುತ್ತಾ, ಸದಾ ಪರರನ್ನು ಹಳಿಯುತ್ತಿದ್ದನು. ಭಿಕ್ಷುಗಳು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಹೀಗೆ ನುಡಿದರು:

            "ಭಿಕ್ಷುಗಳೇ, ಯಾರಾದರೊಬ್ಬರು ಪರರಲ್ಲಿ ದೋಷ ಕಂಡು, ಆತನಲ್ಲಿ ಅನುಕಂಪವುಳ್ಳವನಾಗಿ, ಆತನಿಗೆ ಉತ್ತಮವಾದ ರೀತಿಯಲ್ಲಿ ತಿಳಿಸಿ, ತಿದ್ದಿದರೆ ಅದು ಪಾಪವಲ್ಲ, ಹಾಗು ಅದು ಖಂಡನೀಯವೂ ಅಲ್ಲ. ಆದರೆ ಯಾರಾದರೂ ಒಬ್ಬನು ಸದಾ ಪರರಲ್ಲಿ ದೋಷ ಹುಡುಕುತ್ತಾ, ಪರರನ್ನು ಹಳಿಯುತ್ತಾ, ಕೇವಲ ತನ್ನ ಸ್ವಪ್ರತಿಷ್ಠೆ ಮತ್ತು ಪರರನ್ನು ಕೀಳು ಮಾಡುವ ಉದ್ದೇಶದಿಂದ ನೋವು ಮಾಡುವ ಉದ್ದೇಶದಿಂದ ಕೂಡಿದ್ದರೆ ಆತನು ಅಸಮಾನ ಮೇಲು-ಕೀಳು ಮಾಡುವಂತೆ ತಪ್ಪನ್ನು ತೋರಿಸಿದರೆ ಅದು ಪಾಪವಾಗುತ್ತದೆ ಮತ್ತು ಖಂಡನೀಯವೂ ಆಗುವುದು. ಅಂತಹವನಿಗೆ ಧ್ಯಾನಸಿದ್ಧಿಯಾಗಲಾರದು, ಅಂತಹವ ಧಮ್ಮವನ್ನು ಅರಿಯಲಾರನು ಹಾಗು ಅಂತಹವನ ಆಸವಗಳು ವಧರ್ಿಸುತ್ತವೆ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. 

dhammapada/malavagga/18.10/mendaka

ಪರರ ತಪ್ಪುಗಳು ಸದಾ ಸುದರ್ಶನೀಯ

"ಪರರ ತಪ್ಪುಗಳು ಸುಲಭವಾಗಿ ದರ್ಶನವಾಗುತ್ತದೆ,
ಆದರೆ ತನ್ನ ತಪ್ಪುಗಳು ಅತಿಕಷ್ಟಕರವಾಗಿ ದರ್ಶನವಾಗುತ್ತದೆ
ಪರರ ತಪ್ಪುಗಳನ್ನು ಹೊಟ್ಟಿನಂತೆ ತೂರುವರು, ಆದರೆ
ತನ್ನ ತಪ್ಪುಗಳನ್ನು ಚಾಲಾಕಿನ ಪಕ್ಷಿ ಬೇಟೆಗಾರನು ಎಲೆ ಮತ್ತು
ಕೊಂಬೆಗಳಲ್ಲಿ ಅಡಗುವಂತೆ ಮರೆಯಾಗುವನು."            (252)

ಗಾಥ ಪ್ರಸಂಗ 18:10
ಮೆಂಡಕನ ಜ್ಞಾನೋದಯ

            ಒಮ್ಮೆ ಭಗವಾನರು ಅಂಗ ಮತ್ತು ಉತ್ತರ ರಾಜ್ಯಗಳ ಕಡೆಗೆ ಪ್ರಯಾಣಿಸಿದ್ದರು. ಅಂದು ಮುಂಜಾನೆಯೇ ಭಗವಾನರಿಗೆ ಮೆಂಡಕ ಶ್ರೇಷ್ಠಿಗೆ ಜ್ಞಾನೋದಯದ ಕಾಲ (ಸೋತಪತ್ತಿ ಫಲ) ಪಕ್ವವಾಗಿ ಬಂದಿದೆ ಎಂದು ತಿಳಿದುದರಿಂದಾಗಿ ಅವರು ಭದ್ದಿಯಾನಗರಕ್ಕೆ ಬಂದರು. ಅಲ್ಲಿ ಅಂದು ಮೆಂಡಕ ಮಾತ್ರವಲ್ಲದೆ ಆತನ ಪತ್ನಿ, ಆತನ ಪುತ್ರ, ಆತನ ಸೊಸೆ, ಆತನ ಮೊಮ್ಮಗಳಾದ ವಿಶಾಖೆ ಮತ್ತು ಸೇವಕನು ಒಟ್ಟಾರೆ ಈ ಆರು ಜನರು ಸೋತಪತ್ತಿ ಫಲ ಪಡೆಯುವರೆಂದು ಭಗವಾನರಿಗೆ ತಿಳಿದಿತ್ತು.
            ಮೆಂಡಕನು ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದನು. ಆತನ ಮನೆಯ ಹಿಂಭಾಗದಲ್ಲಿ ಅಪಾರ ಸಂಖ್ಯೆಯ ಮೇಕೆಯ ಗಾತ್ರದ ಮೇಕೆಯ ಸ್ವರ್ಣ ವಿಗ್ರಹಗಳು ದೊರೆತವು. ಆದ್ದರಿಂದಲೇ ಆತನನ್ನು ಮೆಂಡಕ (ಮೇಕೆ) ಎಂದು ಎಲ್ಲರೂ ಕರೆಯಲಾರಂಭಿಸಿದರು. ಅಷ್ಟೇ ಅಲ್ಲದೆ ಆತನು ಹಿಂದಿನ ಜನ್ಮವೊಂದರಲ್ಲಿ ವಿಪ್ಪಸಿ ಬುದ್ಧರಿಗೆ ವಿಹಾರವೊಂದನ್ನು ಮತ್ತು ಸಭಾಂಗಣವೊಂದನ್ನು ನಿಮರ್ಿಸಿ ದಾನ ನೀಡಿದ್ದನು. ಹಾಗೆಯೇ ನಾಲ್ಕು ತಿಂಗಳಿನ ಕಾಲ ವಿಪ್ಪಸ ಬುದ್ಧರಿಗೆ ಮತ್ತು ಸಂಘಕ್ಕೆ ದಾನ ನೀಡಿದ್ದನು. ಮೆಂಡಕನು ತನ್ನ ಇನ್ನೊಂದು ಹಿಂದಿನ ಜನ್ಮದಲ್ಲಿ ಬನಾರಸ್ನ ಶ್ರೀಮಂತನಾಗಿದ್ದನು. ಆಗ ಎಲ್ಲೆಡೆ ಬರಗಾಲ ಆಕ್ರಮಿಸಿತ್ತು. ಒಂದುದಿನ ಅವರು ತನ್ನ ಕುಟುಂಬಕ್ಕೆ ಸಾಕಾಗುವಷ್ಟು ಆಹಾರವನ್ನು ಅಡುಗೆ ಮಾಡಿದ್ದರು. ಆಗ ಆ ಸಮಯದಲ್ಲಿ ಪಚ್ಚೇಕ ಬುದ್ಧರು ದ್ವಾರದ ಬಳಿಗೆ ಬಂದರು. ಆಗ ಮೆಂಡಕನು ಇಡೀ ಆಹಾರವೆಲ್ಲಾ ಆ ಪಚ್ಚೇಕ ಬುದ್ಧರಿಗೆ ಅಪರ್ಿಸಿದರು. ಆಗ ಆತನ ಶ್ರದ್ಧೆಯಿಂದಾಗಿ ಹಾಗು ಪಚ್ಚೇಕ ಬುದ್ಧರ ಬಲದಿಂದಾಗಿ ಆ ಆಹಾರ ಪಾತ್ರೆಯು ಪುನಃ ತುಂಬಿತು. ಅಷ್ಟೇ ಅಲ್ಲ, ಆತನ ಆಹಾರ ಉಗ್ರಾಣವೆಲ್ಲಾ ದಾನ್ಯಗಳಿಂದ ತುಂಬಿತು.
            ಮೆಂಡಕನ ಕುಟುಂಬದವರು ಭದ್ದಿಯಾನಗರಕ್ಕೆ ಭಗವಾನರು ಬರುವುದನ್ನು ಕೇಳಿದರು. ಅವರೆಲ್ಲರೂ ಭಗವಾನರಿಗೆ ವಂದಿಸಲು ಹೊರಟರು. ಆಗ ದಾರಿಯಲ್ಲಿ ಅವರಿಗೆ ಅನ್ಯಮತದವರು ಹೀಗೆ ಹೇಳಿದರು: "ಓ ಗೃಹಸ್ಥನೇ, ನಿನಗೆ ಏನಾಗಿದೆ. ನೀನು ಶಾಶ್ವತ ಆತ್ಮಗಳನ್ನು ನಂಬುವವನಾಗಿದ್ದು, ಶಾಶ್ವತವಾದ ನಿತ್ಯ ಶುದ್ಧ ನಿತ್ಯಮುಕ್ತ ಆತ್ಮವನ್ನು ನಂಬದ ಗೋತಮ ಬುದ್ಧರ ಬಳಿಗೆ ಹೋಗುವೆಯಾ?" ಹೀಗೆ ಹಲವಾರು ರೀತಿಯಲ್ಲಿ ಆತನ ಉದ್ದೇಶವನ್ನು ನಿರುತ್ಸಾಹಗೊಳಿಸಿದರು. ಅವರು ಆ ಮತಾವಲಂಬಿಗಳು ಏನೆಲ್ಲಾ ಹೇಳಿದರೂ ಸಹಾ ಆತನು ಕುಟುಂಬ ಸಮೇತ ಭಗವಾನರನ್ನು ವಂದಿಸಿ ಭೇಟಿಮಾಡಿದನು. ನಂತರ ಗೌರವಯುತವಾಗಿ ಒಂದೆಡೆ ಕುಳಿತನು. ನಂತರ ಭಗವಾನರು ಆತನಿಗೆ ಕ್ರಮವಾಗಿ ಧಮ್ಮವನ್ನು ಬೋಧಿಸಿದರು. ಆಗ ಆ ಬೋಧನೆಯನ್ನು ಆಲಿಸಿ ಮೆಂಡಕ, ಆತನ ಪತ್ನಿ ಚಂದಪದುಮಾ, ಮಗ ದನಂಜಯ, ಸೊಸೆ ಸುಮನದೇವಿ, ಮೊಮ್ಮಗಳು ವಿಸಾಖಾ ಮತ್ತು ಸೇವಕ ಪುಣ್ಣ ಈ ಆರು ಜನರು ಸೋತಪತ್ತಿ ಫಲ ಪಡೆದರು. ಜ್ಞಾನೋದಯ ಹೊಂದಿದರು. ಆಗ ಮೆಂಡಕನು ಭಗವಾನರಿಗೆ ದಾರಿಯಲ್ಲಿ  ಬೇರೆ ಮತಾವಲಂಬಿಗಳಿಂದ ಆದ ತಡೆಗಳನ್ನು, ಆರೋಪಗಳನ್ನು ತಿಳಿಸಿದನು.
            ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಶಿಷ್ಯನೇ, ಜನರಿಗೆ ತಮ್ಮ ದೋಷಗಳು ಅರಿವಿಗೆ ಬರವು, ಅವರು ಸದಾ ಪರರ ಕೊರತೆ ಮತ್ತು ತಪ್ಪುಗಳನ್ನು ಹೇಳುವುದರಲ್ಲಿ ತಲ್ಲೀನರಾಗಿದ್ದಾರೆ. ಇದು ಸ್ವಾಭಾವಿಕವಾಗಿದೆ" ಎಂದು ನುಡಿದು, ಈ ಮೇಲಿನ ಗಾಥೆಯನ್ನು ನುಡಿದರು.


dhammapada/malavagga/18.9/latenttendenciesofupasakas

ಮೋಹಕ್ಕೆ ಸಮನಾದ ಜಾಲವಿಲ್ಲ

"ರಾಗಕ್ಕೆ ಸಮನಾದ ಅಗ್ನಿಯಿಲ್ಲ,
ದ್ವೇಷಕ್ಕೆ ಸಮನಾದ ಹಿಡಿತವಿಲ್ಲ,
ಮೋಹಕ್ಕೆ ಸಮನಾದ ಜಾಲವಿಲ್ಲ,
ತೃಷ್ಣೆಗೆ ಸಮನಾದ ನದಿಯಿಲ್ಲ."    (251)

ಗಾಥ ಪ್ರಸಂಗ 18:9
ಐವರು ಉಪಾಸಕರ ಪ್ರವೃತ್ತಿಗಳು

            ಭಗವಾನರು ಶ್ರಾವಸ್ತಿಯಲ್ಲಿ ನೆಲೆಸಿರುವಾಗ ಐವರು ಉಪಾಸಕರು ಧಮ್ಮವನ್ನು ಆಲಿಸಲು ಭಗವಾನರಲ್ಲಿಗೆ ಜೇತವನಕ್ಕೆ ಬಂದರು. ಅವರೆಲ್ಲಾ ಭಗವಾನರಿಗೆ ಗೌರವದಿಂದ ವಂದಿಸಿ ಒಂದೆಡೆ ಕುಳಿತರು. ಬುದ್ಧರಲ್ಲಿ ಸ್ವಾರ್ಥತೆಯಾಗಲಿ ಕುಟಿಲತೆಯಾಗಲಿ ಅಣುಮಾತ್ರವೂ ಇರಲಿಲ್ಲ. ಆದ್ದರಿಂದಾಗಿ ಅವರು ಬೋಧಿಸುವಾಗ "ಇಂತಹ ಮನುಷ್ಯ ಕ್ಷತ್ರಿಯ, ಇವನು ಬ್ರಾಹ್ಮಣ, ಈತನು ಶ್ರೀಮಂತ, ಈ ಬಡವ, ಈತನಿಗೆ ಸ್ತುತಿಸುವಂತೆ ಬೋಧಿಸಬೇಕು, ಈತನಿಗೆ ಇದರ ಅಗತ್ಯವಿಲ್ಲ" ಎಂಬಂತಹ ತುಚ್ಛವಾದ ಯೋಚನೆಗಳು ಅವರಲ್ಲಿ ಉದಯಿಸುತ್ತಲೇ ಇರಲಿಲ್ಲ. ಅವರು ಕೇವಲ ಧಮ್ಮವನ್ನು ಗೌರವಿಸುತ್ತಿದ್ದರು. ಅದನ್ನೇ ಪ್ರಧಾನವನ್ನಾಗಿಸುತ್ತಿದ್ದರು. ಅಂತರಿಕ್ಷದಿಂದ ದಿವ್ಯನದಿಯನ್ನು ಕೆಳತರುವಂತೆ ಭವ್ಯವಾಗಿ ಧಮ್ಮವನ್ನು ಬೋಧಿಸುತ್ತಿದ್ದರು.

            ಭಗವಾನರು ಈ ರೀತಿಯಾಗಿ ಬೋಧನೆಯನ್ನು ಪ್ರವಚಿಸುತ್ತಿದ್ದರೂ ಸಹಾ ಆ ಐವರಲ್ಲಿ ಒಬ್ಬನು ನಿದ್ದೆ ಹೋಗಿಬಿಟ್ಟನು. ಎರಡನೆಯವನು ನೆಲದಲ್ಲಿ ಗೆರೆಗಳು ರೇಖಾಚಿತ್ರಗಳನ್ನು ಬಿಡಿಸುತ್ತಿದ್ದನು. ಮೂರನೆಯವನು ಮರವನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಿದ್ದನು, ನಾಲ್ಕನೆಯವನು ಆಕಾಶವನ್ನು ದಿಟ್ಟಿಸುತ್ತಿದ್ದನು. ಆದರೆ ಐದನೆಯವನು ಮಾತ್ರ ಗೌರವದಿಂದ ಕುಳಿತು ಭಗವಾನರ ಬೋಧನೆಯನ್ನು ಗಮನವಿಟ್ಟು ಏಕಾಗ್ರತೆಯಿಂದ ಅರಿಯುತ್ತ ಕೇಳುತ್ತಿದ್ದನು. ಇವರೆಲ್ಲರ ಚಟುವಟಿಕೆಗಳೆಲ್ಲಾ ಭಂತೆ ಆನಂದರು ಗಮನಿಸುತ್ತಿದ್ದರು. ನಂತರ ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು: "ಭಗವಾನ್, ತಾವು ಧಮ್ಮವನ್ನು ದಪ್ಪ ಬಿಂದುಗಳ ಮಳೆಯು ಆಕಾಶದಿಂದ ಬೀಳುವಂತೆ ಬೋಧಿಸುತ್ತಿದ್ದರೂ ಈ ಐವರಲ್ಲಿ ಒಬ್ಬ ಮಾತ್ರ ಸರಿಯಾಗಿ ಆಲಿಸಿದನು. ಆದರೆ ಉಳಿದವರು ಹಾಗೆ ಆಲಿಸಲೇ ಇಲ್ಲ, ಇದಕ್ಕೆ ಕಾರಣವೇನೆಂದು ತಾವೇ ತಿಳಿಸಬೇಕು."
            ಆಗ ಭಗವಾನರು ಪೂಜ್ಯ ಆನಂದರಿಗೆ ಹೀಗೆ ವಿವರಿಸಿದರು: "ಆನಂದ, ಈ ಉಪಾಸಕರು ತಮ್ಮ ಹಿಂದಿನ ಪ್ರವೃತ್ತಿಗಳನ್ನು ಬಿಡದೆ ಹೋದರು. ಇದೆಲ್ಲಕ್ಕೂ ಅವರ ಹಿಂದಿನ ಜನ್ಮಕ್ಕೂ ಅಪಾರ ಸಂಬಂಧವಿದೆ. ಇದರಲ್ಲಿ ಮೊದಲನೆಯವ ಹಿಂದಿನ ಜನ್ಮದಲ್ಲಿ ಸರ್ಪವಾಗಿದ್ದನು, ಹೀಗಾಗಿಯೇ ಆತನು ಸರ್ಪದಂತೆ ನಿದ್ರೆಗೆ ಜಾರುತ್ತಿದ್ದನು. ಇಲ್ಲಿ ಎರಡನೆಯವ ಅಂದರೆ ನೆಲದಮೇಲೆ ಗೀಚುತ್ತಿದ್ದವ ಹಿಂದಿನ ಜನ್ಮದಲ್ಲಿ ಎರೆಹುಳುವಾಗಿದ್ದನು. ಇಲ್ಲಿ ಮೂರನೆಯವ ಅಂದರೆ ಮರವನ್ನು ಅಲ್ಲಾಡಿಸುತ್ತಿದ್ದವನು ಹಿಂದಿನ ಜನ್ಮದಲ್ಲಿ ಕೋತಿಯಾಗಿದ್ದನು. ಇಲ್ಲಿ ನಾಲ್ಕನೆಯವನಾದ ಆಕಾಶವನ್ನು ದಿಟ್ಟಿಸುತ್ತಿದ್ದವನು ಹಿಂದಿನ ಜನ್ಮದಲ್ಲಿ ಖಗೋಳ ಶಾಸ್ತ್ರಜ್ಞನಾಗಿದ್ದನು ಮತ್ತು ಇಲ್ಲಿ ಧಮ್ಮವನ್ನು ಚೆನ್ನಾಗಿ ಕೇಳುತ್ತಿದ್ದವನು ಹಿಂದಿನ ಜನ್ಮದಲ್ಲಿ ವಿದ್ವಾಂಸ ಬ್ರಾಹ್ಮಣನಾಗಿದ್ದನು. ಆನಂದ, ಧಮ್ಮವು ಅರ್ಥವಾಗಬೇಕಾದರೆ ಗಮನವಿಟ್ಟು ಆಲಿಸುವುದು ಅತಿಮುಖ್ಯವಾಗಿದೆ. ಆದರೆ ಬಹಳಷ್ಟು ಜನರು ಧಮ್ಮವನ್ನು ಅರ್ಥಮಾಡಿಕೊಳ್ಳುವುದಿಲ್ಲ ಹಾಗು ಪಾಲಿಸುವುದಿಲ್ಲ."

            ಆಗ ಆನಂದರು ಹೀಗೆ ಪ್ರಶ್ನಿಸಿದರು: "ಭಗವಾನ್, ಇವರಲ್ಲಿ ಹೀಗೆ ಧಮ್ಮವನ್ನು ಆಲಿಸದಂತೆ ಮಾಡುವುದು ಯಾವುವು?" ಆಗ ಭಗವಾನರು ಹೀಗೆ ಉತ್ತರಿಸಿದರು: "ಆನಂದ, ಅವರನ್ನು ಧಮ್ಮವಾಲಿಸದಂತೆ, ಅರ್ಥವಾಗದಂತೆ ಮಾಡುವಂತಹುದು ಯಾವುವೆಂದರೆ: ಲೋಭದಿಂದಾಗಿ, ದ್ವೇಷದಿಂದಾಗಿ, ಮೋಹದಿಂದಾಗಿಯೇ ಆಗಿದೆ. ಏಕೆಂದರೆ ರಾಗಕ್ಕೆ ಸಮನಾದ ಅಗ್ನಿಯಿಲ್ಲ, ಅದು ಜನರನ್ನು ಸುಟ್ಟು ಬೂದಿಯನ್ನು ಉಳಿಸುವಂತೆ ಮಾಡುವುದು. ಪ್ರಳಯ ಕಾಲದಲ್ಲಿಯು ಸೂರ್ಯನು ಕಾಣಿಸಿಕೊಂಡು ಇಡೀ ಸೌರವ್ಯೂಹದ ಆಕಾಶ ಕಾಯಗಳೆಲ್ಲಾ ಸುಟ್ಟು ಹೋಗುವುವು. ಸಾಧಾರಣ ಬೆಂಕಿಯು ಸಹಾ ಕಾಲಕ್ಕೆ ಮತ್ತು ವಾತಾವರಣಕ್ಕೆ ಅನುಗುಣವಾಗಿಯೇ ಸುಡುತ್ತದೆ. ಆದರೆ ರಾಗಕ್ಕೆ ಕಾಲವೇ ಇಲ್ಲದಂತಾಗಿದೆ. ಉದಯಿಸಿದಾಗೆಲ್ಲಾ ಸುಟ್ಟು ಸುಟ್ಟುಹಾಕುತ್ತದೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ಈ ಗಾಥೆಯ ಅಂತ್ಯದಲ್ಲಿ ಗಂಭೀರವಾಗಿ ಆಲಿಸುತ್ತ, ಅರ್ಥಮಾಡಿಕೊಳ್ಳುತ್ತಿದ್ದವನು ಸೋತಪತ್ತಿ ಫಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟನು.

dhammapada/malavagga/18.8/saamaneratissa

ಅತೃಪ್ತರಿಗೆ ಸಮಾಧಿ ಸುಖವಿಲ್ಲ

"ದಾತರು (ದಾನಿಗಳು) ತಮ್ಮ ಶ್ರದ್ಧಾನುಸಾರ
ಮತ್ತು ಪ್ರಸನ್ನತೆಯನುಸಾರವಾಗಿ ಜನರು
ದಾನ ನಡುವರು. ಯಾರು ಪರರು
ನೀಡುವ ಪಾನ ಹಾಗು ಭೋಜನದಿಂದ
ಅತೃಪ್ತರಾಗುವರೋ, ಪರರಲ್ಲಿ ಅಸೂಯೆ ತಾಳುವರೋ
ಅಂತಹವರು ದಿನದಲ್ಲಿಯಾಗಲಿ ಅಥವಾ
ರಾತ್ರಿಯಲ್ಲಿಯಾಗಲಿ ಸಮಾಧಿಯನ್ನು ಪಡೆಯಲಾರರು."  (249)

"ಯಾರಲ್ಲಿ ಈ ಅತೃಪ್ತಿಯು (ಅಸೂಯೆಯು)
ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕಿ ನಾಶಪಡಿಸಲಾಗಿದೆಯೋ
ಅಂತಹವರು ದಿನದಲ್ಲಿಯಾಗಲಿ ಅಥವಾ ರಾತ್ರಿಯಲ್ಲಾಗಲಿ
ಸಮಾಧಿಯನ್ನು ಪಡೆಯುವರು."   (250)

ಗಾಥ ಪ್ರಸಂಗ 18:8
ಸಾಮಣೇರ ತಿಸ್ಸನ ಅತೃಪ್ತತೆ

            ಶ್ರಾವಸ್ತಿಯಲ್ಲಿ ತಿಸ್ಸನೆಂಬ ಸಾಮಣೇರನಿದ್ದನು. ಆತನು ಆಹಾರಕ್ಕಾಗಿ ಅನಾಥಪಿಂಡಿಕ ಮತ್ತು ವಿಶಾಖೆಯಂತಹ ಮಹಾ ಉಪಾಸಕರಲ್ಲಿ ಹೋಗುತ್ತಿದ್ದನು. ಆತನಷ್ಟೇ ಅಲ್ಲ, ಬೃಹತ್ ಭಿಕ್ಷು ಸಮೂಹವೇ ಅಲ್ಲಿಗೆ ಹೋಗುತ್ತಿತ್ತು. ಆದರೂ ತಿಸ್ಸನು ಆ ಮಹಾದಾನಿಗಳಲ್ಲಿ ದೋಷಗಳನ್ನು ಹುಡುಕುತ್ತಿದ್ದನು. 'ಈ ಆಹಾರವು ತಣ್ಣಗಿದೆ' ಎಂದೂ ಅಥವಾ 'ಈ ಆಹಾರವು ತುಂಬಾ ಬಿಸಿ' ಎಂದೂ, ಆತನಿಗೆ ಏನಾದರೂ ಆಹಾರವು ಅಲ್ಪವಾಗಿ ಸಿಕ್ಕಿದರೆ 'ಅವರೇಕೆ ಅಲ್ಪವಾಗಿ ಆಹಾರ ನೀಡುತ್ತಾರೆ?' ಹಾಗೆಯೇ ಹೆಚ್ಚು ಆಹಾರ ಸಿಕ್ಕಾಗ ಆಗಲೂ ಆತನು 'ಇಷ್ಟು ಆಹಾರ ಅವರು ನೀಡಿದ್ದಾರೆ, ಬಹುಶಃ ಅವರ ಮನೆಯಲ್ಲಿ ಆಹಾರವಿಡಲು ಸ್ಥಳವಿಲ್ಲದಿರಬಹುದು' ಅಥವಾ ಹೀಗೆ ಹೇಳುತ್ತಿದ್ದನು 'ಭಿಕ್ಷುಗಳಿಗೆ ಅಗತ್ಯವಿರುವಷ್ಟು ಆಹಾರ ನೀಡಬೇಕು, ಎಷ್ಟೊಂದು ಸಾರು ಮತ್ತು ಅನ್ನ ನಿಜಕ್ಕೂ ವ್ಯರ್ಥವಾಯಿತು' ಅಥವಾ ಆತನು ತನ್ನ ಸಂಬಂಧಿಕರ ಬಗ್ಗೆ ಹೊಗಳಿಕೊಳ್ಳುತ್ತಿದ್ದನು 'ಓಹ್, ನಮ್ಮ ಬಾಂಧವರ ಮನೆಗೆ ನಾಲ್ಕು ದಿಕ್ಕುಗಳಿಂದ ಭಿಕ್ಷುಗಳು ಬರುವರು. ಛತ್ರದಂತೆ ಎಲ್ಲರಿಗೂ ಆಹಾರ ಸಿಗುವುದು' ಎಂದು ಬಾಂಧವರನ್ನು ಪ್ರಶಂಸಿಸ ತೊಡಗುತ್ತಿದ್ದನು
.
            ಆದರೆ ವಾಸ್ತವದಲ್ಲಿ ತಿಸ್ಸನು ದ್ವಾರಪಾಲಕನ ಮಗನಾಗಿದ್ದನು. ಆತನು ಒಮ್ಮೆ ಬಡಗಿಯವರ ಜೊತೆ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸಿದಾಗ ಶ್ರಾವಸ್ಥಿಯಲ್ಲಿ ಆತನು ಸಾಮಣೇರನಾದನು. ಆದರೆ ಯಾವಾಗ ಈತನು ಸದಾ ಮಹಾದಾನಿಗಳಿಗೆ ದೋಷಿಕರಿಸಿ ಮತ್ತು ತನ್ನ ಬಾಂಧವರನ್ನು ಪ್ರಶಂಸಿಸಿದನೋ ಆಗ ಭಿಕ್ಷುಗಳಿಗೂ ಆತನ ಬಾಂಧವರನ್ನು ನೋಡಬೇಕೆನಿಸಿತು. "ಈತನ ಬಗ್ಗೆ ಸತ್ಯ ಹುಡುಕಿಬಿಡೋಣ" ಎಂದು ನಿರ್ಧರಿಸಿ ಅವರು ಆತನಿಗೆ ಪ್ರಶ್ನಿಸಿದರು: "ಸೋದರ ನಿನ್ನ ಬಾಂಧವರು ಎಲ್ಲಿ ವಾಸಿಸುವರು?" "ಇಂಥಹ ಹಳ್ಳಿಯಲ್ಲಿ ವಾಸಿಸುವರು" ಎಂದು ಆತನು ಹೇಳಿದರು. ಭಿಕ್ಷುಗಳು ಇತರ ಸಾಮಣೇರರನ್ನು ಆ ಸ್ಥಳಕ್ಕೆ ಕಳುಹಿಸಿ ವಿಚಾರಿಸಿದರು. ಆ ಸಾಮಣೇರರು ಆ ಹಳ್ಳಿಗೆ ಹೋದಾಗ "ನಮ್ಮಲ್ಲಿ ಇದೇ ಹಳ್ಳಿಯಿಂದ ತಿಸ್ಸನೆಂಬ ಸಾಮಣೇರನಿದ್ದಾನೆ, ಆತನ ಸಂಬಂಧಿಕರ್ಯಾರು?" "ನಮ್ಮಲ್ಲಿ ಶ್ರೀಮಂತರ ಮನೆಯಿಂದ ತಿಸ್ಸನೆಂಬ ಯಾವ ಯುವಕನೂ ಭಿಕ್ಷುವಾಗಿಲ್ಲ. ಈ ಸಮಣೇರರು ಏನೆಂದು ಪ್ರಶ್ನಿಸುತ್ತಾರೆ? ಬಹುಶಃ ನೀವು ಹೇಳುವ ತಿಸ್ಸ, ನಮ್ಮ ದ್ವಾರಪಾಲಕನ ಮಗ, ಆತನೊಮ್ಮೆ ಬಡಗಿಗಳ ಸಂಗಡ ಪ್ರಯಾಣ ಮಾಡಿ ಅಲ್ಲಿಯೇ ಸಾಮಣೇರನಾಗಿದ್ದಾನೆ ಎಂದು ಕೇಳಿದ್ದೇವೆ. ಬಹುಶಃ ನೀವು ಕೇಳುವ ತಿಸ್ಸ, ಆತನೇ ಆಗಿರಬಹುದು" ಎಂದರು.

            ಆಗ ಭಿಕ್ಷುಗಳಿಗೆ ತಿಸ್ಸನಿಗೆ ಸಂಬಂಧಿಕರೇ ಇಲ್ಲ ಎಂದು ತಿಳಿದುಹೋಯಿತು. ಅವರು ಹಿರಿಯ ಭಿಕ್ಷುಗಳಿಗೆ "ಈ ತಿಸ್ಸ ಆಧಾರವಿಲ್ಲದೆ ಮಾತನಾಡುತ್ತಾನೆ, ಕೇವಲ ಬುರುಡೆ ಬಿಡುತ್ತಿದ್ದಾನೆ ಅಷ್ಟೇ". ಈ ವಿಷಯವು ಬುದ್ಧರ ಬಳಿಗೂ ಹೋಯಿತು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ತಿಸ್ಸ ಈ ರೀತಿಯ ಪರನಿಂದೆ ಮತ್ತು ಸ್ವಪ್ರಶಂಸೆ ಮಾಡುತ್ತಿರುವುದು ಇದೇ ಮೊದಲಲ್ಲ. ಆತನು ಹಿಂದಿನ ಜನ್ಮದಲ್ಲೂ ಹೀಗೆಯೇ ಬಡಾಯಿಕೋರನಾಗಿದ್ದನು" ಎಂದು ನುಡಿದರು. ನಂತರ ಹೀಗೆ ಮುಂದುವರೆಸಿದರು, "ಭಿಕ್ಷುಗಳೇ, ಪರರು ನೀಡುವ ಆಹಾರದಲ್ಲಿ ಅಲ್ಪವೆಂದಾಗಲಿ, ಅಧಿಕವೆಂದಾಗಲಿ, ಸ್ವಾದಿಷ್ಟವೆಂದಾಗಲಿ ಅಥವಾ ಒರಟು ಆಹಾರವೆಂದಾಗಲಿ ಅತೃಪ್ತಿಪಟ್ಟರೆ ಅಂತಹವನು ದಿನದಲ್ಲಿಯಾಗಲಿ ಅಥವಾ ರಾತ್ರಿಯಲ್ಲಾಗಲಿ ಸಮಾಧಿ ಪಡೆಯಲಾರನು ಅಥವಾ ಲೋಕೋತ್ತರ ಫಲವನ್ನು ಪಡೆಯಲಾರರು" ಎಂದು ನುಡಿದು ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು.

dhammapada/malavagga/18.7/whichsilaisdifficult

ಶೀಲವಿಲ್ಲದವನು ತನ್ನ ಬೇರುಗಳನ್ನೇ ಕತ್ತರಿಸಿಕೊಳ್ಳುತ್ತಾನೆ

"ಯಾವ ವ್ಯಕ್ತಿ ಪ್ರಾಣಗಳನ್ನು ತೆಗೆಯುತ್ತಾನೋ,
ಸುಳ್ಳನ್ನು ಹೇಳುತ್ತಾನೋ,
ಕೊಡದದ್ದನ್ನು ತೆಗೆದುಕೊಳ್ಳುತ್ತಾನೋ ಮತ್ತು
ಪರನಾರಿ ಗಮನ ಮಾಡುತ್ತಾನೋ"              (246)

"ಹಾಗು ಯಾವ ನರನು ಸುರೆ, ಮೆರೆಯದಂತಹ
ಮಾದಕ ಪೇಯಗಳನ್ನು ತೆಗೆದುಕೊಳ್ಳುತ್ತಾನೋ
ಅಂತಹವ ಈ ಲೋಕದಿಂದಲೇ ತನ್ನ
ಬೇರುಗಳನ್ನು ಕಿತ್ತುಹಾಕಿಕೊಂಡುಬಿಡುತ್ತಾನೆ
(ದುರ್ಗತಿಗೆ ಹೋಗಲು ಸಿದ್ಧನಾಗಿಬಿಡುತ್ತಾನೆ)."              (247)

"ಓ ಉತ್ತಮ ಪುರುಷನೇ, ಅರಿಯುವಂತಾಗು ಪಾಪಧಮ್ಮವನ್ನು
ನಿಯಂತ್ರಿಸುವುದು ಸುಲಭವಲ್ಲ,
ನಿನ್ನನ್ನು ಲೋಭ ಮತ್ತು ಅಧಮ್ಮವು
ಚಿರದುಃಖದೆಡೆಗೆ ಎಳೆದುಹಾಕದಿರಲಿ."          (248)

ಗಾಥ ಪ್ರಸಂಗ 18:7
ಯಾವ ಶೀಲವು ಪಾಲಿಸಲು ಕಷ್ಟಕರ ?

            ಬುದ್ಧ ಭಗವಾನರು ಜೇತವನದ ವಿಹಾರದಲ್ಲಿ ವಾಸಿಸುತ್ತಿದ್ದಾಗ ನಡೆದ ಪ್ರಸಂಗವಿದು. ಅಲ್ಲಿಯ 500 ಭಿಕ್ಷುಗಳು ಪಂಚಶೀಲಗಳನ್ನು ತೆಗೆದುಕೊಂಡು ಹಾಗು ಧ್ಯಾನ ವಿಷಯಗಳನ್ನು ತೆಗೆದುಕೊಂಡು ಸಾಧನೆ ಮಾಡುತ್ತಿದ್ದರು. ಆಗ ಅವರಿಗೆ ಕೆಲವೊಂದು ಶೀಲಗಳನ್ನು ಪಾಲಿಸಲು ಕಷ್ಟವಾಗುತ್ತಿತ್ತು. ಕೆಲವರಿಗೆ ಅಹಿಂಸೆಯು ಸುಲಭವಾದರೆ ಕೆಲವರಿಗೆ ಅದೇ ಕಷ್ಟವಾಗಿ ಕಂಡುಬರುತ್ತಿತ್ತು. ಕೆಲವರಿಗೆ ಪ್ರಾಮಾಣಿಕತೆ ಸುಲಭವಾದರೆ ಕೆಲವರಿಗೆ ಅದೇ ಕಷ್ಟವಾಗಿ ಕಂಡುಬರುತ್ತಿತ್ತು. ಕೆಲವರಿಗೆ ಬ್ರಹ್ಮಚರ್ಯ ಕಷ್ಟವಾದರೆ ಮತ್ತೆ ಕೆಲವರಿಗೆ ಅದೇ ಕಡುಕಷ್ಟವಾಗಿತ್ತು. ಕೆಲವರಿಗೆ ಸತ್ಯಪಾಲನೆ ಸುಲಭವಾದರೆ ಅನ್ಯರಿಗೆ ಅದೇ ಕಷ್ಟವೆನಿಸಿತ್ತು. ಹೀಗೆ ಸರ್ವರೂ ಸರ್ವ ಶೀಲಗಳನ್ನು ಸುಲಭವಾಗಿ ಪಾಲನೆ ಮಾಡಲಾಗುತ್ತಿರಲಿಲ್ಲ. ಆದರೂ ಅವರು ಕಷ್ಟಪಟ್ಟು ಶೀಲಗಳಲ್ಲಿ ದೃಢವಾದರು. ಒಮ್ಮೆ ಧಮ್ಮ ಚಚರ್ೆಯಲ್ಲಿ ಈ ವಿಷಯವೇ ಮಾತನಾಡಲಾರಂಭಿಸಿದರು. "ಇದು ಅತ್ಯಂತ ಕಷ್ಟಕರ, ಪಾಲಿಸಲು ಕಷ್ಟಕರ ಎಂಬುದು ಯಾವುದಾದರೂ ಇದ್ದರೆ ಅದು ಈ ಶೀಲವೇ ಆಗಿದೆ" ಎಂದು. ಪ್ರತಿಯೊಬ್ಬರೂ ಒಂದೊಂದು ಶೀಲಗಳ ಬಗ್ಗೆ ಹೇಳಲಾರಂಭಿಸಿದರು. ಕೊನೆಗೆ ಬುದ್ಧರೇ ಈ ವಿಷಯದ ಬಗ್ಗೆ ಸರಿಯಾಗಿ ತಿಳಿಸುತ್ತಾರೆಂದು ತಿಳಿದು ಅವರ ಬಳಿಗೆ ಬಂದು ವಿಷಯ ತಿಳಿಸಿದರು.

            ಆಗ ಭಗವಾನರು ಯಾವೊಂದು ಶೀಲವನ್ನು ಕಡೆಗಣಿಸದೆ ಈರೀತಿ ಉತ್ತರಿಸಿದರು: "ಪ್ರತಿಯೊಂದು ಶೀಲವೂ ಪಾಲಿಸಲು ಕಷ್ಟವೇ ಆಗಿದೆ" (ಯಾವ ಯಾವ ಶೀಲವು ನಮಗೆ ಸುಲಭವೋ ಅದನ್ನು ನಾವು ಹಿಂದಿನ ಜನ್ಮದಿಂದಲೂ ಪಾಲಿಸುತ್ತ ಬಂದಿರುವುದರಿಂದಾಗಿ ಅದು ಸುಲಭವಾಗಿ ಕಾಣಿಸುತ್ತದೆ ಅಷ್ಟೆ). ನಂತರ ಭಗವಾನರು ಈ ಗಾಥೆಗಳನ್ನು ಹೇಳಿದರು

dhammapada/malavagga/18.6/culasaari&sariputtta

ಲಜ್ಜೆರಹಿತನ ಬಾಳು ಸುಲಭವಾದುದು
"ಲಜ್ಜೆರಹಿತನ ಬಾಳು ಸುಲಭವಾದುದು,
ಕಾಗೆಯಂತೆ ಪಾಪದಲ್ಲಿ ಧೈರ್ಯವಂತನು ಮತ್ತು
ಮೇಲೆ ಹಾಯುವವನು, ಚಾಡಿಕೋರನು, ಜಂಬಕೋರನು
ಪೂರ್ಣವಾಗಿ ಭ್ರಷ್ಟನಾಗಿರುತ್ತಾನೆ."                (244)

"ಪಾಪಲಜ್ಜೆಯುಳ್ಳವನ ಜೀವನವು ಕಷ್ಟಕರವಾಗಿರುತ್ತದೆ,
ಅಂತಹವ ನಿತ್ಯವೂ ಶುಚಿತ್ವವನ್ನು ಪರಿಶುದ್ಧತೆಯನ್ನು ಅರಸುತ್ತಾನೆ,
ಅಂತಹವ ವಿರಾಗಿಯೂ ನಮ್ರನು, ಜೀವನದಲ್ಲಿ ಶುದ್ಧನು ಹಾಗು
ಚಿಂತನಾಶೀಲನಾಗಿರುತ್ತಾನೆ."     (245)

ಗಾಥ ಪ್ರಸಂಗ 18:6
ಚೂಲಸಾರಿ ಮತ್ತು ಸಾರಿಪುತ್ರರ ನಡುವಿನ ವ್ಯತ್ಯಾಸ

            ಒಂದುದಿನ ಚೂಲಿಸಾರಿ ಎಂಬ ಭಿಕ್ಷುವು ತನ್ನ ವಿಹಾರಕ್ಕೆ ಹಿಂತಿರುಗುತ್ತಿದ್ದನು. ಆತನು ವೈದ್ಯ ವೃತ್ತಿಯನ್ನು ಬಲ್ಲವನಾಗಿದ್ದನು. ಆ ದಿನ ಆತನು ರೋಗಿಗೆ ಔಷಧ ನೀಡಿ ಪ್ರತಿಫಲವಾಗಿ ಉನ್ನತ ಮಟ್ಟದ ಸ್ವಾದಿಷ್ಟ ಆಹಾರವನ್ನು ಪಡೆದುಕೊಂಡು ಬರುತ್ತಿದ್ದನು. ದಾರಿಯಲ್ಲಿ ಆತನು ಸಾರಿಪುತ್ರರನ್ನು ಕಂಡನು. ಆತನು ತನ್ನ ಆಹಾರದಲ್ಲಿ ಸ್ವಲ್ಪ ಭಾಗ ಪಡೆಯಲು ಸಾರಿಪುತ್ರರಿಗೆ ಹೇಳಿದನು. ಹಾಗು ಇದನ್ನು ತಾನು ಪಡೆದ ಬಗೆಯು ಹೇಳಿದನು. ಆಗ ಸಾರಿಪುತ್ರರು ನಿಶ್ಶಬ್ದರಾಗಿ ಶಾಂತತೆಯಿಂದ ತಮ್ಮ ಹಾದಿಯನ್ನು ಹಿಡಿದರು. ಅವರು ಸಾರಿಯಿಂದ ಆಹಾರ ಸ್ವೀಕರಿಸಲಿಲ್ಲ. ಏಕೆಂದರೆ ಚೂಲಸಾರಿಯು ಶೀಲದ ಭ್ರಷ್ಟನಾಗಿದ್ದನು.


            ಈ ವಿಷಯವನ್ನು ಭಗವಾನರಿಗೆ ತಿಳಿಸಲಾಯಿತು. ಆಗ ಭಗವಾನರು ಅವರಿಬ್ಬರ ವ್ಯತ್ಯಾಸವನ್ನು ಈ ಮೇಲಿನ ಗಾಥೆಗಳಲ್ಲಿ ಹೀಗೆ ತಿಳಿಸಿದರು.