Friday 18 September 2015

dhammapada/bhikkuvagga/25.6/bhrahmin

ದೇಹ ಮನಸ್ಸಿಗೆ ಅಂಟದವನೇ ಭಿಕ್ಷು
"ಯಾರು ಸರ್ವರೀತಿಯ ನಾಮರೂಪಗಳಿಗೆ (ದೇಹ ಮನಸ್ಸಿಗೆ)
ನಾನು ಎಂದಾಗಲಿ, ನನ್ನದು ಎಂದಾಗಲಿ, ಭಾವಿಸುವುದಿಲ್ಲವೋ,
ತನ್ನದಲ್ಲದ್ದಕ್ಕೆ (ಶರೀರವು ಮುಪ್ಪಿಗೀಡಾದರೂ) ಚಿಂತಿಸುವುದಿಲ್ಲವೋ
ಆತನನ್ನೇ 'ಭಿಕ್ಷು' ಎನ್ನುತ್ತಾರೆ."    (367)
ಗಾಥ ಪ್ರಸಂಗ 25:6
ಬ್ರಾಹ್ಮಣನು ಸೇವಿಸಿದ್ದ ಆಹಾರ ಸೇವಿಸಿದ ಭಗವಾನರು

            ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿದ್ದಾಗ, ಒಂದು ಮುಂಜಾನೆ ಅವರಿಗೆ ಆ ದಿನ ಬ್ರಾಹ್ಮಣ ಮತ್ತು ಆತನ ಪತ್ನಿಯು ಅನಾಗಾಮಿ ಪ್ರಾಪ್ತಿಮಾಡುವರೆಂದು ಅರಿತರು. ಹೀಗಾಗಿ ಭಗವಾನರು ಆಹಾರದ ನೆಪದಲ್ಲಿ ಆ ಬ್ರಾಹ್ಮಣನ ಮನೆಯ ಬಾಗಿಲಲ್ಲಿ ನಿಂತರು. ಆ ಸಮಯದಲ್ಲಿ ಬ್ರಾಹ್ಮಣನು ಊಟ ಸೇವಿಸುತ್ತಿದ್ದನು. ಹೀಗಾಗಿ ಆತನು ಭಗವಾನರಿಗೆ ನೋಡಲಿಲ್ಲ. ಆದರೆ ಆತನ ಪತ್ನಿಯು ಭಗವಾನರನ್ನು ನೋಡಿದಳು ಹಾಗು ಹೆದರಿದಳು. ಏಕೆಂದರೆ ಬ್ರಾಹ್ಮಣನೇನಾದರೂ ಬುದ್ಧರಿಗೆ ನೋಡಿದರೆ ಆ ಆಹಾರವೆಲ್ಲಾ ಭಗವಾನರಿಗೆ ಅಪರ್ಿಸಿಬಿಡುವನು, ನಂತರ ತಾನು ಪುನಃ ಅಡುಗೆ ಮಾಡಬೇಕಾಗುತ್ತದಲ್ಲ ಎಂದು ತುಸು ಆಲಸಿಯಾದ ಆಕೆ ಹೆದರಿದಳು. ಹೀಗಾಗಿ ಆಕೆಯು ತನ್ನ ಗಂಡನಿಗೆ ಅಡ್ಡವಾಗಿ ನಿಂತಳು. ನಂತರ ನಿಧಾನವಾಗಿ ನಿಶ್ಶಬ್ಧವಾಗಿ ಹಿಂದು ಹಿಂದೆಯೇ ಭಗವಾನರ ಬಳಿಗೆ ಬಂದು ಭಗವಾನರಿಗೆ ಹೀಗೆ ಪಿಸುಗುಟ್ಟಿದಳು: "ಭಂತೆ, ನಿಮಗೆ ಇಂದು ಯಾವುದೇ ಆಹಾರವಿಲ್ಲ."
            ಆಗ ಭಗವಾನರು ನಿವರ್ಿಕಾರವಾಗಿ, ಶಾಂತರಾಗಿ, ಸರಿ ಎಂಬಂತೆ ತಲೆ ಅಲ್ಲಾಡಿಸಿದರು. ಅವರ ಆ ಭಾವದಲ್ಲಿ ಆ ಬ್ರಾಹ್ಮಣಿಗೆ ತನ್ನ ಹಾಸ್ಯ ಪ್ರಜ್ಞೆಯಿಂದಾಗಿ ನಗು ಉಕ್ಕಿತು. ಆಕೆ ತಡೆದುಕೊಳ್ಳಲಾರದೆ ಹೀ... ಹೀ... ಎಂದು ಜೋರಾಗಿ ನಕ್ಕಳು.
            ಆ ಶಬ್ದದಿಂದ ಬ್ರಾಹ್ಮಣನು ತಿರುಗಿ ಭಗವಾನರನ್ನು ಕಂಡನು. ಆತನಲ್ಲಿ ಕ್ಷಣದಲ್ಲೇ ತನ್ನ ಪತ್ನಿಯ ಕಾರ್ಯ ತಿಳಿದು ಹೋಯಿತು. ಆಗ ಆತನು ಹೀಗೆ ನುಡಿದನು: "ಓ ಪತ್ನಿಯೇ, ನಾನು ನಾಶವಾದೆನು ನಮ್ಮ ಪರಮಪೂಜ್ಯ ಗುರುಗಳು ಬಾಗಿಲಲ್ಲಿ ನಿಂತಿರುವುದು ಹೇಳಲಾರದೆ, ನಿನ್ನಿಂದಾಗಿ ನಾನು ಇಂದು ಅಪಮಾನಿತನಾದೆನು" ಎಂದನು.
            ನಂತರ ಆ ಬ್ರಾಹ್ಮಣನು ಭಗವಾನರ ಬಳಿಗೆ ತಾನು ತಿನ್ನುತ್ತಿದ್ದಂತಹ ತಟ್ಟೆಯನ್ನೇ ತೆಗೆದುಕೊಂಡು, ಅವರಲ್ಲಿ ಕ್ಷಮೆಯಾಚಿಸಿದನು. ನಂತರ ಹೀಗೆ ಕೋರಿಕೊಂಡನು: "ಭಗವಾನ್, ನಾನು ಸ್ವಲ್ಪ ಆಹಾರ ಸೇವಿಸಿದ್ದೇನೆ, ತಮಗೆ ಆಕ್ಷೇಪಣೆಯಿಲ್ಲವಾದರೇ ಈ ಆಹಾರವನ್ನು ಸ್ವೀಕರಿಸಿ, ಹೀಗೆ ಆಹಾರ ನೀಡಲು ನನಗೂ ದುಃಖಕರ ಸಂಗತಿಯಾಗಿದೆ, ಬೇರೆ ಆಹಾರವಿಲ್ಲದಿದ್ದರಿಂದಾಗಿ ಇದನ್ನೇ ಅಪರ್ಿಸುತ್ತಿರುವೆನು". ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಓ ಬ್ರಾಹ್ಮಣನೇ, ಯಾವುದೇ ರೀತಿಯ ಆಹಾರವು ನನಗೆ ಯೋಗ್ಯವಾದುದು, ಅದು ತಿಂದಿರಲಿ ಅಥವಾ ತಿನ್ನದೇ ಇರುವುದಾಗಿರಲಿ."
            ಭಗವಾನರು ಆಹಾರ ಸ್ವೀಕರಿಸಿದ್ದನ್ನು ಕಂಡು ಆತನಿಗೆ ಅಪಾರ ಆನಂದವಾಯಿತು. ಆಗ ಭಗವಾನರಲ್ಲಿ ಆತನು ಹೀಗೆ ಪ್ರಶ್ನಿಸಿದನು. "ಭಗವಾನ್, ಭಿಕ್ಷು ಎಂದು ಯಾರಿಗೆ ಕರೆಯುತ್ತಾರೆ, ಅವರನ್ನು ಹೇಗೆ ಗುರುತಿಸುವುದು?"
            ಆಗ ಭಗವಾನರು "ಓ ಬ್ರಾಹ್ಮಣನೇ, ಯಾರು ತನ್ನ ಶರೀರ ಮತ್ತು ಮನಸ್ಸಿಗೆ ಅಂಟಿಲ್ಲವೋ ಆತನಿಗೆ ಭಿಕ್ಷು ಎನ್ನುತ್ತಾರೆ. ಹೀಗೆಯೇ ಆತನ ಅಳತೆ ಮಾಡುತ್ತಾರೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
            ಅದನ್ನು ಆಲಿಸುತ್ತಲೇ ಅವರಿಬ್ಬರೂ ಅನಾಗಾಮಿ ಫಲ ಪಡೆದರು.


No comments:

Post a Comment