Friday, 18 September 2015

dhammapada/bhikkuvagga/25.6/bhrahmin

ದೇಹ ಮನಸ್ಸಿಗೆ ಅಂಟದವನೇ ಭಿಕ್ಷು
"ಯಾರು ಸರ್ವರೀತಿಯ ನಾಮರೂಪಗಳಿಗೆ (ದೇಹ ಮನಸ್ಸಿಗೆ)
ನಾನು ಎಂದಾಗಲಿ, ನನ್ನದು ಎಂದಾಗಲಿ, ಭಾವಿಸುವುದಿಲ್ಲವೋ,
ತನ್ನದಲ್ಲದ್ದಕ್ಕೆ (ಶರೀರವು ಮುಪ್ಪಿಗೀಡಾದರೂ) ಚಿಂತಿಸುವುದಿಲ್ಲವೋ
ಆತನನ್ನೇ 'ಭಿಕ್ಷು' ಎನ್ನುತ್ತಾರೆ."    (367)
ಗಾಥ ಪ್ರಸಂಗ 25:6
ಬ್ರಾಹ್ಮಣನು ಸೇವಿಸಿದ್ದ ಆಹಾರ ಸೇವಿಸಿದ ಭಗವಾನರು

            ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿದ್ದಾಗ, ಒಂದು ಮುಂಜಾನೆ ಅವರಿಗೆ ಆ ದಿನ ಬ್ರಾಹ್ಮಣ ಮತ್ತು ಆತನ ಪತ್ನಿಯು ಅನಾಗಾಮಿ ಪ್ರಾಪ್ತಿಮಾಡುವರೆಂದು ಅರಿತರು. ಹೀಗಾಗಿ ಭಗವಾನರು ಆಹಾರದ ನೆಪದಲ್ಲಿ ಆ ಬ್ರಾಹ್ಮಣನ ಮನೆಯ ಬಾಗಿಲಲ್ಲಿ ನಿಂತರು. ಆ ಸಮಯದಲ್ಲಿ ಬ್ರಾಹ್ಮಣನು ಊಟ ಸೇವಿಸುತ್ತಿದ್ದನು. ಹೀಗಾಗಿ ಆತನು ಭಗವಾನರಿಗೆ ನೋಡಲಿಲ್ಲ. ಆದರೆ ಆತನ ಪತ್ನಿಯು ಭಗವಾನರನ್ನು ನೋಡಿದಳು ಹಾಗು ಹೆದರಿದಳು. ಏಕೆಂದರೆ ಬ್ರಾಹ್ಮಣನೇನಾದರೂ ಬುದ್ಧರಿಗೆ ನೋಡಿದರೆ ಆ ಆಹಾರವೆಲ್ಲಾ ಭಗವಾನರಿಗೆ ಅಪರ್ಿಸಿಬಿಡುವನು, ನಂತರ ತಾನು ಪುನಃ ಅಡುಗೆ ಮಾಡಬೇಕಾಗುತ್ತದಲ್ಲ ಎಂದು ತುಸು ಆಲಸಿಯಾದ ಆಕೆ ಹೆದರಿದಳು. ಹೀಗಾಗಿ ಆಕೆಯು ತನ್ನ ಗಂಡನಿಗೆ ಅಡ್ಡವಾಗಿ ನಿಂತಳು. ನಂತರ ನಿಧಾನವಾಗಿ ನಿಶ್ಶಬ್ಧವಾಗಿ ಹಿಂದು ಹಿಂದೆಯೇ ಭಗವಾನರ ಬಳಿಗೆ ಬಂದು ಭಗವಾನರಿಗೆ ಹೀಗೆ ಪಿಸುಗುಟ್ಟಿದಳು: "ಭಂತೆ, ನಿಮಗೆ ಇಂದು ಯಾವುದೇ ಆಹಾರವಿಲ್ಲ."
            ಆಗ ಭಗವಾನರು ನಿವರ್ಿಕಾರವಾಗಿ, ಶಾಂತರಾಗಿ, ಸರಿ ಎಂಬಂತೆ ತಲೆ ಅಲ್ಲಾಡಿಸಿದರು. ಅವರ ಆ ಭಾವದಲ್ಲಿ ಆ ಬ್ರಾಹ್ಮಣಿಗೆ ತನ್ನ ಹಾಸ್ಯ ಪ್ರಜ್ಞೆಯಿಂದಾಗಿ ನಗು ಉಕ್ಕಿತು. ಆಕೆ ತಡೆದುಕೊಳ್ಳಲಾರದೆ ಹೀ... ಹೀ... ಎಂದು ಜೋರಾಗಿ ನಕ್ಕಳು.
            ಆ ಶಬ್ದದಿಂದ ಬ್ರಾಹ್ಮಣನು ತಿರುಗಿ ಭಗವಾನರನ್ನು ಕಂಡನು. ಆತನಲ್ಲಿ ಕ್ಷಣದಲ್ಲೇ ತನ್ನ ಪತ್ನಿಯ ಕಾರ್ಯ ತಿಳಿದು ಹೋಯಿತು. ಆಗ ಆತನು ಹೀಗೆ ನುಡಿದನು: "ಓ ಪತ್ನಿಯೇ, ನಾನು ನಾಶವಾದೆನು ನಮ್ಮ ಪರಮಪೂಜ್ಯ ಗುರುಗಳು ಬಾಗಿಲಲ್ಲಿ ನಿಂತಿರುವುದು ಹೇಳಲಾರದೆ, ನಿನ್ನಿಂದಾಗಿ ನಾನು ಇಂದು ಅಪಮಾನಿತನಾದೆನು" ಎಂದನು.
            ನಂತರ ಆ ಬ್ರಾಹ್ಮಣನು ಭಗವಾನರ ಬಳಿಗೆ ತಾನು ತಿನ್ನುತ್ತಿದ್ದಂತಹ ತಟ್ಟೆಯನ್ನೇ ತೆಗೆದುಕೊಂಡು, ಅವರಲ್ಲಿ ಕ್ಷಮೆಯಾಚಿಸಿದನು. ನಂತರ ಹೀಗೆ ಕೋರಿಕೊಂಡನು: "ಭಗವಾನ್, ನಾನು ಸ್ವಲ್ಪ ಆಹಾರ ಸೇವಿಸಿದ್ದೇನೆ, ತಮಗೆ ಆಕ್ಷೇಪಣೆಯಿಲ್ಲವಾದರೇ ಈ ಆಹಾರವನ್ನು ಸ್ವೀಕರಿಸಿ, ಹೀಗೆ ಆಹಾರ ನೀಡಲು ನನಗೂ ದುಃಖಕರ ಸಂಗತಿಯಾಗಿದೆ, ಬೇರೆ ಆಹಾರವಿಲ್ಲದಿದ್ದರಿಂದಾಗಿ ಇದನ್ನೇ ಅಪರ್ಿಸುತ್ತಿರುವೆನು". ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಓ ಬ್ರಾಹ್ಮಣನೇ, ಯಾವುದೇ ರೀತಿಯ ಆಹಾರವು ನನಗೆ ಯೋಗ್ಯವಾದುದು, ಅದು ತಿಂದಿರಲಿ ಅಥವಾ ತಿನ್ನದೇ ಇರುವುದಾಗಿರಲಿ."
            ಭಗವಾನರು ಆಹಾರ ಸ್ವೀಕರಿಸಿದ್ದನ್ನು ಕಂಡು ಆತನಿಗೆ ಅಪಾರ ಆನಂದವಾಯಿತು. ಆಗ ಭಗವಾನರಲ್ಲಿ ಆತನು ಹೀಗೆ ಪ್ರಶ್ನಿಸಿದನು. "ಭಗವಾನ್, ಭಿಕ್ಷು ಎಂದು ಯಾರಿಗೆ ಕರೆಯುತ್ತಾರೆ, ಅವರನ್ನು ಹೇಗೆ ಗುರುತಿಸುವುದು?"
            ಆಗ ಭಗವಾನರು "ಓ ಬ್ರಾಹ್ಮಣನೇ, ಯಾರು ತನ್ನ ಶರೀರ ಮತ್ತು ಮನಸ್ಸಿಗೆ ಅಂಟಿಲ್ಲವೋ ಆತನಿಗೆ ಭಿಕ್ಷು ಎನ್ನುತ್ತಾರೆ. ಹೀಗೆಯೇ ಆತನ ಅಳತೆ ಮಾಡುತ್ತಾರೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
            ಅದನ್ನು ಆಲಿಸುತ್ತಲೇ ಅವರಿಬ್ಬರೂ ಅನಾಗಾಮಿ ಫಲ ಪಡೆದರು.


dhammapada/bhikkuvagga/25.5/studentofdevadatta

ಸಂತೃಪ್ತನಾಗು, ಅಸೂಯೆ ಬೇಡ
"ಒಬ್ಬನು ತನಗೆ ಸಿಕ್ಕ ಲಾಭವನ್ನು ಅಲ್ಪವೆಂದೆಣಿಸಬಾರದು,
ಅನ್ಯರಿಗೆ ಸಿಗುವುದರಲ್ಲಿ ಅಸೂಯೆ ಪಡಬಾರದು,
ಅನ್ಯರ ಲಾಭಸತ್ಕಾರದಲ್ಲಿ ಅಸೂಯೆಪಡುವ ಭಿಕ್ಷುವು
ಸಮಾಧಿಯನ್ನು ಗಳಿಸಲಾರನು."  (365)

"ಯಾರಿಗೆ ಅತ್ಯಲ್ಪವು ಸಿಕ್ಕರೂ ಸಹಾ ಸಂತೃಪ್ತನಾಗಿರುವನೋ
ತನ್ನ ಲಾಭವನ್ನು ಅಲ್ಪವೆಂದೆಣಿಸನೋ,
ಅಂತಹವನ ಶುದ್ಧ ಜೀವನ ಹಾಗು ದೃಢಶೀಲತೆಯನ್ನು
ದೇವತೆಗಳು ಸಹಾ ಪ್ರಶಂಸಿಸುವರು."          (366)
ಗಾಥ ಪ್ರಸಂಗ 25:5
ಸ್ವ-ಲಾಭಕ್ಕಾಗಿ ದಾರಿ ತಪ್ಪಿದಂತಹ ಭಿಕ್ಷು

            ಒಮ್ಮೆ ಭಿಕ್ಷುವೊಬ್ಬನು, ದುಶ್ಶೀಲ ದೇವದತ್ತನ ಶಿಷ್ಯನೊಂದಿಗೆ ಸ್ನೇಹ ಗಳಿಸಿದನು. ದೇವದತ್ತನ ಶಿಷ್ಯನಿಗೆ ಅಪಾರ ಆಹಾರ ಸಿಗುತ್ತಿತ್ತು. ಅವರು ಮಿಥ್ಯಾ ಜೀವನದಿಂದ ಆಹಾರ ಸಂಪಾದಿಸುತ್ತಿದ್ದರು. ಸುಳ್ಳು ಹೇಳಿ ತಾವು ಉನ್ನತರೆಂದು ಜನರಿಗೆ ಮರಳು ಮಾಡಿ ಜೀವನ ನಡೆಸುತ್ತಿದ್ದರು. ಈಗ ಆ ಭಿಕ್ಷುವು ದೇವದತ್ತನ ಗಣದಲ್ಲಿ ಸೇರಿದ್ದರಿಂದಾಗಿ ಆತನಿಗೆ ಚೆನ್ನಾಗಿ ಆಹಾರ ಸಿಗಲಾರಂಭಿಸಿತು. ಅವರೊಂದಿಗೆ ಕೆಲಕಾಲ ವಾಸಿಸಿ ನಂತರ ತನ್ನ ಹಿಂದಿನ ಗಣಕ್ಕೆ ಸೇರಿದಾಗ, ಭಿಕ್ಷುಗಳು ಭಗವಾನರ ಸಮ್ಮುಖದಲ್ಲಿ ಆ ಭಿಕ್ಷುವನ್ನು ಕರೆತಂದರು. ನಂತರ ಹೀಗೆ ನುಡಿದರು: "ಭಗವಾನ್, ಈ ಭಿಕ್ಷುವು ದೇವದತ್ತನಿಗೆ ಲಭಿಸುವ ಲಾಭ ಸತ್ಕಾರದಲ್ಲಿ ಸಿಗುವ ಉಡುಗೊರೆಗಳಲ್ಲಿ ಆನಂದಿಸುತ್ತಾನೆ. ಈತನೀಗ ದೇವದತ್ತನ ಪಕ್ಷದವನಾಗಿದ್ದಾನೆ."
            "ಓ ಭಿಕ್ಷು, ಇದು ನಿಜವೇ? ನೀನು ಹಾಗೆ ಮಾಡುತ್ತಿರುವೆಯಾ?"

            "ಹೌದು ಭಗವಾನ್, ದೇವದತ್ತನ ಶಿಷ್ಯನ ಜೊತೆ ಕೆಲದಿನ ಬೆರೆತಿರುವುದು ನಿಜವೇ, ಆದರೆ ದೇವದತ್ತನ ದೃಷ್ಟಿಕೋನಗಳನ್ನು ಹೊಂದಿಲ್ಲ."
            "ಓ ಭಿಕ್ಷುವೇ, ನೀನು ದೇವದತ್ತನಂತಹ ಮಿಥ್ಯಾದೃಷ್ಟಿಯನ್ನು ಹೊಂದದೆ ಇರಬಹುದು, ಆದರೆ ಅಂತಹ ದೃಷ್ಟಿಯವನೊಂದಿಗೆ ಅಡ್ಡಾಡಿದರೆ ಅಂತಹ ದೃಷ್ಟಿ ಹೊಂದಿರುವಂತೆ ಕಾಣುತ್ತೀಯೇ. ನೀನು ಹೀಗೆ ಮಾಡುತ್ತಿರುವುದು ಇದೇ ಮೊದಲನೆಯ ಸಲವಲ್ಲ, ನೀನು ಹಿಂದಿನ ಜನ್ಮಗಳಲ್ಲೂ ಹೀಗೆ ಮಾಡಿರುವೆ."
            ಆಗ ಭಿಕ್ಷುಗಳು ಆ ಹಿಂದಿನ ಜನ್ಮವನ್ನು ತಿಳಿಸುವಂತೆ ಕೇಳಿಕೊಂಡಾಗ ಭಗವಾನರು ಮಹಿಳಾಮುಖ ಜಾತಕ ವಿವರಿಸಿದರು.

            ಬಹುಕಾಲದ ಹಿಂದೆ ಪಟ್ಟದ ಆನೆಯೊಂದು ತನ್ನ ನಿವಾಸದ ಬಳಿ ಕಳ್ಳರ ಮತ್ತು ಕೊಲೆಗಾರರ ಮಾತುಗಳನ್ನು ಕೇಳಿ ಕೇಳಿ ಕ್ರೂರತನ ಪ್ರದಶರ್ಿಸಿ ಮಾವುತನನ್ನೇ ಕೊಂದುಹಾಕಿತು. ಈ ವಿಷಯವು ಬೋಧಿಸತ್ವರ ಗಮನಕ್ಕೆ ಬಂದಿತು. ಆಗ ಅವರು ಅಲ್ಲಿ ಕಳ್ಳರು ಮತ್ತು ಕೊಲೆಗಾರರಂಥಹ ಅಪರಾಧಿಗಳು ಸೇರದಂತೆ ಮಾಡಿ, ಅಲ್ಲಿ ಸಾಧು ಸಜ್ಜನರು ಸೇರುವಂತೆ ಮಾಡಿದರು. ಆಗ ಆ ಆನೆಯು ಉತ್ತಮವಾದ ವಿಧೇಯಗಳನ್ನು ಆಲಿಸುತ್ತ ಪುನಃ ಸಾಧುವಾಯಿತು" ಎಂದು ಹೇಳಿ ಭಗವಾನರು ಹೀಗೆ ನುಡಿದರು. "ಆಗಿನ ಪಟ್ಟದ ಆನೆಯಾದ ಮಹಿಳಾಮೂಖವೇ ಈಗಿನ ಜನ್ಮದಲ್ಲಿ ಈ ಭಿಕ್ಷುವಾಗಿದ್ದಾನೆ. ಭಿಕ್ಷುಗಳೇ, ಯಾವ ಭಿಕ್ಷುವು ಪರರಿಗೆ ಲಭಿಸುವ ಲಾಭ ಸತ್ಕಾರ ಇತ್ಯಾದಿಗಳಿಗೆ ಅಸೂಯೆಪಡುವನೋ ಹಾಗು ಅವೆಲ್ಲಾ ತನಗೆ ಬೇಕೆಂದು ಲೋಭಪಡುತ್ತಾನೋ, ದುರಾಸೆಪಡುತ್ತಾನೋ ಅಂತಹವನಿಗೆ ಧ್ಯಾನ ಲಾಭವಾಗಲಿ ಅಥವಾ ಮಾರ್ಗವಾಗಲಿ ಅಥವಾ ಲೋಕೋತ್ತರ ಫಲಗಳಾಗಲಿ ಸಿಗುವುದಿಲ್ಲ. ಆದರೆ ಸಂತೃಪ್ತನಿಗೆ ಮಾತ್ರ ಅಲೌಕಿಕ ಮತ್ತು ಲೋಕೋತ್ತರ ಫಲಗಳು ಸಿಗುವುವು."

dhammapada/bhikkuvagga/25.4/dhammarama

ಧಮ್ಮಾನಂದನಿಗೆ ಎಂದಿಗೂ ಅವನತಿಯಿಲ್ಲ
"ಯಾವ ಭಿಕ್ಷುವು ಧಮ್ಮದಲ್ಲಿ ವಿಹರಿಸುತ್ತಾನೋ,
ಧಮ್ಮದಲ್ಲೇ ಆನಂದಿಸುತ್ತಾನೋ, ಧಮ್ಮದ
ಚಿಂತನೆಯಲ್ಲೇ ಇರುವನೋ, ಧಮ್ಮವನ್ನೇ
ಸ್ಮರಿಸುತ್ತಿರುವನೋ, ಅಂತಹವನು ಸಧಮ್ಮದಿಂದ ಎಂದಿಗೂ ಬೀಳುವುದಿಲ್ಲ."    (364)
ಗಾಥ ಪ್ರಸಂಗ 25:4
ಧಮ್ಮಾರಾಮನ ಮನೋಭಾವ

            ಭಗವಾನರು ತಾವು ಪರಿನಿಬ್ಬಾನ ಪಡೆಯುವ ನಾಲ್ಕು ತಿಂಗಳು ಮುಂಚೆಯೇ, ತಾವು ಪರಿನಿಬ್ಬಾಣ ಪಡೆಯುವುದಾಗಿ ತಿಳಿಸಿದ್ದರು. ಆಗ ಬಹಳಷ್ಟು ಸಾಧಾರಣ ಭಿಕ್ಷುಗಳು ದುಃಖಿತರಾಗಿ, ತಾವು ಏನು ಮಾಡಬೇಕೆಂಬುದೇ ಅವರಿಗೆ ತಿಳಿಯಲಿಲ್ಲ. ಹೀಗಾಗಿ ಅವರೆಲ್ಲಾ ಭಗವಾನರ ಸಾಮಿಪ್ಯದಲ್ಲೇ ಇದ್ದರು. ಅವರನ್ನು ಅಗಲಿ ಹೋಗುತ್ತಲೇ ಇರಲಿಲ್ಲ.
            ಆದರೆ ಧಮ್ಮಾರಾಮನೆಂಬ ಭಿಕ್ಷುವು ಮಾತ್ರ ಭಗವಾನರ ಬಳಿಗೆ ಹೋಗಲಿಲ್ಲ. ಬದಲಾಗಿ ಭಗವಾನರು ಇರುವಾಗಲೇ ಅರಹಂತನಾಗಲು ಸಾಧ್ಯವಾದಷ್ಟು ಶ್ರಮಪಡುತ್ತಿದ್ದನು. ಹೀಗಾಗಿ ಆತನು ಸದಾ ಧ್ಯಾನದಲ್ಲೇ ತಲ್ಲೀನನಾಗಿರುತ್ತಿದ್ದನು. ಆದರೆ ಇತರೆ ಭಿಕ್ಷುಗಳಿಗೆ ಆತನ ಉದಾತ್ತ ಮನೋಭಾವವು ಅರ್ಥವಾಗಲಿಲ್ಲ. ಹೀಗಾಗಿ ಅವರು ಅವನನ್ನು ಭಗವಾನರ ಸಮ್ಮುಖದಲ್ಲಿ ನಿಲ್ಲಿಸಿದರು.

            ಆಗ ಆತನು ಭಗವಾನರಿಗೆ ತನ್ನ ಮನೋಭಾವ ತಿಳಿಸಿದಾಗ, ಭಗವಾನರು ಆತನ ಚಾರಿತ್ರ್ಯ ಮತ್ತು ಪ್ರಜ್ಞಾಶೀಲತೆಗೆ ಹೀಗೆ ಸ್ತುತಿಸಿದರು. "ಭಿಕ್ಷುಗಳೇ, ನನ್ನ ಮಗ ಧಮ್ಮರಾಮ ಯೋಗ್ಯವಾದುದನ್ನೇ ಮಾಡುತ್ತಿರುವನು. ನನಗೆ ಗೌರವಿಸಬೇಕೆಂದಿರುವ ಭಿಕ್ಷುಗಳು ಈತನನ್ನು ಅನುಕರಿಸಲಿ. ಯಾರು ನನಗೆ ಪುಷ್ಪಗಳಿಂದ ಸುಗಂಧಗಳಿಂದ ನನ್ನನ್ನು ಪೂಜಿಸುತ್ತಿಹರೋ ಅವರದು ನಿಜವಾದ ಶರಣು ಅಲ್ಲ. ಆದರೆ ಯಾರು ಧಮ್ಮಪಾಲನರೋ ಅವರೇ ನನ್ನಲ್ಲಿ ನಿಜ ಶರಣು ಹೋಗಿದ್ದಾರೆ."

dhammapada/bhikkuvagga/25.3/kokalika

ಪ್ರಾಜ್ಞನ ನುಡಿಗಳು ಪರಮ ಮಧುರ
"ಯಾವ ಭಿಕ್ಷುವು ನಾಲಿಗೆಯಲ್ಲಿ ಸಂಯಮದಿಂದಿರುವನೋ,
ಪ್ರಾಜ್ಞನಂತೆ ಮಾತನಾಡಬಲ್ಲನೋ, ಯಾರು ಅಹಂಕಾರಿಯಲ್ಲದೆ
ನಮ್ರನೋ, ಯಾರು ಧಮ್ಮವನ್ನು ಅಕ್ಷರ ಹಾಗು ಅರ್ಥವೊಂದರಲ್ಲಿಯೇ
ವಿವರಿಸಬಲ್ಲನೋ, ಅಂತಹವನ ನುಡಿಗಳು ಅತ್ಯಂತ ಮಧುರವಾಗಿರುತ್ತದೆ."      (363)

ಗಾಥ ಪ್ರಸಂಗ 25:3
ಕೋಕಾಲಿಕನ ಕುಚರಿತೆ

            ಕೋಕಾಲಕನು ದುಶ್ಶೀಲ ಭಿಕ್ಷು ದೇವದತ್ತನ ಶಿಷ್ಯನಾಗಿದ್ದನು. ಇವರಿಬ್ಬರೂ ಪರಸ್ಪರ ಹೊಗಳಿಕೊಳ್ಳುತ್ತಾ ಭಿಕ್ಷೆಯಲ್ಲಿ ಲಾಭವನ್ನು ಪಡೆಯುತ್ತಿದ್ದರು. ಒಮ್ಮೆ ಕೋಕಾಲಿಕನು ಧಮ್ಮೋಪದೇಶ ಮಾಡಲು ಹೋಗಿ ಅಸಮರ್ಥನಾಗಿ ಅಪಮಾನಿತನಾಗಿದ್ದನು.
            ಈ ಕೋಕಾಲಿಕನು ಇರುವೆಡೆ ಒಮ್ಮೆ ಸಾರಿಪುತ್ರ ಮತ್ತು ಮೊಗ್ಗಲ್ಲಾನರು ಮೂರು ತಿಂಗಳ ಕಾಲ ವರ್ಷವಾಸ ಕಳೆದರು. ನಂತರ ಅಲ್ಲಿದ್ದ ಜನರು ಅಗ್ರಶ್ರಾವಕರಾದ ಸಾರಿಪುತ್ರ ಮತ್ತು ಮೊಗ್ಗಲ್ಲಾನರಿಗೆ ಸತ್ಕಾರ, ದಾನಗಳೆಲ್ಲಾ ಮಾಡಲು ಬಂದಿದ್ದರು, ಆದರೆ ಸಂತೃಪ್ತರಾದ ಅವರು ಏನನ್ನೂ ಸ್ವೀರಿಸಲಿಲ್ಲ. ಹಾಗೆಯೇ ಅವರು ಕೋಕಾಲಿಕನಿಗೂ ಏನನ್ನೂ ಕೊಡಿಸಲಿಲ್ಲ. ಇದರಿಂದ ಕ್ರುದ್ಧನಾದ ಕೋಕಾಲಿಕನು ಹೀಗೆ ಯೋಚಿಸಿದನು: "ಈ ಥೇರರು ತಾವು ಸ್ವೀಕರಿಸಲಿಲ್ಲ, ನನಗೂ ಕೊಡಿಸಲಿಲ್ಲ". ಹಾಗೆಯೇ ಅಸೂಯಪರ ವರ್ತನೆ ಮಾಡಲಾರಂಭಿಸಿದಾಗ ಅವರು ಅಲ್ಲಿಂದ ಹೊರಟರು. ಇದು ಜನರಿಗೆ ಗೊತ್ತಾಗಿ ಅವರು ಕೋಕಾಲಿಕನಿಗೂ ದೂರ ಅಟ್ಟಿದರು. ಆಗ ಅಪಾರ ಕ್ರೋಧಗೊಂಡ ಕೋಕಾಲಿಕನು ಭಗವಾನರ ಬಳಿಗೆ ಬಂದು ಅವರ ಬಗ್ಗೆ ಇಲ್ಲಸಲ್ಲದುದನ್ನು ಹೀಗೆ ಹೇಳಿದನು: "ಭಗವಾನ್, ಅಗ್ರಶ್ರಾವಕರು, ಪಾಪಿಗಳು, ಅವರು ಪಾಪಗಳ ಇಚ್ಛೆ ಹೊಂದಿರುವವರು".
            ಆಗ ಭಗವಾನರು ಆತನನ್ನು ಹಾಗೆ ನುಡಿಯಬೇಡವೆಂದು ಮೂರು ಬಾರಿ ತಡೆದರು. ಆಗಲೂ ಆತನು ಹಾಗೆಯೇ ತನ್ನ ವಾಣಿಯನ್ನು ಸಂಯಮ ಮಾಡದಿದ್ದಾಗ ಆತನು ಪರಮಶ್ರೇಷ್ಠರ ಮೇಲೆ ಕ್ರೋಧನಾಗಿದ್ದರಿಂದ ಆತನ ಶರೀರದ ಮೇಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಕಾಣಿಸಿಕೊಂಡವು. ಕ್ರಮೇಣ ಅವು ಬಿಲ್ವಪತ್ತದಷ್ಟು ದೊಡ್ಡದಾಗಿ, ಒಡೆದು ರಕ್ತ ಕೀವು ಹರಿಯಲಾರಂಭಿಸಿತು. ನೋವಿನಿಂದ ನರಳಿದನು. ಇದರ ಬಗ್ಗೆ ಬುದ್ಧಿವಾದ ಹೇಳಿದಂತಹ ತುರು ಎಂಬ ಬ್ರಹ್ಮನಿಗೆ ಕೋಪ ತರಿಸಿದನು. ನಂತರ ನೋವಿನಿಂದ ಸತ್ತಂತಹ ಕೋಕಾಲಿಕನು ಪದ್ಮ ನರಕದಲ್ಲಿ ಹುಟ್ಟಿದನು. ಆಗ ಭಿಕ್ಷುಗಳು ಆತನ ಬಗ್ಗೆ ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಹೀಗೆ ಹೇಳಿದರು: "ಭಿಕ್ಷುಗಳೇ, ಕೋಕಾಲಿಕನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲಿಯೂ ಸಹಾ ತನ್ನ ನಾಲಿಗೆಯ ನಿಯಂತ್ರಣ ತಪ್ಪಿ ಸಾವನ್ನು ಅಪ್ಪಿದ್ದಾನೆ" ಎಂದರು. ನಂತರ ಭಿಕ್ಷುಗಳ ಕೋರಿಕೆಯಂತೆ ಆತನ ಹಿಂದಿನ ಜನ್ಮವನ್ನು ತಿಳಿಸಿದರು.
            ಒಮ್ಮೆ ಹಿಮಾಲಯದ ಸರೋವರದಲ್ಲಿ ಆಮೆಯೊಂದು ಇರುತ್ತಿತ್ತು. ಒಂದುದಿನ ಎರಡು ಯುವ ಹಂಸಗಳು ಆಹಾರವನ್ನು ಅನ್ವೇಷಿಸುವಾಗ ಆತನೊಂದಿಗೆ ಪರಿಚಯ ಬೆಳೆಸಿದವು. ಅಲ್ಪಕಾಲದಲ್ಲೇ ಅವರೆಲ್ಲಾ ಮಿತ್ರರಾದರು. ಒಂದುದಿನ ಹಂಸವು ಆಮೆಗೆ ಹೀಗೆ ಹೇಳಿತು: "ಮಿತ್ರ ಹಿಮಾಲಯದಲ್ಲಿ ಚಿತ್ರಕೂಟ ಪರ್ವತವೆಂಬುದೊಂದಿದೆ. ಅದು ಸುವರ್ಣ ವರ್ಣದ್ದು. ಅದು ವಾಸಿಸಲು ಅತ್ಯಂತ ಮಧುರವಾದುದು, ನಮ್ಮೊಂದಿಗೆ ಅಲ್ಲಿ ಬರಲು ಇಚ್ಛಿಸುವೆಯಾ?"
            "ನನಗೆ ಅಂತಹ ಆಸೆಯಿದೆ, ಆದರೆ ನಾನು ಅಲ್ಲಿಗೆ ಹೇಗೆತಾನೇ ಬರಬಲ್ಲೆ."
            "ನೀನು ಪೂರ್ಣವಾಗಿ ಬಾಯಲ್ಲಿ ನಿಯಂತ್ರಣವಿರಿಸಿದ್ದೇ ಆದರೆ ನಾವು ಕರೆದೊಯ್ಯಬಲ್ಲೆವು."
            ಅದಕ್ಕೆ ಆಮೆ ಒಪ್ಪಿತು. ಆಗ ಹಂಸಗಳು ಗಟ್ಟಿಯಾದ ಕೋಲೊಂದನ್ನು ತೆಗೆದುಕೊಂಡು ಬಂದವು. ಆಮೆಗೆ ನಡುವೆ ಕಚ್ಚಿಕೊಂಡು ಬಾಯ್ಬಿಡದೆ ಹಾಗೇ ಇರಲು ಸೂಚಿಸಿ, ತಾವು ಎರಡು ಬದಿಯಲ್ಲಿ ಕಚ್ಚಿಕೊಂಡು ಆಕಾಶದಲ್ಲಿ ಹಾರಿದವು.
            ಹಾಗೆ ಅವು ಆಕಾಶದಲ್ಲಿ ಹಾರುತ್ತಿರುವಾಗ, ಭೂಮಿಯಲ್ಲಿದ್ದ ಕೆಲ ಹುಡುಗರು "ನೋಡಲ್ಲಿ, ಹೇಗೆ ಆ ಹಂಸಗಳು ಆಮೆಯನ್ನು ತೆಗೆದುಕೊಂಡು ಹೋಗುತ್ತಿವೆ" ಎಂದರು. ಅದು ಕೇಳಿದ ಆಮೆಗೆ ಕೋಪವುಂಟಾಗಿ "ಇದರಿಂದ ನಿಮಗೇನು?" ಎಂದು ಹೇಳಲು ಬಾಯಿಬಿಟ್ಟಿತು. ತಕ್ಷಣ ಅಕಾಶದಿಂದ ವಾರಣಾಸಿಯ ನಗರದ ಅರಮನೆಯ ಭೂಮಿಗೆ ಬಿದ್ದು ಎರಡು ತುಂಡಾಗಿ ಸತ್ತಿತು.
            ಹೀಗೆ ಕೋಕಾಲಿಕನ ಹಿಂದಿನ ಜನ್ಮದ ವಿವರ ತಿಳಿಸಿ, ಈ ಮೇಲಿನ ಗಾಥೆಯನ್ನು ತಿಳಿಸಿದರು. 

dhammapada/bhikkuvagga/25.2/bhikkuwhokilledswan

ಸಂಯಮಿಯು ಮತ್ತು ಧ್ಯಾನಿಯೇ ಭಿಕ್ಷು
"ಹಸ್ತಗಳಿಂದ ಸಂಯಮದಿಂದಿರುವವನು,
ಪಾದಗಳಿಂದ ಸಂಯಮದಿಂದಿರುವವನು,
ಮಾತಿನಲ್ಲಿ ಸಂಯಮದಿಂದಿರುವವನು,
ಎಲ್ಲದರಲ್ಲೂ ಸಂಯಮದಿಂದಿರುವವನು,
ಧ್ಯಾನದಲ್ಲಿ ರತನಾಗಿರುವವನು, ಪ್ರಶಾಂತನು,
ಏಕಾಂಗಿಯು ಮತ್ತು ಸಂತೃಪ್ತನಾಗಿರುವವನನ್ನು ಭಿಕ್ಷು ಎನ್ನುವರು."   (362)
ಗಾಥ ಪ್ರಸಂಗ 25:2
ಹಂಸವನ್ನು ಹತ್ಯೆ ಮಾಡಿದ ಭಿಕ್ಷು

            ಶ್ರಾವಸ್ತಿಯ ಇಬ್ಬರು ಯುವಕರು ಲೌಕಿಕ ಜೀವನದಲ್ಲಿ ಮಿತ್ರರಾಗಿದ್ದರು, ನಂತರ ಅವರಿಬ್ಬರೂ ಭಿಕ್ಷುಗಳಾದರು. ಒಂದುದಿನ ಅವರು ಅಚಿರಾವತಿ ನದಿಯ ಬಳಿ ಸ್ನಾನ ಮಾಡುತ್ತಿದ್ದರು. ಆಗ ಆಕಾಶದಲ್ಲಿ ಎರಡು ಹಂಸಗಳು ಹಾರಾಡುತ್ತಿದ್ದವು. ಒಬ್ಬ ಭಿಕ್ಷು ಸಣ್ಣ ಕಲ್ಲನ್ನು ಎತ್ತಿಕೊಂಡು ಹೀಗೆ ಹೇಳಿದನು: "ನಾನು ಹಾರುತ್ತಿರುವ ಆ ಹಂಸದ ಕಣ್ಣಿಗೆ ಗುರಿಯಿಟ್ಟು ಹೊಡೆಯಬಲ್ಲೆ, ನನಗೆ ಅಂತಹ ಗುರಿಯಿಟ್ಟು ಹೊಡೆಯುವ ನೈಪುಣ್ಯವಿದೆ" ಎಂದನು.
            "ಇಲ್ಲ, ನೀನು ಹೊಡೆಯಲಾರೆ" ಎಂದನು ಮತ್ತೊಬ್ಬ ಭಿಕ್ಷು.
            "ನಿನಗೆ ಗೊತ್ತಿಲ್ಲ, ನಾನು ಆ ಹಂಸದ ಆ ಬದಿಯಲ್ಲಿರುವ ಕಣ್ಣಿಗೂ ಬೇಕಾದರೆ ಹೊಡೆಯಬಲ್ಲೆ." "ನಿನಗೆ ಸಾಧ್ಯವೇ ಇಲ್ಲ."
            ಆಗ ಆ ಭಿಕ್ಷುವು ಮೊದಲು ಆ ಕಲ್ಲನ್ನು ಎಸೆದು ಆ ಹಂಸದ ಗಮನ ಸೆಳೆದನು. ಆ ಹಂಸವು ತಿರುಗಿ ನೋಡಿದಾಗ ಅಷ್ಟರಲ್ಲಿ ಇನ್ನೊಂದು ಕಲ್ಲಿನಿಂದ ಅದರ ಆ ಬದಿಯ ಕಣ್ಣಿಗೆ ಕಲ್ಲನ್ನು ತೂರಿಸಿಯೇ ಬಿಟ್ಟಿದ್ದನು. ಆ ಪಕ್ಷಿಯ ಕಣ್ಣಿಗೆ ಬಲವಾದ ಪೆಟ್ಟುಬಿತ್ತು. ಅದರ ಕಣ್ಣು ಕಿತ್ತುಹೋಯಿತು. ಅದು ನೋವಿನಿಂದ ನಡುಗುತ್ತಾ ನೆಲದ ಮೇಲೆ ಬಿದ್ದಿತು, ಒದ್ದಾಡಿತು, ನಂತರ ಪ್ರಾಣಬಿಟ್ಟಿತು.
            ಆಗ ಭಿಕ್ಷುಗಳು ಪ್ರಾಣಿಹತ್ಯೆ ಸಂಬಂಧವಾಗಿ ಆ ಭಿಕ್ಷುವನ್ನು ಕರೆದುಕೊಂಡು ಭಗವಾನರ ಸಮ್ಮುಖದಲ್ಲಿ ನಿಲ್ಲಿಸಿದರು.
            "ಭಿಕ್ಷು, ನೀನು ನಿಜವಾಗಿ ಪ್ರಾಣಿಹತ್ಯೆಯನ್ನು ಮಾಡಿದೆಯಾ?" "ಹೌದು ಭಂತೆ."

            "ಓ ಭಿಕ್ಷುವೇ, ನನ್ನ ಧಮ್ಮದಲ್ಲಿ ನೀನು ಸೇರಿಯೂ ಸಹಾ ಇಂತಹ ಕೆಲಸವನ್ನು ಹೇಗೆತಾನೇ ಮಾಡಿದೆ. ಪ್ರಪಂಚವನ್ನು ತೊರೆದು ಸಹಾ, ಹಿಂಸೆಯನ್ನೇಕೆ ತೊರೆಯದಾದೆ, ಯಾರು ಸದಾ ಉನ್ನತಿಯನ್ನು ಪಾಲಿಸಬೇಕಿತ್ತೋ, ಅಂತಹವನಾದ ನೀನು, ದಯಾಹೀನನಾಗಿ ಹಿಂಸೆಯನ್ನು ಹೇಗೆತಾನೇ ಮಾಡಿದೆ? ದುಃಖದಿಂದ ಮುಕ್ತನಾಗಲು ಪ್ರಯತ್ನಿಸುತ್ತಿರುವ ನೀನು ಪರ ಜೀವಿಗೆ ಹೇಗೆತಾನೆ ಹಿಂಸಿಸಿದೆ, ದುಃಖವನ್ನಿತ್ತೆ? ಓಹ್ ಭಿಕ್ಷುವಾದವನು ಖಂಡಿತವಾಗಿ ಕಾಯಾ, ವಾಚಾ ಮತ್ತು ಮನಸ್ಸಿನಲ್ಲಿಯೂ ಹಿಂಸಾ ಭಾವನೆ ಮಾಡಬಾರದು. ತ್ರಿಶರಣಪೂರ್ವಕವಾಗಿ ಭಿಕ್ಷುವು ಸಂಯಮಿತನಾಗಿರಬೇಕು" ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು. 

dhammapada/bhikkhuvagga/25.1/shravastibhikkhus

25. ಭಿಕ್ಖು ವಗ್ಗ (ಭಿಕ್ಷು ವರ್ಗ)
ಇಂದ್ರಿಯಗಳನ್ನು ರಕ್ಷಿಸುವವರು ದುಃಖದಿಂದ ಪಾರಾಗುತ್ತಾರೆ
"ಚಕ್ಷುವನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಕಿವಿಯನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಮೂಗನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ನಾಲಿಗೆಯನ್ನು ಸಂಯಮದಿಂದಿರಿಸುವುದು ಒಳ್ಳೆಯದು." (360)

"ಕಾಯವನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಮಾತಿನಲ್ಲಿ ಸಂಯಮದಿಂದಿರುವುದು ಒಳ್ಳೆಯದು,
ಮನಸ್ಸನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಎಲ್ಲದರ ಸಂಯಮ ಒಳ್ಳೆಯದು,
ಸರ್ವವನ್ನು ಸಂಯಮಗೊಳಿಸಿದಂತಹ ಭಿಕ್ಷು
ಸರ್ವ ದುಃಖಗಳಿಂದ ಪಾರಾಗುತ್ತಾನೆ."          (361)

ಗಾಥ ಪ್ರಸಂಗ 25:1
ಇಂದ್ರಿಯ ಸಂಯಮದ ಬಗ್ಗೆ ಶ್ರಾವಸ್ತಿಯ ಭಿಕ್ಷುಗಳ ಪ್ರಶ್ನೆ

            ಶ್ರಾವಸ್ತಿಯಲ್ಲಿ ಐದು ಭಿಕ್ಷುಗಳ ಗುಂಪೊಂದು, ಐದು ಇಂದ್ರಿಯಗಳಲ್ಲಿ ಕೇವಲ ಒಂದು ಇಂದ್ರಿಯವನ್ನು ಮಾತ್ರ ಸಂಯಮದಿಂದಿರಿಸಿದರು. ಉಳಿದ ಇಂದ್ರಿಯಗಳಿಗೆ ಮಹತ್ವ ನೀಡಲಿಲ್ಲ. ಒಂದುದಿನ ಅವರು ಈ ರೀತಿಯ ಚಚರ್ೆಗೆ ಇಳಿದರು: "ನಾನು ರಕ್ಷಿಸುತ್ತಿರುವ ಇಂದ್ರಿಯ ದ್ವಾರವೇ ಅತ್ಯಂತ ಕಷ್ಟಕರವಾದುದು." ಹೀಗೆ ಪ್ರತಿಯೊಬ್ಬರೂ 'ತಾವೇ ಕಷ್ಟಕರವಾಗಿರುವ ಇಂದ್ರಿಯ ದ್ವಾರ ರಕ್ಷಿಸುತ್ತಿದ್ದೇವೆ' ಎಂದು ಭ್ರಮೆಗೆ ಬಿದ್ದರು. ಆದರೆ ಕೊನೆಗೂ ಅವರಲ್ಲಿ ನಿರ್ಣಯ ಉಂಟಾಗದೆ ಇದನ್ನು ಬುದ್ಧ ಭಗವಾನರಲ್ಲಿಯೇ ಪರಿಹರಿಸಿಕೊಳ್ಳೋಣವೆಂದು, ಭಗವಾನರ ಬಳಿಗೆ ಬಂದು ಈ ಪ್ರಶ್ನೆಯನ್ನು ಅವರಿಗೆ ಕೇಳಿದರು: "ಭಗವಾನ್, ನಾವು ಪ್ರತಿಯೊಬ್ಬರೂ ಪ್ರತ್ಯೇಕವಾದ ಇಂದ್ರಿಯವನ್ನು ರಕ್ಷಿಸುತ್ತಿದ್ದೇವೆ. ಅದು ಮಾತ್ರವೇ ಅತಿಕಷ್ಟಕರವಾದುದು ಎಂದು ಭಾವಿಸುತ್ತಿದ್ದೇವೆ, ಈಗ ತಾವೇ ನಮ್ಮಲ್ಲಿ ಅತ್ಯಂತ ಕಷ್ಟಕರವಾಗಿರುವ ಇಂದ್ರಿಯವನ್ನು ಯಾರು ರಕ್ಷಿಸುತ್ತಿರುವರು ಎಂದು ತಿಳಿಸಬೇಕು."

            ಆಗ ಭಗವಾನರು ಆ ಹೇಳಿಕೆಯ ಉತ್ತರದಿಂದಾಗುವ ದುಷ್ಪರಿಣಾಮವನ್ನು ಅರಿತು, ಜಾಗರೂಕತೆಯಿಂದ ಯಾರೊಬ್ಬರಿಗೂ ಕೀಳು ಸ್ಥಾನಕ್ಕೆ ತರದೆ, ಅವರನ್ನು ಏಕೇಂದ್ರಿಯ ರಕ್ಷಣೆಗೆ ಮಾತ್ರ ಸೀಮಿತಗೊಳಿಸದೆ ಹೀಗೆ ಉತ್ತರಿಸಿದರು: "ಭಿಕ್ಷುಗಳೇ, ಪ್ರತಿಯೊಂದು ಇಂದ್ರಿಯವೂ ಸಹಾ ರಕ್ಷಿಸಲು, ಸಂಯಮಗೊಳಿಸಲು ಕಷ್ಟಕರವೇ ಆಗಿದೆ. ಈಗಷ್ಟೇ ನೀವು ಈ ರೀತಿ ಇಂದ್ರಿಯಗಳ ದಮನದಲ್ಲಿ ಸೋತಿಲ್ಲ. ನಿಮ್ಮ ಹಿಂದಿನ ಜನ್ಮಗಳಲ್ಲೂ ಸಹಾ ನೀವು ಇಂದ್ರಿಯ ಸಂಯಮದಲ್ಲಿ ಜಾರಿದ್ದರೀರಿ. ಆಗ ನೀವು ವಿವೇಕಿಗಳ ಸುಭಾಷಿತ ಪಾಲಿಸದೆ ನಾಶಕ್ಕೆ ಗುರಿಯಾಗಿದ್ದಿರಿ" ಎಂದರು ಮತ್ತು ಮೇಲಿನ ಗಾಥೆಗಳನ್ನು ನುಡಿದರು. ಆಗ ಭಿಕ್ಷುಗಳು ಭಗವಾನರಿಗೆ ಪೂರ್ವ ವೃತ್ತಾಂತ ತಿಳಿಸಲು ಕೋರಿಕೊಂಡರು. ಆಗ ಭಗವಾನರು ಹೀಗೆ ಆರಂಭಿಸಿದರು.
ಹಿಂದಿನ ತಕ್ಷಶಿಲ ಜಾತಕ : ಬಹಳ ಕಾಲದ ಹಿಂದೆ ಬ್ರಹ್ಮದತ್ತನು ವಾರಾಣಸಿಯಲ್ಲಿ ಆಳುತ್ತಿರುವಾಗಿ ಆ ರಾಜನ ಕಿರಿಯ ಮಗನಾಗಿ ಬೋಧಿಸತ್ವರು ಜನಿಸಿದರು. ಒಂದುದಿನ ಪಚ್ಚೇಕಬುದ್ಧರು ಅರಮನೆಯಲ್ಲಿ ಆಹಾರ ಸೇವಿಸುತ್ತಿರುವಾಗ ಅವರ ಸೇವೆಮಾಡಿ ಬೋಧಿಸತ್ವರು ತಾವು ಈ ದೇಶದ ರಾಜನಾಗುವೆನೇ? ಎಂದು ಅವರನ್ನು ಕೇಳಿದಾಗ ಅವರು ಹೀಗೆಂದರು: "ತಕ್ಷಶಿಲೆ ನಗರಕ್ಕೆ ಹೋದರೆ ಮಾತ್ರ ರಾಜನಾಗಬಹುದು, ಆದರೆ ಕಾಡಿನ ದಾರಿಯಲ್ಲಿ ಯಕ್ಷಿಣಿಯರಿದ್ದಾರೆ, ಅವರು ಇಂದ್ರಿಯ ಮದಗಳಿಗೆ ಆಕಷರ್ಿತರಾದವರನ್ನು ಸೆಳೆದು ನಂತರ ರಕ್ತ ಕುಡಿದು ಮಾಂಸ ತಿನ್ನುವರು. ಆದ್ದರಿಂದ ಇಂದ್ರಿಯ ಸಂಯಮದಿಂದಿರಬೇಕು."
            ಅದಕ್ಕೆ ಸಿದ್ಧರಾದ ಬೋಧಿಸತ್ವರು ತಕ್ಷಶಿಲೆಗೆ ಹೊರಟರು. ಅವರೊಂದಿಗೆ ಐವರು ಬಂದರು. ಅವರಿಗೆಲ್ಲಾ ಬೋಧಿಸತ್ವರು ಮುಂಚೆಯೇ ಎಚ್ಚರಿಕೆ ನೀಡಿ ಇಂದ್ರಿಯ ಸಂಯಮದಿಂದಿರುವಂತೆ ಆದೇಶ ನೀಡಿದರು. ಆದರೆ ದಾರಿಯಲ್ಲಿ ಒಬ್ಬಾತ ಯಕ್ಷಿಣಿಯ ರೂಪ ವೈಯ್ಯಾರಕ್ಕೆ, ಮತ್ತೊಬ್ಬ ಯಕ್ಷಿಣಿಯ ಗಾನ ಸಂಗೀತಕ್ಕೆ, ಮತ್ತೊಬ್ಬ ಯಕ್ಷಿಣಿಯ ಸುಗಂಧಕ್ಕೆ, ಮಗದೊಬ್ಬ ಯಕ್ಷಿಣಿಯ ಆಹಾರಕ್ಕೆ, ಕೊನೆಯವನು ಯಕ್ಷಿಣಿಯ ಸ್ಪರ್ಶಕ್ಕೆ ಹೀಗೆ ಅವರೆಲ್ಲಾ ಇಂದ್ರಿಯ ಸುಖಗಳಿಗೆ ಆಕಷರ್ಿತರಾಗಿ ಯಕ್ಷಿಣಿಯರಿಗೆ ವಶರಾಗಿ ಪ್ರಾಣ ಕಳೆದುಕೊಂಡರು. ಆದರೆ ಬೋಧಿಸತ್ವರು ಇಂದ್ರಿಯಗಳನ್ನು ಚಾಂಚಲ್ಯಗೊಳಿಸಲಿಲ್ಲ, ಅವರು ತಕ್ಷಶಿಲೆಗೆ ಹೋದರು. ಅಲ್ಲಿಯ ರಾಜನು ಸಹ ಯಕ್ಷಿಣಿಗೆ ಮರುಳಾಗಿ ಪ್ರಾಣ ಕಳೆದುಕೊಂಡಿದ್ದನು. ಹೀಗಾಗಿ ಬೋಧಿಸತ್ವರನ್ನೇ ಅಲ್ಲಿನ ಜನರು ರಾಜನನ್ನಾಗಿಸಿದರು.

Monday, 7 September 2015

dhammapada/tanhavagga/24.12/indukaankura

ರಾಗ, ದ್ವೇಷ, ಮೋಹವು ಮಾನವತೆಗೆ ಕೇಡು

"ಕಳೆಗಳು ಹೊಲಕ್ಕೆ ಕೆಡುಕು,
ರಾಗವು ಮಾನವತೆಗೆ ಕೇಡು,
ಆದ್ದರಿಂದ ವಿತರಾಗರಿಗೆ (ರಾಗಮುಕ್ತರಿಗೆ) ನೀಡಿದ್ದು
ಮಹತ್ಫಲ ತರುತ್ತದೆ." (356)

"ಕಳೆಗಳು ಹೊಲಕ್ಕೆ ಕೆಡುಕು
ದ್ವೇಷವು ಮಾನವತೆಗೆ ಕೇಡು
ಆದ್ದರಿಂದ ದ್ವೇಷರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ." (357)

"ಕಳೆಗಳು ಹೊಲಕ್ಕೆ ಕೆಡಕು
ಮೋಹವು ಮಾನವತೆಗೆ ಕೇಡು,
ಆದ್ದರಿಂದ ಮೋಹರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ." (358)

"ಕಳೆಗಳು ಹೊಲಕ್ಕೆ ಕೆಡಕು
ಇಚ್ಛೆಯು ಮಾನವತೆಗೆ ಕೇಡು,
ಆದ್ದರಿಂದ ಇಚ್ಛಾರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ." (359)


ಗಾಥ ಪ್ರಸಂಗ 24:12
ದಾನಕ್ಕೆ ಫಲವತ್ತಾದ ಭೂಮಿ
            ಒಮ್ಮೆ ಬುದ್ಧ ಭಗವಾನರು ತಾವತಿಂಸ ದೇವಲೋಕದಲ್ಲಿ ದೇವ ಸಂತುಸಿತಾಗೆ ಅಭಿಧಮ್ಮ ಬೋಧನೆ ನೀಡಲು ಹೋಗಿದ್ದರು. ಈ ದೇವ ಸಂತುಸಿತಾ ಬೇರಾರು ಅಲ್ಲ. ಬೋಧಿಸತ್ವರಿಗೆ ಜನ್ಮ ನೀಡಿದಂತಹ, ತಾಯಿ ಸಾಕ್ಷಾತ್ ಮಹಾ ಮಯಾದೇವಿಯೇ ಈಗ ಪುರುಷ ದೇವ ಆಗಿದ್ದರು.
            ಆ ಸಮಯದಲ್ಲಿ ಇಂದುಕ ಎಂಬ ದೇವನಿದ್ದನು. ಆತನು ತನ್ನ ಹಿಂದಿನ ಜನ್ಮದಲ್ಲಿ ಪೂಜ್ಯ ಅನಿರುದ್ಧರವರಿಗೆ ಅತ್ಯಲ್ಪ ಪ್ರಮಾಣದ ಆಹಾರವನ್ನು ದಾನ ಮಾಡಿದ್ದನು. ಆ ಒಂದು ತುತ್ತಿನ ಪ್ರಮಾಣದ ಆಹಾರ ದಾನಫಲವು ಅತ್ಯಂತ ವಿಶಿಷ್ಟವಾಗಿತ್ತು. ಅದರ ಫಲವಾಗಿಯೇ ಆತನು ತಾವತಿಂಸ ದೇವತೆಗಳ ಮಧ್ಯದಲ್ಲಿ ಅಪಾರವಾದ ವೈಭೋಗ ಹೊಂದಿದನು.
            ಆ ತಾವತಿಂಸ ಲೋಕದಲ್ಲಿಯೇ ಇನ್ನೋರ್ವ ದೇವನಿದ್ದನು. ಆತನ ಹೆಸರು ಅಂಕುರ, ಆತನು ತನ್ನ ಹಿಂದಿನ ಜನ್ಮದಲ್ಲಿ ಅಪಾರವಾಗಿ ದಾನಗಳನ್ನು ಮಾಡಿದ್ದನು. ಅಸಂಖ್ಯಾತ ಜನರಿಗೆ, ಉನ್ನತ ಮಟ್ಟದ ದಾನಗಳನ್ನು ಮಾಡಿಯೂ ಸಹಾ ಆತನು ಇಂದುಕ ದೇವನಿಗಿಂತ ಅತಿ ಕಡಿಮೆ ಮಟ್ಟದ ವೈಭೋಗದಲ್ಲಿದ್ದನು. ಹೀಗಾಗಿ ಆತನಿಗೆ ಈ ವಿಷಯದಲ್ಲಿ ಆಶ್ಚರ್ಯ, ಗೊಂದಲ, ಚಿಂತೆಗಳು ಉಂಟಾಗಿ ಕೊನೆಗೆ ಆತನು ತಡೆಯಲಾರದೆ ಭಗವಾನರಲ್ಲಿ ಈ ವಿಷಯಗಳಿಗೆ ಕಾರಣವೇನೆಂದು ಕೇಳಿಯೇ ಬಿಟ್ಟನು.
            ಆಗ ಭಗವಾನರು ಹೀಗೆ ಉತ್ತರಿಸಿದರು: "ಓ ಅಂಕುರ, ದಾನ ಮಾಡುವಾಗ, ಪ್ರಜ್ಞಾರಾಗಿ ದಾನ ಮಾಡುವುದು ಒಳ್ಳೆಯದು. ನೀನು ಮಾಡುವ ದಾನವು ಪುಣ್ಯ ಬೀಜಗಳಂತೆ, ಅದಕ್ಕೆ ಫಲವತ್ತಾದ ಭೂಮಿಯೆಂದರೆ ಲೋಭರಹಿತರು, ದ್ವೇಷರಹಿತರು ಮತ್ತು ಮೋಹರಹಿತರೇ ಆಗಿರುತ್ತಾರೆ. ಆದ್ದರಿಂದಾಗಿ ಲೋಭ, ದ್ವೇಷ ಮತ್ತು ಮೋಹಗಳಿಂದ ಕೂಡಿರುವ ಜನರಿಗೆ ದಾನ ಮಾಡಿದರೆ ಅದು ಬರಡು ಭೂಮಿಯಂತೆ ಅಲ್ಲಿ ಕಳೆ ಬೆಳೆಯಬಹುದೇ ವಿನಃ ಬೆಳೆಯನ್ನಲ್ಲ. ಆದ್ದರಿಂದ ದಾನ ನೀಡುವಾಗ ವಿವೇಚನೆ ಉಳ್ಳವನಾಗು, ಪ್ರಜ್ಞಾನಾಗು, ಉಪಾಯ ಕೌಶಲ್ಯವುಳ್ಳವನಾಗು. ಹಿಂದಿನ ಜನ್ಮದಲ್ಲಿ ನಿನಗೆ ಇಂತಹ ವಿವೇಚನೆ ಇಲ್ಲದಿರುವುದರಿಂದಾಗಿ, ಅಂತಹ ವ್ಯಕ್ತಿಗಳೂ ಸಹಾ ದೊರೆಯದೆ ಇರುವುದರಿಂದಾಗಿ ನಿನಗೆ ಅತ್ಯಲ್ಪ ಲಾಭವುಂಟಾಯಿತು." ಹೀಗೆ ಹೇಳಿ ನಂತರ ಈ ಗಾಥೆಗಳನ್ನು ನುಡಿದರು.