Saturday 25 July 2015

dhammapada/dhammatthavagga/19.3/ekodaana

ವಾಕ್ಚಾತುರ್ಯವುಳ್ಳವನೇ ಧಮ್ಮಜ್ಞನಲ್ಲ

"ಒಬ್ಬನು ಬಹುವಾಗಿ ಭಾಷ್ಯಕಾರನಾದ ಮಾತ್ರಕ್ಕೆ
ಧಮ್ಮಧರನಾಗುವುದಿಲ್ಲ (ಧರ್ಮಜ್ಞ),
ಯಾರು ಧಮ್ಮವನ್ನು ಅಲ್ಪವಾಗಿಯೇ
ಶ್ರೋತಿಸಿದ್ದರೂ (ಕೇಳಿದ್ದರು) ಧಮ್ಮವನ್ನು
ಕಾಯದಲ್ಲಿ ಪಾಲಿಸುವಾತನೇ ಅಂತಹ
ಸಂಶಯದಾಟಿದವನು ಧಮ್ಮಧರನಾಗುತ್ತಾನೆ,
ಧಮ್ಮ ಜಾಗೃತನಾಗುತ್ತಾನೆ."       (259)


ಗಾಥ ಪ್ರಸಂಗ 19:3
ಪಾಂಡಿತ್ಯವೇ ಸಾಕ್ಷಾತ್ಕಾರವಲ್ಲ

            ಒಬ್ಬ ಭಿಕ್ಷುವು ಶ್ರಾವಸ್ಥಿಯ ಸಮೀಪದ ತೋಪಿನಲ್ಲಿದ್ದನು. ಆತನು ಏಕೂದಾನನೆಂದೇ ತಿಳಿಯಲ್ಪಟ್ಟಿದ್ದನು. ಏಕೆಂದರೆ ಆತನಿಗೆ ಏಕ (ಒಂದು) ಉದಾನ (ಆನಂದೋದ್ಗಾರ)ವೇ ತಿಳಿದಿತ್ತು. ಅದೇನೆಂದರೆ:
            "ಯಾವ ಭಿಕ್ಷುವು ಉನ್ನತ ಧ್ಯಾನಾವಸ್ಥಿಯಲ್ಲಿರುತ್ತಾನೋ,
                ಜಾಗ್ರತನೋ, ನಿಶ್ಶಬ್ದತೆಯ ರೀತಿಗಳಲ್ಲಿ ನಿಪುಣನೋ,
                ಅಂತಹ ಪ್ರಶಾಂತತೆಯ ಮತ್ತು ಜಾಗೃತನಿಗೆ ದುಃಖವು ಬರಲಾರದು."
            ಆ ಭಿಕ್ಷುವಿಗೆ ಆ ಗಾಥೆಯ (ಉದಾನದ) ಅರ್ಥವು ತಿಳಿದಿತ್ತು. ಆತನು ಅದನ್ನು ಪಾಲನೆ ಮಾಡುತ್ತಿದ್ದನು. ಉಪೋಸಥದ ದಿನಗಳಲ್ಲಿ ಬೇರೆ ಭಿಕ್ಷುಗಳು ವಿಸ್ತಾರವಾದ ಸುತ್ತಗಳ ವಾಚನ ಮಾಡುತ್ತಿದ್ದೆ, ಇತನು ಕೇವಲ ಈ ಒಂದು ಉದಾನವನ್ನೇ ನುಡಿಯುತ್ತಿದ್ದನು.
            ಪ್ರತಿಸಾರಿಯು ಆತನು ಈ ಉದಾನವನ್ನು ನುಡಿದ ಒಡನೆಯೇ ವನದಲ್ಲಿದ್ದ ದೇವದೇವತೆಗಳು ಆತನಿಗೆ ಸ್ತುತಿಸುತ್ತಿದ್ದರು, ಪ್ರಶಂಸಿಸುತ್ತಿದ್ದರು.
            ಒಂದು ಉಪೋಸಥದ ದಿನದಂದು ತಿಪಿಟಕದಲ್ಲಿ ಅಪಾರ ನೆನಪಿದ್ದ ಇಬ್ಬರು ಹಿರಿಯ ಭಿಕ್ಷುಗಳು 500 ಕಿರಿಯ ಭಿಕ್ಷುಗಳ ಸಮೇತ ಅಲ್ಲಿಗೆ ಬಂದರು. ಆಗ ಏಕೂದಾನನು ಅವರಿಗೆ ಧಮ್ಮ ಬೋಧಿಸುವಂತೆ ಕೇಳಿಕೊಂಡನು. ಆಗ ಅವರು ಹೀಗೆ ಕೇಳಿದರು: "ಇಲ್ಲಿ ಧಮ್ಮವನ್ನು ಆಲಿಸಲು ಯಾರು ಇರುವರು?" ಆಗ ಏಕೋದಾನರು ಹೀಗೆ ಹೇಳಿದರು: "ಹಾಗೆನ್ನದಿರಿ, ಇಲ್ಲಿ ವನದಲ್ಲಿರುವ ದೇವ ದೇವತೆಗಳೆಲ್ಲರೂ ಧಮ್ಮವನ್ನು ಆಲಿಸುವರು. ಅಷ್ಟೇ ಅಲ್ಲ, ಬೋಧನೆಯ ಅಂತ್ಯದಲ್ಲಿ ಸ್ತುತಿಸುವರು ಸಹ."

            ಇರಬಹುದೆಂದು ಆ ಇಬ್ಬರು ಹಿರಿಯ ಭಿಕ್ಷುಗಳು ಧಮ್ಮವನ್ನು ವಿಸ್ತಾರವಾಗಿ ಬೋಧಿಸಿದರು. ಆದರೆ ಅವರಿಗೆ ಪ್ರತಿಫಲವಾಗಿ ಯಾವ ಸ್ತುತಿಯೂ ಸಿಗಲಿಲ್ಲ. ಆಗ ಅವರಿಗೆ ಏಕೂದಾನನು ಸುಳ್ಳು ಹೇಳುತ್ತಿರಬಹುದೇ ಎಂದು ಸಂಶಯವುಂಟಾಯಿತು. ಆದರೆ ಏಕೂದಾನನು ಹಿಂದಿನಂತೆಯೇ ಪುನರುಚ್ಚರಿಸಿದನು. ಆಗ ಅವರು ಏಕೂದಾನನಿಗೆ ಧಮ್ಮ ಬೋಧಿಸುವಂತೆ ಕೇಳಿಕೊಂಡರು. ಆಗ ಏಕೂದಾನನು ತನಗೆ ತಿಳಿದಿದ್ದ ಆ ಉದಾನವೊಂದನ್ನು ನುಡಿದನು. ಅದು ಮುಗಿದ ತಕ್ಷಣ ವನದಲ್ಲಿದ್ದ ದೇವಗಣವು ಸ್ತುತಿಸಿದರು: 'ಸಾಧು ಸಾಧು ಸಾಧು' ಎಂದು ಪ್ರಶಂಶಿಸಿದರು. ಆಗ ಆ ಹಿರಿಯ ಭಿಕ್ಷುಗಳಿಗೆ ದೇವಗಣವು ಪಕ್ಷಪಾತದಿಂದ ಕೂಡಿವೆ ಎಂದು ಅನುಮಾನವಾಯಿತು. ಹೀಗಾಗಿ ಅವರು ಈ ವಿಷಯವೆಲ್ಲಾ ಭಗವಾನರಿಗೆ ತಿಳಿಸಿದರು. ಆಗ ಬುದ್ಧ ಭಗವಾನರು ಅವರಿಗೆ ಹೀಗೆ ನುಡಿದರು: "ಭಿಕ್ಷುಗಳೇ, ದೇವತೆಗಳು ಪಕ್ಷಪಾತ ಮಾಡಿಲ್ಲ, ಅವರು ಸರಿಯಾಗಿಯೇ ವತರ್ಿಸಿದ್ದಾರೆ. ಏಕೆಂದರೆ ಒಬ್ಬನು ಅಪಾರ ಪಾಂಡಿತ್ಯ ಗಳಿಸಿ, ವಾಕ್ಚಾತುರ್ಯದಿಂದ ಧಮ್ಮ ಪಠಿಸಿದ ಮಾತ್ರಕ್ಕೆ ಆತನು 'ಧಮ್ಮಧರ'ನಾಗುವುದಿಲ್ಲ. ಬದಲಾಗಿ ಯಾರೂ ಧಮ್ಮವನ್ನು ಅಲ್ಪವೇ ಅರಿತಿದ್ದರೂ, ಅದರಿಂದಲೇ ನಾಲ್ಕು ಸತ್ಯಗಳ ಆಳದ ಅರಿವನ್ನು ಹೊಂದಿದ್ದರೇ, ಕಾಯದಲ್ಲೂ ಸಹಾ ಆರ್ಯ ಅಷ್ಠಾಂಗ ಮಾರ್ಗದ ಪಾಲನೆಯಾಗಿದ್ದರೆ ಅಂತಹ ಜಾಗೃತನೇ ಧಮ್ಮಧರನಾಗಿರುತ್ತಾನೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment