Friday 4 September 2015

dhammapada/nagavagga/23.1/magandiyaa

    23. ನಾಗ ವಗ್ಗ
        ದಮಿಸಲ್ಪಟ್ಟವರೇ ಉದಾತ್ತರು
"ನಾನು ಸಂಗ್ರಾಮದಲ್ಲಿರುವ ಆನೆಯು,
ಬಿಲ್ಲಿನಿಂದ ಬಿಡಲ್ಪಟ್ಟ ಶರಗಳನ್ನು ಸಹಿಸುವಂತೆ,
ಸಹಿಸಲು ಕಷ್ಟಕರವಾಗಿರುವಂತಹ ಕೆಟ್ಟ ವಾಕ್ಯಗಳೆಲ್ಲಾ
ಸಹಿಸುತ್ತೇನೆ, ನಿಜಕ್ಕೂ ಬಹುಜನರು ದುಶ್ಶೀಲರಾಗಿದ್ದಾರೆ."             (320)

"ದಮಿಸಲ್ಪಟ್ಟ ಆನೆಯನ್ನೇ ಜನ ಸಮೂಹದಲ್ಲಿ ಕರೆದೊಯ್ಯುವರು,
ದಮಿಸಲ್ಪಟ್ಟಂತಹದರಲ್ಲೇ ರಾಜನು ಹತ್ತುತ್ತಾನೆ.
ದಮಿಸಲ್ಪಟ್ಟವರೇ ಮನುಷ್ಯರಲ್ಲೂ ಶ್ರೇಷ್ಠರಾಗಿದ್ದಾರೆ,
ಅಂತಹವರು ಕೆಟ್ಟ ವಾಕ್ಯಗಳೆಲ್ಲಾ ಸಹಿಸುತ್ತಾರೆ."             (321)

"ಪಳಗಿಸಲ್ಪಟ್ಟಾಗ ಹೆಸರಕತ್ತೆಗಳು ಸಹಾ ಶ್ರೇಷ್ಠವಾಗುತ್ತವೆ,
ಹಾಗೆಯೇ ಉತ್ತಮ ತಳಿಗಳಲ್ಲಿ ಸಿಂಧವಾ ಅಶ್ವಗಳು
ಹಾಗೆಯೇ ಆನೆಗಳಲ್ಲಿ ಮಹಾನಾಗವೂ,
ಅದರಂತೆಯೇ ತನ್ನನ್ನು ದಮಿಸಿದವನು ಇವೆಲ್ಲಕ್ಕಿಂತ ಶ್ರೇಷ್ಠನಾಗುತ್ತಾನೆ."         (322)

ಗಾಥ ಪ್ರಸಂಗ 23:1
ಮಾಗಂಡಿಯಾಳ ಪ್ರತಿಕಾರಕ್ಕೆ ಭಗವಾನರ ಸಹನೆಯೇ ಉತ್ತರ


            ಒಮ್ಮೆ ಮಾಗಂಡಿಯಾಳ ತಂದೆಯು ಭಗವಾನರ ಅನುಪಮ ಸೌಂದರ್ಯ ವೀಕ್ಷಿಸಿ ತನ್ನ ಮಗಳಿಗೆ ತಕ್ಕ ವರ ಇವರೇ ಎಂದು ನಿರ್ಧರಿಸಿದನು. ಆತನು ಮಗಳನ್ನು ಭಗವಾನರಿಗೆ ಸಮಪರ್ಿಸಲು ಸಿದ್ಧನಾದನು. ಆದರೆ ಭಗವಾನರು ಆತನ ಈ ಕೊಡುಗೆಯನ್ನು ನಿರಾಕರಿಸಿದರು. ನಂತರ ಭಗವಾನರು "ಸ್ತ್ರೀ ದೇಹವು ಕೇವಲ ಕಶ್ಮಲಗಳ ಗೂಡಾಗಿದೆ, ಕೇವಲ ಮಲ ಮೂತ್ರಗಳಿಂದ ಕೂಡಿದೆ, ಇದನ್ನು ನೀನು ನಿನ್ನ ಪಾದದಿಂದಲೂ ಸ್ಪಶರ್ಿಸಲಾರೆ" ಎಂದೆಲ್ಲಾ ಬೋಧಿಸಿದಾಗ, ಮಾಗಂಡಿಯಾಳ ತಂದೆ-ತಾಯಿಗಳು ಅನಾಗಾಮಿಗಳಾದರು. (ಇದೆಲ್ಲಾ 14:1 ಅಧ್ಯಾಯದಲ್ಲಿ 179, 180 ಗಾಥಾ ಪ್ರಸಂಗಗಳಲ್ಲಿ ವಿವರವಾಗಿ ತಿಳಿಸಲಾಗಿದೆ). ಆದರೆ ಮಾಗಂಡಿಯಾಳಿಗೆ ಇದರಿಂದಾಗಿ ಅಪಮಾನ ವಾದಂತಾಯಿತು. ಆಕೆ ಭಗವಾನರನ್ನು ದ್ವೇಷಿಸಿದಳು. ಮುಂದೆ ಪ್ರತಿಕಾರ ತೀರಿಸುವೆ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದಳು.

            ನಂತರ ಆಕೆಯು ರಾಜ ಉದೇನನ ಪತ್ನಿಯಾದಳು. ಆಕೆ ರಾಜ ಉದೇನನ ಮೂರು ರಾಣಿಯರಲ್ಲಿ ಒಬ್ಬಳಾದಳು. ಒಂದುದಿನ ಆಕೆಗೆ ಭಗವಾನರು ಕೋಸಂಬಿಗೆ ಬರುವುದು ತಿಳಿಯಿತು. ಆಗ ಆಕೆಯು ಕೆಲವು ಸೇವಕರಿಗೆ ಮತ್ತು ಕೆಲವು ಬಾಡಿಗೆ ಜನರಿಗೆ ಹಣ ನೀಡಿ, ಭಗವಾನರು ನಗರದಲ್ಲಿ ನಡೆಯುವಾಗ ಅವರಿಗೆ ನಾನಾರೀತಿಯ ಕೆಟ್ಟ ಬಯ್ಗುಳ ಮಾಡಬೇಕೆಂದು ಆಜ್ಞಾಪಿಸಿದಳು.


            ಅದರಂತೆಯೇ ಆ ಹಣ ಪಡೆದ ಪಾಪಿಗಳು ಭಗವಾನರಿಗೆ ನಾನಾವಿಧವಾಗಿ ಕಟು ವಾಕ್ಯಗಳನ್ನು ಪ್ರಯೋಗಿಸಿದರು. ಅವರನ್ನು ಕಳ್ಳ, ದಡ್ಡ, ಒಂಟೆ, ಕತ್ತೆ ಇತ್ಯಾದಿ ಪದಗಳಿಂದ ನಿಂದಿಸತೊಡಗಿದರು. ಆ ಕಟು ವಾಕ್ಯಗಳನ್ನು ಕೇಳಲಾರದೆ ಪೂಜ್ಯ ಆನಂದರು ಭಗವಾನರಿಗೆ ಈ ನಗರವನ್ನೇ ಬಿಟ್ಟುಬಿಡೋಣವೆಂದು ಕೇಳಿಕೊಂಡರು. ಆದರೆ ಭಗವಾನರು ಅದಕ್ಕೆ ನಿರಾಕರಿಸಿ ಹೀಗೆ ನುಡಿದರು: "ಆನಂದ, ಮತ್ತೊಂದು ನಗರದಲ್ಲೂ ಸಹಾ ಹೀಗೆ ಕಟುವಾದ ಬಯ್ಗುಳ ಬಂದಾಗ ಏನು ಮಾಡುವೆ? ಬಯ್ಗುಳ ಉಂಟಾದಾಗ ಪ್ರತಿಸಾರಿಯು ಬೇರೆಡೆ ಚಲಿಸುವುದು ಸಮಂಜಸವಲ್ಲ. ಬದಲಾಗಿ ಸಮಸ್ಯೆ ಉಂಟಾದೆಡೆಯಲ್ಲಿಯೇ ಪರಿಹರಿಸುವುದು ಯೋಗ್ಯವಾದುದು. ನಾನು ಸಂಗ್ರಾಮದಲ್ಲಿಯ ಆನೆಯು ಎಲ್ಲಾಕಡೆಯಿಂದಲೂ ನುಗ್ಗಿಬರುವ ಬಾಣಗಳ ಘಾತವನ್ನು ಸಹಿಸುವಂತೆ, ದುಶ್ಶೀಲ ಬಹುಜನರ ನೀಚವಾಕ್ಯಗಳೆಲ್ಲಾ ಸಹಿಸುವೆನು" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment