Friday 18 September 2015

dhammapada/bhikkuvagga/25.10/nangalakulabhikku

ತನಗೆ ತಾನೇ ರಕ್ಷಕ (ಶಿಲ್ಪಿ)
"ನಿನ್ನಿಂದಲೇ ನಿನ್ನನ್ನು ಖಂಡಿಸಿಕೋ,
ನಿನ್ನಿಂದಲೇ ನಿನ್ನನ್ನು ಪರೀಕ್ಷಿಸಿಕೋ,
ಹೀಗೆ ಸ್ವ-ರಕ್ಷಿತನಾಗಿ, ಸ್ಮೃತಿಯಿಂದ (ಜಾಗರೂಕತೆಯಿಂದ)
ಓ ಭಿಕ್ಷು ಸುಖವಾಗಿ ಜೀವಿಸು.       (379)

"ತನಗೆ ತಾನೇ ನಾಥ (ಒಡೆಯ/ಪ್ರಭು)
ತನಗೆ ತಾನೇ ಗತಿ (ಶರಣು / ರಕ್ಷಕ)
ಆದ್ದರಿಂದ ನಿನ್ನನ್ನು ಹೇಗೆ ವಾಣಿಜನು (ವ್ಯಾಪಾರಿ)
ಅಶ್ವವನ್ನು ನಿಯಂತ್ರಿಸುವನೋ ಹಾಗೇ
ನಿಯಂತ್ರಿಸಿಕೋ (ಸಂಯಮಿತನಾಗು)."        (380)

ಗಾಥ ಪ್ರಸಂಗ 25:10
ನಂಗಲಕುಲ ಭಿಕ್ಷುವಿನ ಸ್ವಯಂ ಶಿಕ್ಷಣ

            ಒಬ್ಬ ಬಡವನಿದ್ದನು. ಆತನು ಪರರಲ್ಲಿ ಕೆಲಸಮಾಡಿ ತನ್ನ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದನು. ಆತನು ನೇಗಿಲನ್ನು ಹೊರುತ್ತಾ ಸಿಂಹದ ಚಿಂದಿ ಬಟ್ಟೆಯಲ್ಲಿರುವುದನ್ನು ಕಂಡ ಭಿಕ್ಷುವೊಬ್ಬನು ಆತನಿಗೆ ಹೀಗೆ ಸಲಹೆ ನೀಡಿದನು: "ಈ ರೀತಿ ಜೀವನವನ್ನೇ ನಡೆಸುವಾಗ ಭಿಕ್ಷುವೇಕೆ ಆಗಬಾರದು."
            "ಭಂತೆ, ನನಗೆ ಭಿಕ್ಷುವನ್ನಾಗಿ ಯಾರುತಾನೇ ಮಾಡಿಯಾರು?"
            "ನಾನೇ ನಿನಗೆ ಭಿಕ್ಷುವನ್ನಾಗಿಸುವೆ, ಆದರೆ ನೀನು ಇಚ್ಛಿಸಿದರೆ ಮಾತ್ರ."
            "ಹಾಗಾದರೆ ಸರಿ ಭಂತೆ, ನಾನು ಒಪ್ಪಿರುವೆ."
            ಆಗ ಆ ಭಿಕ್ಷುವು ತಾನೇ ಕೈಯಾರೆ ಆತನಿಗೆ ಸ್ನಾನಮಾಡಿಸಿ, ಭಿಕ್ಷುವಸ್ತ್ರ ನೀಡಿ, ಜೇತವನಕ್ಕೆ ಕರೆದೊಯ್ದು ದೀಕ್ಷೆ ನೀಡಿಸಿದನು. ನಂತರ ಆತನ ಹಳೇ ವಸ್ತ್ರ ಹಾಗು ನೇಗಿಲನ್ನು ವಿಹಾರದ ಗಡಿಯ ಬಳಿಯಲ್ಲಿರುವ ವೃಕ್ಷಕ್ಕೆ ನೇತುಹಾಕಿದನು. ಅಲ್ಲಿಂದ ಆತನಿಗೆ ನಂಗಲಕುಲ ಥೇರನೆಂದು ಕರೆಯಲಾರಂಭಿಸಿದರು (ನೇಗಿಲ ಭಿಕ್ಷು.)

            ಕೆಲಕಾಲ ಹೀಗೆ ಜೀವಿಸಿದ ನಂತರ ಆತನಿಗೆ ಶ್ರೀಮಂತರ ಉಡುಗೊರೆಗಳನ್ನು ಕಂಡು ಪ್ರಾಪಂಚಿಕ ಜೀವನದತ್ತ ಒಲವು ಹೆಚ್ಚಾಗಿ, ಭಿಕ್ಷುಜೀವನದೊಂದಿಗೆ ಅಸಂತೃಪ್ತನಾಗುತ್ತಿದ್ದನು.
            ಆಗ ಆತನು ಪ್ರಾಪಂಚಿಕನಾಗಲು ವೃಕ್ಷದ ಬಳಿಗೆ ಬಂದು, ಆಗ ಪುನಃ ಈ ರೀತಿ ಪರೀಕ್ಷಿಸಿಕೊಳ್ಳುತ್ತಿದ್ದನು. ಸ್ವ-ಖಂಡನೆ ಮಾಡಿಕೊಳ್ಳುತ್ತಿದ್ದನು: "ಓಹ್ ನಾಚಿಕೆಗೇಡು, ಲಜ್ಜಾಹೀನನೇ, ನೀವು ಪುನಃ ಈ ಹಳೆಯ ಚಿಂದಿವಸ್ತ್ರಕ್ಕೆ ಆಸೆಬಿದ್ದೆಯಾ? ಪುನಃ ಆ ನೇಗಿಲಿನ ಕಷ್ಟದ ಬದುಕಿಗೆ, ಪ್ರಾಪಂಚಿಕತೆಯ ಪಾಪದ ಜೀವನಕ್ಕೆ ಹೋಗುತ್ತಿರುವೆಯಾ?" ಆಗ ಆತನು ಪುನಃ ಜಾಗ್ರತನಾಗಿ ಧಮ್ಮಜೀವನಕ್ಕೆ ಸ್ಥಿರನಾಗಿ ಹಿಂತಿರುಗುತ್ತಿದ್ದನು. ಇದೇರೀತಿ ಆತನು ಮನಸ್ಸು ಚಂಚಲವಾದಾಗೆಲ್ಲಾ ಆ ಮರದ ಬಳಿಗೆ ಬಂದು ನಂತರ ಸ್ವಯಂ ಖಂಡಿಸಿಕೊಳ್ಳುತ್ತಾ ಪುನಃ ಸ್ಥಿರಚಿತ್ತದವನಾಗಿ ಹಿಂತಿರುಗುತ್ತಿದ್ದನು. ಇದೇರೀತಿ ಹಲವಾರುಬಾರಿ ನಡೆಯಿತು.
            ಕೆಲವು ಭಿಕ್ಷುಗಳಿಗೆ ಆತನೇಕೆ ಆ ಮರದ ಬುಡದ ಬಳಿ ಆಗಾಗ್ಗೆ ಹೋಗುವನು ಎಂದು ಕುತೂಹಲ ತಡೆಯಲಾರದೆ ಆತನಿಗೆ ಹೀಗೆ ಕೇಳಿದರು: "ಸೋದರ, ನಂಗಲಕುಲ, ಅಲ್ಲಿಗೇಕೆ ಹೋಗಿದ್ದೆ".
            "ನನ್ನ ಗುರುಗಳನ್ನು ಕಾಣಲು ಹೋಗಿದ್ದೆನು" ಎಂದು ಉತ್ತರಿಸಿ ಸುಮ್ಮನಾಗುತ್ತಿದ್ದನು. ಕೊನೆಗೊಮ್ಮೆ ದೃಢಸಾಧನೆಯಿಂದ ಆತನು ಅರಹಂತನೇ ಆಗಿಬಿಟ್ಟನು. ಹೀಗಾಗಿ ಆತನು ಮರದ ಬಳಿ ಹೋಗುವುದನ್ನು ನಿಲ್ಲಿಸಿಬಿಟ್ಟನು. ಆತನು ಆ ಮರದ ಬಳಿಗೆ ಹೋಗದಿರುವುದನ್ನು ಗಮನಿಸಿ ಕೆಲ ಭಿಕ್ಷುಗಳು ಆತನಿಗೆ ಹೀಗೆ ಕೇಳಿದರು: "ಸೋದರ, ಈಗ ಆ ಮರದ ಬಳಿ ಹೋಗುತ್ತಿಲ್ಲವೇಕೆ? ಏತಕ್ಕಾಗಿ ನಿನ್ನ ಗುರುಗಳನ್ನು ನೋಡಲು ನಿಲ್ಲಿಸಿರುವೆ?"
            "ಸೋದರರೇ, ನಾನು ಪ್ರಾಪಂಚಿಕ ಆಮಿಷಗಳನ್ನು ಹೊಂದಿರುವಾಗ, ನಾನು ಹಾಗೇ ಬೇಟಿ ನೀಡುತ್ತಿದ್ದೆನು. ಆದರೆ ಈಗ ನನ್ನ ಹಾಗು ಪ್ರಪಂಚದ ನಡುವೆ ಯಾವ ಸಂಪರ್ಕವೇ ಇಲ್ಲವಾಗಿದೆ. ಆದ್ದರಿಂದಾಗಿ ನಾನು ಅಲ್ಲಿಗೂ, ಎಲ್ಲಿಗೂ ಹೋಗುತ್ತಿಲ್ಲ" ಎಂದನು.

            ಭಿಕ್ಷುಗಳಿಗೆ ಆತನ ಮಾತಿನಲ್ಲಿ ನಂಬಿಕೆ ಉಂಟಾಗದೆ ಈತನು ಸುಳ್ಳುಗಾರನೆಂದು ಭಾವಿಸಿ, ಆತನನ್ನು ಭಗವಾನರ ಬಳಿಗೆ ಕರೆತಂದರು. ನಂತರ ದೂರು ನೀಡಿದರು. ಆದರೆ ಭಗವಾನರಿಗೆ ಆತನ ಬಗ್ಗೆ ಎಲ್ಲವೂ ತಿಳಿದಿರುವುದರಿಂದಾಗಿ, ಹೀಗೆ ನುಡಿದರು: "ಭಿಕ್ಷುಗಳೇ, ಆತನು ನಿಜವನ್ನೇ ನುಡಿಯುತ್ತಿದ್ದಾನೆ. ಆತನು ಅರಹಂತನಾಗಿದ್ದಾನೆ" ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment