Monday, 16 February 2015

dhammapada/balavagga/5.2/mahakassapa

ಮೂರ್ಖರೊಂದಿಗೆ ಒಡನಾಡಿತನ ತಡೆಗಟ್ಟಿರಿ
ಸಾಧನೆಯ ಹಾದಿಯಲ್ಲಿರುವವನಿಗೆ ತನಗಿಂತ ಉತ್ತಮ ಅಥವಾ ಸಮನಾದವನು ಸಿಗದಿದ್ದರೆ ಒಂಟಿಯಾಗಿಯೇ ದೃಢತೆಯಿಂದ ಜೀವಿಸಲಿ, ಆದರೆ ಮೂರ್ಖರ ಒಡನಾಟವಂತು ಕೂಡದು.   (61)
ಗಾಥ ಪ್ರಸಂಗ 5:2
ಮೂರ್ಖರ ಸಹವಾಸದಿಂದಾಗುವ ಪರಿಣಾಮ

                ಪೂಜ್ಯ ಮಹಾಕಸ್ಸಪರವರು ರಾಜಗೃಹದಲ್ಲಿ ಪಿಪ್ಪಲಿ ಗುಹೆಯಲ್ಲಿ ವಾಸವಾಗಿದ್ದರು. ಅವರ ಜೊತೆಗೆ ಇಬ್ಬರು ಯುವ ಶಿಷ್ಯರಿದ್ದರು. ಅವರಲ್ಲಿ ಒಬ್ಬ ವಿಧೇಯ, ನಿಷ್ಠಾವಂತ ಮತ್ತು ಕರ್ತವ್ಯ ಪ್ರಜ್ಞನಾಗಿದ್ದನು ಮತ್ತು ಮತ್ತೊಬ್ಬನಲ್ಲಿ ಇದ್ಯಾವ ಗುಣಗಳು ಇರಲಿಲ್ಲ. ಆತನು ಒಳ್ಳೆಯ ಶಿಷ್ಯನ ಸೇವೆಗಳೆಲ್ಲ ತನ್ನವೇ ಎಂದು ಘೋಷಿಸಿಕೊಳ್ಳುತ್ತಿದ್ದನು. ಒಂದುದಿನ ಆತನು ಸಾತ್ವಿಕನಲ್ಲ ಎಂದು ಕಸ್ಸಪರವರಿಗೆ ಗೊತ್ತಾಯಿತು. ಪೂಜ್ಯ ಕಸ್ಸಪರವರು ಆತನಿಗೆ ಕರ್ತವ್ಯಭ್ರಷ್ಟನಾಗದಿರು ಎಂದು ಬುದ್ಧಿವಾದ ನೀಡಿದರು. ಒಂದುದಿನ ಕಸ್ಸಪರವರು ಉತ್ತಮ ಶಿಷ್ಯನೊಂದಿಗೆ ಒಂದು ಪ್ರದೇಶಕ್ಕೆ ಹೋಗಿದ್ದಾಗ ಕಪಟಿ ಶಿಷ್ಯನು ಉಪಾಸಕರ ಬಳಿಗೆ ಬಂದು ಕಸ್ಸಪರವರಿಗೆ ಕಾಯಿಲೆ ಎಂದು ಹೇಳಿ ಅವರಿಗಿಡುವ ಆಹಾರವನ್ನೆಲ್ಲಾ ತಾನೇ ಭಕ್ಷಿಸಿದನು. ಇದು ಕಸ್ಸಪರವರಿಗೆ ಗೊತ್ತಾಗಿ ಆತನಿಗೆ ಖಂಡಿಸಿದರು. ಆಗ ಕಪಟಿ ಶಿಷ್ಯನಿಗೆ ಅವರಲ್ಲಿ ಕೋಪ ಉಂಟಾಯಿತು. ಮತ್ತೊಂದು ದಿನ ಆತನು ಇದೇರೀತಿ ಬಟ್ಟೆಯನ್ನು ತನ್ನದಾಗಿಸಿದನು. ಆಗಲು ಕಸ್ಸಪರವರು ಖಂಡಿಸಿದಾಗ ಮಾರನೆಯದಿನ ಕಸ್ಸಪರವರು ಆಹಾರಕ್ಕೆ ಹೊರಟಿರುವಾಗ, ಕಪಟಿ ಶಿಷ್ಯ ಅಲ್ಲೇ ಇದ್ದು ಪಾತ್ರೆ, ಮಡಿಕೆಗಳನ್ನೆಲ್ಲಾ ಒಡೆದು ಹಾಕಿದನು ಮತ್ತು ಅವರ ಕುಟೀರಕ್ಕೆ ಬೆಂಕಿ ಇಟ್ಟನು ಮತ್ತು ಓಡಿಹೋದನು. ಆತನು ಸತ್ತಾಗ ಅವೀಚಿ ನರಕದಲ್ಲಿ ಹುಟ್ಟಿದನು.
                ಈ ವಿಷಯ ಭಗವಾನರಿಗೆ ತಿಳಿದಾಗ ಭಗವಾನರು ಈ ಮೇಲಿನ ಗಾಥೆ ನುಡಿದರು

dhammapada/balavagga/5.1/pasenadi

ಬಾಲವಗ್ಗ

ಸದ್ಧಮ್ಮ ಅರಿಯದವರ ಸಂಸಾರ ದೀರ್ಘವಾಗಿರುತ್ತದೆ
ನಿದ್ರೆ ಬಾರದೆ ಜಾಗೃತನಾಗಿರುವವನಿಗೆ ರಾತ್ರಿಯು ದೀರ್ಘವಾಗಿರುತ್ತದೆ, ದಣಿದವನಿಗೆ ಯೋಜನ ದೂರವು ದೀರ್ಘವಾಗಿರುತ್ತದೆ. ಸದ್ಧಮ್ಮವನ್ನು ಅರಿಯದ ಮೂರ್ಖರಿಗೆ ಸಂಸಾರದಲ್ಲಿ ಇರುವಿಕೆ ದೀರ್ಘವಾಗಿರುತ್ತದೆ.   (60)
ಗಾಥ ಪ್ರಸಂಗ 5:1
ಪರನಾರಿ ಗಮನದ ಪರಿಣಾಮ

                ಒಂದುದಿನ ರಾಜ ಪಸೇನದಿಯು ನಗರವನ್ನು ವೀಕ್ಷಿಸುತ್ತಿರುವಾಗ ಒಂದು ಮನೆಯ ಕಿಟಕಿಯಲ್ಲಿ ಸುಂದರವಾದ ಸ್ತ್ರೀಯನ್ನು ಕಂಡನು. ಆಕೆಯನ್ನು ಕಂಡೊಡನೆಯೇ ಆಕೆಯಲ್ಲಿ ಅನುರಕ್ತನಾದನು. ಆಕೆಯ ಬಗ್ಗೆ ತಿಳಿದುಕೊಂಡಾಗ ಆಕೆ ವಿವಾಹಿತೆಯೆಂದು ತಿಳಿಯಿತು. ಆಕೆಯನ್ನು ಪಡೆಯುವ ಉಪಾಯವೊಂದನ್ನು ಆತನು ರಚಿಸಿದನು. ಆಕೆಯ ಪತಿಯನ್ನು ಕರೆಸಿ ಆತನನ್ನು ಅರಮನೆಯಲ್ಲಿ ಕೆಲಸದಲ್ಲಿ ನೇಮಿಸಿದನು. ಕೆಲದಿನಗಳ ನಂತರ ರಾಜನು ಆತನಿಗೆ ಅಸಾಧ್ಯವಾದ ಕಾರ್ಯವೊಂದಕ್ಕೆ ನಿಯಮಿಸಿದನು. ಯುವಕರು ಶ್ರಾವಸ್ತಿಯಿಂದ ಯೋಜನ ದೂರದಲ್ಲಿರುವ ಒಂದು ಪ್ರದೇಶಕ್ಕೆ ಹೋಗಿ ನಾಗಲೋಕಕ್ಕೆ ಹೋಗಿ ಕುಮುದ ಹೂಗಳನ್ನು ಮತ್ತು ಅಲ್ಲಿನ ಕೆಂಪು ಮಣ್ಣನ್ನು ತರಬೇಕೆಂದು ಪಸೇನದಿಯು ಕಳುಹಿಸಿದರು. ಅದು ಸಂಜೆಯ ಒಳಗೆ ತರಬೇಕು ಎಂದು ಆಜ್ಞಾಪಿಸಿದನು. ಆತನು ಹಾಗೆ ಮಾಡದಿದ್ದರೆ ಆತನನ್ನು ಕೊಂದು ಆತನ ಪತ್ನಿಯನ್ನು ಪಡೆಯುವುದು ಆತನ ಉಪಾಯವಾಗಿತ್ತು.
                ಆ ಯುವಕನು ಆತುರದಿಂದ ಪತ್ನಿಯಿಂದ ಆಹಾರ ತೆಗೆದುಕೊಂಡು ಆ ಸ್ಥಳಕ್ಕೆ ಹೋಗುವಾಗ ದಾರಿಯಲ್ಲಿ ಯಾತ್ರಿಕರಿಗೆ ಆಹಾರ ನೀಡಿದನು ಮತ್ತು ಸ್ವಲ್ಪ ಆಹಾರವನ್ನು ನೀರಿನಲ್ಲಿ ಹಾಕಿದನು ಮತ್ತು ಜೋರಾಗಿ ಹೀಗೆ ಹೇಳಿದನು ಓ ರಕ್ಷಣಾ ದೇವತೆಗಳಿಗೆ ಮತ್ತು ನದಿಯಲ್ಲಿರುವ ನಾಗಾಗಳೇ, ರಾಜ ಪಸೇನದಿಯು ನನಗೆ ಕುಮುದ ಹೂಗಳನ್ನು ಮತ್ತು ಅರುಣವತಿ (ಕೆಂಪು ಮಣ್ಣು) ತರಲು ಆಜ್ಞಾಪಿಸಿದ್ದಾನೆ. ನಾನು ಇಂದು ನನ್ನ ಆಹಾರವನ್ನು ಯಾತ್ರಿಕರೊಡನೆ ಮತ್ತು ನದಿಯಲ್ಲಿನ ಮೀನುಗಳೊಡನೆ ಹಂಚಿದ್ದೇನೆ. ಇವೆಲ್ಲಾ ಪುಣ್ಯವನ್ನು ನಾನು ನಿಮಗೆ ನೀಡುತ್ತೇನೆ. ನನಗೆ ದಯವಿಟ್ಟು ನಾಗಾಲೋಕದ ಕುಮುದ ಪುಷ್ಪಗಳನ್ನು ಮತ್ತು ಕೆಂಪು ಮಣ್ಣನ್ನು ನೀಡಿ ಆಗ ನಾಗರಾಜ ವೃದ್ಧನ ವೇಷಧರಿಸಿ ಆತನಿಗೆ ಕುಮುದ ಪುಷ್ಪ ಮತ್ತು ಕೆಂಪು ಮಣ್ಣನ್ನು ನೀಡಿದನು.
                ರಾಜ ಪಸೇನದಿಗೆ ಯುವಕನು ಬೇಗ ಬರಬಹುದೆಂಬ ಸಂಶಯದಿಂದ ನಗರದ ಬಾಗಿಲುಗಳು ಮುಚ್ಚಿರುವುದು ಕಂಡನು. ಆತನಿಗೆ ರಾಜನ ಉಪಾಯವು ಅರಿವಾಗಿ ಕೆಂಪು ಮಣ್ಣನ್ನು ನಗರ ಗೋಡೆಯಲ್ಲಿಟ್ಟು, ಭೂಮಿಯ ಮೇಲೆ ಕಮಲದ ಪುಷ್ಪವನ್ನಿಟ್ಟು ಈ ರೀತಿ ಜೋರಾಗಿ ಕೂಗಿ ಹೇಳಿದನು.
                ಓ ನಾಗರಿಕರೇ, ನಾನು ರಾಜನು ಒಪ್ಪಿಸಿದ್ದ ಸಾಹಸ ಪೂತರ್ಿ ಮಾಡಿದ್ದೇನೆ. ಆದರೆ ರಾಜನು ಸಮಯಕ್ಕೆ ಮುಂಚೆ ಬಾಗಿಲು ಹಾಕಿಸಿದ್ದಾನೆ. ನ್ಯಾಯಪರತೆಯಿಲ್ಲದೆ ರಾಜನು ನನ್ನನ್ನು ಕೊಲ್ಲಲು ನಿರ್ಧರಿಸಿದ್ದಾನೆ.

                ನಂತರ ಆತನು ಅಲ್ಲಿಂದ ಪ್ರಾಣ ಭಯದಿಂದ ಜೇತವನಕ್ಕೆ ಬಂದನು. ಅದೇವೇಳೆಯಲ್ಲಿ ರಾಜ ಪಸೇನದಿಗೆ ಬಯಕೆಗಳಿಂದಾಗಿ ನಿದ್ದೆ ಬರಲಿಲ್ಲ. ಆತ ರಾತ್ರಿಯಿಡಿ ಆ ಯುವಕನನ್ನು ದೂರಮಾಡಿ ಆತನ ಪತ್ನಿಯನ್ನು ಪಡೆಯುವ ಯೋಚನೆ ಮಾಡುತ್ತಿದ್ದನು. ಆದರೆ ಆತನು ಮಧ್ಯರಾತ್ರಿಯ ವೇಳೆ ಅತ್ಯಂತ ಭಯಾನಕ ಶಬ್ದಗಳನ್ನು ಕೇಳಿದನು. ಆತನಿಗೆ ಇನ್ನೂ ನಿದ್ರೆ ಬಾರದಂತಾಯಿತು. ಪತ್ನಿ ಮಲ್ಲಿಕಾಳ ಸಲಹೆಯಂತೆ ರಾಜನು ಭಗವಾನರನ್ನು ಭೇಟಿ ಮಾಡಿ ಆ ಭೀಕರ ಶಬ್ದಗಳ ಬಗ್ಗೆ ಕೇಳಿದನು. ಆಗ ಭಗವಾನರು ಆ ಭೀಕರ ಶಬ್ದಗಳು ಲೋಹಕುಂಭಿ ನಿರಯದಲ್ಲಿ ದುಃಖಿಸುತ್ತಿರುವ ನಾಲ್ವರ ಧ್ವನಿಯಾಗಿತ್ತೆಂದು, ಅವರು ಕಸ್ಸಪ ಬುದ್ಧರ ಕಾಲದಲ್ಲಿ ಶ್ರೀಮಂತರ ಮಕ್ಕಳಾಗಿದ್ದು ಅವರು ಪರನಾರಿ ಗಮನ ಮಾಡಿದ್ದರಿಂದಾಗಿ ಅವರಿಗೆ ಈ ಗತಿ ಬಂದಿತೆಂದು ಹೇಳಿದರು. ಆಗ ರಾಜನಿಗೆ ಪರನಾರಿ ಗಮನದ ಪರಿಣಾಮ ಅರಿವಾಗಿ ಆತನು ಮತ್ತೆ ಪರಸ್ತ್ರಿಯ ಬಗ್ಗೆ ಮನದಲ್ಲಿಯೂ ಚಿಂತಿಸಲಾರೆ ಎಂದು ಮನಸ್ಸಿನಲ್ಲೇ ಸಂಕಲ್ಪಿಸಿದನು. ಆ ಲೋಭದಿಂದಲೇ ಅಲ್ಲವೇ ನಾನು ರಾತ್ರಿಯಿಡಿ ನಿದ್ರಿಸಲಿಲ್ಲ ಎಂದು ಚಿಂತಿಸಿ ಆತನು ಭಗವಾನರೊಂದಿಗೆ ಭಗವಾನ್ ನಿದ್ರೆ ಬಾರದವನಿಗೆ ರಾತ್ರಿಯು ದೀರ್ಘವಾಗಿರುತ್ತದೆ ಎಂದನು. ಅಲ್ಲಿಯೇ ಇದ್ದ ಯುವಕನು ಭಗವಾನ್ ದಣಿದಿರುವಾಗ ಯೋಜನ ದೂರವು ಸಹ ದೀರ್ಘವಾಗಿರುತ್ತದೆ ಎಂದರು. ಆಗ ಭಗವಾನರು ಮೇಲಿನ ಗಾಥೆಯನ್ನು ನುಡಿದರು. ನಂತರ ಎಲ್ಲವೂ ಸುಖಾಂತವಾಯಿತು. 

Friday, 6 February 2015

dhammapada/puppavagga/4.12/sirigutta

ಕಸದ ಕುಪ್ಪೆಯಲ್ಲಿದ್ದರೂ ಕಮಲವು ಮನೋಹರವೇ ಆಗಿರುತ್ತದೆ
ಹೇಗೆ ಹೆದ್ದಾರಿಯಲ್ಲಿ ಬಿಸಾಡಲ್ಪಟ್ಟ ಕಸದ ರಾಶಿಯಲ್ಲಿಯ ಪದ್ಮವು ಸುಪರಿಮಳ ಬೀರಿ ಮನೋಹರವಾಗಿ ಅರಳುವಂತೆ.      (58)
ಹಾಗೆಯೆ ಜೀವರಾಶಿಯ ನಡುವೆ ಅಂಥ ಜನಸಾಮಾನ್ಯರ ನಡುವೆಯಲ್ಲು ಸಮ್ಮಾಸಂಬುದ್ಧರ ಶ್ರಾವಕರು ತನ್ನ ಪ್ರಜ್ಞೆಯಿಂದಾಗಿ ಪ್ರಕಾಶಿಸುತ್ತಾರೆ. (59)
ಗಾಥ ಪ್ರಸಂಗ 4:12
ಭೂತ, ಭವಿಷ್ಯ ಮತ್ತು ವರ್ತಮಾನವನ್ನು ಅರಿತವರು ಯಾರು?

                ಸಿರಿಗುಟ್ಟ ಮತ್ತು ಗರಹದಿನ್ನರೆಂಬ ಇಬ್ಬರು ಮಿತ್ರರು ಶ್ರಾವಸ್ತಿಯಲ್ಲಿದ್ದರು. ಸಿರಿಗುಟ್ಟನು ಬುದ್ಧರ ಅನುಯಾಯಿಯಾದರೆ, ಗರಹದಿನ್ನ ನಿಗಂಠರ ಹಿಂಬಾಲಕನಾಗಿದ್ದನು. ನಿಗಂಠರು ಬುದ್ಧರ ಮೇಲೆ ಅಸೂಯೆ ತಾಳುತ್ತಿದ್ದರು. ಆದ್ದರಿಂದ ಅವರು ಗರಹದಿನ್ನನಿಗೆ ಸಿರಿಗುಟ್ಟನಿಗೂ ತಮ್ಮ ಅನುಯಾಯಿಯಾಗಿ ಮಾಡಬೇಕೆಂದು ಗರಹದಿನ್ನನಲ್ಲಿ ಕೇಳಿಕೊಂಡರು. ಆದ್ದರಿಂದ ಗರಹದಿನ್ನನು ಸಿರಿಗುಟ್ಟನಿಗೆ ಬುದ್ಧರನ್ನು ಹಿಂಬಾಲಿಸುವುದರಿಂದ ಏನು ಪ್ರಯೋಜನ? ನಮ್ಮ ಗುರುಗಳನ್ನು ಹಿಂಬಾಲಿಸು ಎನ್ನುತ್ತಿದ್ದನು. ಇದೇರೀತಿಯಲ್ಲಿ ಬಹಳ ಬಾರಿ ಬಲವಂತಗೈದಾಗ ಒಮ್ಮೆ ಸಿರಿಗುಟ್ಟ ಮೌನ ಮುರಿದು ನಿಮ್ಮ ಗುರುಗಳು ಏನೆನ್ನೆಲ್ಲಾ ಅರಿತಿರುವರು ತಿಳಿಸು ಎಂದನು.
                ಅದಕ್ಕೆ ಆತನು ನಮ್ಮ ಗುರುಗಳು ಭೂತ, ಭವಿಷ್ಯ ಮತ್ತು ವರ್ತಮಾನವೆಲ್ಲಾ ತಿಳಿದಿರುವರು. ಅವರಿಗೆ ತಿಳಿಯದಿರುವುದು ಯಾವುದು ಇಲ್ಲ ಎಂದನು. ಆಗ ಸಿರಿಗುಟ್ಟನು ನಿಗಂಠರಿಗೆ ಆಹಾರ ಆಹ್ವಾನ ನೀಡಿದನು.
                ಆದರೆ ಮನದಲ್ಲಿ ನಿಗಂಠರ ಸರ್ವಜ್ಞತೆ ತಿಳಿಯಬೇಕೆಂದು ಆತನು ಒಂದು ಉಪಾಯ ಮಾಡಿದನು. ಆತ ಒಂದು ಉದ್ದವಾದ ಕಂದಕ ತೋಡಿ ಅದರಲ್ಲಿ ಕಸ ಮತ್ತು ಕಶ್ಮಲಗಳನ್ನು ತುಂಬಿ ಯಾರಿಗೂ ಕಾಣದ ಹಾಗೆ ಅದನ್ನು ಮುಚ್ಚಿ ಅದರ ಮೇಲೆ ಪೀಠಗಳನ್ನು ಇಟ್ಟನು. ಯಾರಾದರೂ ಕುಳಿತರೆ ಸಾಕು ಅವರು ನೇರವಾಗಿ ಕಶ್ಮಲಗಳಿಂದ ಆವೃತವಾದ ಕಂದಕದಲ್ಲಿ ಬೀಳುತ್ತಿದ್ದರು. ಹಾಗೆಯೇ ಪೀಠಗಳ ಮುಂದೆ ಖಾಲಿ ಮಡಿಕೆಗಳನ್ನು ಇಟ್ಟು ಎಲೆಗಳಿಂದ, ಬಟ್ಟೆಗಳಿಂದ ಮುಚ್ಚಿದನು. ನೋಡುಗರಿಗೆ ಅದು ಆಹಾರ ತುಂಬಿದ ಮಡಿಕೆಗಳಾಗಿಯೇ ಕಾಣುತ್ತಿತ್ತು.
                ನಿಗಂಠರು ಬಂದಾಗ, ಅವರನ್ನು ಕಂಡು ಕೈಜೋಡಿಸಿ ಸಿರಿಗುಟ್ಟನು ಮನಸ್ಸಿನಲ್ಲೇ ಹೀಗೆ ಹೇಳಿಕೊಂಡನು ಪೂಜ್ಯರೇ, ನೀವು ಭೂತ, ಭವಿಷ್ಯ ಮತ್ತು ವರ್ತಮಾನವನ್ನು, ಪರರ ಚಿತ್ತವನ್ನು ಬಲ್ಲವರೇ ಆಗಿದ್ದರೆ, ನಿಮಗೆ ಇಲ್ಲಿ ಆಹಾರ ಸಿಗಲಾರದು, ನೀವು ಕಂದಕದಲ್ಲಿ ಬಿದ್ದು ಅಪಮಾನಿತರಾಗುವಿರಿ, ಆದ್ದರಿಂದ ನೀವು ಸರ್ವಜ್ಞರೇ ಆಗಿದ್ದರೆ ಹಿಂದಕ್ಕೆ ಹೊರಡಿ ಎಂದು ಕೇಳಿಕೊಂಡನು.
                ಆದರೆ ಏನೂ ಅರಿಯದ ನಿಗಂಠರು ಒಳಗೆ ಬಂದು ಪೀಠದಲ್ಲಿ ಕುಳಿತಿದ್ದೇ ತಡ ಕಂದಕದಲ್ಲಿ ಬಿದ್ದು ಅಪಮಾನಿತರಾದರು. ಆಗ ಸಿರಿಗುಟ್ಟನು ಹೀಗೆ ಹೇಳಿದನು ನೀವು ಭೂತ, ಭವಿಷ್ಯ ಮತ್ತು ವರ್ತಮಾನ ಬಲ್ಲಿದರೇ ಆಗಿದ್ದರೆ ಪರರ ಚಿತ್ತವನ್ನು ಮತ್ತು ನಿಮ್ಮ ಭವಿಷ್ಯವನ್ನು ನೀವು ಏಕೆ ಅರಿಯಲಿಲ್ಲ? ಅವರೆಲ್ಲಾ ಹೊರಟರು.
*    *    *
                ಇದರಿಂದಾಗಿ ಗರಹದಿನ್ನ ಕುಪಿತನಾದನು. ಆತನು ಸೇಡು ತೀರಿಸಿಕೊಳ್ಳಲು ಬಯಸಿದನು. ಅದಕ್ಕೆ ಉಪಾಯವೊಂದನ್ನು ಮಾಡಿದನು. ಆತನು ಸಹಾ ಬುದ್ಧರನ್ನು ಮತ್ತು ಭಿಕ್ಷು ಸಂಘವನ್ನು ಆಹಾರಕ್ಕೆ ಆಹ್ವಾನಿಸಿದನು. ಗರಹದಿನ್ನನು ಸಹಾ ಆಹಾರದ ಬದಲು ಖಾಲಿ ಮಡಿಕೆಗಳನ್ನು ಇಟ್ಟನು ಮತ್ತು ಆತನು ಮನೆಯಲ್ಲಿ ದೊಡ್ಡ ಕಂದಕ ತೋಡಿ ಅದರಲ್ಲಿ ಇದ್ದಿಲು ಹಾಕಿ ಬೆಂಕಿಯಿಟ್ಟ ಕೆಂಡದ ರಾಶಿ ಮಾಡಿ ಯಾರಿಗೂ ಕಾಣದಂತೆ ಚಾಪೆಗಳನ್ನು ಮೇಲೆ ಹಾಸಿಟ್ಟನು. ಯಾರಾದರೂ ಒಳಗೆ ಬಂದರೆ ನೇರವಾಗಿ ಕೆಂಡಕ್ಕೆ ಬಿದ್ದು ಆಹುತಿಯಾಗುತ್ತಿದ್ದರು.
                ಮಾರನೆಯದಿನ ಬುದ್ಧರು ಮತ್ತು ಭಿಕ್ಷು ಸಂಘವು ಅವರ ಮನೆಗೆ ಬಂದರು. ಬುದ್ಧರು ಮನೆಯೊಳಗೆ ಹೆಜ್ಜೆ ಇಟ್ಟ ಕ್ಷಣದಲ್ಲೇ ಚಾಪೆ, ಕೆಂಡವೆಲ್ಲಾ ಮಾಯವಾಗಿ, ಆ ಮನೆಯಷ್ಟು ದೊಡ್ಡದಾದ ಕಮಲವು ಸೃಷ್ಠಿಯಾಯಿತು. ಅದರಲ್ಲಿ ಬುದ್ಧರು ಮತ್ತು ಭಿಕ್ಷು ಸಂಘವು ಕುಳಿತರು.
                ಇದನ್ನು ಕಂಡ ಗರಹದಿನ್ನ ಗರಬಡಿದವನಂತೆ ಆಶ್ಚರ್ಯಚಕಿತನಾದನು. ಆತನು ಯಾವ ಅಡಿಗೆಯನ್ನು ಮಾಡಿರಲಿಲ್ಲ. ಆತ ವಿಷಯವೆಲ್ಲಾ ಸಿರಿಗುಟ್ಟನಿಗೆ ಹೇಳಿ ಏನು ಮಾಡುವುದೆಂದು ಆತ ಕೇಳಿದನು. ಆಗ ಸಿರಿಗುಟ್ಟನು ಹೋಗಿ ನಿನ್ನ ಪಾತ್ರೆಗಳನ್ನು ನೋಡಿಕೊ ಎಂದನು. ಆತ ನೋಡಿದಾಗ ಅದರಲ್ಲಿ ವಿಭಿನ್ನರೀತಿಯ ಆಹಾರ ಭಕ್ಷಗಳು ಇದ್ದವು. ಅದನ್ನು ಕಂಡು ಆಶ್ಚರ್ಯ ಆನಂದದಿಂದ ಆತ ಕೂಡಿ ಅದನ್ನೇ ಎಲ್ಲರಿಗೂ ಬಡಿಸಿದನು. ಆಗ ಬುದ್ಧರು ಆತನ ದಾನಕ್ಕೆ ಅನುಮೋದನಾ ಮಾಡಿದರು ಮತ್ತು ಹೀಗೆ ಹೇಳಿದರು. ದಡ್ಡ ಜನರು ಪ್ರಜ್ಞೆಯಿಲ್ಲದೆ ತ್ರಿರತ್ನದ ಅಮೂಲ್ಯ ಅನನ್ಯ ಗುಣಗಳನ್ನು ಅರಿಯಲಾರರು. ಆದ್ದರಿಂದ ಅವರು ಕುರುಡರಾಗಿದ್ದಾರೆ. ಆದರೆ ಜ್ಞಾನಿಗಳು ಪ್ರಜ್ಞೆಯುಳ್ಳವರಾಗಿ ದೃಷ್ಟಿಯುಳ್ಳವರಾಗಿದ್ದಾರೆ.
                ನಂತರ ಭಗವಾನರು ಹಂತಹಂತವಾಗಿ ಧಮ್ಮವನ್ನು ವಿವರಿಸಿದರು. ಎಲ್ಲರೂ ಆನಂದಭರಿತರಾದರು. ಪ್ರವಚನದ ಕೊನೆಯಲ್ಲಿ ಸಿರಿಗುಟ್ಟ ಮತ್ತು ಗರಹದಿನ್ನರಿಬ್ಬರು ಸೋತಪನ್ನರಾದರು.


                ಜೇತವನದಲ್ಲಿ ಭಿಕ್ಷುಗಳು ಕೆಂಡದ ಬದಲು ಕಮಲ ಅರಳಿದ್ದನ್ನು ಚಚರ್ಿಸುತ್ತಿದ್ದರು. ಆಗ ಭಗವಾನರು ಈ ಮೇಲಿನ ಗಾಥೆ ನುಡಿದರು.

dhammapada/puppavagga/4.11/godhika

ಅರಹಂತರ ಹಾದಿ ಪತ್ತೆಹಚ್ಚಲಾಗದು
ಯಾರು ಶೀಲಸಂಪನ್ನರೊ, ಎಚ್ಚರಿಕೆಯಲ್ಲೇ ವಿಹರಿಸುವರೋ, ಸಮ್ಮಾ ಪ್ರಜ್ಞೆಯಿಂದಾಗಿ ವಿಮುಕ್ತಿ ಹೊಂದಿರುವರೋ ಅಂತಹವರ ಮಾರ್ಗವನ್ನು ಮಾರನು ಹುಡುಕಲಾರ.         (57)
ಗಾಥ ಪ್ರಸಂಗ 4:11
ಗೋಧಿಕನ ಅರಹತ್ವ ಪ್ರಾಪ್ತಿ

                ಒಮ್ಮೆ ಪೂಜ್ಯ ಗೋಧಿಕರವರು ಮಗಧದ ಇಸಿಗಿಲಿ ಪರ್ವತದ ಬಳಿ ಧ್ಯಾನಿಸುತ್ತಿದ್ದರು. ಆದರೆ ಅವರು ಸಮಾಧಿಪ್ರಾಪ್ತಿಯ ವೇಳೆಗೆ ಕಾಯಿಲೆ ಬೀಳುತ್ತಿದ್ದರು. ಹಿಗಾಗಿ ಅವರ ಪ್ರಯತ್ನ ವ್ಯರ್ಥವಾಯಿತು. ನಂತರ ಆರೋಗ್ಯವಂತರಾದ ಮೇಲೆ ಮತ್ತೆ ಸಮಾಧಿಪ್ರಾಪ್ತಿಯ ವೇಳೆ ಅವರು ಅಸ್ವಸ್ಥರಾಗುತ್ತಿದ್ದರು. ಇದೇರೀತಿ ಅವರು ಆರುಬಾರಿ ಕಾಯಿಲೆಬಿದ್ದರು. ಕೊನೆಗೆ ಅವರು ಅರಹತ್ವ ಪ್ರಾಪ್ತಿಮಾಡಬೇಕೆಂದು ದೃಢವಾಗಿ ನಿರ್ಧರಿಸಿದರು. ಹೀಗಾಗಿ ಅವರು ಮತ್ತೆ ಸಾಧನೆಯಲ್ಲಿ ತಲ್ಲೀನರಾದರು. ಆದರೆ ಫಲ ಸಿಗದಿದ್ದಾಗ ಪಶ್ಚಾತ್ತಾಪಕ್ಕೆ ಗುರಿಯಾಗಿ ತಮ್ಮ ಕತ್ತನ್ನು ಸ್ವಲ್ಪ ಚಾಕುವಿನಿಂದ ಕತ್ತರಿಸಿಕೊಂಡರು. ತಕ್ಷಣ ಆ ನೋವಿನಲ್ಲಿ ಅವರಿಗೆ ಸಮಾಧಿ ಸಿಕ್ಕಿತು. ಹಾಗೆಯೇ ವಿಶುದ್ಧಿಹಂತಗಳನ್ನು ಕ್ಷಿಪ್ರವಾಗಿ ಸಾಧಿಸಿ ಗೋತ್ರಭೂಜ್ಞಾನ ಗಳಿಸಿ ಹಾಗೆಯೇ ಅರಹಂತರಾದರು. ನಂತರ ಪರಿನಿಬ್ಬಾಣ ಪ್ರಾಪ್ತಿಮಾಡಿದರು. ಇವೆಲ್ಲವೂ ನಿಮಿಷಗಳಲ್ಲೇ ಸಾಧಿಸಿದರು.

                ಆಗ ಮಾರನೆಂಬ ಜೀವಿಯು ಗೋಧಿಕರ ವಿನ್ಯಾನವನ್ನು ಹುಡುಕಿದನು. ಎಲ್ಲ್ಲಿ ಗೋಧಿಕರವರು ಹುಟ್ಟಿರಬಹುದೆಂದು ಹುಡುಕಿ ಪ್ರಯೋಜನವಾಗದೆ ಭಗವಾನರಲ್ಲಿ ಪ್ರಶ್ನಿಸಿದಾಗ, ಭಗವಾನರು ಹೀಗೆ ಉತ್ತರಿಸಿದರು ಗೋತಿಕಾ, ತನ್ಹಾವನ್ನು ಕಿತ್ತುಹಾಕಿ ನಿಬ್ಬಾಣ, ಪರಿನಿಬ್ಬಾನ ಪ್ರಾಪ್ತಿಮಾಡಿದ್ದಾನೆ. ಓ ಮಾರ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನಿನ್ನಂತಹ ನೂರು ಮಾರರು ಹುಡುಕಿದರೂ ಆತನು ಕಾಣಲಾರ ಎಂದು ಹೇಳಿ ಮೇಲಿನ ಗಾಥೆ ನುಡಿದರು. 

dhammapada/puppavagga/4.10/mahakassapa

ಶೀಲ ಸುರಭಿಯು ದೇವತೆಗಳವರೆವಿಗೂ ಹಬ್ಬುತ್ತದೆ
ತಿಳಿಯಾಗಿವೆ ಈ ಸುಗಂಧಗಳಾದ ತಗರ, ಚಂದನಗಳು. ಆದರೆ ಶೀಲವಂತನ ಸುಗಂಧವಂತು ಉತ್ತಮೋತ್ತಮತೆಯಿಂದ ಕೂಡಿ ದೇವತೆಗಳ ನಡುವೆ ಸಹಾ ಪ್ರಸರಿಸುತ್ತದೆ.           (56)
ಗಾಥ ಪ್ರಸಂಗ 4:10
ಮಹಾಕಸ್ಸಪರವರ ಶ್ರೇಷ್ಠಶೀಲತೆ

                ಒಮ್ಮೆ ಮಹಾಕಸ್ಸಪರವರು ನಿರೋಧ ಸಮಾಪತ್ತಿಯಿಂದ ಮೇಲೆದ್ದರು. ಅವರು ರಾಜಗೃಹಕ್ಕೆ ಆಹಾರಕ್ಕಾಗಿ ನಡೆದರು. ಯಾರೇ ಆಗಲಿ ನಿರೋಧ ಸಮಾಪತ್ತಿಯಿಂದ ಹೊರಬಂದಾಗ ಅಂತಹವರಿಗೆ ನೀಡುವ ದಾನ ಮಹತ್ಫಲವಾಗಿರುತ್ತದೆ. ಇದನ್ನು ಬಲ್ಲ ದೇವೇಂದ್ರನಾದ ಸಕ್ಕ ಅವರಿಗೆ ದಾನ ನೀಡುವುದಾಗಿ ಸಂಕಲ್ಪಿಸಿದನು. ಆದರೆ ಮಹಾ ಕಸ್ಸಪನವರು ಬಡವರಿಗೆ ದಾನದ ಅವಕಾಶ ನೀಡುವ ಉದ್ದೇಶದಿಂದ ಹೊರಟಿದ್ದರು. ಇದನ್ನು ಅರಿತ ಸಕ್ಕರವರು ಬಡ ನೇಯ್ಗೆಯವರಂತೆ, ಪತ್ನಿ ಸುಜಾತಳೊಂದಿಗೆ ರಾಜಗೃಹದಲ್ಲಿ ಕಾಣಿಸಿಕೊಂಡು ಪೂಜ್ಯರೇ, ನಮಗೂ ದಾನದ ಅವಕಾಶ ನೀಡಿ ಎಂದು ಬೇಡಿಕೊಂಡರು. ಕಸ್ಸಪರವರು ಆಹಾರ ಸ್ವೀಕರಿಸಿದರು. ಅದರ ಪರಿಮಳವು ಅತ್ಯದ್ಭುತವಾಗಿತ್ತು. ತಕ್ಷಣ ಮಹಾಕಸ್ಸಪರಿಗೆ ಈತ ಇಂದ್ರನೆಂದು ಗೊತ್ತಾಗಿಹೋಯಿತು. ಪುಣ್ಯಕ್ಕಾಗಿ ಇನ್ನೊಮ್ಮೆ ಬಡವರ ಪಾಲನ್ನು ಕಸಿಯಬೇಡ ಎಂದು ಸಕ್ಕನಿಗೆ ಉಪದೇಶ ನೀಡಿದರು.

                ಇಲ್ಲಿ ಭಗವಾನರು ಕಸ್ಸಪನಿಗೆ ಇಂದ್ರ ಮತ್ತು ಪತ್ನಿ ಸುಜಾತ ದಾನ ನೀಡಿದ್ದನ್ನು ಕಂಡರು. ಅದನ್ನು ಭಿಕ್ಷುಗಳಿಗೆ ಹೇಳಿದರು. ಆಗ ಭಿಕ್ಷುಗಳಿಗೂ ಸಹಾ ಆಶ್ಚರ್ಯವಾಯಿತು. ಶೀಲದ ನಿರೋಧ ಸಮಾಪತ್ತಿಯ ಮಹತ್ವ ಗೊತ್ತಾಯಿತು. ಶೀಲವಂತನ ಬಗ್ಗೆ ದೇವತೆಗಳಿಗೂ ಗೊತ್ತಾಗುತ್ತದೆಯೇ? ಎಂದು ಪ್ರಶ್ನಸಿದಾಗ ಭಗವಾನರು ಈ ಗಾಥೆಯನ್ನು ನುಡಿದರು. 

dhammapada/puppavagga/4.9/question of ananda

ಶೀಲದ ಸುಗಂಧವು ಎಲ್ಲೆಡೆ ಪ್ರಸರಿಸುತ್ತದೆ
ಪುಷ್ಪಗಳ ಗಂಧವು ವಾಯುವಿನ ಎದುರು ದಿಕ್ಕಿನಲ್ಲಿ ಹರಡಲಾರದು, ಹಾಗೆಯೇ ಚಂದನ (ಶ್ರೀಗಂಧ), ತಗರ, ಮಲ್ಲಿಗೆಯ ಪರಿಮಳವು ಸಹಾ. ಆದರೆ ಸಂತರ ಯಶೋಗಂಧವು ವಾಯುವಿಗೆ ಎದುರಾಗಿ ಹಬ್ಬುತ್ತದೆ. ಸತ್ಪುರುಷರ ಶೀಲ ಸುಗಂದವು ಸರ್ವದಿಕ್ಕುಗಳಿಗೂ ಪ್ರಸರಿಸುತ್ತದೆ.     (54)
ಚಂದನದ (ಶ್ರೀಗಂಧ), ತಗರದ, ಉಪ್ಪಲದ (ನೀಲಿ ಕಮಲದ), ಮಲ್ಲಿಗೆಗಳ ಇವೆಲ್ಲಾ ಸುಗಂಧಗಳಿಗಿಂತ ಶೀಲ ಸುಗಂಧವು ಅನುತ್ತರವಾಗಿದೆ.      (55)
ಗಾಥ ಪ್ರಸಂಗ 4:9
ಪೂಜ್ಯ ಆನಂದರವರ ಪ್ರಶ್ನೆ

                ಒಂದುದಿನ ಪೂಜ್ಯ ಆನಂದರವರು ಭಗವಾನರ ಬಳಿಗೆ ಬಂದು ಈ ರೀತಿ ಪ್ರಶ್ನಿಸಿದರು ಭಗವಾನ್, ಮೂರು ಬಗೆಯ ಪರಿಮಳಗಳಿವೆ. ಅವೆಂದರೆ ಬೇರಿನ ಪರಿಮಳ, ಕಾಂಡದ ಪರಿಮಳ, ಹೂವಿನ ಪರಿಮಳ. ಆದರೆ ಇವೆಲ್ಲವೂ ಗಾಳಿಗೆ ಎದುರಾಗಿ ತಮ್ಮ ಪರಿಮಳ ಹಬ್ಬಿಸಲಾರವು. ಪೂಜ್ಯರಿಗೆ ಸರ್ವ ದಿಕ್ಕುಗಳಲ್ಲೂ ಪ್ರಸರಿಸುವಂತಹ ಪರಿಮಳ ಗೊತ್ತಿರಲೇಬೇಕು, ದಯವಿಟ್ಟು ತಿಳಿಸಬೇಕು.

                ಆಗ ಭಗವಾನರು ಹೀಗೆಂದರು ಆನಂದ, ಒಬ್ಬನು ತಿಸರಣು ಹೊಂದಿ ಪಂಚಶೀಲಗಳನ್ನು ಪಾಲಿಸಿ, ದಾನಿಯಾಗಿರುವಾಗ ಅಂತಹ ಮನುಷ್ಯನ ಶೀಲದ ಸುಗಂಧವು ಸರ್ವ ದಿಕ್ಕುಗಳಲ್ಲೂ ವ್ಯಾಪಿಸುತ್ತದೆ. ಎಲ್ಲರೂ ಆತನನ್ನು ಪ್ರಶಂಸಿಸುತ್ತಾರೆ ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು. 

dhammapada/puppavagga/4,8/visaaka

ಸಾಧ್ಯವಾದಷ್ಟು ಪುಣ್ಯ ಕಾರ್ಯಗಳನ್ನು ಮಾಡಲಿ
ಹೇಗೆ ಪುಷ್ಪರಾಶಿಯಿಂದ ಬಹು ಮಾಲೆಗಳನ್ನು ಮಾಡಬಹುದೋ, ಹಾಗೆಯೇ ಜನನ-ಮರಣ ಅನುಭವಿಸುವ ಮನುಷ್ಯ ಸಹಾ ಅನೇಕ ಕುಶಲ (ಪುಣ್ಯ) ಕಾರ್ಯಗಳನ್ನು ಮಾಡಬಹುದು.          (53)
ಗಾಥ ಪ್ರಸಂಗ 4:8
ಪರಮಶ್ರದ್ಧಾಳು ಉಪಾಸಿಕೆ ವಿಸಾಖ

                ವಿಶಾಖಳು ಭದ್ದಿಯಾ (ಧನಂಜಯ)ನ ಮಗಳು ಮತ್ತು ಮೆಂಡಕನ ಮೊಮ್ಮಗಳಾಗಿದ್ದಳು. ಆಕೆಯ ತಾಯಿಯ ಹೆಸರು ಸುಮನದೇವಿ. ಮೆಂಡಕನು ಬಿಂಬಸಾರನ ಸಾಮ್ರಾಜ್ಯದ ಐವರು ಐಶ್ವರ್ಯವಂತರಲ್ಲಿ ಒಬ್ಬನಾಗಿದ್ದನು. ವಿಸಾಖಳು ಏಳು ವರ್ಷದವಳು ಆಗಿದ್ದಾಗ ಬುದ್ಧರು ಭದ್ದಿಯನ ಬಳಿ ಬಂದಿದ್ದರು. ಆ ಸಂದರ್ಭದಲ್ಲಿ ಸಿರಿವಂತ ಮೆಂಡಕ ವಿಸಾಖ ಮತ್ತು ಆಕೆಯ ಸಖಿಯರಿಂದ ಬುದ್ಧರಿಗೆ ವಂದಿಸುವಂತೆ ಮಾಡಿದ್ದನು. ಆಗ ಬುದ್ಧರ ಧಮ್ಮವನ್ನು ಆಲಿಸಿದ ಆಕೆ, ಮೆಂಡಕ ಮತ್ತು ಆಕೆಯ ಎಲ್ಲಾ ಸಖಿಯರು ಸೋತಪತ್ತಿ ಫಲ ಪಡೆದರು.
                ವಿಸಾಖ ಯುವತಿಯಾದಾಗ ಆಕೆಯ ವಿವಾಹವು ಮಿಗಾರನ ಮಗ ಪುಣ್ಣವರ್ಧನನೊಡನೆ ಆಯಿತು. ಆ ಸಂದರ್ಭದಲ್ಲಿ ಧನಂಜಯನು ತನ್ನ ಮಗಳಿಗೆ ಈ ಬುದ್ದಿವಾದ ನೀಡಿದನು. ಚಾಡಿ ಹೇಳಬೇಡ, ಪರರ ವದಂತಿ ಕೇಳಬೇಡ, ಹಿಂತಿರುಗಿಸದಿದ್ದರೂ ಸಹಾಯ ಮಾಡು, ಹಿರಿಯರಿಗೆ ಎದ್ದು ಗೌರವ ನೀಡು, ಎಲ್ಲರಿಗೆ ಬಡಿಸಿ ತಿನ್ನು, ಎಲ್ಲಾ ಕರ್ತವ್ಯ ಮುಗಿಸಿ ನಿದ್ರಿಸು, ಗಂಡ ಅತ್ತೆ-ಮಾವರೊಂದಿಗೆ ಎಚ್ಚರಿಕೆಯಿಂದ ವತರ್ಿಸು ಮತ್ತು ಅವರನ್ನು ದೇವತೆಗಳಂತೆ ಕಾಣು.
                ಒಮ್ಮೆ ಮಿಗಾರ ತಿನ್ನುತ್ತಿರುವಾಗ ಭಿಕ್ಷುವೊಬ್ಬನು ಅಹಾರಕ್ಕಾಗಿ ನಿಂತನು. ಆದರೆ ಮಿಗಾರನು ಅದನ್ನು ಪೂರ್ಣವಾಗಿ ಅಲಕ್ಷಿಸಿದನು. ಇದನ್ನು ಕಂಡ ವಿಸಾಖ ಭಿಕ್ಷುವಿಗೆ ಈ ರೀತಿ ಹೇಳಿದಳು ಕ್ಷಮಿಸಿ ಪೂಜ್ಯರೇ, ನನ್ನ ಮಾವನವರು ಹಳಸಿದ್ದನ್ನು ಮಾತ್ರ ತಿನ್ನುತ್ತಿರುವರು ಇದನ್ನು ಕೇಳಿ ಮಿಗಾರನಿಗೆ ಅತಿ ಕ್ರೋಧವುಂಟಾಗಿ ಆಕೆಯನ್ನು ಮನೆ ಬಿಟ್ಟು ಹೋಗು ಎಂದನು. ಆದರೆ ವಿಸಾಖಲು ಹೊರಗೆ ಹೋಗಲಿಲ್ಲ. ಬದಲಾಗಿ ಆಕೆ ಎಂಟು ಜನ ಶ್ರೀಮಂತರನ್ನು ತನ್ನ ತಂದೆಗೆ ಕರೆತರಲು ಕಳುಹಿಸಿದಳು. ಏಕೆಂದರೆ ಆಕೆ ದೋಷಿಯೋ ಅಥವಾ ನಿದರ್ೊಷಿಯೋ ತಿಳಿಯಲೆಂದು. ಅವರು ಬಂದು ಆಕೆಗೆ ಕಾರಣ ಕೇಳಿದರು. ಅದಕ್ಕೆ ಆಕೆ ಹೀಗೆಂದಳು :
                ಭಿಕ್ಷುವು ಬಂದು ನಿಂತಿದ್ದರೂ ಸಹಾ ಅವರು ತಿನ್ನುವುದನ್ನು ಕಂಡ ನನಗೆ ಹೀಗೆನಿಸಿತು. ಏನೆಂದರೆ ಇವರು ಹಿಂದಿನ ಜನ್ಮದ ಫಲ ಮಾತ್ರ ಅನುಭವಿಸುತ್ತಿದ್ದಾರೆ, ಈಗ ಯಾವ ಹೊಸ ಪುಣ್ಯಕರ್ಮ ಮಾಡುತ್ತಿಲ್ಲ. ಆದ್ದರಿಂದ ನಾನು ಅವರಿಗೆ ಹಳಸಿದ್ದನ್ನು ತಿನ್ನುತ್ತಿದ್ದಾರೆ ಎಂದು ಹೇಳಿದೆ ಎಂದು ನುಡಿದಾಗ ಅಲ್ಲಿ ನೆಲೆಸಿದ್ದ ಹಿರಿಯರು ಆಕೆಯನ್ನು ನಿದರ್ೊಷಿಯೆಂದು ತೀಪರ್ಿತ್ತರು.
                ನಂತರ ವಿಸಾಖಳು ನಾನು ಬುದ್ಧ ಭಗವಾನರಲ್ಲಿ ಅಚಲ ಶ್ರದ್ಧೆಯನ್ನು ಹೊಂದಿರುವವಳು. ಅವರಿಗೆ, ಭಿಕ್ಷುಗಳಿಗೆ ದಾನ ನೀಡದ ಮನೆಯಲ್ಲಿ ನಾನು ವಾಸಿಸಲಾರೆ. ನನಗೆ ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ದಾನ ನೀಡಲು ಅನುಮತಿ ಬೇಕು ಎಂದಾಗ ಅವರೆಲ್ಲರೂ ಆಕೆಯ ನಿಯಮಗಳಿಗೆ ಒಪ್ಪಿದರು.
                ನಂತರ ಆಕೆಯು ಬುದ್ಧರಿಗೆ ಮತ್ತು ಭಿಕ್ಷು ಸಂಘಕ್ಕೆ ಆಹ್ವಾನಿಸಿದಳು. ಆ ದಾನ ಸಂದರ್ಭದಲ್ಲಿ ಆಕೆ ತನ್ನ ಮಾವನಿಗೂ ಆಹ್ವಾನಿಸಿದಳು, ಆದರೆ ಆತ ಬರಲಿಲ್ಲ. ನಂತರ ಬೋಜನದ ನಂತರ ಬುದ್ಧರ ಬೋಧನೆಯನ್ನು ಆಲಿಸಲು ಆಕೆ ಮಾವನಿಗೆ ಆಹ್ವಾನಿಸಿದಳು. ಮಾವನಿಗೂ ಹೋಗಬೇಕೆನಿಸಿತು. ಆದರೆ ನಿಗಂಠರು ಆತನಿಗೆ ಹೋಗಲು ಬಿಡಲಿಲ್ಲ. ಆದರೆ ಆತ ಹೋಗಲು ಅಪೇಕ್ಷಿಸಿದಾಗ ಪರದೆಯ ಹಿಂದೆ ಧಮ್ಮ ಆಲಿಸಲು ಅವರು ಅಪ್ಪಣೆಯಿತ್ತರು. ಆದರೆ ಆತನು ಬುದ್ಧ ಧಮ್ಮ ಆಲಿಸಿದಾಗ ಸೋತಪತ್ತಿ ಫಲ ಪಡೆದನು. ಆತನಿಗೆ ಅತ್ಯಧಿಕ ಆನಂದವುಂಟಾಯಿತು. ಇದಕ್ಕೆ ಕಾರಣಳಾದ ಸೊಸೆಗೆ ಆತ ಸ್ತುತಿಸಿ ಆಕೆಯನ್ನು ತನ್ನ ಮಾತೆಯೆಂದು ಘೋಷಿಸಿದನು. ಅಂದಿನಿಂದ ಆಕೆಯನ್ನು ಮಿಗಾರಮಾತೆಯೆಂದು ಸಹಾ ಕರೆಯಲಾರಂಭಿಸಿದರು.
                ವಿಸಾಖಳಿಗೆ 10 ಗಂಡು ಮತ್ತು 10 ಹೆಣ್ಣು ಮಕ್ಕಳು ಹುಟ್ಟಿದರು. ಅವರಿಗೂ ಸಹಾ ಮಕ್ಕಳಾದರು. ವಿಸಾಖಳಿಗೆ ಆಕೆಯ ತಂದೆಯು ಮದುವೆಯ ದಿನದಂದು ಅತ್ಯಮೂಲ್ಯದ ಚಿನ್ನ, ರತ್ನಗಳಿಂದ ಕೂಡಿದ ದೊಡ್ಡ ಆಭರಣವೊಂದನ್ನು ಉಡುಗೊರೆಯಾಗಿ ನೀಡಿದ್ದನು. ಒಂದುದಿನ ಆಕೆಯು ಅದನ್ನು ಧರಿಸಿ ವಿಹಾರಕ್ಕೆ ಬಂದಿದ್ದಳು. ಆದರೆ ಅದು ತುಂಬಾ ಭಾರವೆನಿಸಿ ಅದನ್ನು ತೆಗೆದು ಶಾಲಿನಲ್ಲಿ ಮಡಚಿ ದಾಸಿಯ ಕೈಗೆ ನೀಡಿದ್ದಳು. ಅವರು ಹಿಂತಿರುಗಿದರು, ಆದರೆ ಆ ದಾಸಿಯು ಮರೆತು ವಿಹಾರದಲ್ಲೇ ಬಿಟ್ಟು ಬಂದಿದ್ದಳು. ಆದರೆ ಪೂಜ್ಯ ಆನಂದರವರಿಗೆ ಅದು ಸಿಕ್ಕಾಗ ಅದನ್ನು ಜೋಪಾನವಾಗಿ ಒಂದೆಡೆಯಿಟ್ಟರು. ಇಲ್ಲಿ ವಿಸಾಖಳಿಗೆ ತನ್ನ ಆಭರಣ ನೆನಪಾದಾಗ ದಾಸಿಗೆ ಕೇಳಿದಾಗ ಆಕೆಯ ಮರೆತು ಬಂದಿರುವುದಾಗಿ ಹೇಳಿದಳು. ವಿಸಾಖಳು ದಾಸಿಗೆ ಈ ರೀತಿ ಹೇಳಿದಳು ಹೋಗು, ಆ ಅಮೂಲ್ಯವಾದ ಆಭರಣವನ್ನು ಹುಡುಕು, ಸಿಕ್ಕರೆ ಎತ್ತಿಕೊಂಡು ಬಾ, ಒಂದುವೇಳೆ ಪೂಜ್ಯ ಆನಂದರವರು ಅದನ್ನು ಎತ್ತಿಟ್ಟಿದ್ದರೆ ಅದನ್ನು ಹಿಂತಿರುಗಿ ತರಬೇಡ. ನಾನು ಅದನ್ನು ಆನಂದ ಭಂತೆಯವರಿಗೆ  ಅದನ್ನು ದಾನವಾಗಿ ನೀಡುತ್ತೇನೆ ಎಂದಳು. ಆದರೆ ನಂತರ ಆನಂದರವರು ಅದನ್ನು ದಾನವಾಗಿ ಸ್ವೀಕರಿಸಲಿಲ್ಲ. ಆಗ ಆಕೆಯು ಅದನ್ನು ಮಾರಿ ಆ ಹಣದಿಂದ ವಿಹಾರ ಕಟ್ಟಿಸಲು ನಿರ್ಧರಿಸಿದಳು. ಆದರೆ ಅದನ್ನು ತೆಗೆದುಕೊಳ್ಳುವಷ್ಟು ಹಣ ಯಾರ ಬಳಿಯೂ ಇರಲಿಲ್ಲ. ಆಗ ಸ್ವಯಂ ವಿಸಾಖಳೇ ಅದನ್ನು ಒಂಭತ್ತು ಲಕ್ಷ ಕೋಟಿ ಮತ್ತು ಒಂದು ಲಕ್ಷಕ್ಕೆ ತೆಗೆದುಕೊಂಡು ಆ ಹಣದಿಂದ ಶ್ರಾವಸ್ತಿಯ ಪೂರ್ವ ಜಾಗದಲ್ಲಿ ಒಂದು ದೊಡ್ಡ ವಿಹಾರವನ್ನು ಕಟ್ಟಿಸಿದಳು. ಅದು ಪುಬ್ಬಾರಾಮ ಎಂದು ಕರೆಯಲ್ಪಟ್ಟಿತ್ತು.
                ಈ ರೀತಿಯಾಗಿ ಆಕೆಯು ಸರ್ವರೀತಿಯಲ್ಲಿ ಸಂಘಕ್ಕೆ ಹಿರಿಯ ದಾನಿಯಾಗಿದ್ದಳು. ಆಕೆಯ ಎಲ್ಲಾ ಬಯಕೆಗಳು ಪೂತರ್ಿಗೊಂಡಿತ್ತು. ಆಕೆ ಬುದ್ಧರಿಗೆ ಮತ್ತು ಸಂಘಕ್ಕೆ ಸರ್ವರೀತಿಯ ದಾನ ಮಾಡಿದ್ದಳು. ಅದನ್ನೆಲ್ಲಾ ನೆನೆಸಿಕೊಂಡು ಆಕೆಯು ವಿಹಾರದಲ್ಲಿ ಸುತ್ತಾಡುತ್ತಾ ಆನಂದೋದ್ಗಾರ ಮಾಡುತ್ತಿದ್ದಳು. ಅದನ್ನು ಕೇಳಿಸಿಕೊಂಡ ಭಿಕ್ಷುಗಳು ಆಕೆಗೆ ಮತಿ ಏನಾದರೂ ಕೆಟ್ಟಿದೆಯೇ? ಆಕೆ ಈ ರೀತಿ ಏಕೆ ಹಾಡನ್ನು ಹಾಡುತ್ತಿದ್ದಾಳೆ? ಎಂದು ಅವರು ಭಗವಾನರ ಬಳಿಗೆ ಬಂದು ಈ ವಿಷಯ ಕೇಳಿದರು.

                ಆಗ ಭಗವಾನರು ಹೀಗೆ ಹೇಳಿದರು ಭಿಕ್ಷುಗಳೇ, ಆಕೆಗೆ ಏನೂ ಆಗಿಲ್ಲ. ಆಕೆ ಸುಆರೋಗ್ಯವಾಗಿಯೇ ಇದ್ದಾಳೆ. ಆಕೆಯ ಸಕಲ ಇಚ್ಛೆಗಳು ಪೂರ್ಣವಾಗಿರುವುದರಿಂದಾಗಿ ಆಕೆಯು ಈ ರೀತಿ ಆನಂದೋದ್ಗಾರವನ್ನು ಮಾಡುತ್ತಿದ್ದಾಳೆ ಅಷ್ಟೇ. ಆಕೆ ಈಗ ಮಾತ್ರವಲ್ಲ, ಆಕೆ ಹಿಂದೆ ಪದಮೋತ್ತರ ಬುದ್ಧರ ಕಾಲದಲ್ಲಿ ವಿಸಾಖಳ ರೀತಿಯಲ್ಲಿ ದಾನಿ ಆಗಿದ್ದ ಹಿರಿಯ ದಾನಿ ಉಪಾಸಿಕೆಯನ್ನು ಕಂಡು ಆಕೆಯಂತೆ ನಾನು ಸಹಾ ಮಹಾ ದಾನಿಯಾಗಬೇಕೆಂದು ಆಕೆ ಆ ಜನ್ಮದಲ್ಲೇ ಏಳು ದಿನಗಳ ದಾನ ಮಾಡಿ ತನ್ನ ಇಚ್ಛೆಯನ್ನು ಭಗವಾನರ ಬಳಿ ಹೇಳಿಕೊಂಡಾಗ ಆಗಿನ ಪದಮೋತ್ತರ ಬುದ್ಧರು ತಮ್ಮ ಸರ್ವಜ್ಞತಾ ಚಕ್ಷುವಿನಿಂದ ಈಕೆಯ ಭವಿಷ್ಯ ನೋಡಿ ಅವರು ಸಹಾ ನನ್ನ ಕಾಲದಲ್ಲಿ (ಗೋತಮ ಬುದ್ಧರ ಕಾಲದಲ್ಲಿ) ಈಕೆಯ ಇಚ್ಛೆ ಪೂತರ್ಿಯಾಗುವುದೆಂದು ತಿಳಿಸಿದರು. ಹೀಗೆ ಆಕೆಯು ಅಂದಿನಿಂದ ಎಲ್ಲಾ ಜನ್ಮ ಜನ್ಮಗಳಲ್ಲಿ ದಾನ, ಶೀಲ ರೂಢಿಸಿಕೊಂಡು ಬಂದಿದ್ದಾಳೆ. ಹೀಗೆ ಆಕೆಯ ಹಿಂದಿನ ಮತ್ತು ಈಗಿನ ಇಚ್ಛೆ ಪೂತರ್ಿಯಾಗಿದ್ದರಿಂದ ಆಕೆ ಹಾಡನ್ನು ಹಾಡಿದ್ದಾಳೆ. ಹೂವಿನಿಂದ ಮಾಲೆಗಾರನು ವಿವಿಧರೀತಿಯ ಹೂಮಾಲೆಗಳನ್ನು ನಿಮರ್ಿಸುವಂತೆ ಆಕೆಯು ಮಾಡಿರುವ ಪುಣ್ಯಗಳು ಅನೇಕ ಎಂದು ಹೇಳಿ ಭಗವಾನರು ಮೇಲಿನ ಗಾಥೆಯನ್ನು ನುಡಿದರು.