Friday 18 September 2015

dhammapada/bhikkuvagga/25.5/studentofdevadatta

ಸಂತೃಪ್ತನಾಗು, ಅಸೂಯೆ ಬೇಡ
"ಒಬ್ಬನು ತನಗೆ ಸಿಕ್ಕ ಲಾಭವನ್ನು ಅಲ್ಪವೆಂದೆಣಿಸಬಾರದು,
ಅನ್ಯರಿಗೆ ಸಿಗುವುದರಲ್ಲಿ ಅಸೂಯೆ ಪಡಬಾರದು,
ಅನ್ಯರ ಲಾಭಸತ್ಕಾರದಲ್ಲಿ ಅಸೂಯೆಪಡುವ ಭಿಕ್ಷುವು
ಸಮಾಧಿಯನ್ನು ಗಳಿಸಲಾರನು."  (365)

"ಯಾರಿಗೆ ಅತ್ಯಲ್ಪವು ಸಿಕ್ಕರೂ ಸಹಾ ಸಂತೃಪ್ತನಾಗಿರುವನೋ
ತನ್ನ ಲಾಭವನ್ನು ಅಲ್ಪವೆಂದೆಣಿಸನೋ,
ಅಂತಹವನ ಶುದ್ಧ ಜೀವನ ಹಾಗು ದೃಢಶೀಲತೆಯನ್ನು
ದೇವತೆಗಳು ಸಹಾ ಪ್ರಶಂಸಿಸುವರು."          (366)
ಗಾಥ ಪ್ರಸಂಗ 25:5
ಸ್ವ-ಲಾಭಕ್ಕಾಗಿ ದಾರಿ ತಪ್ಪಿದಂತಹ ಭಿಕ್ಷು

            ಒಮ್ಮೆ ಭಿಕ್ಷುವೊಬ್ಬನು, ದುಶ್ಶೀಲ ದೇವದತ್ತನ ಶಿಷ್ಯನೊಂದಿಗೆ ಸ್ನೇಹ ಗಳಿಸಿದನು. ದೇವದತ್ತನ ಶಿಷ್ಯನಿಗೆ ಅಪಾರ ಆಹಾರ ಸಿಗುತ್ತಿತ್ತು. ಅವರು ಮಿಥ್ಯಾ ಜೀವನದಿಂದ ಆಹಾರ ಸಂಪಾದಿಸುತ್ತಿದ್ದರು. ಸುಳ್ಳು ಹೇಳಿ ತಾವು ಉನ್ನತರೆಂದು ಜನರಿಗೆ ಮರಳು ಮಾಡಿ ಜೀವನ ನಡೆಸುತ್ತಿದ್ದರು. ಈಗ ಆ ಭಿಕ್ಷುವು ದೇವದತ್ತನ ಗಣದಲ್ಲಿ ಸೇರಿದ್ದರಿಂದಾಗಿ ಆತನಿಗೆ ಚೆನ್ನಾಗಿ ಆಹಾರ ಸಿಗಲಾರಂಭಿಸಿತು. ಅವರೊಂದಿಗೆ ಕೆಲಕಾಲ ವಾಸಿಸಿ ನಂತರ ತನ್ನ ಹಿಂದಿನ ಗಣಕ್ಕೆ ಸೇರಿದಾಗ, ಭಿಕ್ಷುಗಳು ಭಗವಾನರ ಸಮ್ಮುಖದಲ್ಲಿ ಆ ಭಿಕ್ಷುವನ್ನು ಕರೆತಂದರು. ನಂತರ ಹೀಗೆ ನುಡಿದರು: "ಭಗವಾನ್, ಈ ಭಿಕ್ಷುವು ದೇವದತ್ತನಿಗೆ ಲಭಿಸುವ ಲಾಭ ಸತ್ಕಾರದಲ್ಲಿ ಸಿಗುವ ಉಡುಗೊರೆಗಳಲ್ಲಿ ಆನಂದಿಸುತ್ತಾನೆ. ಈತನೀಗ ದೇವದತ್ತನ ಪಕ್ಷದವನಾಗಿದ್ದಾನೆ."
            "ಓ ಭಿಕ್ಷು, ಇದು ನಿಜವೇ? ನೀನು ಹಾಗೆ ಮಾಡುತ್ತಿರುವೆಯಾ?"

            "ಹೌದು ಭಗವಾನ್, ದೇವದತ್ತನ ಶಿಷ್ಯನ ಜೊತೆ ಕೆಲದಿನ ಬೆರೆತಿರುವುದು ನಿಜವೇ, ಆದರೆ ದೇವದತ್ತನ ದೃಷ್ಟಿಕೋನಗಳನ್ನು ಹೊಂದಿಲ್ಲ."
            "ಓ ಭಿಕ್ಷುವೇ, ನೀನು ದೇವದತ್ತನಂತಹ ಮಿಥ್ಯಾದೃಷ್ಟಿಯನ್ನು ಹೊಂದದೆ ಇರಬಹುದು, ಆದರೆ ಅಂತಹ ದೃಷ್ಟಿಯವನೊಂದಿಗೆ ಅಡ್ಡಾಡಿದರೆ ಅಂತಹ ದೃಷ್ಟಿ ಹೊಂದಿರುವಂತೆ ಕಾಣುತ್ತೀಯೇ. ನೀನು ಹೀಗೆ ಮಾಡುತ್ತಿರುವುದು ಇದೇ ಮೊದಲನೆಯ ಸಲವಲ್ಲ, ನೀನು ಹಿಂದಿನ ಜನ್ಮಗಳಲ್ಲೂ ಹೀಗೆ ಮಾಡಿರುವೆ."
            ಆಗ ಭಿಕ್ಷುಗಳು ಆ ಹಿಂದಿನ ಜನ್ಮವನ್ನು ತಿಳಿಸುವಂತೆ ಕೇಳಿಕೊಂಡಾಗ ಭಗವಾನರು ಮಹಿಳಾಮುಖ ಜಾತಕ ವಿವರಿಸಿದರು.

            ಬಹುಕಾಲದ ಹಿಂದೆ ಪಟ್ಟದ ಆನೆಯೊಂದು ತನ್ನ ನಿವಾಸದ ಬಳಿ ಕಳ್ಳರ ಮತ್ತು ಕೊಲೆಗಾರರ ಮಾತುಗಳನ್ನು ಕೇಳಿ ಕೇಳಿ ಕ್ರೂರತನ ಪ್ರದಶರ್ಿಸಿ ಮಾವುತನನ್ನೇ ಕೊಂದುಹಾಕಿತು. ಈ ವಿಷಯವು ಬೋಧಿಸತ್ವರ ಗಮನಕ್ಕೆ ಬಂದಿತು. ಆಗ ಅವರು ಅಲ್ಲಿ ಕಳ್ಳರು ಮತ್ತು ಕೊಲೆಗಾರರಂಥಹ ಅಪರಾಧಿಗಳು ಸೇರದಂತೆ ಮಾಡಿ, ಅಲ್ಲಿ ಸಾಧು ಸಜ್ಜನರು ಸೇರುವಂತೆ ಮಾಡಿದರು. ಆಗ ಆ ಆನೆಯು ಉತ್ತಮವಾದ ವಿಧೇಯಗಳನ್ನು ಆಲಿಸುತ್ತ ಪುನಃ ಸಾಧುವಾಯಿತು" ಎಂದು ಹೇಳಿ ಭಗವಾನರು ಹೀಗೆ ನುಡಿದರು. "ಆಗಿನ ಪಟ್ಟದ ಆನೆಯಾದ ಮಹಿಳಾಮೂಖವೇ ಈಗಿನ ಜನ್ಮದಲ್ಲಿ ಈ ಭಿಕ್ಷುವಾಗಿದ್ದಾನೆ. ಭಿಕ್ಷುಗಳೇ, ಯಾವ ಭಿಕ್ಷುವು ಪರರಿಗೆ ಲಭಿಸುವ ಲಾಭ ಸತ್ಕಾರ ಇತ್ಯಾದಿಗಳಿಗೆ ಅಸೂಯೆಪಡುವನೋ ಹಾಗು ಅವೆಲ್ಲಾ ತನಗೆ ಬೇಕೆಂದು ಲೋಭಪಡುತ್ತಾನೋ, ದುರಾಸೆಪಡುತ್ತಾನೋ ಅಂತಹವನಿಗೆ ಧ್ಯಾನ ಲಾಭವಾಗಲಿ ಅಥವಾ ಮಾರ್ಗವಾಗಲಿ ಅಥವಾ ಲೋಕೋತ್ತರ ಫಲಗಳಾಗಲಿ ಸಿಗುವುದಿಲ್ಲ. ಆದರೆ ಸಂತೃಪ್ತನಿಗೆ ಮಾತ್ರ ಅಲೌಕಿಕ ಮತ್ತು ಲೋಕೋತ್ತರ ಫಲಗಳು ಸಿಗುವುವು."

No comments:

Post a Comment