Friday 4 September 2015

dhammapada/nagavagga/23.7/paarileyyaka

ಪ್ರಾಜ್ಞನೊಂದಿಗೆ ಜೀವಿಸು
"ಜ್ಞಾನಿಯು, ಶೀಲವಂತನೂ, ದೃಢಪ್ರಾಜ್ಞನು
ಸಾಧನೆಗೆ ಗೆಳೆಯನಾಗಿ ಲಭಿಸುವುದಾದರೆ
ಸರ್ವ ಆತಂಕಗಳನ್ನು ದಾಟಿ,
ಆತನೊಂದಿಗೆ ಆನಂದಯುತ ಮನಸ್ಸಿನಿಂದ
ಸ್ಮೃತಿವಂತನಾಗಿ ಜೀವಿಸು."        (328)

"ಆದರೆ ಜ್ಞಾನಿಯು ಶೀಲವಂತನು, ದೃಢಪ್ರಾಜ್ಞನು
ಸಾಧನೆಗೆ ಗೆಳೆಯನಾಗಿ ಲಭಿಸದಿದ್ದರೆ, ಹೇಗೆ
ರಾಜನೋರ್ವನು ಜಯಿಸಿದ ರಾಜ್ಯವನ್ನು
ಹಿಂದೆ ಬಿಟ್ಟು ನಡೆಯುವಂತೆ ಅಥವಾ
ಮಾತಂಗ ಆನೆಯ ರೀತಿಯಲ್ಲಿ ಕಾಡಿನಲ್ಲಿ
ಏಕಾಂಗಿಯಾಗಿ ಜೀವಿಸು."           (329)

"ಏಕಾಂಗಿಯಾಗಿ ಜೀವಿಸುವುದು ಉತ್ತಮ,
ಹೊರತು ಮೂರ್ಖರ ಸಹವಾಸ ಬೇಡ,
ಏಕಾಂಗಿಯಾಗಿಯೇ ಅಲ್ಪ ಅವಶ್ಯಕತೆಗಳಿಂದಲೇ ಜೀವಿಸು,
ಆದರೆ ಪಾಪವನ್ನು ಮಾಡಬೇಡ, ಮಾತಂಗ ಆನೆಯ ರೀತಿಯಲ್ಲಿ
ಕಾಡಿನಲ್ಲಿ ಏಕಾಂಗಿಯಾಗಿ ಜೀವಿಸು."            (330)

ಗಾಥ ಪ್ರಸಂಗ 23:7
ಪಾರಿಲೆಯ್ಯಕ ಆನೆಯ ಸ್ನೇಹ

            ಕೋಸಂಬಿಯ ಭಿಕ್ಷುಗಳಲ್ಲಿ ಕಲಹವೇರ್ಪಟ್ಟು, ಅವರು ಭಗವಾನರ ಬುದ್ಧಿವಾದವನ್ನು ಕೇಳಲಿಲ್ಲ. ಅವರನ್ನು ಸರಿಹಾದಿಗೆ ತರಲು ಹಾಗು ಅವರೆಲ್ಲರಿಂದ ದೂರವಿದ್ದು ಏಕಾಂಗಿತನದಲ್ಲಿ ನೆಲೆಸಲು ಭಗವಾನರು ದಟ್ಟವಾದ ಅರಣ್ಯದಲ್ಲಿ ಪ್ರವೇಶಿಸಿದರು. (ಈ ಘಟನೆಯ ಪೂರ್ಣ ವಿವರವು ಒಂದನೆಯ ಅಧ್ಯಾಯದ 5ನೆಯ ಪ್ರಸಂಗದಲ್ಲಿ ಗಾಥಾ ಸಂಖ್ಯೆ 6ರಲ್ಲಿ ಬರುವುದು). ಅಲ್ಲಿ ಪಾರಿಲೆಯ್ಯಕವೆಂಬ ಆನೆಯು ಭಗವಾನರ ಹಿರಿತನ ಗಮನಿಸಿ, ಅವರಿಗೆ ಅಪಾರ ಸತ್ಕಾರ ಮಾಡಿತು. ಇಡೀ ಮೂರು ಅಥವಾ ನಾಲ್ಕು ತಿಂಗಳು ಅದು ಭಗವಾನರಿಗೆ ಸೇವೆ ಮಾಡಿತು.

            ಭಗವಾನರು ನಾಡಿನಲ್ಲಿ ಇರದೆ, ಅರಣ್ಯದಲ್ಲಿ ವಾಸಿಸುತ್ತಿರುವುದು ಎಲ್ಲಾ ಉಪಾಸಕರಿಗೆ ತಿಳಿದುಹೋಯಿತು. ಆಗ ಉಪಾಸಕರಿಗೆಲ್ಲಾ ಅತೀವ ನೋವು ಕಾಡಿತು. ಇತ್ತ ಕೋಸಂಬಿಯ ಭಿಕ್ಷುಗಳಿಗೆ ಜನರು ಆದರ, ಸತ್ಕಾರ ಮಾಡುವುದನ್ನೇ ಬಿಟ್ಟುಬಿಟ್ಟರು. ಆಗ ಮಹಾ ಉಪಾಸಕರಾದ ಅನಾಥಪಿಂಡಿಕ ಮತ್ತು ಉಪಾಸಿಕೆ ವಿಶಾಖೆ ಆನಂದರನ್ನು ಭೇಟಿ ಮಾಡಿದರು. "ಭಗವಾನರ ದರ್ಶನ ನಮಗೆ ಸಿಗುವಂತೆ ಮಾಡಿ" ಎಂದು ಕೇಳಿಕೊಂಡರು. ಹಾಗೆಯೇ 500 ಭಿಕ್ಷುಗಳು ಹೀಗೆ ಕೋರಿಕೊಂಡರು. "ಭಗವಾನರ ಅಧರಗಳಿಂದಲೇ ಧಮ್ಮವನ್ನು ನಾವು ಕೇಳುವಂತಾಗಲಿ" ಎಂದು ಭಿಕ್ಷುಗಳು ಮತ್ತು ಉಪಾಸಕರು ಪಟ್ಟುಹಿಡಿದರು. ಹೀಗಾಗಿ ಪೂಜ್ಯರಿಗೆ ಆನಂದರಿಗೆ ಈ ರೀತಿಯ ಯೋಚನೆ ಉಂಟಾಯಿತು: 'ಭಗವಾನರು ಮೂರು ತಿಂಗಳಿನಿಂದ ಏಕಾಂಗಿಯಾಗಿಯೇ ವಾಸಿಸುತ್ತಿದ್ದಾರೆ. ಆದ್ದರಿಂದ ಇಷ್ಟು ಭಿಕ್ಷುಗಳೊಂದಿಗೆ ಅವರನ್ನು ಭೇಟಿ ಮಾಡುವುದು ಸರಿಯಲ್ಲ'. ಆಗ ಅವರು ಭಿಕ್ಷುಗಳಿಗೆ ಅಲ್ಲೇ ಇರುವಂತೆ ತಿಳಿಸಿ, ತಾವೊಬ್ಬರೇ ಆ ದಟ್ಟ ಕಾನನದಲ್ಲಿ ಮುಂದುವರೆದರು. ಆಗ ಅವರಿಗೆ ಭಗವಾನರು ದೂರದಲ್ಲಿ ಕಾಣಿಸಿಕೊಂಡರು. ಆಗ ಪೂಜ್ಯ ಆನಂದರು ಅವರನ್ನು ಸಮೀಪಿಸತೊಡಗಿದರು. ಇದನ್ನು ಗಮನಿಸಿದ ಪಾರಿಲೆಯ್ಯಕ ದೊಡ್ಡ ದೊಣ್ಣೆಯನ್ನು ಎತ್ತಿಕೊಂಡು ಆನಂದರತ್ತ ಧಾವಿಸಿತು. ತಕ್ಷಣ ಇದನ್ನು ಗಮನಿಸಿದ ಭಗವಾನರು ಹೀಗೆ ಕೂಗಿ ಹೇಳಿದರು.

            "ನಿಲ್ಲು ಪಾರಿವೆಯ್ಯಕ, ಹಿಂದಕ್ಕೆ ಬಾ, ಆತನನ್ನು ಓಡಿಸಬೇಡ, ಆತನು ಬುದ್ಧರ ಸೇವಕನಾಗಿದ್ದಾನೆ". ತಕ್ಷಣ ಆ ಆನೆಯು ತನ್ನ ದೊಣ್ಣೆಯನ್ನು ದೂರಕ್ಕೆ ಎಸೆಯಿತು. ನಂತರ ಆನೆಯು ಪೂಜ್ಯ ಆನಂದರವರ ಪಿಂಡಪಾತ್ರೆ ಹಾಗೂ ಚೀವರ ಸ್ವೀಕರಿಸಲು ಸನ್ನೆಯಿಂದ ಕೋರಿಕೊಂಡಿತು. ಆದರೆ ಆನಂದರು ನಿರಾಕರಿಸಿದರು.
            ಆಗ ಆನೆಯು ಈ ರೀತಿ ಯೋಚಿಸಿತು: "ಈತ ನಿಜಕ್ಕೂ ವಿನಯಧರನಾಗಿದ್ದರೆ, ಭಗವಾನರು ಕುಳಿತುಕೊಳ್ಳುತ್ತಿದ್ದ ಶಿಲೆಯ ಮೇಲೆ ತನ್ನ ವಸ್ತುಗಳಾದ ಚೀವರ ಇತ್ಯಾದಿ ಇಡುವುದಿಲ್ಲ". ಆದರೆ ವಿನಯಧರರಾಗಿದ್ದಂತಹ ಆನಂದರವರು ತಮ್ಮ ಚೀವರ ಮತ್ತು ಪಿಂಡಪಾತ್ರೆ ನೆಲದ ಮೇಲೆ ಇಟ್ಟರು. ನಂತರ ಭಗವಾನರಿಗೆ ಗೌರವದಿಂದ ವಂದಿಸಿ ಒಂದೆಡೆ ಕುಳಿತರು.
            ಆಗ ಭಗವಾನರು ಹೀಗೆ ಪ್ರಶ್ನಿಸಿದರು: "ಆನಂದ, ಏಕಾಂಗಿಯಾಗಿಯೇ ಬಂದೆಯಾ?"
            "ಭಗವಾನ್, ನನ್ನೊಡನೆ 500 ಭಿಕ್ಷುಗಳಿದ್ದರು."

            "ಹಾಗಾದರೆ ಅವರೆಲ್ಲಾ ಎಲ್ಲಿ? ಅವರನ್ನು ಬರಹೇಳು". ನಂತರ ಭಿಕ್ಷುಗಳೆಲ್ಲಾ ಬಂದು ಸೇರಿದರು, ಗೌರವಿಸಿ ಒಂದೆಡೆ ಕುಳಿತರು, ಕುಶಲ ವಿಚಾರಿಸಿದರು. ನಂತರ ಭಿಕ್ಷುಗಳು ಹೀಗೆ ನುಡಿದರು: "ಭಗವಾನ್, ತಾವು ಸುಕುಮಾರ ಶರೀರವನ್ನು ಹೊಂದಿದ್ದು, ಈ ರೀತಿ ಕಾಡಿನಲ್ಲಿ ಕಷ್ಟಪಡುವುದು ಸರಿಯಲ್ಲ. ತಾವು ಮೂರು ತಿಂಗಳು ಹೇಗೆ ಕಳೆದಿರೋ? ಕನಿಷ್ಠ ತಮಗೆ ಬಾಯಿ ಮುಕ್ಕಳಿಸಲು ಸಹಾ ನೀರು ನೀಡಲು ಇತ್ಯಾದಿ ಸೇವೆ ಮಾಡಲು ಯಾರು ಇಲ್ಲದೆ ಹೋದರಲ್ಲ." ಆಗ ಭಗವಾನರು ಅವರಿಗೆ ಹೀಗೆ ಪ್ರತಿ ನುಡಿದರು: "ಭಿಕ್ಷುಗಳೇ, ಮಹಾ ಆನೆಯಾದ ಪಾರಿಲೆಯ್ಯಕವೇ ಇವೆಲ್ಲಾ ರೀತಿಯ ಸೇವೆಯನ್ನು ನನಗೆ ಮಾಡಿದೆ, ಅಂತಹ ಸಹಚರ ಯಾರಿಗೆ ತಾನೇ ಲಭಿಸುತ್ತಾನೆ. ಯಾರಿಗೆ ಇಂತಹ ಸಂಗಾತಿ ದೊರೆಯುತ್ತದೋ ಆತನು ಅಂತಹವರೊಡನೆ ಸುಖಿಯಾಗಿ ಜೀವಿಸಲಿ, ಇಲ್ಲದಿದ್ದರೆ ಏಕಾಂಗಿಯಾಗಿ ಜೀವಿಸಲಿ" ಎಂದು ನುಡಿದು, ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment