Friday 18 September 2015

dhammapada/bhikkuvagga/25.4/dhammarama

ಧಮ್ಮಾನಂದನಿಗೆ ಎಂದಿಗೂ ಅವನತಿಯಿಲ್ಲ
"ಯಾವ ಭಿಕ್ಷುವು ಧಮ್ಮದಲ್ಲಿ ವಿಹರಿಸುತ್ತಾನೋ,
ಧಮ್ಮದಲ್ಲೇ ಆನಂದಿಸುತ್ತಾನೋ, ಧಮ್ಮದ
ಚಿಂತನೆಯಲ್ಲೇ ಇರುವನೋ, ಧಮ್ಮವನ್ನೇ
ಸ್ಮರಿಸುತ್ತಿರುವನೋ, ಅಂತಹವನು ಸಧಮ್ಮದಿಂದ ಎಂದಿಗೂ ಬೀಳುವುದಿಲ್ಲ."    (364)
ಗಾಥ ಪ್ರಸಂಗ 25:4
ಧಮ್ಮಾರಾಮನ ಮನೋಭಾವ

            ಭಗವಾನರು ತಾವು ಪರಿನಿಬ್ಬಾನ ಪಡೆಯುವ ನಾಲ್ಕು ತಿಂಗಳು ಮುಂಚೆಯೇ, ತಾವು ಪರಿನಿಬ್ಬಾಣ ಪಡೆಯುವುದಾಗಿ ತಿಳಿಸಿದ್ದರು. ಆಗ ಬಹಳಷ್ಟು ಸಾಧಾರಣ ಭಿಕ್ಷುಗಳು ದುಃಖಿತರಾಗಿ, ತಾವು ಏನು ಮಾಡಬೇಕೆಂಬುದೇ ಅವರಿಗೆ ತಿಳಿಯಲಿಲ್ಲ. ಹೀಗಾಗಿ ಅವರೆಲ್ಲಾ ಭಗವಾನರ ಸಾಮಿಪ್ಯದಲ್ಲೇ ಇದ್ದರು. ಅವರನ್ನು ಅಗಲಿ ಹೋಗುತ್ತಲೇ ಇರಲಿಲ್ಲ.
            ಆದರೆ ಧಮ್ಮಾರಾಮನೆಂಬ ಭಿಕ್ಷುವು ಮಾತ್ರ ಭಗವಾನರ ಬಳಿಗೆ ಹೋಗಲಿಲ್ಲ. ಬದಲಾಗಿ ಭಗವಾನರು ಇರುವಾಗಲೇ ಅರಹಂತನಾಗಲು ಸಾಧ್ಯವಾದಷ್ಟು ಶ್ರಮಪಡುತ್ತಿದ್ದನು. ಹೀಗಾಗಿ ಆತನು ಸದಾ ಧ್ಯಾನದಲ್ಲೇ ತಲ್ಲೀನನಾಗಿರುತ್ತಿದ್ದನು. ಆದರೆ ಇತರೆ ಭಿಕ್ಷುಗಳಿಗೆ ಆತನ ಉದಾತ್ತ ಮನೋಭಾವವು ಅರ್ಥವಾಗಲಿಲ್ಲ. ಹೀಗಾಗಿ ಅವರು ಅವನನ್ನು ಭಗವಾನರ ಸಮ್ಮುಖದಲ್ಲಿ ನಿಲ್ಲಿಸಿದರು.

            ಆಗ ಆತನು ಭಗವಾನರಿಗೆ ತನ್ನ ಮನೋಭಾವ ತಿಳಿಸಿದಾಗ, ಭಗವಾನರು ಆತನ ಚಾರಿತ್ರ್ಯ ಮತ್ತು ಪ್ರಜ್ಞಾಶೀಲತೆಗೆ ಹೀಗೆ ಸ್ತುತಿಸಿದರು. "ಭಿಕ್ಷುಗಳೇ, ನನ್ನ ಮಗ ಧಮ್ಮರಾಮ ಯೋಗ್ಯವಾದುದನ್ನೇ ಮಾಡುತ್ತಿರುವನು. ನನಗೆ ಗೌರವಿಸಬೇಕೆಂದಿರುವ ಭಿಕ್ಷುಗಳು ಈತನನ್ನು ಅನುಕರಿಸಲಿ. ಯಾರು ನನಗೆ ಪುಷ್ಪಗಳಿಂದ ಸುಗಂಧಗಳಿಂದ ನನ್ನನ್ನು ಪೂಜಿಸುತ್ತಿಹರೋ ಅವರದು ನಿಜವಾದ ಶರಣು ಅಲ್ಲ. ಆದರೆ ಯಾರು ಧಮ್ಮಪಾಲನರೋ ಅವರೇ ನನ್ನಲ್ಲಿ ನಿಜ ಶರಣು ಹೋಗಿದ್ದಾರೆ."

No comments:

Post a Comment