Monday 7 September 2015

dhammapada/tanhavagga/24.8/rahula

ತೃಷ್ಣಾರಹಿತರು ಅಂತಿಮ ಶರೀರದವರಾಗಿರುತ್ತಾರೆ
"ಯಾರು ಗುರಿಯನ್ನು ತಲುಪಿದವರೋ, ಅವರು ಭಯರಹಿರಾಗಿತ್ತಾರೆ,
ಅಂತಹವರು ತೃಷ್ಣರಹಿತರಾಗಿ, ಕಲ್ಮಶಗಳಿಗೆ ಅಂಟದವರಾಗಿ,
ಭವದ ಮುಳ್ಳುಗಳನ್ನು ಕಿತ್ತು ಎಸೆದಿರುತ್ತಾರೆ,
ಅಂತಹವನಿಗೆ ಅದೇ ಕೊನೆಯ ಶರೀರ (ಜನ್ಮ)ವಾಗಿದೆ." (351)

"ಯಾರು ತೃಷ್ಣರಹಿತರಾಗಿ, ಕಲ್ಮಶಗಳಿಗೆ ಅಂಟದವರೋ,
ಯಾರು ಜ್ಞಾನದ ಹಾದಿಯಲ್ಲಿ ಕುಶಲರೋ, ಭಾಷೆಯಲ್ಲಿ ನುರಿತರೋ,
ಅಕ್ಷರಗಳ ಅನುಕ್ರಮತೆಯಲ್ಲಿ ನಿಪುಣರೋ, ಯಾವುದು
ಮೊದಲು, ನಂತರ ಯಾವುದೆಂದು ಸ್ಪಷ್ಟವಾಗಿ ತಿಳಿದಿರುವರೋ
ಅಂತಹವರೇ ಅಂತಿಮ ಶರೀರವುಳ್ಳವರಾಗಿರುತ್ತಾರೆ,
ಅಂತಹವರನ್ನು ಮಹಾ ಪ್ರಾಜ್ಞರೂ ಮತ್ತು ಮಹಾಪುರುಷರು ಎನ್ನುತ್ತೇನೆ."          (352)

ಗಾಥ ಪ್ರಸಂಗ 24:8
ಮಾರನ ಭೀಕರತೆಗೆ ರಾಹುಲನು ಹೆದರುವನೇ?



            ಒಮ್ಮೆ ಬಹಳಷ್ಟು ಪೂಜ್ಯರು ಜೇತವನ ವಿಹಾರವನ್ನು ಅವೇಳೆಯಲ್ಲಿ ಪ್ರವೇಶಿಸಿದರು. ಹಾಗು ಅವರು ರಾಹುಲನ ವಿಳಾಸದಲ್ಲಿಯು ಬಂದುಬಿಟ್ಟರು. ಆಗ ರಾಹುಲನಿಗೆ ನಿದ್ರಿಸಲು ಸ್ಥಳವಿಲ್ಲದಂತಾಯಿತು. ಹೀಗಾಗಿ ರಾಹುಲನು ಭಗವಾನರ ಗಂಧಕುಟಿ ಮುಂಭಾಗದಲ್ಲಿಯೇ ಮಲಗಿಕೊಂಡನು. ಆಗ ರಾಹುಲನಿಗೆ ಕೇವಲ 8 ವರ್ಷ ವಯಸ್ಸಾಗಿತ್ತು. ಆದರೂ ಸಹಾ ಆ ಕಿರಿಯ ವಯಸ್ಸಿನಲ್ಲಿಯೇ ಅರಹಂತನಾಗಿದ್ದನು. ಆಗ ಮಾರ ವಾಸವತ್ತಿ ಹೀಗೆ ಯೋಚಿಸಿದನು: "ಓಹ್, ಗೋತಮರ ಮಗನಾದ ರಾಹುಲ ಗಂಧಕುಟಿಯ ಹೊರಗೆ ನಿದ್ರಿಸುತ್ತಿರುವನು, ಈ ರಾಹುಲನ ಬೆರಳಿಗೆ ನೋವುಂಟು ಮಾಡಿದರೂ ಸಹಾ, ಭಗವಾನರಿಗೆ ನೋವಾಗಬಹುದು. ಹಾಗೆಯೇ ರಾಹುಲನ ಬೆರಳಿಗೆ ಚಿವುಟಿದರೂ ಸಹಾ ಭಗವಾನರಿಗೂ ನೋವುಂಟಾಗಬಹುದು". ನಂತರ ಮಾರನು ಬೃಹದಾಕಾರದ ಆನೆಯ ಆಕಾರ ತಾಳಿ, ರಾಹುಲನ ಬಳಿಗೆ ಬಂದು, ತನ್ನ ಸೊಂಡಿಲಿನಿಂದ ರಾಹುಲನ ತಲೆಯನ್ನು ಸುತ್ತಿ, ಅತ್ಯಂತ ಭೀಕರವಾಗಿ ಘೀಳಿಟ್ಟನು. ಆದರೆ ರಾಹುಲನು ಲವಲೇಶವೂ ಭೀತಿಪಡಲಿಲ್ಲ. ತಕ್ಷಣ ಭಗವಾನರಿಗೆ ನಡೆಯುತ್ತಿರುವ ಸಂಗತಿ ತಿಳಿದುಹೋಗಿ, ಗಂಧಕುಟಿಯಿಂದಲೇ ಹೀಗೆ ಹೇಳಿದರು: "ಓ ಮಾರ, ನಿನ್ನಂಥವರು ಸಾವಿರ ಸಾವಿರ ಬಂದರೂ ಸಹಾ, ನನ್ನ ಮಗನನ್ನು ಭೀತಿಪಡಿಸಲು ಸಾಧ್ಯವಿಲ್ಲ. ನನ್ನ ಮಗ ಅಭಯನಾಗಿರುವನು, ಏಕೆಂದರೆ ಆತನಲ್ಲಿ ತೃಷ್ಣೆಯು ಇಲ್ಲವಾಗಿದೆ. ಆತನು ಅತ್ಯಂತ ಶಕ್ತಿವಂತನು ಮತ್ತು ಮಹಾ ಪ್ರಾಜ್ಞನಾಗಿದ್ದಾನೆ" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು. ಈ ಗಾಥೆಯನ್ನು ಆಲಿಸಿದಂತಹ ಹಲವಾರು ಭಿಕ್ಷುಗಳಿಗೆ ಸೋತಪತ್ತಿ ಫಲ, ಸಕದಾಗಾಮಿ ಫಲ, ಅನಾಗಾಮಿ ಫಲ ಪ್ರಾಪ್ತಿಯಾಯಿತು. ಆಗ ತಕ್ಷಣ ಮಾರನು ಮಾಯವಾದನು. 

No comments:

Post a Comment